ಮಂದಸ್ಮಿತಾ ಭಟ್
ಮಂದಸ್ಮಿತಾ ಭಟ್
ಪ್ರಮುಖವಾಗಿ ನೃತ್ಯ ಕಲಾವಿದರಾದ ವಿದುಷಿ ಮಂದಸ್ಮಿತಾ ಭಟ್ ಅವರು ಬಹುಮುಖಿ ಸಾಧಕಿ.
ಸೆಪ್ಟೆಂಬರ್ 5, ಮಂದಸ್ಮಿತಾ ಅವರ ಜನ್ಮದಿನ. ಇವರ ಕುಟುಂಬವು ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ವರಾಹಿ ಯೋಜನೆಯಿಂದ ಮುಳುಗಡೆಯಾದ ಕಡಗೋಡು ಗ್ರಾಮದಿಂದ, ಸರಿಸುಮಾರು ಎಂಬತ್ತರ ದಶಕದ ಮಧ್ಯಂತರದಲ್ಲಿ ತೀರ್ಥಹಳ್ಳಿಗೆ ಬಂದು ನೆಲೆನಿಂತಿತು. ತಂದೆ ಕೆ. ಎನ್ ಚಿದಂಬರ ಭಟ್. ತಾಯಿ ಜಯಂತಿ ಭಟ್. ಧಾರ್ಮಿಕ ಶ್ರದ್ದೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿರುಚಿಗಳು ಈ ಕುಟುಂಬದಲ್ಲಿ ಮನೆಮಾಡಿದ್ದವು.
ಮಂದಸ್ಮಿತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸೇವಾ ಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಪಡೆದು, ತೀರ್ಥಹಳ್ಳಿಯ ಯು.ಆರ್ ಅನಂತಮೂರ್ತಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದರು. ತೀರ್ಥಹಳ್ಳಿಯ ತುಂಗಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದು, ನಂತರದಲ್ಲಿ ಶಿವಮೊಗ್ಗದ ನ್ಯಾಷನಲ್ ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪಡೆದರು. ಜೊತೆಗೆ ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ಕೇಂದ್ರದಲ್ಲಿ ಎಲ್.ಎಲ್.ಎಂ ( buisness law ) ಸ್ನಾತಕೋತ್ತರ ಪದವಿಯನ್ನೂ ಪಡೆದರು. ಇದಲ್ಲದೆ ಕಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ 'ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್' ಸ್ನಾತಕೋತ್ತರ ಪದವಿ ಸಾಧನೆಯನ್ನೂ ಮಾಡಿದ್ದಾರೆ.
ಓದುವುದರ ಜೊತೆ ಜೊತೆಗೇ ಬಾಲ್ಯದಲ್ಲೇ ನಾಟ್ಯ ಕಲೆಯತ್ತ ಆಕರ್ಷಿತರಾದ ಮಂದಸ್ಮಿತಾ ಅವರು ತಮ್ಮ ಏಳನೆಯ ವಯಸ್ಸಿನಲ್ಲೇ ಭರತನಾಟ್ಯ ಅಭ್ಯಾಸವನ್ನು ಪ್ರಾರಂಭಿಸಿದರು. ತೀರ್ಥಹಳ್ಳಿಯ ಹೇಮಾಭಾಸ್ಕರ ಮತ್ತು ಸುಜಿತ್ ಕುಮಾರ್ ಮೈಸೂರು ಅವರಲ್ಲಿ ಇವರ ನೃತ್ಯ ಅಭ್ಯಾಸ ನಡೆಯಿತು. ಭರತನಾಟ್ಯದಲ್ಲಿ ಜ್ಯೂನಿಯರ್ ತೇರ್ಗಡೆಯ ನಂತರ, ಸೀನಿಯರ್ ಸಾಧನೆಯನ್ನು ವಿದುಷಿ ಗೀತಾ ದಾತಾರ್ ಅವರ ಬಳಿ, ವಿದ್ವತ್ ಸಾಧನೆಯನ್ನು ವಿದುಷಿ ಗೀತಾ ದಾತಾರ್ ಮತ್ತು ಕಲಾಮಂಡಲಂ ವಿದುಷಿ ಉಷಾ ದಾತಾರ್ ಅವರ ಬಳಿ ಮಾಡಿದರು. ಉನ್ನತ ತರಬೇತಿಯನ್ನು ಕಲಾಮಂಡಲಂ ವಿದುಷಿ ಉಷಾ ದಾತಾರ್ ಮತ್ತು ವಿದುಷಿ ಬಿ. ಭಾನುಮತಿಯವರಲ್ಲಿ ಪಡೆದರಲ್ಲದೆ, ಕಲಾಮಂಡಲಂ ವಿದುಷಿ ಉಷಾ ದಾತಾರ್ ಅವರಲ್ಲಿ ಮೋಹಿನಿ ಅಟ್ಟಂ ಸಾಧನೆಯನ್ನು ಮಾಡಿದರು. ಕಥಕ್ ನೃತ್ಯವನ್ನು ಗುರುಗಳಾದ ಮೈಸೂರಿನ ಬಿ ನಾಗರಾಜ ಇವರಲ್ಲಿ ಅಭ್ಯಾಸ ಮಾಡಿದರು.
ಮಂದಸ್ಮಿತಾ ಭಟ್ ಅವರು ದಕ್ಷಿಣ ಕನ್ನಡ ಮೂಲದ ಯು. ಜಗದೀಶ್ ಭಟ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. 2011ರಿಂದ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ "ಮುದ್ರಾ ನೃತ್ಯ ಶಾಲೆ" ಎಂಬ ತಮ್ಮ ನೃತ್ಯ ತರಬೇತಿ ಕೇಂದ್ರವನ್ನು ನಡೆಸುತ್ತಿರುವ ಇವರು ನೂರಾರು ನೃತ್ಯ ಕಲಾಸಕ್ತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು "ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯ " ಮತ್ತು "ಕೆ.ಎಸ್.ಇ.ಇ.ಬಿ" ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯ ಸಾಧನೆಗಳಿಂದ ಹೆಸರಾಗಿದ್ದಾರೆ. ಮಂದಸ್ಮಿತಾ ಭಟ್ ಅವರು ಭರತನಾಟ್ಯ ವಿದಾರ್ಥಿಗಳ ಸಾಧನೆಯ ಪರೀಕ್ಷಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಶ್ರದ್ಧಾವಂತ ಸಾಧನೆಗಳ ಪರಿಶ್ರಮದಿಂದ ಹೆಸರಾಂತ ನೃತ್ಯಕಲಾವಿದರಾಗಿ ರೂಪುಗೊಂಡಿರುವ ಮಂದಸ್ಮಿತಾ ಭಟ್ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಸಾಂಸ್ಕೃತಿಕ ವೇದಿಕೆಗಳಲ್ಲಿ ಐನೂರಕ್ಕೂ ಹೆಚ್ಚಿನ ನೃತ್ಯ ಕಾರ್ಯಕ್ರಗಳನ್ನು ನೀಡಿದ್ದಾರೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮ, ಶಿರಸಿ ಮಾರಿಕಾಂಬಾ ನವರಾತ್ರಿ ಉತ್ಸವ, ಧಾರವಾಡ ಕಲಘಟಕಿ ಉತ್ಸವ, ಇಸ್ಕಾನ್ ಧಾರ್ಮಿಕ ಸಂಸ್ಥೆ, ಮಲೆನಾಡು ವಿಪ್ರ ವೇದಿಕೆ ( ಬೆಂಗಳೂರು ), ಶ್ರೀ ಕೃಷ್ಣ ಮಠ ( ಉಡುಪಿ ), ಶ್ರೀ ನಿಮಿಷಾಂಬ ದೇವಸ್ಥಾನ ನವರಾತ್ರಿ ಉತ್ಸವ ( ಬೆಂಗಳೂರು ), ಮೂಕಾಂಬಿಕಾ ದೇವಸ್ಥಾನ ( ಕೊಲ್ಲೂರು ), ತಿರುಪತಿ ತಿರುಮಲ ದೇವಸ್ಥಾನ ( ಬೆಂಗಳೂರು ), ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನ ( ಬೆಂಗಳೂರು ), ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಬೃಹ್ಮ ಕಲಶೋತ್ಸವದಂತಹ ಧಾರ್ಮಿಕ ಕಾರ್ಯಕ್ರಮಗಳು; ಬೆಂಗಳೂರು ಆಹಾರೋತ್ಸವ, ಬಂಗಾಳಿ ಸಮುದಾಯ ಸಂಘ ( ಬೆಂಗಳೂರು ), ಜನಪದ ಜಾತ್ರೆ , SVyasa ಪ್ರಶಾಂತಿ ಯೋಗಾ ವಿಶ್ವವಿದ್ಯಾಲಯ ( ಬೆಂಗಳೂರು), ಹೈದರಾಬಾದಿನ ಶಿಲ್ಪಾರಾಮಂ, ಬೆಂಗಳೂರಿನ ಓಂಕಾರೇಶ್ವರ ದೇಗುಲ, 2019 ರಲ್ಲಿ ಅಬುಧಾಬಿ ಕರ್ನಾಟಕ ಸಂಘ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿನ ಸಾಂಸ್ಕೃತಿಕ ಉತ್ಸವ ಮುಂತಾದವು ಇವುಗಳಲ್ಲಿ ಸೇರಿವೆ.
ಮಂದಸ್ಮಿತಾ ಭಟ್ ಅವರು ವಿದ್ಯಾರ್ಥಿಯಾಗಿದ್ದಾಗ ಭಾರತೀಯ ಸ್ಕೌಟ್ ಅ್ಯಂಡ್ ಗೈಡ್ಸ್ ಶಿಬಿರಾರ್ಥಿಯಾಗಿ ರಾಷ್ಟ್ರಪತಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು. ಕುವೆಂಪು ವಿಶ್ವವಿದ್ಯಾಲಯದ ಪ್ರತಿನಿಧಿಯಾಗಿ ಚಿದಂಬರಂನಲ್ಲಿ ನಡೆದ ದಕ್ಷಿಣ ವಿಭಾಗದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಸ್ತೂರಿ ಕನ್ನಡವಾಹಿನಿಯ "ನಾನೇ ರಾಜಕುಮಾರಿ" ಸಂಚಿಕೆಯ ವಿಜೇತೆಯಾಗಿದ್ದರು. 2018ರಲ್ಲಿ ನವ ಬೆಂಗಳೂರು ಕ್ಲಬ್ ಆಯೋಜಿಸಿದ್ದ "ಆದರ್ಶ ತಾಯಿ" ( super mom ) ಸ್ಪರ್ಧೆಯಲ್ಲಿ ರನ್ನರ್ ಅಪ್ ಪ್ರಶಸ್ತಿ ಗೆದ್ದರು. ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಭರತನಾಟ್ಯ ಸಾಧಕಿ ಸಮ್ಮಾನ ಗಳಿಸಿದರು. 2018ರಲ್ಲಿ "ಕಲಾ ಸಂಭ್ರಮ" ಆಯೋಜಿಸಿದ್ದ "ಫೇಸ್ ಆಫ್ ಹೆರಿಟೇಜ್ " ಸ್ಪರ್ಧೆಯಲ್ಲಿ "ಉತ್ತಮ ಪ್ರದರ್ಶಕಿ"ಯಾಗಿ ಆಯ್ಕೆಗೊಂಡರು. 2021ರಲ್ಲಿ "ಸ್ಮೃತಿ ಸದನ ಸಂಸ್ಥೆಯಿಂದ" ರೂಪಲಾವಣ್ಯಂ ಪುರಸ್ಕಾರವನ್ನು ಗಳಿಸಿದ್ದರು. ಬೆಂಗಳೂರಿನಲ್ಲಿ ಐನೂರು "ಶಾಸ್ತ್ರೀಯ ನೃತ್ಯಗಾರರ" ಗಿನ್ನಿಸ್ ವಿಶ್ವ ದಾಖಲೆ ಬರೆದ ಕಾರ್ಯಕ್ರಮದಲ್ಲಿ ಭಾಗಿಯಾದ ಕೀರ್ತಿ ಇವರದು. "ಡಾ. ದುರ್ಗಾ ಮೇಕ್ಅಪ್ ಸ್ಟುಡಿಯೋ ಆ್ಯಂಡ್ ಅಕಾಡಮಿ" ಅವರು ಆಯೋಜಿಸಿದ "ಬ್ಯೂಟಿ ಆಫ್ ಬೆಂಗಳೂರು" ಪ್ರಶಸ್ತಿಗೆ ಭಾಜನರಾದರು. ಬೆಂಗಳೂರಿನ "ನೃತ್ಯ ಸಂಜೀವಿನಿ ಅಕಾಡೆಮಿ”ಯಿಂದ "ನಾಟ್ಯ ಸರಸ್ವತಿ" ಪ್ರಶಸ್ತಿ ಸಂದಿತು. ಸ್ಟಾರ್ ಸುವರ್ಣ ವಾಹಿನಿಯ "ವಿಶ್ವ ತಾಯಂದಿರ ದಿನ"ದ ಸಂದರ್ಭದಲ್ಲಿ ಆಯೋಜಿಸಿದ್ದ ಸುವರ್ಣ ಸೂಪರ್ "ರಿಯಾಲಿಟಿ ಷೋ" ಹಾಗೂ ಇನ್ನೂ ಹಲವಾರು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಇವರು ಭಾಗವಹಿಸಿದ್ದಾರೆ. 'ಕಾಳಿದಾಸ ಕನ್ನಡ ಮೇಷ್ಟ್ರು' ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ದೂರದರ್ಶನದಲ್ಲಿ ಹಲವಾರು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಹೆಚ್ಚಿನದನ್ನು ಸಾಧಿಸುವತ್ತ ಮಂದಸ್ಮಿತಾ ಭಟ್ ಅವರು ನಿರಂತರ ಕಾರ್ಯಪ್ರವೃತ್ತರು.
ಆತ್ಮೀಯ, ಪ್ರತಿಭಾನ್ವಿತ, ನಿತ್ಯ ಮಂದಹಾಸಯುಕ್ತ ಮಂದಸ್ಮಿತಾ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆ.
Happy birthday Mandasmitha Bhat ಮಂದ ಸ್ಮಿತಾ
ಕಾಮೆಂಟ್‌ಗಳು