ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮಜದ್ ಖಾನ್


 ಅಮಜದ್ ಖಾನ್


ಅಮಜದ್ ಖಾನ್ ಅದ್ಭುತ ನಟ.  ಶೋಲೆ ಚಿತ್ರದ ಅವರ ಖಳನಾಯಕ ಪಾತ್ರ ನಿರ್ವಹಣೆ ಚಿತ್ರರಂಗದ ಅಮರ ಪಾತ್ರನಿರ್ವಹಣೆಗಳಲ್ಲೊಂದು. 

ಅಮಜದ್ ಖಾನ್ 1940 ವರ್ಷದ ನವೆಂಬರ್ 12ರಂದು ಜನಿಸಿದರು.  ಇವರ ತಂದೆ ಜಯಂತ್ ನಟರಾಗಿ ಹೆಸರಾಗಿದ್ದರು.  ಅಮಜದ್ ಖಾನ್ ಬಿ.ಎ ಮತ್ತು ತತ್ವಶಾಸ್ತ್ರದಲ್ಲಿ ಉನ್ನತ ದರ್ಜೆಯಲ್ಲಿ
ಎಂ.ಎ. ಪದವಿ ಗಳಿಸಿದರು.  ಕಾಲೇಜಿನ ದಿನಗಳಲ್ಲಿ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದ ಅವರು ನಾಟಕಗಳಲ್ಲಿನ ಅಭಿನಯ ಮತ್ತು ನಿರ್ದೇಶನಗಳಿಗೆ ಹೆಸರಾಗಿದ್ದರು. ಇವರ ಪತ್ನಿ ಶೈಲಾ ಖಾನ್ ಅವರು ಉರ್ದು ಮಹಾನ್ ಕವಿ ಅಖ್ತರ್ ಉಲ್ ಇಮಾಮ್ ಅವರ ಸುಪುತ್ರಿ.  ಇಂಗ್ಲಿಷ್, ಹಿಂದಿ, ಉರ್ದು ಅಲ್ಲದೆ ಅಮಜದ್ ಖಾನ್ ಪರ್ಷಿಯನ್ ಭಾಷೆಯಲ್ಲಿಯೂ ತಜ್ಞರಾಗಿದ್ದು ತಮ್ಮ ಪತ್ನಿಯ ವ್ಯಾಸಂಗಕ್ಕೆ ಮಾರ್ಗದರ್ಶಕರಾಗಿದ್ದರು.  ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಅಮಜದ್ ಖಾನ್ ಇಂಗ್ಲಿಷ್ ಕವಿಗಳಾದ ಕೀಟ್ಸ್, ಬೈರನ್, ವರ್ಡ್ಸ್ವರ್ತ್, ಶೆಲ್ಲಿ ಹಾಗೂ ಪ್ರಾಚೀನ ತತ್ವಶಾಸ್ತ್ರಜ್ಞರಾದ ಪ್ಲೇಟೋ ಮತ್ತು ಅರಿಸ್ಟಾಟಲ್ ಅವರ ಚಿಂತನೆಗಳನ್ನು ಕುರಿತು ವಿದ್ವತ್ಪೂರ್ಣವಾಗಿ ಮಾತನಾಡುತ್ತಿದ್ದರು.

ಅಮಜದ್ ಖಾನ್ ಚಿತ್ರರಂಗದಲ್ಲಿ ಗಣನೀಯ ಅವಕಾಶಗಳನ್ನು ಗಳಿಸುವ ಮೊದಲು ರಂಗಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. 
ಹನ್ನೊಂದನೆಯ ವಯಸ್ಸಿನಲ್ಲಿ 'ನಜ್ನೀನ್' ಎಂಬ ಚಿತ್ರದಲ್ಲಿ ನಟಿಸಿದ್ದರು.  17ನೇ ವಯಸ್ಸಿನಲ್ಲಿ 'ಅಬ್ ದಿಲ್ಲಿ ದೂರ್ ನಹೀ' ಚಿತ್ರದಲ್ಲಿ ನಟಿಸಿದ್ದರು. ಕೆ. ಅಸೀಫ್ ಅವರಿಗೆ 'ಲವ್ ಅಂಡ್ ಗಾಡ್' ಚಿತ್ರಕ್ಕೆ ಸಹಾಯಕರಾಗಿ ದುಡಿದು ಒಂದು ಪಾತ್ರವನ್ನೂ ನಿರ್ವಹಿಸಿದರು. 1971ರಲ್ಲಿ ಆಸಿಫ್ ಅವರ ನಿಧನದ ಕಾರಣ ಆ ಚಿತ್ರ ಪೂರ್ಣಗೊಳ್ಳದೆ 1986ರಷ್ಟು ತಡವಾಗಿ ತೆರೆಕಂಡಿತು. 1973ರಲ್ಲಿ ಅವರು 'ಹಿಂದೂಸ್ಥಾನ್ ಕಿ ಕಸಮ್' ಚಿತ್ರದಲ್ಲಿ ನಟಿಸಿದ್ದರು.  1975ರಲ್ಲಿ 'ಶೋಲೆ' ಚಿತ್ರದಲ್ಲಿ ಡಕಾಯಿತನ ಅಭಿನಯಿಸಲು ಆ ಚಿತ್ರದ ಕಥೆಗಾರರಲ್ಲಿ ಒಬ್ಬರಾಗಿದ್ದ ಸಲೀಮ್ ಖಾನ್ ಅವರಿಂದ ಆಹ್ವಾನ ಪಡೆದರು. ಆ ಚಿತ್ರದಲ್ಲಿನ ಪಾತ್ರ ನಿರ್ವಹಣೆಯ ಮಾನಸಿಕ ಸಿದ್ಧತೆಗಾಗಿ ಜಯಾ ಬಾಧುರಿ ಅವರ ತಂದೆ ತರುಣ್ ಕುಮಾರ್ ಬಾಧುರಿ ಅವರು ಬರೆದ ಚಂಬಲ್ ಡಕಾಯಿತರ ಕುರಿತಾದ 'ಅಭಿಶಪ್ತ್ ಚಂಬಲ್' ಎಂಬ ಕೃತಿ ಓದಿ ಮನನ ಮಾಡಿಕೊಂಡರು. 'ಶೋಲೆ'  ಚಿತ್ರದ ಯಶಸ್ಸು ಮತ್ತು ಅದರಲ್ಲಿನ ಅಮಜದ್ ಅಭಿನಯ ಚರಿತ್ರೆಯನ್ನೇ ಸೃಷ್ಟಿಸಿತು. ಮುಂದೆ ಅಮಜದ್ ಖಾನ್ ಅಪಾರ ಸಂಖ್ಯೆಯ ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದರು. ಇನ್‍ಕಾರ್, ದೇಸ್ ಪರದೇಸ್, ನಾಸ್ತಿಕ್, ಸತ್ತೆ ಪೆ ಸತ್ತ, ಚಂಬಲ್ ಕಿ ಕಸಮ್, ಗಂಗಾ ಕಿ ಸೌಗಂಧ್, ಹಮ್ ಕಿಸೀಸೆ ಕಮ್ ನಹೀಂ, ನಸೀಬ್ ಮುಂತಾದವುಗಳಲ್ಲಿ ಖಳಪಾತ್ರ ಅಲ್ಲದೆ ಸತ್ಯಜಿತ್ ರೇ ಅವರ ಶತರಂಜ್ ಕೆ ಖಿಲಾಡಿಯಲ್ಲಿ ನಟಿಸಲು ಆಹ್ವಾನ ಪಡೆದರು. 1979ರಲ್ಲಿನ ಮೀರಾ ಚಿತ್ರದಲ್ಲಿ ಅಕ್ಬರನ ಪಾತ್ರ ನಿರ್ವಹಿಸಿದರು. ಯಾರಾನಾ, ಲಾವಾರಿಸ್, ರಾಖಿ, ಕಮಾಂಡರ್ ಚಿತ್ರಗಳಲ್ಲಿ ಒಳ್ಳೆ ವ್ಯಕ್ತಿಯ ಪಾತ್ರ ನಿರ್ವಹಿಸಿದರು.  1984ರ 'ಉತ್ಸವ್' ಚಿತ್ರದಲ್ಲಿ ವಾತ್ಸಾಯನನ ಪಾತ್ರ ವಹಿಸಿದ್ದರು. 1988ರಲ್ಲಿ 'ಮರ್ಚೆಂಟ್ ಐವರಿ' ಇಂಗ್ಲಿಷ್ ಚಿತ್ರದಲ್ಲಿ ನಟಿಸಿದರು. 1980ರ ನಂತರ  ಖುರ್ಬಾನಿ, ಲವ್ ಸ್ಟೋರಿ, ಚಮೇಲಿ ಕಿ ಶಾದಿ ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯ ಪಾತ್ರ ನಿರ್ವಹಣೆಯೂ ಪ್ರಸಿದ್ದ.  ಕೆಲವೊಂದು ಚಿತ್ರಗಳನ್ನೂ ನಿರ್ದೇಶಿಸಿದ್ದರು.

ಅಮಜದ್ ಖಾನ್ ಒಂದೆರಡು ಬಾರಿ ಪ್ರಾಣಾಂತಿಕ ಅಪಘಾತಕ್ಕೀಡಾಗಿ ಪಾರಾಗಿದ್ದರು. 1992ರ ಜುಲೈ 27ರಂದು ಇನ್ನೂ 51 ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

On the birthday of Great actor Amajad Khan 🌷🙏🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ