ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತಳುಕು ಶಾಮರಾವ್ ವೆಂಕಣ್ಣಯ್ಯ


 ತಳುಕು ಶಾಮರಾವ್ ವೆಂಕಣ್ಣಯ್ಯ 


ತಳುಕು ಶಾಮರಾವ್ ವೆಂಕಣ್ಣಯ್ಯ  ಅವರು ತ. ಸು. ಶಾಮರಾಯರ ಸುಪುತ್ರರು.  ತ.ಸು. ಶಾಮರಾಯರು  ತಮ್ಮ ಈ ಹಿರಿಯ ಮಗನಿಗೆ,  ತಮ್ಮ ಅಣ್ಣ ವೆಂಕಣ್ಣಯ್ಯನವರ ಹೆಸರನ್ನೇ ಇಟ್ಟಿದ್ದರು.  ಈ ವೆಂಕಣ್ಣಯ್ಯನವರೂ ಸಾಧಕರಾಗಿದ್ದು ಶೃಂಗೇರಿಯ ಜಗದ್ಗುರು ಚಂದ್ರಶೇಖರ ಭಾರತೀ ಮೆಮೋರಿಯಲ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿದ್ದು, ಸಂಸ್ಕೃತ, ಇಂಗ್ಲಿಷ್ ಮತ್ತು ತೆಲುಗಿನ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದರು. 

ತಳುಕು ಶಾಮರಾವ್ ವೆಂಕಣ್ಣಯ್ಯನವರು  1941 ರ ನವೆಂಬರ್ 17 ರಂದು ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಸಾಹಿತ್ಯ ಲೋಕದ ಮಹಾನ್ ಸಾಧಕರಾದ ತ.ಸು. ಶಾಮರಾಯರು. ತಾಯಿ ಸುಬ್ಬಲಕ್ಷ್ಮಿ.  ದೊಡ್ಡಪ್ಪನ ಮಗ ತ.ರಾ.ಸು. ಅವರು.

ತಳುಕು ಶಾಮರಾವ್ ವೆಂಕಣ್ಣಯ್ಯ ಅವರು ಶಿವಮೊಗ್ಗದಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದು ಉನ್ನತ ಶಿಕ್ಷಣಕ್ಕಾಗಿ ಮೈಸೂರಿಗೆ ಬಂದರು. 1963 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂಎ ಪದವಿಯನ್ನು ಗಳಿಸಿದರು.  

ತಳುಕು ಶಾಮರಾವ್ ವೆಂಕಣ್ಣಯ್ಯ ಅವರು ಮೈಸೂರಿನ ವಯಸ್ಕರ ಶಿಕ್ಷಣ ಮಂಡಳಿಯಲ್ಲಿ ಆರು ತಿಂಗಳ ಕಾಲ ಉಪಸಂಪಾದಕರಾಗಿ ಕೆಲಸ ಮಾಡಿದರು.  1964 ರಿಂದ 1965 ರವರೆಗೆ ದೇಶೀಯ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ನಡೆಸಿದರು. 1965ರ ಜುಲೈ 08 ರಂದು ಶೃಂಗೇರಿಯ ಜಗದ್ಗುರು ಚಂದ್ರಶೇಖರ ಭಾರತೀ ಮೆಮೋರಿಯಲ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿ 1999ರ ನವೆಂಬರ್ 30ರಲ್ಲಿ  ಅದೇ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದರು.

ತಳುಕು ಶಾಮರಾವ್ ವೆಂಕಣ್ಣಯ್ಯ ಅವರು ಹಲವಾರು ಕೃತಿಗಳನ್ನು ಸಂಸ್ಕೃತದಿಂದ  ಕನ್ನಡಕ್ಕೆ ಅನುವಾದಿಸಿದರು. ವಿಶೇಷ ವ್ಯಾಖ್ಯಾನಗಳೊಂದಿಗೆ ಶ್ರೀ ಶಂಕರರ ಭಜಗೋವಿಂದಂ, ಧರ್ಮ ನೀತಿ ಮತ್ತು ಸುಭಾಷಿತಗಳು,  ಆರು ಸಣ್ಣ ಕಥೆಗಳು ಮತ್ತು ಇತರ ಕೃತಿಗಳು ಇವುಗಳಲ್ಲಿ ಸೇರಿವೆ.  ಆಧ್ಯಾತ್ಮಿಕ ಸಂಜೀವಿನಿ - ಸ್ವಾಮಿ ಪರಮಾನಂದರ ಆಧ್ಯಾತ್ಮಿಕ ಚಿಕಿತ್ಸೆ, ಧ್ಯಾನ ಆಚರಣೆ - ಸ್ವಾಮಿ ಋತಜಾನಂದರ ಧ್ಯಾನಾಭ್ಯಾಸ, ಕಥಾ ಕುಸುಮ - ಶ್ರೀ ಅಭಿನವ ವಿದ್ಯಾತೀರ್ಥ - ಸುಧಾರಣಾ ದೃಷ್ಟಾಂತಗಳು ಮುಂತಾದವುಗಳೂ ಸೇರಿ 10ಕ್ಕೂ ಹೆಚ್ಚು ತೆಲುಗು ಕೃತಿಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ಅವರ ಬರಹಗಳು ಕನ್ನಡ, ಸಂಸ್ಕೃತ, ಇಂಗ್ಲಿಷ್ ಮತ್ತು ತೆಲುಗು ಭಾಷೆಗಳಲ್ಲಿ ಪ್ರಕಾಶಿಸಿತ್ತು. ಇವರ ಅನುವಾದಗಳಲ್ಲಿ ವಿಲ್ ಡ್ಯುರಾಂಟ್ ಅವರ ಶ್ರೇಷ್ಠ ಕೃತಿ 'ಹಿಸ್ಟರಿ ಆಫ್ ಗ್ರೀಸ್'ನ  9 ಸಂಪುಟಗಳೂ ಸೇರಿವೆ. ಅವರು ಶೃಂಗೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 

ವೆಂಕಣ್ಣಯ್ಯನವರು ಜೆಸಿಬಿಎಂ ಕಾಲೇಜಿನ 'ಭಾಮತಿ', ಹರಿಹರಪುರ ಮಠದ ಸದ್ಗುರುಗಳ ಆಶೀರ್ವಾದ ಹಾಗೂ ಗುಬ್ಬಿ ಚಿದಂಬರಾಶ್ರಮ ಸೇವಾ ಸದನದ ಪತ್ರಿಕೆ ಮುಂತಾದ ನಿಯತಕಾಲಿಕೆಗಳಿಗೆ ಹಲವಾರು ವರ್ಷಗಳ ಕಾಲ ಮುಖ್ಯ ಸಂಪಾದಕರಾಗಿದ್ದರು.

ವೆಂಕಣ್ಣಯ್ಯನವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸಿರಿ ಪ್ರಶಸ್ತಿ ಗೌರವ ಸಂದಿತ್ತು. 

ವೆಂಕಣ್ಣಯ್ಯನವರು ಅರ್ಥಹೀನ ಆಚರಣೆಗಳು ಮತ್ತು ಸಮಾರಂಭಗಳನ್ನು ವಿರೋಧಿಸುತ್ತಿದ್ದರು.  ಅವರ ನೋಟ  ಆಧ್ಯಾತ್ಮಿಕ ಗ್ರಂಥಗಳ ನಿಜವಾದ ತಿಳುವಳಿಕೆಗಳ ಕುರಿತಾಗಿತ್ತು. ಅವರ ಮಾತುಗಳನ್ನು ಅವರ ಸ್ಮರಣಾರ್ಥ ಅರ್ಪಿಸಲಾದ 'ಸಹೃದಯಿ' ಸಂಪುಟದಲ್ಲಿ  ಸಂಗ್ರಹಿಸಲಾಗಿದೆ.

ನಿವೃತ್ತಿಯ ನಂತರವೂ ಶೃಂಗೇರಿಯಲ್ಲಿ ನೆಲೆಸಿದ್ದ ತಳುಕು ಶಾಮರಾವ್ ವೆಂಕಣ್ಣಯ್ಯ  ಅವರು 2012ರ ಜೂನ್ 14ರಂದು ನಿಧನರಾದರು.

On the birth anniversary of Prof. Taluku
Shamarao Venkannaiah 🌷🙏🌷





ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ