ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಂದ್ರಕಾಂತ ವಡ್ಡು


 ಚಂದ್ರಕಾಂತ ವಡ್ಡು 


ಚಂದ್ರಕಾಂತ ವಡ್ಡು ಅವರು ಸಮಕಾಲೀನ ಪತ್ರಿಕೋದ್ಯಮದಲ್ಲಿ ಆಪ್ತ ಹೆಸರು.

ಸೆಪ್ಟೆಂಬರ್ 4, ಚಂದ್ರಕಾಂತರ ಜನ್ಮದಿನ.  
ಇವರು ಮೂಲತಃ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಬಳಿಯ ವಡ್ಡು ಗ್ರಾಮದವರು. ಹಾವೇರಿ, ಬಳ್ಳಾರಿ, ಹುಬ್ಬಳ್ಳಿ, ಮೈಸೂರು, ಬೆಂಗಳೂರು ಹೀಗೆ ವಿವಿಧ ಸ್ಥಳಗಳಲ್ಲಿ, ವಿವಿಧ ಘಟ್ಟಗಳಲ್ಲಿ ಬದುಕು ಸಾಗಿಸಿದವರು.

ಚಂದ್ರಕಾಂತ ವಡ್ಡು ಅವರು 1990-95 ಅವಧಿಯಲ್ಲಿ ಸಂಯುಕ್ತ ಕರ್ನಾಟಕದಲ್ಲಿ ವರದಿಗಾರರಾಗಿ ಮತ್ತು ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದರು.  1995-2017 ಅವಧಿಯಲ್ಲಿ ಸಂಪಾದನೆ ಮತ್ತು ಅಂಕುರ ಪ್ರಕಾಶನ ಚಟುವಟಿಕೆಗಳಲ್ಲಿದ್ದರು. 2017ರಿಂದ 'ಸಮಾಜಮುಖಿ' ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಪ್ರಜಾವಾಣಿ, ಆಂದೋಲನ ಮತ್ತು ಇನ್ನಿತರ ಪತ್ರಿಕೆಗಳಲ್ಲಿಯೂ ಬರೆದಿದ್ದಾರೆ. 

ಚಂದ್ರಕಾಂತ ವಡ್ಡು ಅವರ ಪ್ರಕಟಿತ ಕೃತಿಗಳಲ್ಲಿ ನಾರಿಹಳ್ಳದ ದಂಡೆಯಲ್ಲಿ, 
ಅಮ್ಮನ ನೆನಪು (ಭಾಗ-1 ಹಾಗೂ ಭಾಗ-2), ಅಂತಃಕರಣದ ಗಣಿ, ಸೌಹಾರ್ದ ಕರ್ನಾಟಕ, ಮುಝಫರ್ ಮತ್ತಿತರ ಇಪ್ಪತ್ತು ಕಥೆಗಳು, ಸಮಕಾಲೀನ (ಅಂಕಣ ಬರಹಗಳ ಸಂಕಲನ), ವಿಸ್ಮಯ ವಿಮರ್ಶೆ (ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಅವಲೋಕನ), ಚುಂಬಕ ಗಾಳಿ (ಚನ್ನಬಸವಣ್ಣನ ಗುಣವಿಶೇಷ) ಸೇರಿವೆ. 
‘ಪ್ರಜಾವಾಣಿ'ಯಲ್ಲಿ ತಿಂಗಳೇಶ ಎನ್ನುವ ಪಾತ್ರವನ್ನು ಸೃಷ್ಟಿಸಿ ಮಿಡಿ ಮಿಡಿ ಸ್ವರೂಪದ ವಿಡಂಬನೆ  ಮೂಲಕ ಕುಟುಕಬೇಕಾದವರಿಗೆ ಸರಿಯಾಗಿ ಕುಟುಕಿದವರು.

ಪಾ.ವೆಂ.ಆಚಾರ್ಯರು ಚಂದ್ರಕಾಂತ ವಡ್ಡು ಅವರ ಕಥಾಸಂಕಲನಕ್ಕೆ ಮುನ್ನುಡಿ ಬರೆಯಬೇಕಿತ್ತು.  ಇವರ ವಿವಾಹಕ್ಕೆ ಮುಖ್ಯ ಅತಿಥಿಯಾಗಿಯೂ ಬರಬೇಕಿತ್ತು, ಆದರೆ ಅವರು ಬಾರದಲೋಕಕ್ಕೆ ಹೋದರು. ವಡ್ಡು ಅವರು ಕಥೆ ಬರೆದರೂ, ವಿಶ್ಲೇಷಣೆ ಬರೆದರೂ ಆಳದಲ್ಲಿ ಕವಿ ಹೃದಯ ಹೊಂದಿದವರು. ಹಾಗಾಗಿ ಅವರು ‘ಪಾ.ವೆಂ. ಬರೆಯದ ಮುನ್ನುಡಿ!' ಎಂದು ಇಡೀ ಒಂದು ಪುಟ ಖಾಲಿ ಬಿಟ್ಟು ಕಥಾಸಂಕಲನ ಪ್ರಕಟಿಸಿದವರು.  ತಾವು ಹೆಚ್ಚು ಬೇರೆಯವರನ್ನು ಬರವಣಿಗೆಗೆ ಇಳಿಸಿ ಬೆಳಸಿದವರು.  ತಮ್ಮ ಕಥೆಗಳಲ್ಲಾಗಲೀ, ಹಾಸ್ಯ ಬರಹಗಳಲ್ಲಾಗಲಿ, ‘ಸಮಾಜಮುಖಿ' ಸಂಪಾದಕತ್ವವಾಗಲೀ, ನಡೆಸುವ ಕಾರ್ಯಕ್ರಮಗಳಲ್ಲಾಗಲಿ ಹೊಸತನದ ಸ್ಪರ್ಶ ತಂದವರು.  ಸಮಕಾಲೀನ ಸಂಗತಿಗಳ ಬಗ್ಗೆ ಸದಾ ಜಾಗೃತಿ ಹೊಂದಿದವರು.

ಚಂದ್ರಕಾಂತ ವಡ್ಡು ಅವರಿಗೆ 2024 ರ 'ಅವ್ವ ಪ್ರಶಸ್ತಿ' ಹಾಗೂ 2023-24 ವರ್ಷದ ಬಸವಾರಾಜ ಕಟ್ಟಿಮನಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಸಂದಿವೆ.

ಮಹತ್ವದ ಸಮಾಜಮುಖಿ ಚಿಂತಕರಾದ ಚಂದ್ರಕಾಂತ ವಡ್ಡು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Chandrakanta Vaddu Sir🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ