ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಜಯ್ ವರ್ಮಾ ಅಲ್ಲೂರಿ


 ಅಜಯ್ ವರ್ಮಾ ಅಲ್ಲೂರಿ


ಅಜಯ್ ವರ್ಮಾ ಅಲ್ಲೂರಿ ಕನ್ನಡ ಮತ್ತು ತೆಲುಗೆ ಭಾಷೆಗಳ ಪ್ರತಿಭಾನ್ವಿತ ಯುವ ಬರಹಗಾರರು.

ಅಜಯ್ ವರ್ಮಾ ಅಲ್ಲೂರಿ 1996ರ ಸೆಪ್ಟೆಂಬರ್ 7ರಂದು ಜನಿಸಿದರು.  ಇವರು ಮೂಲತಃ ರಾಯಚೂರು ಜಿಲ್ಲೆಯ ಸಿ೦ಧನೂರಿನವರು.  ತಂದೆ ಅಲ್ಲೂರಿ ಕೊಂಡರಾಜು. ತಾಯಿ ರಾಣಿ.  ತಮ್ಮ ಶಾಲಾ ಮತ್ತು ಪದವಿ ಪೂರ್ಣ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿದ ಬಳಿಕ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಿಂದ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ (ಭೌತಶಾಸ್ತ್ರ) ಹಾಗೂ ಭಾಷಾಂತರದಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. ಮುಂದೆ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂ.ಎ (ತೌಲನಿಕ ಸಾಹಿತ್ಯ) ಪದವಿಯನ್ನು, ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಎ (ಇಂಗ್ಲಿಷ್) ಪದವಿಯನ್ನು ಪಡೆದಿದ್ದಾರೆ.  ಹೈದರಾಬಾದಿನ 'The English and Foreign Languages’ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಗಾಗಿ ಸಂಶೋಧನಾ ನಿರತರಾಗಿದ್ದಾರೆ.  ಮೈಸೂರಿನಲ್ಲಿರುವ ಸೆಂಟ್ರಲ್ ಇನ್ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ಸಂಸ್ಥೆಯ ರಾಷ್ಟ್ರೀಯ ಅನುವಾದ ಯೋಜನೆಯ ಫೆಲೋಷಿಪ್ಗೆ ಆಯ್ಕೆಯಾಗಿದ್ದಾರೆ.

ಅಜಯ್ ವರ್ಮಾ ಅವರಿಗೆ ಬಾಲ್ಯದಿಂದಲೂ ಕವಿತೆಯ ಬಗ್ಗೆ ಅಪರಿಮಿತ ಪ್ರೀತಿ. ಕನ್ಮಡ ಮತ್ತು ತೆಲುಗು ಭಾಷೆಗಳಲ್ಲಿ ಪ್ರೌಢಿಮೆ ಸಾಧಿಸಿರುವ ಇವರು ಕನ್ನಡದಿಂದ ತೆಲುಗಿಗೂ, ತೆಲುಗಿನಿಂದ ಕನ್ನಡಕ್ಕೂ, ಅನೇಕ ಕವಿತೆಗಳ ಅನುವಾದ ಮಾಡಿದ್ದಾರೆ. 'ಗಗನಸಿಂಧು' ಇವರ ಕವನ ಸ೦ಕಲನ.  ವಿಭಾ ಅವರ ಕನ್ನಡ ಕವಿತೆಗಳನ್ನು ತೆಲುಗಿನಲ್ಲಿ 'ಕಲಲ ಕನ್ನೀಟಿ ಪಾಟ' ಎಂದು  ಮೂಡಿಸಿದ್ದಾರೆ.  ಅಲೆಹಾಂದ್ರ ಪಿರ್ಜನಿಕ್ ಅವರ ಇಂಗ್ಲಿಷ್ ಕವಿತೆಗಳನ್ನು 'ಡಯಾನಾ ಮರ' ಎಂದು ಕನ್ನಡದಲ್ಲಿ ಮೂಡಿಸಿದ್ದಾರೆ. ದೇವನೂರು ಮಹಾದೇವ ಅವರ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ತೆಲುಗಿಗೆ ಅನುವಾದಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೆಲುಗು ಲೇಖಕಿ ಓಲ್ಗಾ ಅವರ 'ವಿಮುಕ್ತೆ' ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೀರಮಣ ಅವರ ನೀಳ್ಗತೆಯನ್ನು 'ನಾಲ್ಕನೇ ಎಕರೆ' ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ.

ಅಜಯ್ ವರ್ಮಾ ಅವರಿಗೆ ಬೆ೦ಗಳೂರಿನ ಕೈಸ್ಟ್‌ ವಿ.ವಿ. ಬೇಂದ್ರೆ ಕಾವ್ಯ ಸ್ಪರ್ಧೆಯಲ್ಲಿ ಮೂರು ಬಾರಿ ಬಹುಮಾನ, ಸಂಕ್ರಮಣ ಕಾವ್ಯ ಸ್ಪರ್ಧೆ ಬಹುಮಾನ, ಅ.ನ.ಕೃ ಸ್ಮಾರಕ ಕಥಾಸ್ಪರ್ಧೆ ಬಹುಮಾನ , ಅನಿಕೇತನ ಅ೦ತರ್ಜಾಲ ಪತ್ರಿಕೆಯ ಮುಂಗಾರು ಕಥಾ ಸ್ಪರ್ಧೆ ಬಹುಮಾನ,  ಕರ್ನಾಟಕ ವಿ.ವಿ.ದಿಂದ ಡಿ.ಸಿ.ಪಾವಟೆ ಬಹುಮಾನ, 'ವಿಮುಕ್ತೆ' ಕೃತಿಯ ಅನುವಾದಕ್ಕಾಗಿ ಕುವೆಂಪು ಭಾಷಾಭಾರತಿ ಪ್ರಶಸ್ತಿ, ಪ್ರಹ್ಲಾದ ಅಗಸನಕಟ್ಟೆ ಕಥಾ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ.  ಕನ್ನಡ ಮತ್ತು ತೆಲುಗು ಸಾಹಿತ್ಯದ ಅನೇಕ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ.

ಅಜಯ್ ವರ್ಮಾ ಅಲ್ಲೂರಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

Happy birthday Ajay Varma Alluri 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ