ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿಯೂಷ್ ಪಾಂಡೆ


ಪಿಯೂಷ್ ಪಾಂಡೆ ನಮನ

ಭಾರತೀಯ ಜಾಹೀರಾತು ಲೋಕದ ಮಾಂತ್ರಿಕರೆಂದು ಪ್ರಖ್ಯಾತರಾಗಿದ್ದ ಪಿಯೂಷ್ ಪಾಂಡೆ ನಿಧನರಾಗಿದ್ದಾರೆ.

1955 ವರ್ಷದ ಸೆಪ್ಟೆಂಬರ್ 5ರಂದು ಜೈಪುರದಲ್ಲಿ ಜನಿಸಿದ ಪಾಂಡೆ ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಹೋದರ ಪ್ರಸೂನ್ ಪಾಂಡೆ ಅವರೊಂದಿಗೆ ರೇಡಿಯೋ ಜಿಂಗಲ್‌ಗಳಿಗೆ ಧ್ವನಿ ನೀಡುವುದರ ಮೂಲಕ ಜಾಹೀರಾತು ಲೋಕದ ಸಂಪರ್ಕಕ್ಕೆ  ಬಂದರು. ಪ್ರಸಿದ್ಧ ಕಲಾವಿದೆ ಇಳಾ ಅರುಣ್ ಇವರ
ಸಹೋದರಿ.

ಪಾಂಡೆ 'ಓಗಿಲ್ವಿ' ಸಂಸ್ಥೆಯಲ್ಲಿ ತರಬೇತಿ ವಿಭಾಗದ ಕಾರ್ಯನಿರ್ವಾಹಕರಾಗಿ ವೃತ್ತಿ ಆರಂಭಿಸಿ,  ನಂತರದಲ್ಲಿ ಸೃಜನಶೀಲ ಕಾರ್ಯನಿರ್ವಹಣೆಯತ್ತ ಹೊರಳಿದರು. 1982 ರಲ್ಲಿ ಓಗಿಲ್ವಿ ಮತ್ತು ಮ್ಯಾಥರ್ ಇಂಡಿಯಾ (ಈಗ ಓಗಿಲ್ವಿ ಇಂಡಿಯಾ) ಸೇರುವ ಮೊದಲು, ಪಾಂಡೆ ಅವರು  ಕ್ರಿಕೆಟ್ ಆಟಗಾರರಾಗಿ ರಾಜಾಸ್ಥಾನ
ರಾಜ್ಯ ಕ್ರಿಕೆಟ್ ತಂಡದ ಪರವಾಗಿ ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿದ್ದರು. ಚಹಾ ಉತ್ಪಾದನಾ ಗುಣಮಟ್ಟ  ನಿರ್ಣಯಿಸುವ ರುಚಿ ನೋಡುವಿಕೆ ಕೆಲಸ ಮಾಡಿದ್ದರು.

ಏಷ್ಯನ್ ಪೇಂಟ್ಸ್‌ನ "ಹರ್ ಖುಷಿ ಮೇ ರಂಗ್ ಲಾಯೆ," ಕ್ಯಾಡ್ಬರಿಯ "ಕುಚ್ ಖಾಸ್ ಹೈ," ಮತ್ತು ಫೆವಿಕಾಲ್‌ನ "ಎಗ್" ಚಿತ್ರಗಳು ಸೇರಿದಂತೆ ಭಾರತೀಯ ಜಾಹೀರಾತಿನಲ್ಲಿ ಹೆಗ್ಗುರುತುಗಳಾದ ಅಭಿಯಾನಗಳನ್ನು ಅವರು ಅಭಿವೃದ್ಧಿಪಡಿಸಿದರು. ರಾಷ್ಟ್ರೀಯ ಏಕತೆಯನ್ನು ಮೂಡಿಸುವಲ್ಲಿ ಪ್ರಸಿದ್ಧಿ ಪಡೆದ 'ಮಿಲೇ ಸುರ್ ಮೇರಾ ತುಮ್ಹಾರಾ' ಗೀತ ರಚನೆ ಇವರದ್ದು ಎಂಬುದು ಕೂಡಾ ಗಮನಾರ್ಹ. 

2004 ರಲ್ಲಿ, ಪಿಯೂಷ್ ಪಾಂಡೆ ಕೇನ್ಸ್ ಲಯನ್ಸ್ ಅಂತರರಾಷ್ಟ್ರೀಯ ಸೃಜನಶೀಲತೆಯ ಉತ್ಸವದಲ್ಲಿ ತೀರ್ಪುಗಾರರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಏಷ್ಯನ್ ಆದರು. ಅವರ ಕೊಡುಗೆಗಳನ್ನು ನಂತರ 2012 ರಲ್ಲಿ CLIO ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಗಳೊಂದಿಗೆ ಗೌರವಿಸಲಾಯಿತು. ಇವರು ಈ ರಾಷ್ಟ್ರೀಯ ಗೌರವವನ್ನು ಪಡೆದ ಮೊದಲ ಭಾರತೀಯ ಜಾಹೀರಾತು ವೃತ್ತಿಪರರು ಎಂಬುದು ಕೂಡ ಇವರ ಕೊಡುಗೆಗಳ ಕುರಿತು ವೇದ್ಯವಾಗುತ್ತದೆ.

ಪಿಯೂಷ್ ಪಾಂಡೆ ಅವರು ವಿದೇಶೀ ಚಿಂತನೆಗಳನ್ನು ಹೇಗೆ ಭಾರತೀಯ ಜಾಹೀರಾತು ಲೋಕಕ್ಕೆ ತಂದರೋ ಅದಕ್ಕಿಂತ ಹೆಚ್ಚಿನ ರೀತಿಯಲ್ಲಿ ಭಾರತೀಯತೆಯ ಸ್ವಂತಿಕೆಯುಳ್ಳ ಚಿಂತನೆಗಳನ್ನೂ ಪ್ರಬುದ್ಧವಾಗಿ ಜಾಹೀರಾತು ಲೋಕಕ್ಕೆ ಪರಿಚಯಿಸಿದ ಖ್ಯಾತಿ ಹೊಂದಿದ್ದಾರೆ.  ಹೀಗಾಗಿ ಅವರು ಒಗಿಲ್ವಿ ಸಂಸ್ಥೆಯ ಭಾರತೀಯ ವಿಭಾಗದ ಅಧ್ಯಕ್ಷರಾಗಿರುವುದರ ಜೊತೆಗೆ ಆ ಸಂಸ್ಥೆಯ ವಿಶ್ವವ್ಯಾಪ್ತಿಯ ಚೀಫ್ ಕ್ರಿಯೇಟೀವ್ ಅಧಿಕಾರಿಗಳೂ ಅಗಿದ್ದರು.

ಪ್ರಸಿದ್ಧ  'ಮಿಲೇ ಸುರ್ ಮೇರಾ ತುಮ್ಹಾರಾ' ಗೀತ ರಚನೆ ಅಲ್ಲದೆ, 'ಭೋಪಾಲ್ ಎಕ್ಸ್ಪ್ರೆಸ್' ಚಿತ್ರಕ್ಕೆ ಸಹಚಿತ್ರಕತೆಗಾರರಾಗಿದ್ದರು. Pandeymonium (2015) ಮತ್ತು Open House with Piyush Pandey (2022) ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದರು.

ಪಾಂಡೆ ಅವರು ಜಾನ್ ಅಬ್ರಹಾಮ್ ಮತ್ತು ನರ್ಗಿಸ್ ಫಕ್ರಿ ಚಿತ್ರ 'ಮದ್ರಾಸ್ ಕೆಫೆ'ಯಲ್ಲಿ ಕ್ಯಾಬಿನೆಟ್ ಸೆಕ್ರೆಟರಿ ಆಗಿ ಹಾಗೀ ಐಸಿಐಸಿಐ ಬ್ಯಾಂಕಿನ ಮಾರ್ಕೆಟಿಂಗ್ ಕ್ಯಾಂಪೈನ್ ಆದ ಮ್ಯಾಜಿಕ್ ಪೆನ್ಸಿಲ್ ಪ್ರಾಜೆಕ್ಟ್ ವಿಡಿಯೋದಲ್ಲಿ ಅಭಿನಯಿಸಿದ್ದರು. 

ಪೀಯೂಷ್ ಪಾಂಡೆ ಅವರು ನಿರಂತರವಾಗಿ ಜಾಹೀರಾತು ಲೋಕದ ಶ್ರೇಷ್ಠರೆಂದು 'ದಿ ಎಕನಾಮಿಕ್ ಟೈಮ್ಸ್' ಮತ್ತಿತರ ಪತ್ರಿಕಾ ಬಳಗದ ಸಮೀಕ್ಷೆಗಳಲ್ಲಿ ಹೆಸರಾಗಿದ್ದರು.  ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಉದ್ಯಮ ಶ್ರೇಷ್ಠತೆಗಳಲ್ಲಿ ಗೌರವಾನ್ವಿತರಾಗಿದ್ದರು.

ಪೀಯೂಷ್ ಪಾಂಡೆ 2025 ವರ್ಷದ ಅಕ್ಟೋಬರ್ 23ರಂದು ಈ ಲೋಕವನ್ನಗಲಿದರು.

Respects to departed soul, Great advertising professional Puyush Pandey 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ