ಲಾವಣ್ಯಾ ಶ್ರೀಕಾಂತ್
ಲಾವಣ್ಯಾ ಶ್ರೀಕಾಂತ್
ಲಾವಣ್ಯಾ ಶ್ರೀಕಾಂತ್ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದ ಕುರಿತು ಒಲವುಳ್ಳವರು.
ಸೆಪ್ಟೆಂಬರ್ 8, ಲಾವಣ್ಯಾ ಅವರ ಜನ್ಮದಿನ. ಇವರು ಮೂಲತಃ ತೀರ್ಥಹಳ್ಳಿಯವರು. ಶಿವಮೊಗ್ಗ ಸಮೀಪದ ಸಂತೆಕಡೂರು ಎಂಬ ಪುಟ್ಟ ಹಳ್ಳಿಯಲ್ಲಿ ಇವರ ವಾಸ.
ಲಾವಣ್ಯಾ ಅವರು ಕಾಲೇಜು ಓದುವ ದಿನಗಳಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು ಗೃಹಿಣಿಯಾಗಿ ಕೃಷಿ ಕುಟುಂಬದ ನಿರ್ವಹಣೆ ಹೊತ್ತವರು. ಅಡಿಕೆ, ತೆಂಗು ಇವರ ಕುಟುಂಬದ ಪ್ರಧಾನ ಕೃಷಿ. ಈ ಜವಾಬ್ದಾರಿಗಳನ್ನು ನಿರ್ವಹಿಸುವುದರೊಂದಿಗೆ ತಮ್ಮ ಇಬ್ಬರು ಸುಪುತ್ರಿಯರನ್ನು ಉತ್ತಮ ವಿದ್ಯಾಭ್ಯಾಸದೆಡೆಗೆ ನಡೆಸಿದ್ದಾರೆ. ಜೊತೆಗೆ ತಾವೂ ಕನ್ನಡ ಮತ್ತು ಸಂಸ್ಕೃತದ ಒಲವಿನಿಂದ ನಿರಂತರ ಅಧ್ಯಯನಶೀಲರಾಗಿದ್ದಾರೆ.
ಲಾವಣ್ಯಾ ಅವರ ತಂದೆ, ಮನೆಯಲ್ಲಿ ಪುಟ್ಟ ಲೈಬ್ರರಿ ಮಾಡಿದ್ದರು, ಹಾಗಾಗಿ ಲಾವಣ್ಯಾ ಕನ್ನಡದ ಶ್ರೇಷ್ಠ ಸಾಹಿತ್ಯವನ್ನು ಅಧ್ಯಯನ ಮಾಡುತ್ತ ಬಂದರು. ಜೊತೆಗೆ ಬರವಣಿಗೆಯೂ ಇವರ ಆಪ್ತ ಹವ್ಯಾಸವಾಯಿತು. 'ಶರಣಾಗತಿ' ಎಂಬ ಇವರ ಸಂಕಲನಕ್ಕೆ ವೀಣಾ ಬನ್ನಂಜೆ ಅವರ ಮುನ್ನುಡಿ ಇದ್ದು ಅದರಲ್ಲಿನ ಆಯ್ದ ಕವಿತೆಗಳು ಧ್ವನಿ ಸುರುಳಿಯೂ ಆಗಿವೆ. ಸಂಸ್ಕೃತವನ್ನು ನಿರಂತರ ಗುರುಗಳ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡುತ್ತಿರುವ ಲಾವಣ್ಯಾ ಅವರು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಸಪ್ತಶತೀ, ಭಗವದ್ಗೀತೆ ಮುಂತಾದವುಗಳನ್ನು ಆಸಕ್ತ ಮಕ್ಕಳಿಗೆ ಪಾಠ ಮಾಡುತ್ತಾರೆ.
ಗುರು ಶ್ರೀಧರ ಸ್ವಾಮಿಗಳ ಭಕ್ತರಾದ
ಲಾವಣ್ಯಾ ಅವರ ಬಹುತೇಕ ಬರಹಗಳು ಗುರುನಾಥ ಕೇಂದ್ರಿತ. ತಮ್ಮ ಬರಹಗಳಿಗೆಲ್ಲ ಗುರು ಅನುಗ್ರಹವೇ ಬೆಳಕು ಎಂಬ ನಂಬಿಕೆ ಅವರದು. ಅವರ ಒಂದು ಕವಿತೆ ಇಂತಿದೆ:
ಹುಟ್ಟಡಗಿಸಿಬಿಡು ತಂದೆ
ಮತ್ಮತ್ತೆ ಹುಟ್ಟದಂತೆ ಉಟ್ಟಬಟ್ಟೆಯ ಕಳಚಿ
ಬೇರೊಂದು ಉಟ್ಟಂತೆ
ಹೊತ್ತ ಭಾರವೆಷ್ಟೋ ನಾನರಿಯೆ,ಹೊತ್ತು ಕಳೆಯುವದರೊಳಗೆ
ಕರಗಿಸಿಬಿಡು ಉಪ್ಪಿನಂತೆ
ಬಂಧಗಳ ಕರ್ಮವೆನಗೆ
ಬಂದ್ಮಂದು ತೊಡರದಂತೆ
ನಿಶ್ಶೇಷವಾಗಿಸುದೇವಾ
ನಿನ್ನನ್ನು ಮಾತ್ರ ಮರೆಯದಂತೆ
ಆತ್ಮೀಯ ಸಹೃದಯಿ ಲಾವಣ್ಯಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Lavanya Srikanth 🌷🌷🌷

ಕಾಮೆಂಟ್‌ಗಳು