ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಟುಕೇಶ್ವರ ದತ್ತ



ಬಟುಕೇಶ್ವರ ದತ್ತ


ಇಂದು ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಭಗತ್ ಸಿಂಗ್ ಅವರ ಜೊತೆಗಾರ  ಬಟುಕೇಶ್ವರ ದತ್ತರ ಜನ್ಮ ದಿನ.  

1929ರ ಏಪ್ರಿಲ್‌ಎಂಟು! ಬ್ರಿಟಿಷ್ ಆಡಳಿತದ ಕೇಂದ್ರ ವಿಧಾನಸಭೆಯು ಅಧಿವೇಶನದ ಅಂದಿನ ದಿನ ಎರಡು ಬಾಂಬುಗಳ ಸಿಡಿತದ “ಢಮ್, ಡಮ, ಢಮಾರ್” ಎಂಬ ಶಬ್ದದಲ್ಲಿ ಮೂಡಿದವು.  ಒಂದರ ಮೇಲೆ ಇನ್ನೊಂದು ಬಾಂಬು! ಅದರ ಹಿಂದೆಯೇ ಪಿಸ್ತೂಲಿನಿಂದ ಎರಡು ಗುಂಡುಗಳು ಹಾರಿದ ಶಬ್ದ. ಸದಸ್ಯರು  ಕಕ್ಕಾಬಿಕ್ಕಿಯಾದರು. ಮನಬಂದತ್ತ ಓಡಿದರು. ಅಷ್ಟು ಹೊತ್ತಿಗೆ ಪ್ರೇಕ್ಷಕರ ಗ್ಯಾಲರಿಯಿಂದ ಕರಪತ್ರಗಳ ಸುರಿಮಳೆಯಾಯಿತು. ಎತ್ತರದ ಧ್ವನಿಯೊಂದು, “ದೇಶಕ್ಕಾಗಿ ನನ್ನ ಕರ್ತವ್ಯ ಮಾಡಿದ್ದೇನೆ” ಎಂದು ಘೋಷಿಸಿತು. ಇಬ್ಬರು ಯುವಕರು ತಮ್ಮ ಕೈಗಳಿದ್ದ ಪಿಸ್ತೂಲುಗಳನ್ನು ಎಸೆದು ಕುಳಿತರು. ಆಗ ವಿಧಾನಸಭೆಯ ರಕ್ಷಣಾ ಸಿಬ್ಬಂದಿಯವರು ಬಂದರು; ಯುವಕರು ಯಾವ ರೀತಿಯ ಪ್ರತಿಭಟನೆಯನ್ನೂ ತೋರಿಸದೆ ಬಂಧನಕ್ಕೆ ಒಳಗಾದರು. ಆ ವೀರ ಯುವಕರಲ್ಲಿ ಒಬ್ಬಾತ ಭಗತ್‌ಸಿಂಗ್. ಇನ್ನೊಬ್ಬಾತ ಬಟುಕೇಶ್ವರ ದತ್ತ.

ಬಟುಕೇಶ್ವರ ದತ್ತರು 1910ರ  ನವೆಂಬರ್ 18ರಂದು ಜನಿಸಿದರು.  ಬಟುಕೇಶ್ವರ ದತ್ತರ ತಂದೆ ಗೋಷ್ತಬಿಹಾರಿ ದತ್ತರು ಬಂಗಾಳದ ಬರ್ದವಾನ್‌ಜಿಲ್ಲೆಯ ಓರಿಗ್ರಾಮದವರು. ಈ ಗ್ರಾಮ ದಾಮೋದರ ನದಿಯ ಬಯಲಿನಲ್ಲಿದೆ.  ಅವರ ಪತ್ನಿ ಕಮಲಕಾಮಿನಿ. ಆರಂಭದಲ್ಲಿ ವಿದ್ಯಾಭ್ಯಾಸದ ಕಡೆಗೆ ಬಟುಕೇಶ್ವರನ ಗಮನ ಅಷ್ಟಾಗಿ ಹರಿಯಲಿಲ್ಲ. ಆದರೆ ಓದುವುದು ರೂಢಿಯಾದ ಮೇಲೆ ಓದಿದ್ದೇ ಓದಿದ್ದು! ವಿವಿಧ ದೇಶಗಳ ಇತಿಹಾಸ, ದೇಶಭಕ್ತರ ಜೀವನ ಚರಿತ್ರೆಗಳು ಎಷ್ಟು ಓದಿದರೂ ಆತನ ಕುತೂಹಲ ತಣಿಯದಾಗಿತ್ತು. ಶಾಲೆಯ ಉತ್ತಮ ವಿದ್ಯಾರ್ಥಿಗಳಲ್ಲೊಬ್ಬನಾಗಿ ಖ್ಯಾತಿ ಗಳಿಸಿದ ಬಾಲಕ  ಬಟುಕೇಶ್ವರ. ಆದರೆ ಒಮ್ಮೆಮ್ಮೆ ಬಟುಕೇಶ್ವರ ಉದ್ವಿಗ್ನ ಚಿತ್ತನಾಗಿ ಯಾರಿಗೂ ಹೇಳದೆ ಮನೆಬಿಟ್ಟು ಹೊರಟು ಹೋಗುತ್ತಿದ್ದ. ಕೆಲವುಕಾಲ ಎಲ್ಲೆಲ್ಲೋ ಅಲೆದು ಹಿಂತಿರುಗುತ್ತಿದ್ದ. ಅವನು ಎಲ್ಲಿಗೆ ಹೋಗುತ್ತಿದ್ದ, ಯಾರ ಜೊತೆ ಸೇರುತ್ತಿದ್ದ, ಏನು ಮಾಡುತ್ತಿದ್ದ ಎಂಬುದು ಯಾವುದೂ ತಿಳಿಯದೆ ತಂದೆ ತಾಯಿಯರು ಕಳವಳಕ್ಕೀಡಾಗುತ್ತಿದ್ದರು.  ಈ ಅಲೆತಗಳಲ್ಲಿ ಬಾಲಕ ಬಟುಕೇಶ್ವರ ದೇಶದ ಹಲವು ಭಾಗಗಳ ಕ್ರಾಂತಿಕಾರಿಗಳ ಸಂಪರ್ಕ ಬೆಳೆಸಿಕೊಂಡ; ದೇಶದ ಸ್ಥಿತಿಗತಿಗಳ ಬಗ್ಗೆ ನಿಕಟ ಪರಿಚಯ ಪಡೆದ; ಬಡತನದ ದಾರುಣತೆಯಿಂದ ಜನತೆಯನ್ನು ಪಾರು ಮಾಡಬೇಕೆಂಬ ಭಾವನೆ ಬೆಳೆಸಿಕೊಂಡ.

ಬಟುಕೇಶ್ವರ ಹದಿಮೂರು, ಹದಿನಾಲ್ಕರ ಹುಡುಗನಾಗಿದ್ದಾಗ ಅವರ ಇಡೀ ಜೀವಮಾನವನ್ನು ನಿರ್ಧರಿಸುವ ಒಂದು ಘಟನೆ ನಡೆಯಿತು. ಅವರು ವಾಸಿಸುತ್ತಿದ್ದ ಕಾನ್ಪುರದಲ್ಲಿ ಮಾಲ್‌ರೋಡ್ ಎಂಬ ಒಂದು ರಸ್ತೆ. ಅದು ಆ ಕಾಲದ ಆಳರಸರಾಗಿದ್ದ ಇಂಗ್ಲಿಷ್‌ ಜನರ ವಾಸಸ್ಥಾನ. ತಾವು ವಾಸಮಾಡುವ ಜಾಗಕ್ಕೆ ತಮ್ಮ ಕೈ ಕೆಳಗಿನ ಜನರು, ಗುಲಾಮ ಭಾರತೀಯರು ಮನಬಂದಂತೆ ಬಂದು ಹೋಗುವುದು ಎಂದರೇನು? ಸಂಜೆ ಐದರ ನಂತರ ಮಾಲ್‌ರೋಡಿನಲ್ಲಿ ಭಾರತೀಯರು ಸಂಚಾರ ಮಾಡಕೂಡದು ಎಂದು ಅವರು ಅಜ್ಞಾಪಿಸಿದರು. ಆಗತಾನೆ ಸಮಾನತೆ, ಸ್ವಾತಂತ್ರ್ಯಗಳ ಭಾವನೆ ಮೂಡುತ್ತಿದ್ದ ದತ್ತರು “ಎಲಾ, ನಮ್ಮ ದೇಶದಲ್ಲಿ ನಾವು ಮನಸ್ಸು ಬಂದಂತೆ ಸಂಚರಿಬಾರದೆಂಬ ನಿರ್ಬಂಧವೇಕೆ? ಇದು ನಮ್ಮನ್ನು ತಿರಸ್ಕಾರ ಮಾಡಬೇಕು, ನಾವು ತಮಗಿಂತ ಕೀಳು ಎಂಬುದನ್ನು ನಾವೇ ಒಪ್ಪಿಕೊಳ್ಳಬೇಕು ಎಂಬ ಉದ್ದೇಶದಿಂದ ಇಂಗ್ಲಿಷರು ವಿಧಿಸುತ್ತಿರುವ ಪ್ರತಿಬಂಧ. ಇದನ್ನು ಮುರಿಯಬೇಕು” ಎಂದುಕೊಂಡರು.  ಒಂದು ದಿನ ಮುಸ್ಸಂಜೆಯ ವೇಳೆಯಲ್ಲಿ ಮಾಲ್ ರೋಡಿನಲ್ಲಿ ಸಂಚಾರ ಹೊರಟರು. ಆ ಬೀದಿಯ ಇಂಗ್ಲಿಷರು ನೋಡಿದರು. ಈ ಪೋರ ತಮ್ಮ ಆಜ್ಞೆಯನ್ನು ಮೀರಿ ರಸ್ತೆಯಲ್ಲಿ ನಡೆಯುವುದೇ? ಅವರಿಗೆ ಕೋಪ ಬಂತು. ಬಾಲಕ ಬಟುಕೇಶ್ವರನನ್ನು ಹಿಡಿದು ಕೈ ತಿರುಚಿದರು. ರಕ್ತ ಚಿಮ್ಮುವಂತೆ ಛಡಿಯಿಂದ ಹೊಡೆದು ಅಟ್ಟಿದರು. ಈ ಏಟುಗಳಿಂದ ಬಟುಕೇಶ್ವರನ ಮೈ ನೊಂದಿತೇ ಹೊರತು ಮನ ನೋಯಲಿಲ್ಲ. ಬಾಲಕನ ದೇಶಭಕ್ತಿಯ ಸಾಕಾರ ರೂಪ ತಾಳಿತು.  "ಬ್ರಿಟಿಷರ ದಾಸ್ಯದಿಂದ ಭಾರತ ಮಾತೆಯನ್ನು ಪಾರು ಮಾಡಬೇಕು. ಅದಕ್ಕಾಗಿ ಈ ಪ್ರಾಣ ಮೀಸಲು” ಎಂದು ಅಂದೇ ಪಣತೊಟ್ಟರು.

ದತ್ತರು 1925ರಲ್ಲಿ ಮೆಟ್ರಿಕ್ಯುಲೇಷನ್‌ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದೆ ನೌಕರಿ ಪಡೆಯುವ ವಿದ್ಯೆಗಿಂತ, ತನ್ನ ಕಾಲಮೇಲೆ ತಾನು ನಿಂತು ಬಾಳಲು ಪ್ರಯೋಜನವಾಗುವ ವೃತ್ತಿಯೊಂದನ್ನು ಕಲಿಯಲು ನಿರ್ಧರಿಸಿದರು. ಹೌರಾ ನಗರದಲ್ಲಿ ದರ್ಜಿ ವೃತ್ತಿಯನ್ನು ಕಲಿಯತೊಡಗಿದರು. ಈ ನಡುವೆ ಅವರ ತಂದೆ ತಾಯಿ ಇಬ್ಬರೂ  ಕಾಲವಶರಾದರು. 1925ರ ಆಗಸ್ಟ್‌ 9ರಂದು ಲಕ್ನೋ ನಗರದ ಬಳಿ ಇರುವ ಕಾಕೋರಿ ಎಂಬ ರೈಲ್ವೆ ನಿಲ್ದಾಣದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕ್ರಾಂತಿಕಾರರು ರೈಲೊಂದನ್ನು ತಡೆದರು. ಅದರಲ್ಲಿದ್ದ ಸರ್ಕಾರಿ ಹಣವನ್ನು ವಶಪಡಿಸಿಕೊಂಡರು. ಈ ಸಂಬಂಧದಲ್ಲಿ ಪಂಡಿತ್‌ರಾಮಪ್ರಸಾದ್‌ ಬಿಸ್ಮಿಲ್‌, ಅಷ್ಫಕ್‌ಉಲ್ಲಾ ಮತ್ತು  ಇತರ ಎಂಟು ಮಂದಿ ಕ್ರಾಂತಿಕಾರರ ಮೇಲೆ ಮೊಕದ್ದಮೆ ಹೂಡಲಾಯಿತು. ಹದಿನೆಂಟು ತಿಂಗಳಕಾಲ ನಡೆದ ಆ ಮೊಕದ್ದಮೆಯಲ್ಲಿ ಕ್ರಾಂತಿಕಾರರನ್ನು ರಕ್ಷಿಸಲು ದೇಶಾದ್ಯಂತ ಚಳವಳಿ ನಡೆಯಿತು. ಕ್ರಾಂತಿಕಾರಿ ಸಂಘಟನೆ ಹೊಸ ರೂಪ ತಾಳಿತು.  1927ರ ಡಿಸೆಂಬರಿನಲ್ಲಿ ಕಾಕೋರಿ ಮೊಕದ್ದಮೆಯ ನಾಲ್ವರು ಅಪಾದಿತರನ್ನು ಸರ್ಕಾರ ಗಲ್ಲಿಗೇರಿಸಿತು. ಇದರಿಂದ ಕ್ರಾಂತಿಕಾರಿಗಳ ಎದೆ ಝಲ್‌ ಎಂದು, ತಮ್ಮ ಹೋರಾಟವನ್ನು ಬಿಟ್ಟುಬಿಡುತ್ತಾರೆ ಎಂದು ಭಾವಿಸಿತ್ತು ಇಂ‌ಗ್ಲಿಷರ ಸರ್ಕಾರ. ಆದರೆ ಹೊಸ ಹುರುಪು ಹುಟ್ಟಿತು. ನಾಲ್ಕಾರು ತಿಂಗಳಲ್ಲಿ ಭಾರತದ ಕ್ರಾಂತಿಕಾರಿಗಳೆಲ್ಲ “ಹಿಂದೂಸ್ಥಾನ್‌ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌” ಎಂಬ ಹೆಸರಿನಲ್ಲಿ ಸಂಘಟಿತರಾದರು. ಚಂದ್ರಶೇಖರ ಆಜಾದ್‌ ಮತ್ತು ಸರ್ದಾರ್ ಭಗತ್‌ಸಿಂಗ್ ಈ ಸಂಸ್ಥೆಯ ಪ್ರಮುಖ ನಾಯಕರು.  ಬಟುಕೇಶ್ವರ ದತ್ತರು, ಚಂದ್ರಶೇಖರ ಆಜಾದರೊಂದಿಗೆ ಆಗ್ರಾ ಪ್ರದೇಶದಲ್ಲಿ ಸಂಘಟಕರಾದರು. ಅವರ ಕ್ರಾಂತಿಕಾರಿ ಭಾವನೆಗಳಿಗೆ ಕಾರ್ಯರೂಪ ನೀಡಲು ಅವಕಾಶವಾಯಿತು.

1928ರಲ್ಲಿ ಭಾರತದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಸೂಚಿಸಲು ಬ್ರಿಟಿಷ್‌ಸರ್ಕಾರವು ಸೈಮನ್ ಕಮೀಷನನ್ನು ನಿಯಮಿಸಿತು. ಭಾರತೀಯರು ಸ್ವಾತಂತ್ರ್ಯ ಪಡೆಯಲು ಯೋಗ್ಯರೆ ಎಂದು ತೀರ್ಮಾನಿಸಲು ಈ ನಿಯೋಗ ಮತ್ತು ಅದಕ್ಕೊಬ್ಬ ಅಧ್ಯಕ್ಷ ಸೈಮನ್ ಎಂಬಾತ. ಇಂತಹ ನಿಯೋಗವನ್ನು ಭಾರತಕ್ಕೆ ಕಳುಹಿಸಿದುದೇ ತಮಗೆ ಅವಮಾನ ಎಂದು ಭಾರತೀಯರು ಭಾವಿಸಿದರು. ಭಾರತದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಅದನ್ನು ಬಹಿಷ್ಕರಿಸಿದವು. ಕಮೀಷನ್‌ ಅನ್ನು ಭೇಟಿ ಮಾಡಿದ ಪ್ರತಿ ನಗರದಲ್ಲಿಯೂ ಹರತಾಳಗಳು, ವಿರೋಧ ಪ್ರದರ್ಶನಗಳು ನಡೆದವು. ಅಕ್ಟೋಬರ್ 30ರಂದು ಸೈಮನ್‌ ಕಮೀಷನ್ ಲಾಹೋರ್ ನಗರಕ್ಕೆ ಭೇಟಿ ನೀಡಿತು. ಖ್ಯಾತ ಜನನಾಯಕ ಲಾಲ ಲಜಪತರಾಯ್‌ ಅವರ ನೇತೃತ್ವದಲ್ಲಿ ಭಾರೀ ವಿರೋಧ ಪ್ರದರ್ಶನ ನಡೆಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಸ್ವತಃ ಲಜಪತರಾಯರನ್ನೇ ಲಾಠಿಗಳಿಂದ ಬಡಿದರು. ಈ ಏಟುಗಳ ಪರಿಣಾಮವಾಗಿ ಅವರು ನವೆಂಬರ್ 17ರಂದು ಸ್ವರ್ಗಸ್ಥರಾದರು. ದೇಶದಲ್ಲೆಲ್ಲಾ ರೋಷದ ಕಿಚ್ಚೆದ್ದಿತು. ದೇಶಕ್ಕೆ, ರಾಷ್ಟ್ರೀಯ ಚಳವಳಿಗೆ, ಭಾರತದ ವ್ಯಕ್ತಿತ್ವಕ್ಕೆ ಆದ ಈ ಅಪಮಾನ ಕ್ರಾಂತಿಕಾರರನ್ನು ಕೆರಳಿಸಿತು. ಸೂಕ್ತ ರೀತಿಯ ಪ್ರತೀಕಾರ ಕೈಗೊಳ್ಳಬೇಕೆಂಬ ಕಾತರ ಅವರಲ್ಲಿ ಮೂಡಿತು.

ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ನಿನ ಕೇಂದ್ರ ಸಮಿತಿಯು 1928ರ ಡಿಸೆಂಬರ್ 10ರಂದು ಲಾಹೋರಿನಲ್ಲಿ ರಹಸ್ಯವಾಗಿ ಸಭೆ ಸೇರಿತು. ಲಜಪತರಾಯರ ಸಾವಿಗೆ ಜವಾಬ್ದಾರನಾದ ಸ್ಕಾಟ್ ಎಂಬ ಇಂಗ್ಲಿಷ್‌ ಅಧಿಕಾರಿಯನ್ನು ಮುಗಿಸಿಬಿಡಬೇಕು ಎಂದು ನಿರ್ಧರಿಸಿತು.

ಮರುದಿನದಿಂದ ಆ ಅಧಿಕಾರಿಯ ಚಲನವಲನಗಳ ಮೇಲೆ ನಿಗಾ ಇಡಲು ಒಬ್ಬ ಸದಸ್ಯ ನೇಮಿತನಾದ. ಸ್ಕಾಟನನ್ನು ಕೊಂದು ಪಾರಾಗಲು ನಿಯಮಿತ ಜಾಗದ ಆಯಕಟ್ಟುಗಳನ್ನೆಲ್ಲ ಗಮನಿಸಿ ಯೋಜನೆ ಸಿದ್ಧವಾಯಿತು. ಕೆಂಪುಕಾಗದದ ಮೇಲೆ ಕರಪತ್ರವೊಂದನ್ನು ಮುದ್ರಿಸಿ ಅದರಲ್ಲಿ ಪಕ್ಷದ ಧ್ಯೇಯಗಳನ್ನು ವಿವರಿಸಲಾಗಿತ್ತು. 17ನೇ ತಾರೀಕು ಮಧ್ಯಾಹ್ನ 4.37ಕ್ಕೆ ಲಾಹೋರಿನ ಡಿ.ಎ.ಬಿ.ಕಾಲೇಜು ಮತ್ತು ಜಿಲ್ಲಾ ಕೋರ್ಟುಗಳ ಬಳಿ ಇದ್ದ ಜಿಲ್ಲಾ ಪೊಲೀಸ್ ಸೂಪರಿಂಟೆಂಡೆಂಟರ ಕಚೇರಿಯಿಂದ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಸ್ಯಾಂಡರ್ಸ್‌ ಹೊರಬಂದು ತನ್ನ ಮೋಟರ್ ಸೈಕಲಿನತ್ತ ನಡೆದ. ಆತನೇ ಸ್ಕಾಟ್‌ ಎಂದು ತಿಳಿದು ರಾಜಗುರು ಮುನ್ನುಗ್ಗಿ ತನ್ನ ಪಿಸ್ತೂಲಿನಿಂದ ಅವನ ತಲೆಗೆ ಗುರಿಯಿಟ್ಟು ಗುಂಡು ಹಾರಿಸಿದರು. ಸ್ಯಾಂಡರ್ಸ್‌ ನೆಲಕ್ಕೆ ಬಿದ್ದ. ಭಗತ್‌ಸಿಂಗ್ ಓಡಿಬಂದು ಅವನ ತನ್ನ ರಿವಾಲ್ವರಿಂದ ಐದಾರು ಗುಂಡುಗಳನ್ನು ಹಾರಿಸಿದರು. ಕೂಡಲೇ ಹಿಂತಿರುಗಿ ಏನೂ ಆಗಿಲ್ಲವೆನ್ನುವಂತೆ ಸಮಾಧಾನದಿಂದ ನಡೆದರು. ಚಂದ್ರಶೇಖರ ಆಜಾದ್ ಡಿ.ಎ.ವಿ. ಕಾಲೇಜಿನ ಪ್ರವೇಶ ದ್ವಾರದಲ್ಲಿ ನಿಂತು ಸಮಯವರಿತು ನೆರವು ನೀಡಲು ಸಿದ್ಧವಾಗಿದ್ದರು. ಸ್ಯಾಂಡರ್ಸ್‌ನ ಅಂಗರಕ್ಷಕ ಚನನ್ ಸಿಂಗ್, ಒಬ್ಬ ಇಂಗ್ಲಿಷ್‌ಸಾರ್ಜೆಂಟ್ ಹೊರಕ್ಕೆ ಓಡಿಬಂದು ಇವರುಗಳನ್ನು ಬೆನ್ನಟ್ಟಿದ್ದರು. ಈ ಗುಂಪಿನಲ್ಲೊಬ್ಬ ಹಿಂತಿರುಗಿ ಹಾರಿಸಿದ ಗುಂಡು ಗುರಿತಪ್ಪಿತು. ಆದರೆ ಮುನ್ನುಗ್ಗಿ ಬರುತ್ತಿದ್ದ ಸಾರ್ಜೆಂಟ್ ಜಾರಿಬಿದ್ದು ಕೈ ಮುರಿದುಕೊಂಡ. ರಾಜಗುರು ಮತ್ತು ಭಗತ್ ಸಿಂಗ್ ಇಬ್ಬರೂ ಕಾಜೇಜಿನ ಆವರಣಕ್ಕೆ ಬಂದು ಗೇಟಿನ ಮೂಲಕ ಒಳ ಹೋಗುತ್ತಿರುವಾಗ ಚನನ್ ಸಿಂಗ್ ಅವರಿಗೆ ಅತಿ ಸಮೀಪದಲ್ಲಿ ಅಟ್ಟಿಸಿಕೊಂಡು ಬರುತ್ತಿದ್ದ. ಅವರುಗಳು ತಪ್ಪಿಸಿಕೊಳ್ಳುವುದಕ್ಕೆ ಅಡ್ಡಿಬಾರದಂತೆ ಆಜಾದ್ ತನ್ನ ರಿವಾಲ್ವರಿನಿಂದ ಚನನ್ ಸಿಂಗನಿಗೆ ಗುರಿ ಇಟ್ಟು ಗುಂಡು ಹಾರಿಸಿದರು. ಹೊಟ್ಟೆಗೆ ತೀವ್ರ ಗಾಯವಾದರೂ, ಚನನ್ ಸಿಂಗ್ ಬೆನ್ನಟ್ಟುವುದನ್ನು ಬಿಡಲಿಲ್ಲ. ರಕ್ತ ಸುರಿಯುತ್ತಿದ್ದರೂ ಲೆಕ್ಕಿಸದೆ ಮುಂದುವರಿದ.  ಭಗತ್ ಸಿಂಗ್, ರಾಜಗುರು, ಆಜಾದ್, ಮತ್ತೊಬ್ಬ ಕ್ರಾಂತಿಕಾರಿ ನಾಲ್ವರೂ ಪ್ರಿನ್ಸಿಪಾಲರ ಮನೆಯ ಹತ್ತಿರದ ಸಣ್ಣ ಗೇಟಿನಿಂದ ಡಿ.ಎ.ವಿ. ಕಾಲೇಜಿನ ಅಂಗಳಕ್ಕೆ ಪ್ರವೇಶಿಸಿದರು. ಹಾಸ್ಟೆಲಿನ ಹಜಾರದಲ್ಲಿ ಹಾಯ್ದು ಹೋಗಿ ಒಂದನೆಯ ಮಹಡಿಯನ್ನೇರಿದರು. ಕಟ್ಟಡದ ಹಿಂಭಾಗಕ್ಕೆ ಹೋಗಿ ಗೋಡೆಯನ್ನು ಹಾರಿ ತಾವು ತಂದು ಅಲ್ಲಿ ನಿಲ್ಲಿಸಿದ್ದ ಸೈಕಲ್ಲುಗಳನ್ನೇರಿ ಪರಾರಿಯಾದರು.

ಸ್ಯಾಂಡರ್ಸ್ ಹತ್ಯೆಯಾದ ಕೂಡಲೇ ಪೊಲೀಸರು ತನಿಖೆಗಳನ್ನು ಆರಂಭಿಸಿದರು. ಹತ್ತಾರು ಜನರನ್ನು ಬಂಧಿಸಿದರು. ಆದರೆ ಯಾವ ಮುಖ್ಯಸ್ಥನೂ ಸಿಕ್ಕಲಿಲ್ಲ. ಕ್ರಾಂತಿಕಾರಿ ಚಳವಳಿಯ ಕೇಂದ್ರದ ಬಳಿ ಹತ್ತಲಿಲ್ಲ. ಈ ಮಧ್ಯೆ ಆಗಾಗ್ಗೆ, ಅಲ್ಲಲ್ಲಿ ಹಿಂದೂಸ್ಥಾನ್‌ಸೋಷಿಯಲಿಸ್ಟ್ ರಿಪಬ್ಲಿಕನ್‌ಸೇನೆಯ ದಂಡನಾಯಕರಿಂದ ಪ್ರಕಟಿಸಲ್ಪಟ್ಟುವೆಂದು ಹೇಳಿಕೊಂಡು ಹಲವಾರು ಭಿತ್ತಿ ಪತ್ರಗಳು ಗೋಡೆಗಳ ಮೇಲೆ ಕಂಡು ಬರತೊಡಗಿದವು. ಎರಡು ಮೂರು ತಿಂಗಳುಗಳು ಉರುಳಿದರೂ ಯಾರ ಸುಳಿವೂ ಪೊಲೀಸರಿಗೆ ಹತ್ತಲಿಲ್ಲ.

ಕ್ರಾಂತಿಕಾರಿಗಳಿಗೆ ಕ್ರಮೇಣ ಹೀಗೆನ್ನಿಸಿತು. ನಾವು ಹೀಗೆ ಹೋರಾಟ ನಡೆಸುತ್ತಿದ್ದೇವೆ. ಇದೆಲ್ಲ ದೇಶಕ್ಕಾಗಿ. ಆದರೆ ನಮ್ಮ ಜನರಲ್ಲಿಯೇ ಎಷ್ಟೋ ಮಂದಿಗೆ ನಾವು ಏನು ಮಾಡುತ್ತಿದ್ದೇವೆ, ಏಕೆ ಈ ದಾಳಿಗಳನ್ನು ನಡೆಸುತ್ತಿದ್ದೇವೆ ಇವೆಲ್ಲ ತಿಳಿಯದು. ಸರ್ಕಾರ ನಮ್ಮ ಬಗ್ಗೆ ಜನರಿಗೆ ಸುಳ್ಳುಗಳನ್ನು ಹೇಳುತ್ತದೆ. ನಾವು ನಮ್ಮ ಉದ್ದೇಶ, ಕೆಲಸದ ರೀತಿ ಇವನ್ನು ಜನರಿಗೆ ತಿಳಿಸಬೇಕು. ನಾವು ಕೈಗೊಳ್ಳುತ್ತಿರುವ ಬಾಂಬು ದಾಳಿಗಳು, ಹತ್ಯೆಗಳು, ಇವೆಲ್ಲವೂ ಬರಿಯ ಹಿಂಸಾಕೃತ್ಯಗಳಲ್ಲ, ಭಾರತಕ್ಕೆ ಸ್ವಾತಂತ್ರ್ಯ ತರಲು, ಸಮಾಜ ವ್ಯವಸ್ಥೆಯನ್ನು ಬದಲಾಯಿಸಲು ನಾವು ನಿರೂಪಿಸಿರುವ ಯೋಜನೆಯ ಅಂಗಗಳು ಎಂಬುದನ್ನು ಸಕಲರಿಗೂ ತಿಳಿಯಪಡಿಸಬೇಕಾದ ಸಂದರ್ಭ ಬಂದಿದೆ. ಈ ವಿಚಾರವನ್ನು ಕೇಂದ್ರ ಸಮಿತಿ ಸಭೆ ಸೇರಿ ಚರ್ಚಿಸಿತು. ಕೇಂದ್ರ ವಿಧಾನ ಸಭೆಯ ಮೇಲೆ ಬಾಂಬು ಎಸೆಯುವ ಸಲಹೆ ಬಂತು.

ಮೊದಲು ಬಂದ ಸೂಚನೆ ಹೀಗಿತ್ತು. ಭಗತ್‌ಸಿಂಗ್ ಮತ್ತು ಬಟುಕೇಶ್ವರ ದತ್ತರು ವಿಧಾನಸಭೆಯ ಮೇಲೆ ಬಾಂಬು ಹಾಕಬೇಕು. ಚಂದ್ರಶೇಖರ ಆಜಾದ್‌ಮತ್ತು ಇತರ ಇಬ್ಬರು ಪಹರೆಯಿದ್ದು ಬಾಂಬು ಹಾಕಿ ಬಳಿಕ ಅವರಿಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ಒಯ್ಯಬೇಕು.ಈ ಸೂಚನೆಯು ಭಗತ್‌ಸಿಂಗರಿಗೆ ಒಪ್ಪಿಗೆಯಾಗಲಿಲ್ಲ. ಬಾಂಬು ಹಾಕಿದ ನಂತರ ದಾಳಿಕಾರರು ಬಂಧನಕ್ಕೆ ಒಳಗಾಗಬೇಕು; ಕೋರ್ಟಿನಲ್ಲಿ ಮೊಕದ್ದಮೆ ಹೂಡಿದಾಗ ಆ ಅವಕಾಶವನ್ನು ತಮ್ಮ ಪಕ್ಷದ ಧ್ಯೇಯ, ಧೋರಣೆ, ಕಾರ್ಯನೀತಿಗಳನ್ನು ಜನತೆಗೆ ತಿಳಿಯಪಡಿಸಿ ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ದಾಳಿಕೋರರು ಬಂದನಕ್ಕೊಳಗಾಗುವುದಾದರೆ ಭಗತ್‌ಸಿಂಗರು ಸ್ಯಾಂಡರ್ಸ್‌ಹತ್ಯೆಯ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದವರು. ಅವರು ಬಂಧಿತರಾದರೆ ನೇಣುಗಂಬವೂ ನಿಶ್ಚಯ. ಈ ಕಾರಣದಿಂದ ಬಾಂಬುಗಳನ್ನು ಎಸೆಯಲು ಬಟುಕೇಶ್ವರ ದತ್ತರನ್ನೂ ಇನ್ನೊಬ್ಬರನ್ನೂ ನಿಯಮಿಸಲಾಯಿತು. ಈ ಸಭೆಯಲ್ಲಿ ಸುಖದೇವ್ ಭಾಗವಹಿಸಿರಲಿಲ್ಲ.

ಎರಡು ದಿನಗಳ ನಂತರ ಈ ನಿರ್ಧಾರದ ವಿಚಾರ ಸುಖದೇವರಿಗೆ ತಿಳಿಯಿತು. ಅವರ ಅಭಿಪ್ರಾಯದಲ್ಲಿ ತಮ್ಮ ಪಕ್ಷದ ಧ್ಯೇಯ ಧೋರಣೆಗಳ ವಿವರವನ್ನು ಭಗತ್ ಸಿಂಗರು ಸೂಕ್ತ ರೀತಿಯಲ್ಲಿ ನೀಡಬಲ್ಲವರಾಗಿದ್ದರು. ಕೋರ್ಟಿನ ಮುಂದೆ ಯಾರೋ ನಿಂತು, ಏನೋ ಹೇಳಿದರೆ ಲಾಭವೇನು? ಅವರು ಭಗತಸಿಂಗ್‌ರನ್ನು ಕಂಡು ಮಾತನಾಡಿ ತಮ್ಮ ಅಭಿಪ್ರಾಯ ತಿಳಿಸಿದರು. ಮಿತ್ರರಲ್ಲಿ ಬಿರುಸಾದ ಮಾತೂ ಆಯಿತು. ಕೊನೆಗೆ ಭಗತ್‌ಸಿಂಗರ ಒತ್ತಾಯದ ಮೇಲೆ ಸಮಿತಿ ಮರಳಿ ಸಭೆ ಸೇರಿತು. ಭಗತ್‌ಸಿಂಗರು ತಾವೂ ಸಹ ಬಾಂಬು ದಾಳಿಯಲ್ಲಿ ಭಾಗವಹಿಸಲೇಬೇಕೆಂದು ಹಠ ಹಿಡಿದರು. ಬೇರೆ ದಾರಿಯಿಲ್ಲದೆ ಸಮಿತಿಯು ಅವರನ್ನೂ ಬಟುಕೇಶ್ವರ ದತ್ತರನ್ನೂ ಈ ಕಾರ್ಯಕ್ಕೆ ನಿಯೋಜಿಸಿತು. ಸುಖದೇವರು ಸಭೆಯಲ್ಲಿ ಮಾತನ್ನೇ ಆಡಲಿಲ್ಲ. ಸಭೆ ಮುಗಿದ ನಂತರ ಅವರು ಅತೀವ ದುಃಖಕ್ಕೊಳಗಾದರು. ಧ್ಯೆಯ ಸಾಧನೆಗಾಗಿ ಪರಮ ಮಿತ್ರನನ್ನು ಮೃತ್ಯುವಿನ ದವಡೆಗೆ ನೂಕುತ್ತಿರುವೆನಲ್ಲಾ ಎಂದು ಎರಡು ದಿನ ಅತ್ತರು. ಆದರೆ ಮಿತ್ರ ಪ್ರೇಮ, ಧ್ಯೇಯಕ್ಕಿಂತ ದೊಡ್ಡದಾಗಬಾರದಲ್ಲ!

ಕೇಂದ್ರ ವಿಧಾನಸಭೆಯ ಮೇಲೆ ಬಾಂಬುಗಳನ್ನು ಎಸೆದು ಬಂಧಿತರಾದ ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತರ ಮೇಲೆ ಪೊಲೀಸರು ಮೊಕದ್ದಮೆ ಹೂಡಿದರು. ಕೊಲೆ ಮಾಡುವ ಪ್ರಯತ್ನ ಮತ್ತು ಸಿಡಿಮದ್ದು ಕಾನೂನಿನ ಉಲ್ಲಂಘನೆ ಇವೇ ಅವರ ಮೇಲೆ ಆಪಾದನೆಗಳು. 1929ರ ಜೂನ್‌ 6ರಂದು ಅವರಿಬ್ಬರೂ ಕೋರ್ಟಿನಲ್ಲಿ ತಮ್ಮ ಹೇಳಿಕೆ ನೀಡಿದರು. ಆ ಹೇಳಿಕೆಯ ಮುಖ್ಯ ಅಂಶಗಳು ಇವು:

"ಈ ದಾಳಿಯು ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಮಾಡಿದುದಲ್ಲ. ಒಂದು ಸಂಸ್ಥೆಯ ಮೇಲೆ ಮಾಡಿದುದು. ಯಾವ ವ್ಯಕ್ತಿಯ ಮೇಲೂ ನಮಗೆ ದ್ವೇಷವಿಲ್ಲ. ಮಾನವ ಜೀವನವು ನಮಗೆ ಎಷ್ಟೊಂದು ಪವಿತ್ರ ಎಂಬುದನ್ನು ಮಾತುಗಳಲ್ಲಿ ಹೇಳಲಾರೆವು”

“ಕೇಂದ್ರ ವಿಧಾನಸಭೆಯು ನಿಷ್ಪ್ರಯೋಜಕ; ಮಾತ್ರವಲ್ಲ, ಅಪಾರವಾಗಿ ಕೇಡುಮಾಡಬಲ್ಲ ಅಧಿಕಾರ ಪಡೆದಿದೆ. ಈ ಕಾರಣದಿಂದ ನಾವು ಅದನ್ನು ವಿರೋಧಿಸುತ್ತೇವೆ. ಜಗತ್ತಿಗೆ ಭಾರತದ ತೇಜೋವಧೆ ಹಾಗೂ ಅಸಹಾಯಕತೆಯನ್ನು ಎತ್ತಿ ತೋರಿಸುವ ಸಲುವಾಗಿ ಮಾತ್ರ ಅದು ಅಸ್ವಿತ್ವದಲ್ಲಿದೆ. ಬೇಜವ್ದಾರಿ ನಿರಂಕುಶ ಪ್ರಭುತ್ವದ ಪ್ರತೀಕ ಅದು.”

“ರಾಷ್ಟ್ರೀಯ ಆಕಾಂಕ್ಷೆಗಳು ಮೇಲಿಂದ ಮೇಲೆ ಕಸದ ಬುಟ್ಟಿಗೆ ತೂರಲ್ಪಟ್ಟಿವೆ. ಸಭೆಯು ಮಾನ್ಯ ಮಾಡಿದ ಗಂಭೀರವಾದ ನಿರ್ಣಯಗಳು ಭಾರತದ ಪಾರ್ಲಿಮೆಂಟ್ ಎಂದು ಕರೆಯಲ್ಪಡುವ ಈ ಸದನದಲ್ಲಿ ಕಾಲು ಕಸವಾಗಿದೆ. ಚುನಾಯಿತ ಸದಸ್ಯರು ತಿರಸ್ಕರಿಸಿದ ಸಲಹೆಗಳು ಮೇಲಧಿಕಾರಿಗಳ ರುಜು ಮಾತ್ರದಿಂದ ಕಾನೂನುಗಳಾಗಿವೆ. ಈ ಸಂಸ್ಥೆ ಮೇಲೆ ತಳುಕಾದ ಟೊಳ್ಳು ಪ್ರದರ್ಶನ.”

"ಕಿವುಡರಿಗೆ ಕೇಳಿಸಲೆಂದು, ಲಕ್ಷಿಸದವರಿಗೆ ಸಮಯದಲ್ಲಿ ಒಂದು ಎಚ್ಚರಿಕೆಯಾಗಲೆಂದು ಉದ್ದೇಶಿಸಿ ನಾವು ಬಾಂಬುಗಳನ್ನು ಎಸೆದೆವು. ಜೀವ ಹತ್ಯೆಯ ಮಾಡುವುದು, ಇಲ್ಲವೇ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡುವುದೋ ನಮ್ಮ ಉದ್ದೇಶವಾಗಿದ್ದರೆ ಈಗ ಬಳಸಿದ ಬಾಂಬುಗಳಿಗಿಂತ ಪ್ರಬಲವಾದವುಗಳನ್ನು ಬಳಸುತ್ತಿದ್ದೆವು. ಅವುಗಳನ್ನು ತಯಾರಿಸುವ ವಿಧಾನ ನಮಗೆ ಗೊತ್ತು. ಹೆಚ್ಚು ಜನ ಕೂಡಿ ಕುಳಿತಿದ್ದ ಜಾಗಕ್ಕೆ ಗುರಿಯಿಡಬಹುದಾಗಿತ್ತು. ಅಥವಾ ನಮ್ಮ ಗುರಿಗೆ ನಿಲುಕವಷ್ಟೇ ದೂರದಲ್ಲಿದ್ದ ಸೈಮನ್ ಅವರತ್ತ ಎಸೆಯಬಹುದಾಗಿತ್ತು."

“ಹಾನಿ ಮಾಡಲು ಬಲವನ್ನು ಬಳಸಿದರೆ ಮಾತ್ರ ಅದು ಹಿಂಸೆಯಾಗುತ್ತದೆ; ಅನೀತಿಯಾಗುತ್ತದೆ. ನ್ಯಾಯವಾದ ಉದ್ದೇಶಕ್ಕಾಗಿ ಬಲವನ್ನು ಉಪಯೋಗಿಸಿದರೆ ಅದಕ್ಕೆ ನೀತಿಯ ಬೆಂಬಲವಿದೆ. ಗುರು ಗೋವಿಂದಸಿಂಗ್ ಮತ್ತು ಶಿವಾಜಿ, ಕೆಮಾಲ್ ಪಾಷಾ ಮತ್ತು ರೆಜಾ ಖಾನ್‌, ವಾಷಿಂಗ್ಟನ್ ಮತ್ತು ‌ಗ್ಯಾರಿಬಾಲ್ಡಿ,ಲಫಾಯೆಟ್ ಮತ್ತು ಲೆನಿನ್ ಈ ಮಹಾಪುರುಷರಿಗೆ ಸ್ಫೂರ್ತಿ ನೀಡಿದ ಮಹೋನ್ನತ ಧ್ಯೇಯಗಳೇ ನಮಗೂ ಮೇಲ್ಪಂಕ್ತಿಗಳು.”

“ನಾವೇ ನಾವಾಗಿ, ನಾವು ಮಾಡಿದ ಕಾರ್ಯಕ್ಕೆ ವಿಧಿಸಲ್ಪಡುವ ಶಿಕ್ಷೆಗೆ ಒಪ್ಪಿಸಿಕೊಂಡಿದ್ದೇವೆ. ಭಾವನೆಗಳನ್ನು ಕೊಲ್ಲಲು ಸಾಧ್ಯವಿಲ್ಲ ಎಂಬುದನ್ನು ಸಾಮ್ರಾಜ್ಯಶಾಹಿ ಶೋಷಕರು ಅರಿತುಕೊಳ್ಳಲಿ. ಎರಡು ಸಾಮಾನ್ಯ ಜೀವಗಳನ್ನು ಹೊಸಕಿ ಹಾಕುವುದರಿಂದ ರಾಷ್ಟ್ರವನ್ನು ಹೊಸಕಿ ಹಾಕುವುದು ಸಾಧ್ಯವಿಲ್ಲ”.

“ಸಮಾಜವಾದದ ಆಧಾರದ ಮೇಲೆ ಸಮಾಜವು ಪುನರ್ ರೂಪಗೊಳ್ಳಬೇಕು. ಅದುವರೆಗೆ ಮನುಷ್ಯನಿಂದ ಮನುಷ್ಯನ, ದೇಶದಿಂದ ದೇಶದ ಶೋಷಣೆ ಕೊನೆಗೊಳ್ಳುವುದಿಲ್ಲ; ಮಾನವಕೋಟಿಯು ಅನುಭವಿಸುತ್ತಿರುವ ದಾರುಣ ಕಷ್ಟಗಳು ಕೊನೆಗೊಳ್ಳುವುದಿಲ್ಲ. ಯುದ್ಧಗಳಿಗೆ ವಿದಾಯ ಹೇಳಿ ಪ್ರಪಂಚದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಮಾತು ಟೊಳ್ಳು ಘೋಷಣೆಯಾಗಿರುತ್ತದೆ.”

"ಈ ಕ್ರಾಂತಿಯ ಪೂಜಾಪೀಠಕ್ಕೆ ನಮ್ಮ ತರುಣ ಬಾಳನ್ನು ಧೂಪವಾಗಿ ತಂದಿದ್ದೇವೆ. ಇಂತಹ ಮಹೋನ್ನತ ಧ್ಯೇಯಕ್ಕೆ ಯಾವ ತ್ಯಾಗವೂ ಹಿರಿದಲ್ಲ. ನಾವು ತೃ‌‌ಪ್ತಿಗೊಂಡಿದ್ದೇವೆ. ಕ್ರಾಂತಿಯ ಅರುಣೋದಯವನ್ನು ನಿರೀಕ್ಷಿಸುತ್ತಿದ್ದೇವೆ.”

"ಕ್ರಾಂತಿ ಚಿರಾಯುವಾಗಲಿ!”

ಈ ವಿಚಾರದಲ್ಲಿ ನ್ಯಾಯಾಧೀಶರಿಗೆ ನೆರವಾಗಲು ಪಂಚಾಯಿತಿದಾರರನ್ನು ನೇಮಿಸಲಾಗಿತ್ತು. ಅಪಾದಿತರು ಅಪರಾಧಿಗಳೇ ಎಂಬ ವಿಚಾರವಾಗಿ ಪಂಚಾಯಿತದಾರರಲ್ಲಿ ಒಮ್ಮತ ಮೂಡಲಿಲ್ಲ. ಆದರೇನು? ಜೂನ್‌ 12ರಂದು ಭಗತ್‌ಸಿಂಗ್ ಹಾಗೂ ಬಟುಕೇಶ್ವರ ದತ್ತರಿಗೆ ನ್ಯಾಯಧೀಶರು ಜೀವಾವಧಿ ಕಾರಾಗೃಹವಾಸದ ಶಿಕ್ಷೆಯನ್ನು ವಿಧಿಸಿದರು. ಅನಂತರ ಹೈಕೋರ್ಟು ಸಹ ಅದನ್ನು ಎತ್ತಿ ಹಿಡಿಯಿತು.

ಸ್ಯಾಂಡರ್ಸ್‌ಹತ್ಯೆಯ ಪ್ರಕರಣದಲ್ಲಿ ಪೊಲೀಸ್‌ತನಿಖೆ ನಡೆದೇ ಇತ್ತು. 1929ರ ಏಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ಸಿಕ್ಕಿದ ಸಣ್ಣ ಸುಳಿವು ಇಡೀ ಉತ್ತರ ಭಾರತದ ಕ್ರಾಂತಿಕಾರಿ ಜಾಲವನ್ನು ಬಯಲಿಗೆಳೆಯಿತು.  ಲಾಹೋರಿನ ಕೆಲವು ಕಮ್ಮಾರರ ಬಳಿ ಕ್ರಾಂತಿಕಾರರು ಕಬ್ಬಿಣದ ಕೆಲವು ಬಿಡಿ ಭಾಗಗಳನ್ನು ಮಾಡಿಸುತ್ತಿದ್ದರು. ಕೊಳಿಮೊಟ್ಟೆಯ ಆಕಾರದ ಟೊಳ್ಳು ಚಂಡುಗಳು ಇವು. ಗ್ಯಾಸ್‌ಯಂತ್ರವೊಂದಕ್ಕೆ ಅಳವಡಿಸುವ ಬಿಡಿ ಭಾಗವೆಂದು ಹೇಳಿ ಅವುಗಳನ್ನು ಮಾಡಿಸಲಾಗುತ್ತಿತ್ತು. ಕೆಲಸಗಾರರಿಗೆ ಕುತೂಹಲ ಹುಟ್ಟಿತು. ಅವರು ತಮಗೆ ಪರಿಚಯವಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ ಒಬ್ಬನಿಗೆ ಈ ಸಮಾಚಾರ ನೀಡಿದರು. ಈ ವಿಚಾರವು ಪೊಲೀಸ್ ಕೇಂದ್ರಕ್ಕೆ ಮುಟ್ಟಿತು. ಈ ಬಿಡಿ 
ಭಾಗಗಳನ್ನು ಮಾಡಿಸುತ್ತಿದ್ದವರು ಯಾರು, ಅವರು ಎಲ್ಲಿ ವಾಸ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಗುಪ್ತಚಾರರು ನಿಯಮಿತರಾದರು.

ಆಗಾಗ್ಗೆ ಸುಖದೇವ್ ಕಮ್ಮಾರರನ್ನು ಭೇಟಿ ಮಾಡುತ್ತಿದ್ದರು. ಅಲ್ಲಿಂದ ಮ್ಯಾಕ್ ಲಿಯಾಡ್ ರಸ್ತೆಯಲ್ಲಿದ್ದ ಕಾಶ್ಮೀರ್ ಬಿಲ್ಡಿಂಗ್‌ನ ಕೊಠಡಿಯೊಂದಕ್ಕೆ ಹೋಗುತ್ತಿದ್ದರು. ಈ ಕೊಠಡಿ ಹಗಲೆಲ್ಲ ಮುಚ್ಚಿರುತ್ತಿತ್ತು. ರಾತ್ರಿ ತೆರೆದಿರುತ್ತಿತ್ತು. ಆ ಕಟ್ಟಡ ಹಾಗೂ ಕೊಠಡಿ ತೀವ್ರ ಪರಿಶೀಲನೆಗೆ ಒಳಗಾದವು. ಕಟ್ಟಡದಿಂದ ಹೊರಬರುವ ನೀರಿನ ಚರಂಡಿಗಳಲ್ಲಿ ಗಂಧಕದ ಕಟ್ಟಿ ಕಟ್ಟಿಕೊಂಡಿದ್ದುದು ತಿಳಿದುಬಂದಿತು. ಪೊಲೀಸರಿಗೆ ತಾವು ಹಿಡಿದಿದ್ದ ಜಾಡು ಸರಿಯಾದುದು ಎಂಬ ವಿಶ್ವಾಸ ಮೂಡಿತು. ಈ ವೇಳೆಗೆ ದೆಹಲಿಯಲ್ಲಿ ಕೇಂದ್ರ ವಿಧಾನಸಭೆಯ ಮೇಲೆ ಎಸೆದಿದ್ದ ಬಾಂಬುಗಳ ಕವಚಗಳು ಲಾಹೋರಿನ ಕಮ್ಮಾರರು ತಯಾರಿಸುತ್ತಿದ್ದ ಆಕೃತಿಯೇ ಎಂಬ ವಿಚಾರವೂ ಖಚಿತವಾಯಿತು.  ಏಪ್ರಿಲ್‌ 15ರಂದು ಪೊಲೀಸರು ಕಾಶ್ಮೀರ ಬಿಲ್ಡಿಂಗಿನ 69ನೇ ನಂಬರ್ ಕೋಣೆಯ ಮೇಲೆ ದಾಳಿ ಮಾಡಿದರು. ಆ ಕೋಣೆಯನ್ನು ತಿಂಗಳಿಗೆ 13 ರೂಪಾಯಿ ಬಾಡಿಗೆಯ ಮೇಲೆ ಭಗವತಿ ಚರಣ್ ಎಂಬುವರು ಪಡೆದಿದ್ದರು. ಶೋಧನೆ ಮಾಡಿದಾಗ 11 ಬಾಂಬುಗಳು, 24 ಗುಂಡುಗಳು ಮತ್ತು 2 ಪಿಸ್ತೂಲುಗಳು ದೊರೆತವು. ಮೂವರು ವ್ಯಕ್ತಿಗಳನ್ನು ಬಂಧಿಸಲಾಯಿತು. ಅವರಲ್ಲೊಬ್ಬರು ಸುಖದೇವ್, ಭಗವತಿ ಚರಣರು ಸಿಕ್ಕಿ ಬೀಳಲಿಲ್ಲ. ಅದೇ ದಿನ ಬಿಲಾಸ್ ಪುರದ ರೈಲ್ವೆ ನಿಲ್ದಾಣದಲ್ಲಿ 7 ಬಾಂಬುಗಳೊಂದಿಗೆ ಒಬ್ಬ ವ್ಯಕ್ತಿ ಬಂಧಿತನಾದ. ಮೇ 13ರಂದು ಸಹರನ್‌ಪುರದಲ್ಲಿ 5 ಬಾಂಬುಗಳು, 5 ಪಿಸ್ತೂಲುಗಳು ಹಾಗೂ ಗುಂಡುಗಳು ಪತ್ತೆಯಾದವು. ಇಬ್ಬರು ಕ್ರಾಂತಿಕಾರಿಗಳು ಸೆರೆ ಸಿಕ್ಕಿದ್ದರು. ಈ ವೇಳೆಗೆ 20 ಮಂದಿ ಬಂಧಿತರಾಗಿದ್ದರು. ಅವರಲ್ಲಿ ಮೂವರು ಸರ್ಕಾರಿ ಸಾಕ್ಷಿಗಳಾಗಿಬಿಟ್ಟರು. 17 ಮಂದಿಯ ಮೇಲೆ ಲಾಹೋರ್ ಪಿತೂರಿ ಮೊಕದ್ದಮೆ ಹೂಡಲಾಯಿತು. ಅದುವರೆಗೆ ಬಂಧಿತರಾಗದೆ ಪಾರಾಗಿದ್ದ ರಾಜಗುರು ಮತ್ತು ಇನ್ನಿಬ್ಬರು ಮುಂದೆ ಬಂಧಿತರಾದರು. ಚಂದ್ರಶೇಖರ್ ಆಜಾದ್ ಒಬ್ಬರು ಮಾತ್ರ ಕೊನೆಯವರೆಗೂ ಸಿಕ್ಕಲಿಲ್ಲ. ಭಗತ್ ಸಿಂಗ್, ಸುಖದೇವ್, ರಾಜಗುರು, ಬಟುಕೇಶ್ವರ ದತ್ತ, ಜತೀಂದ್ರನಾಥ ದಾಸ್, ಅಜಯ ಘೋಷ್ ಮತ್ತಿತರ 13 ಮಂದಿ ಈ ಮೊಕದ್ದಮೆಯಲ್ಲಿ ಆಪಾದಿತರು.

ಆಪಾದನೆಗಳಲ್ಲಿ ಪ್ರಮುಖವಾದವುಗಳೆಂದರೆ  ಸ್ಯಾಂಡರ್ಸನ ಹತ್ಯೆ;  ಕೇಂದ್ರ ವಿಧಾನಸಭೆಯ ಮೇಲೆ ಬಾಂಬು ದಾಳಿ;  ಲಾಹೋರ್, ಸಹರನ್ ಪುರ್, ಬಿಲಾಸ್ ಪುರ್. ಕಲ್ಕತ್ತ, ಆಗ್ರಾಗಳಲ್ಲಿ ಬಾಂಬುಗಳ ತಯಾರಿಕೆ;   ಸೈಮನ್ ಕಮೀಷನ್ನಿನ ಸದಸ್ಯರು ಮುಂಬಯಿಯಿಂದ ಪೂನಾಕ್ಕೆ ಪ್ರಯಾಣ ಮಾಡುವಾಗ ರೈಲು ಬಂಡಿಯನ್ನು ಡೈನಮೈಟ್‌ಗಳಿಂದ ವಿಸ್ಫೋಟಿಸುವ ವಿಫಲ ಯತ್ನ;  ಕಾಕೋರಿ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದವರನ್ನು ಬಿಡಿಸಲು ನಡೆದ ವಿಫಲ ಯತ್ನ.  1929ರ ಜುಲೈ 10ರಂದು ಆರಂಭವಾದ ಮೊಕದ್ದಮೆ 1930 ಅಕ್ಟೋಬರ್ 7ರಂದು ಮುಗಿಯಿತು. ಭಗತ್ ಸಿಂಗ್, ರಾಜಗುರು, ಸುಖದೇವರಿಗೆ ಮರಣದಂಡನೆ. ಏಳು ಮಂದಿಗೆ ದೇಶದಿಂದ ಆಚೆ ಸೆರೆಮನೆ, ಒಬ್ಬರಿಗೆ 7 ವರ್ಷ, ಮತ್ತೊಬ್ಬರಿಗೆ 3 ವರ್ಷ ಕಠಿಣ ಶಿಕ್ಷೆ ವಿಧಿಸಲ್ಪಟ್ಟ ಶಿ‌ಕ್ಷೆಗಳು. ಈ ಮೊಕದ್ದಮೆಯಲ್ಲಿ ದತ್ತರ ಮೇಲೆ ಸಾಕ್ಷ್ಯದ ಅಭಾವ ಹಾಗೂ ಭಗತ್‌ಸಿಂಗರ ಹೇಳಿಕೆಯ ಕಾರಣಗಳಿಂದ ಅವರು ಶಿಕ್ಷೆಗೆ ಒಳಗಾಗಲಿಲ್ಲ.

ಕೇಂದ್ರ ವಿಧಾನಸಭೆಯ ಮೇಲೆ ಬಾಂಬು ಎಸೆದುದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಭಗತ್‌ಸಿಂಗ್‌ ಮತ್ತು ದತ್ತರು ಲಾಹೋರಿನ ಸೆರೆಮನೆಗೆ ದಾಖಲಾದರು. ಅವರನ್ನು ಸೆರೆಮನೆಯಲ್ಲಿ ಕೊಲೆ, ದರೋಡೆ, ಅತ್ಯಾಚಾರ, ಕಳ್ಳತನ ಮೊದಲಾದ ಅಪರಾಧಗಳಿಗೆ ಶಿಕ್ಷಿತರಾದವರೊಂದಿಗೆ ಇಡಲಾಯಿತು.  ಒಂದು  ಅಕ್ಷರವನ್ನೂ ಓದುವ ಅವಕಾಶವಿರಲಿಲ್ಲ. ಅವರನ್ನು ಕಠಿಣ ಕೆಲಸಗಳಿಗೆ ನಿಯಮಿಸಿದರು. ಇಬ್ಬರೂ ಕೂಡಿ ತಮ್ಮನ್ನು ರಾಜಕೀಯ ಬಂಧಿಗಳೆಂದು ಪರಿಗಣಿಸಿಸಬೇಕೆಂದೂ, ಕನಿಷ್ಠ ಪಕ್ಷ ಐರೋಪ್ಯ ಶಿಕ್ಷಿತರಿಗೆ ನೀಡುವ ಸೌಲಭ್ಯಗಳನ್ನಾದರೂ ತಮಗೆ ನೀಡಬೇಕೆಂದೂ ಕೇಳಿಕೊಂಡರು. ಅದಕ್ಕೆ ದೊರೆತ ಉತ್ತರ ಬೇಡಿಗಳು, ಹೀನಾಯದ ಮಾತುಗಳು, ಗತ್ಯಂತರವಿಲ್ಲದೆ ಇಬ್ಬರೂ ತಮ್ಮ ಆತ್ಮಗೌರವದ ರಕ್ಷಣೆಗೆ ಉಪವಾಸವನ್ನು ಆರಂಭಿಸಿದರು.  ಜೂನ್‌ 23ರಂದು ಬಟುಕೇಶ್ವರ ದತ್ತರು ಕಳೆದ ಒಂಬತ್ತು ದಿನಗಳಿಂದ ಉಪವಾಸ ಮಾಡುತ್ತಿರುವುದಾಗಿಯೂ, ಆ ಅಪರಾಧಕ್ಕಾಗಿ ಅವರಿಗೆ ಸಲಾಕಿ ಬೇಡಿಯ ಶಿಕ್ಷೆ ವಿಧಿಸಿದ್ದಾರೆಂದೂ ಸುದ್ದಿಯು ಸೆರೆಮನೆಯಿಂದ ಹೊರ ನುಸುಳಿತು.  ಅವರು ನಿಲ್ಲಲಾರದಷ್ಟು, ಮಾತನಾಡಲಾರಷ್ಟು ನಿಶ್ಯಕ್ತರಾಗಿದ್ದರು. ಜುಲೈ 13ರಂದು ಅವರನ್ನು ಕೋರ್ಟಿಗೆ ಕರೆತರಲು ಸ್ಟ್ರೆಚರನ್ನು ಬಳಸಬೇಕಾಯಿತು. ಅಷ್ಟುಹೊತ್ತಿಗೆ ಅವರ ಉಪವಾಸ ಐದನೆಯ ವಾರಕ್ಕೆ ಕಾಲಿಟ್ಟಿತ್ತು.

ಅವರುಗಳು ಉಪವಾಸ ಆರಂಭಿಸಿದ ಹತ್ತನೆಯ ದಿನದಿಂದ ಅವರು ಆಹಾರ ತೆಗೆದುಕೊಳ್ಳುವಂತೆ ಮಾಡಲು ಬಲಾತ್ಕಾರ ಕ್ರಮಗಳು ಜಾರಿಯಾದವು. ಪ್ರತಿ ಸೆಲ್ಲಿಗೂ ಐವರು ವಾರ್ಡುರುಗಳೊಂದಿಗೆ ಒಬ್ಬ ಡಾಕ್ಟರು ಬರುತ್ತಿದ್ದ.  ಕೈದಿಯನ್ನು ಹಿಡಿದು ನೆಲಕ್ಕೆ ಬೀಳಿಸಿ, ಕೈ ಕಾಲು, ತಲೆಗಳನ್ನು ಆಡಿಸದಂತೆ ಅದುಮಿ ಹಿಡಿಯುತ್ತಿದ್ದರು. ಕೈದಿಯು ಹಲ್ಲುಗಳನ್ನು ಕಚ್ಚುತ್ತಿದ್ದುದರಿಂದ, ಮೂಗಿನ ಮೂಲಕ ಹೊಟ್ಟೆಯತನಕ ರಬ್ಬರ್ ನಳಿಕೆಯನ್ನು ತೂರಿಸಿ ಹಾಲನ್ನು ಸುರಿಸುತ್ತಿದ್ದರು. ಕೈದಿಯು ಹಾಲು ಸೇರುವುದನ್ನು ಪ್ರತಿಭಟಿಸಲು ಯತ್ನಿಸುತ್ತಿದ್ದುದರಿಂದ ಅಪಾರ ಹಿಂಸೆಗೆ ಗುರಿಯಾಗುತ್ತಿದ್ದ. ಹೊಟ್ಟೆಗೆ ಸೇರಿದ್ದ ಅಲ್ಪ ಆಹಾರವನ್ನು ವಾಂತಿ ಮಾಡಲು ಪ್ರಯತ್ನಿಸುತ್ತಿದ್ದ.

ಜುಲೈ 11ರಂದು ಭಗತ್ ಸಿಂಗ್ ಮತ್ತು ದತ್ತರನ್ನು ಕೋರ್ಟಿನಿಂದ ಹಿಂದಕ್ಕೆ ಕರೆತಂದಾಗ ಬಲವಂತವಾಗಿ ಆಹಾರ ತುಂಬಲು ಎಂಟು ಪಠಾಣ ವಾರ್ಡರುಗಳು ನಿಯಮಿತವಾಗಿದ್ದರು. ಅಂದು ಭಗತ್ ಸಿಂಗರಿಗೆ ಬಲವಾದ ಏಟುಗಳು ಬಿದ್ದು ಗಾಯಗಳಾಗಿದ್ದವು. ದತ್ತು ಜ್ಞಾನ ತಪ್ಪಿದರು.

ಈ ಉಪವಾಸ ಹೋರಾಟವನ್ನು ಅಜಯ್‌ಘೋಷರು ಹೀಗೆ ವಿವರಿಸಿದ್ದಾರೆ:

"ಜೈಲಿನ ಅಧಿಕಾರಿಗಳು ಹೇಗಾದರೂ ನಮ್ಮ ಮನಸ್ಸಿನ ಶಕ್ತಿಯನ್ನು ಮುರಿಯಲು ನಿರ್ಧರಿಸಿದರು. ನಮ್ಮ ಕೋಣೆಗಳಲ್ಲಿದ್ದ ಹೂಜಿಗಳಲ್ಲಿ ನೀರಿನ ಬದಲು ಹಾಲು ತುಂಬಿಟ್ಟರು. ಇದರಂತಹ ಕಠೋರ ಹಿಂಸೆ ಬೇರೊಂದಿರಲಿಲ್ಲ. ಒಂದು ದಿನ ಕಳೆದ ನಂತರ ಬಾಯಾರಿಕೆ ಭೀಕರ ಹಂತವನ್ನು ಮುಟ್ಟಿತು. ಹಲವಾರು ಬಾರಿ ನೀರು ಇದೆಯೇನೋ ಎಂದು ಮಡಕೆಯ ಬಳಿಗೆ ತೆವಳಿಕೊಂಡು ಹೋಗತ್ತಿದ್ದೆ. ಹುಚ್ಚು ಹಿಡಿದಂತಾಗಿತ್ತು”

“ಹೋರಗೆ ಪಹರೆಗಾರ ಪ್ರತಿಯೊಂದು ಚಲನೆಯನ್ನೂ ಗಮನಿಸುತ್ತಾ ಮೌನ ಪ್ರತಿಮೆಯಾಗಿ ಕುಳಿತಿರುತ್ತಿದ್ದ” ನನ್ನನ್ನೇ ನಾನು  ನಾನು ಹೆಚ್ಚು ಕಾಲ ನಂಬುವಂತಿರಲಿಲ್ಲ. ಕೆಲಗಂಟೆಗಳು ಉರುಳಿದರೆ ಸೋತು ಹಾಲನ್ನೆ ಕುಡಿದು ಬಿಡುತ್ತಿದ್ದೆನೇನೋ? ಗಂಟಲೆಲ್ಲ ಆರಿಹೋಗಿತ್ತು; ನಾಲಿಗೆ ಊದಿಕೊಂಡಿತ್ತು.”

“ನಾನು ಪಹರೆಗಾರನನ್ನು ಕರೆದೆ, ಕಟಕಟೆಯ ಕದದ ಆಚೆ ನಿಂತ ಅವನ್ನು ನಾಲ್ಕು ಹನಿಗಳಾಷ್ಟಾದರೂ ನೀರನ್ನು ನೀಡುವಂತೆ ಕೇಳಿಕೊಂಡೆ.” ಆತ “ಸಾಧ್ಯವಿಲ್ಲ; ಹಾಗೆ ಮಾಡಲು ಅಪ್ಪಣೆಯಿಲ್ಲ” ಎಂದ.

"ನಾನು ರೋಷದಿಂದ ಕುದಿದೆ. ಹಾಲಿನ ಮಡಕೆಯನ್ನು ಎತ್ತಿ ಬಾಗಿಲಿಗೆ ಎಸೆದೆ. ಆ ಹೂಡಿ ಚೂರು ಚೂರಾಯಿತು. ಹಾಲು ಪಹರೆಗಾರನ ಮೇಲೆ ಬಿತ್ತು. ಆತ ನನಗೆ ಹುಚ್ಚು ಹಿಡಿದಿದೆ ಎಂದಕೊಂಡ, ಅವನ ಭಾವನೆ ಸತ್ಯಸ್ಥಿತಿಯಿಂದ ಬಹಳ ದೂರವಾಗಿರಲಿಲ್ಲ.”

ಈ ಭೀಕರ ಉಪವಾಸ ಹೋರಾಟದಲ್ಲಿ ತ್ಯಾಗದ ತುತ್ತತುದಿಯನ್ನು ಮುಟ್ಟಿ ಆತ್ಮಾರ್ಪಣೆ ಮಾಡಿಕೊಂಡರು ಜತೀಂದ್ರನಾಥ್‌ದಾಸ್‌.

ಮುರಿದು ಬೀಳುವೆ, ಆದರೆ ತಲೆ ಬಾಗಲಾರೆ!

ಲಾಹೋರ್ ಪಿತೂರಿ ಮೊಕದ್ದಮೆಯ ಸಂಬಂಧವಾಗಿ ಕಲ್ಕತ್ತೆಯಲ್ಲಿ ಬಂಧಿತರಾದ ಜತೀಂದ್ರನಾಥ ದಾಸರನ್ನು ಜೂನ್‌ 16ರಂದು ಲಾಹೋರಿಗೆ ಕರೆ ತಂದರು. ಕೂಡಲೇ ಅವರೂ ಉಪವಾಸ ಹೋರಾಟಕ್ಕೆ ಇಳಿದರು. ಜುಲೈ 2 ರ ವೇಳೆಗೆ ಅವರ ಸ್ಥಿತಿ ಅತ್ಯಂತ ಕಳವಳಕಾರಿಯಾದ್ದರಿಂದ ಸರ್ಕಾರವು ಇಪ್ಪತ್ತೈದು ಸಾವಿರ ರೂಪಾಯಿಗಳ ಎರಡು ಜಮೀನುಗಳ ಮೇಲೆ ಬಿಡುಗಡೆ ಮಾಡಲು ಆಜ್ಞೆಮಾಡಿತು. ಆದರೆ ಯಾವ ಕಾರಣವನ್ನೂ ನೀಡದೆ ಆ ಆಜ್ಞೆಯನ್ನು ಮೂರನೆಯ ದಿನವೇ ರದ್ದುಗೊಳಿಸಿತು.

ಜುಲೈ 24ರಂದು ಜತೀಂದ್ರನಾಥರ ನಾಡಿಯ ಬಡಿತ ಎರಡು ಬಾರಿ ನಿಂತಿತು. ಬಲಾತ್ಕಾರದಿಂದ ಆಹಾರ ತುಂಬುವುದಕ್ಕೆ ಅವರು ನೀಡುತ್ತಿದ್ದ ಅಲ್ಪ ಪ್ರತಿಭಟನೆಯ ಆಯಾಸವು ಅಪಾರವಾಗಿತ್ತು. ಮೂಗಿನ ಮೂಲಕ ಒಂದು, ಗಂಟಲಿನ ಮೂಲಕ ಮತ್ತೊಂದು ನಳಿಕೆಗಳನ್ನು ತೂರಿಸುವಾಗ ಅವರು ಜ್ಞಾನ ತಪ್ಪಿದರು. ಅದುವರೆಗೆ ಹಲವು ಬಾರಿ ಜೈಲಿನ ಅಧಿಕಾರಿಗಳು ತಮ್ಮ ಕ್ರಮಗಳಿಗೆ ಬಗ್ಗದೆ ಹೋದರೆ ಕಠೋರ ರೀತಿಯಲ್ಲಿ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸಾವನ್ನು ಅಪ್ಪಲು ಸಿದ್ಧರಿದ್ದ ಜತೀನ್ ದಾಸ್ ಈ ಬೆದರಿಕೆಗಳಿಗೆ ಸೊಪ್ಪು ಹಾಕಲಿಲ್ಲ.

ಅಂದು ಅವರನ್ನು ಜೈಲಿನ ಆಸ್ಪತ್ರೆಗೆ ಸಾಗಿಸಿದರು. ಎರಡು ದಿನಗಳಲ್ಲಿ ಅವರಿಗೆ ನ್ಯೂಮೋನಿಯಾ ತಗುಲಿ 103 ಡಿಗ್ರಿ ಜ್ವರ ಏರಿತು. ನೀರಿಗೆ ಔಷಧ, ಆಹಾರ ಬೆರೆಸುತ್ತಿದ್ದುದರಿಂದ ಅವರು ಯಾವ ದ್ರವವನ್ನೂ ಸೇವಿಸಲು ನಿರಾಕರಿಸಿದರು. ತಿಂಗಳ ಕೊನೆಯ ವೇಳೆಗೆ ಆಗಾಗ ಜ್ಞಾನ ತಪ್ಪಲು ಶುರುವಾಯಿತು. ಆಗಸ್ಟ್ ಒಂದರಂದು ನಾಲ್ಕು ಗಂಟೆ ಕಾಲ ಎಡೆಬಿಡದೆ ಜ್ಞಾನ ತಪ್ಪಿತ್ತು. ಎನಿಮಾ ನೀಡಿದ್ದರಿಂದ ಇನ್ನೂ ಬಲಹೀನರಾದರು.

ರಾಜಕೀಯ ಕೈದಿಗಳ ಈ ಉಪವಾಸ ಹೋರಾಟ, ಸರ್ಕಾರ ಅವನ್ನು ಮುರಿಯಲು ಅನುಸರಿಸುತ್ತಿದ್ದ ರಾಕ್ಷಸೀಕ್ರಮಗಳು – ಇವುಗಳ ಸುದ್ದಿ ದೇಶದಲ್ಲೆಲ್ಲಾ ಹರಡಿತು. ಅಲಹಾಬಾದಿನಲ್ಲಿ ನಡೆಯುತ್ತಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯು "ಸರ್ಕಾರದ ಕ್ರಮಗಳು ಅನಾಗರಿಕ ದೇಶಗಳ ಜನರನ್ನು ಸಹ ನಾಚಿಸುತ್ತವೆ” ಎಂದು ನಿರ್ಣಯಿಸಿತು.

ಏನಾದರೂ ಸರ್ಕಾರ ಜಗ್ಗಲಿಲ್ಲ. ಜತೀನ್‌ದಾಸ್ ಕ್ರಮೇಣ, ಬಹುನಿಧಾನವಾಗಿ ಸಾವಿನತ್ತ ಸಾಗಿದರು. ಆಗಸ್ಟಿನ ಕೊನೆಗೆ ದೃಷ್ಟಿ ಮಂದವಾಯಿತು. ಮೆದುಳು ಶಕ್ತಿಗುಂದತೊಡಗಿ, ಎಡಗಾಲಿನ ಚಲನೆ ನಿಂತಿತು. ಔಷಧ ತೆಗೆದುಕೊಳ್ಳಲು ಒಪ್ಪಿಸಿ, ನೀಡಿದಾಗ ಬಿಕ್ಕಳಿಕೆ ಆರಂಭವಾಯಿತು. ಪಂಜಾಬ್ ಸರ್ಕಾರವು ಜೈಲು ವಿಚಾರಣಾ ಸಮಿತಿಯೊಂದನ್ನು ನಿಯಮಿಯಸಿತು. ಅದು ವಿಚಾರಣೆಗೊಳಗಾಗಿದ್ದ ಹಾಗೂ ಶಿಕ್ಷೆಗೊಳಗಾಗಿದ್ದ ಬಂದಿಗಳ ಬಗ್ಗೆ ಇದ್ದ ನಿಯಮಗಳನ್ನು ಪರಿಶೀಲಿಸತೊಡಗಿತು. ಸಮಿತಿಯ ಸದಸ್ಯರ ಕೋರಿಕೆಯ ಪ್ರಕಾರ ಲಾಹೋರ್ ಪಿತೂರಿ ಮೊಕದ್ದಮೆಯ ಆಪಾದಿತರು ಸೆಪ್ಟೆಂಬರ್ 2ರಂದು ಉಪವಾಸ ಹೋರಾಟವನ್ನು ನಿಲ್ಲಿಸಲು ಒಪ್ಪಿದರು.

ಆದರೆ ಜತೀನ್ ದಾಸರ ಸ್ಥಿತಿ ಮೇರೆ ಮೀರಿತ್ತು. ಸೆಪ್ಟೆಂಬರ್ 13ರ ಬೆಳಗ್ಗೆ ಅವರು ತಮ್ಮ ಮಿತ್ರರನ್ನು ಕರೆದರು, ” ನನ್ನ ಅಂತ್ಯಕ್ರಿಯೆಗಳು ಸಾಂಪ್ರದಾಯಿಕ ಬಂಗಾಲಿ ರೀತಿಯಲ್ಲಿ ಕಾಳಿಬರಿಯಲ್ಲಿ ನಡೆಯುವುದು ಬೇಡ ನಾನು ಬಂಗಾಲಿಯಲ್ಲ, ಭಾರತೀಯ” ಎಂದರು. ಅಂದು ಮಧ್ಯಾಹ್ನ 1-05ಗಂಟೆಗೆ ಸರಿಯಾಗಿ ಆ ಮಹಾನ್ ಆತ್ಮ ಭೌತಿಕ ಶರೀರವನ್ನು ತೊರೆಯಿತು.  ಜತೀನ್ ದಾಸರ ಆತ್ಮ ಸಮರ್ಪಣೆ ನಾಡಿನ ಹೃದಯವನ್ನು ಕಲಕಿತು. ಸಾವಿನೆದುರು ಅವರು ತೋರಿದ ಅಸೀಮ ಸ್ಥೈರ್ಯ ಜನರನ್ನು ತಲ್ಲಣಗೊಳಿಸಿತು. ಹಿಂದೆ ಐರ್ಲೆಂಡಿನ ಸ್ವಾತಂತ್ರ ಸಮರದಲ್ಲಿ ಲೆಂಡಿನ ಕಾರ್ಕ್‌ನಗರದಲ್ಲಿ ಮೇಯರ್ ಆಗಿದ್ದ ಟೆರೆನ್ಸ್ ಮ್ಯಾಕ್ ಸ್ವಿನಿ ಅವರು ಇಂತುಹುದೇ ಸಂದರ್ಭಗಳಲ್ಲಿ ಆತ್ಮ ಬಲಿ ನೀಡಿದ್ದರು. ಆತನ ಪತ್ನಿ ಮೇರಿ, “ಜತೀಂದ್ರನಾಥ ದಾಸರ ಮರಣದ ದುಃಖದಲ್ಲಿ, ಹೆಮ್ಮೆಯಲ್ಲಿ ಟೆರೆನ್ಸ್ ಮ್ಯಾಕ್ ಸ್ವಿನಿಯವರ ಕುಟುಂಬ ದೇಶಭಕ್ತ ಭಾರತದೊಂದಿಗೆ ಪಾಲ್ಗೊಂಡಿದೆ. ಸ್ವಾತಂತ್ರ್ಯ ಬಂದೇ ತೀರುತ್ತದೆ” ಎಂಬ ತಂತಿ ಸಂದೇಶ ಕಳಿಸಿದರು.

ಸೆಪ್ಟೆಂಬರ್ 24ರಂದು ಲಾಹೋರ್ ಮೊಕದ್ದಮೆಯನ್ನು ವಿಚಾರಿಸುತ್ತಿದ್ದ ಕೋರ್ಟು ಕೂಡಿದಾಗ ಸರ್ಕಾರಿ ವಕೀಲರು ಹೀಗೆ ಹೇಳಿದರು. “ಜತೀದ್ರನಾಥ ದಾಸರ ಅಕಾಲ ಮರಣದಿಂದ ನಮಗೆ ಆಗಿರುವ ಅತೀವ ದುಃಖ ಮತ್ತು ಹಾರ್ದಿಕ ಶೋಕವನ್ನು ನನ್ನ ಹಾಗೂ ನನ್ನ ಸಹೋದ್ಯೋಗಿಗಳ ಪರವಾಗಿ ವ್ಯಕ್ತಪಡಿಸಬಯಸುತ್ತೇನೆ. ಕೆಲವು ಗುಣಗಳು ಎಲ್ಲರಿಂದಲೂ ಮೆಚ್ಚುಗೆ ಗಳಿಸುತ್ತವೆ. ಅವುಗಳಲ್ಲಿ ಧೈರ್ಯ ಮತ್ತು ಧ್ಯೇಯಸಾಧನೆಯಲ್ಲಿ ತೋರುವ ನಿಷ್ಠೆಗಳು ಅತಿ ಪ್ರಮುಖವಾದುವು. ಅವರು ನಂಬಿದ್ದ ಧ್ಯೇಯಗಳಲ್ಲಿ ನಾವು ಪಾಲುದಾರರಲ್ಲವಾದರೂ, ತಮ್ಮ ಧ್ಯೇಯಸಾಧನೆಯಲ್ಲಿ ಅವರು ಪ್ರದರ್ಶಿಸಿದ ಸ್ಥೈರ್ಯ ಮತ್ತು ನಿಷ್ಠೆಗಳನ್ನು ಶ್ಲಾಘಿಸದೆ ಇರಲು ಸಾಧ್ಯವಿಲ್ಲ.”

ಅಂಡಮಾನಿನಲ್ಲಿರುವ ಸೆಲ್ಯುಲರ್ ಜೈಲು ಈಗ ರಾಷ್ಟ್ರೀಯ ಸ್ಮಾರಕವಾಗಿದೆ. ಸಹಸ್ರಾರು ಮಂದಿ ರಾಜಕೀಯ ಕೈದಿಗಳು ಅಲ್ಲಿನ ಕಷ್ಟಗಳನ್ನು ಸಹಿಸಿ ಬದುಕಿದುದು, ತೀರಿಕೊಂಡದ್ದು, ಹುಚ್ಚರಾದದ್ದು ಒಂದು ದೊಡ್ಡ ಇತಿಹಾಸ. ತಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳಿರೆಂದು ಕೇಳಿ ಅದಕ್ಕಾಗಿ ಅಪಾರ ಯಾತನೆಗೆ ಗುರಿಯಾದ ವೀರರು ಹಲವರು ಛಡಿಯೇಟು, ನಿಲುವು ಬೇಡಿ, ಅವಾಚ್ಯ ಬೈಗಳು, ಬೂಟುಗಾಲಿನ ಒದೆತ ಅಲ್ಲಿ ಸಾಧಾರಣ ಘಟನೆ.

ವೀರ ಸಾವರ್ಕರರು ತಮ್ಮ ಆತ್ಮಕತೆಯಲ್ಲಿ ಸೆಲ್ಯುಲರ್ ಸೆರೆಮನೆಯ ಜೀವನವನ್ನು ವಿವರಿಸಿದ್ದಾರೆ.

“ಕೆಲವು ದಿನ ಕೆಲಸವನ್ನು ಸರಿಯಾಗಿ ಹಂಚಿದ್ದರು. ತೆಂಗಿನ ನಾರನ್ನು ತೆಗೆದು, ಬಡಿದು ಶುದ್ಧಿ ಮಾಡುವ ಕೆಲಸ. ಆದರೆ ಕಲ್ಕತ್ತದಿಂದ ಒಬ್ಬ ಸಾಹೇಬ ಬಂದ. ರಾಜಕೀಯ ಕೈದಿಗಳು ಅಕ್ಕಪಕ್ಕದಲ್ಲಿ ಕುಳಿತು ಕೆಲಸ ಮಾಡುತ್ತಿದ್ದುದನ್ನು ಕಂಡ. ಕೆಲವೊಮ್ಮೆ ನಡುನಡುವೆ ಸುಮ್ಮನೆ ಕುಳಿತಿರುತ್ತಿದ್ದುದನ್ನೂ ಕಂಡ. ಆಗ ಹೊಸ ಅಪ್ಪಣೆ ಬಂತು. ನಮಗೆಲ್ಲ ಎಣ್ಣೆ ಗಾಣ ತಿರುಗಿಸುವ ಕೆಲಸಕ್ಕೆ ನೇಮಿಸಲು ಹುಕುಂ ಆಯಿತು. ಜೊತೆಯವರೊಂದಿಗೆ ಮಾತನಾಡಿದರೆ ನಿಲುವು ಬೇಡಿಯ ಶಿಕ್ಷೆ. ಕೈದಿಗಳು ಕೊಠಡಿಯೊಳಗೆ ಗಾಣ ತಿರುಗಿಸಬೇಕು. ರೊಟ್ಟಿ ತೆಗೆದುಕೊಳ್ಳಲು ಸ್ವಲ್ಪ ವೇಳೆ ಬಾಗಿಲು ತೆಗೆಯುತ್ತಿದ್ದರು. ಆಗ ಕೈಕಾಲು ಮುಖ ತೊಳೆದರೆ, ಇಲ್ಲವೇ ಬಿಸಿಲಲ್ಲಿ ಕ್ಷಣಕಾಲ ನಿಲ್ಲೋಣ ಎಂದರೆ ಕಾವಲುಗಾರನ ಬೈಗುಳದ ಮಾತು ಕೇಳಬೇಕು. ದಿನ ಪೂರಾ ದುಡಿದರೆ 30 ಪೌಂಡು ಎಣ್ಣೆ ತೆಗೆಯಬಹುದಾಗಿತ್ತು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಜಮಾದಾರ, ಇತರ ನೌಕರರ ಬೈಗುಳ, ಛಡಿಯೇಟು, ಬೂಟುಕಾಲಿನ ಒದೆತ.”

ಅಂಡಮಾನಿನಲ್ಲಿ ಅನ್ನ – ಬಟ್ಟೆಗಳ ತೊಂದರೆ, ಒದೆತ ಹೊಡೆತ, ಬೈಗುಳ ಇವೆಲ್ಲ ಇದ್ದುವು; ಆದರೆ ಅವಕ್ಕಿಂತ ಭಯಂಕರವಾದ ಕಷ್ಟವೊಂದಿತ್ತು. ಅದನ್ನು ಹೇಳಲೂ ಸಂಕೋಚವೆನ್ನಿಸುತ್ತದೆ. ಅದು ಮಲ, ಮೂತ್ರ ವಿಸರ್ಜನೆಯ ಮೇಲೆ ಇದ್ದ ಹತೋಟಿ. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಈ ಮೂರು ವೇಳೆ ಮಾತ್ರ ಮೂತ್ರ ವಿಸರ್ಜನೆಗೆ ಅವಕಾಶ. ನಿಲುವು ಬೇಡಿಗೆ ಗುರಿಯಾದರೆ ಎಂಟು ಗಂಟೆ ಕಾಲ ನಿಂತಿರಬೇಕು.

ಇಂತಹ ಅಂಡಮಾನಿಗೆ 1930ರ ಕೊನೆಯಲ್ಲಿ ಬಟುಕೇಶ್ವರ ದತ್ತರು ತಮ್ಮ 22ನೆಯ ವಯಸ್ಸಿನಲ್ಲಿ ಬಂದರು. ಅಲ್ಲಿದ್ದ ಕಾಲದಲ್ಲಿ ಅವರು ಆತ್ಮಗೌರವವನ್ನುಳಿಸಿಕೊಳ್ಳಲು, ಪತ್ರಿಕೆ ಪುಸ್ತಕಗಳನ್ನು ಓದಲು, ಶಿಕ್ಷಣ ಪಡೆಯಲು ಹೋರಾಟ ನಡೆಸಿದರು. ಉಪವಾಸ ಹೋರಾಟ, ಒಂಟಿ ಕೋಣೆಯವಾಸ ಎಡೆಬಿಡದಂತೆ ಸಾಗಿದವು. ಈ ಹೋರಾಟಗಳಲ್ಲಿ ಅವರು ಪಡೆದ ಯಶಸ್ಸಿಗೆ ಸಾಕ್ಷಿಯಾಗಿ ಕಲ್ಕತ್ತ ವಿಶ್ವವಿದ್ಯಾನಿಲಯದ ಬಿ.ಎ. ಪರೀಕ್ಷೆಗೆ ಖಾಸಗಿ ಅಭ್ಯರ್ಥಿಯಾಗಿ ಕುಳಿತು ತೇರ್ಗಡೆಯಾದರು.

ವರ್ಷಗಟ್ಟಲೆ ಚಿತ್ರಹಿಂಸೆಗೆ ಗುರಿಯಾಗಿ ದೇಹ ಜರ್ಜರಿತವಾಯಿತು. ಅವರಿಗೆ ಕ್ಷಯರೋಗ ಅಂಟಿತು. ಈ ವಿಚಾರವು ಮಹಾತ್ಮಗಾಂಧಿಯವರಿಗೆ ತಿಳಿಯಿತು. ಅವರು ಶಿಕ್ಷೆಯ ಅವಧಿ ತೀರುವ ಮೊದಲೇ ದತ್ತರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದರು. ಹಲವು ಪ್ರಾಂತಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು ವಾತಾವರಣ ಸ್ವಲ್ಪ ತಿಳಿಯಾಗಿತ್ತು. 1938ರಲ್ಲಿ ದತ್ತರನ್ನು ಬಂಗಾಳ, ಪಂಜಾಬ್ ಮತ್ತು ದೆಹಲಿಗಳಿಗೆ ಹೋಗಬಾರದೆಂದು ಪ್ರತಿಬಂಧಕಾಜ್ಞೆಯನ್ನು ಹೇಳಿ ಬಿಡುಗಡೆ ಮಾಡಲಾಯಿತು.

ಬಿಡುಗಡೆಯಾದ ಬಳಿಕ ಅವರು ಉತ್ತರ ಪ್ರದೇಶದ ಕುಮಾವೋನ್ ಪರ್ವತ ಪ್ರದೇಶದಲ್ಲಿರುವ ಆಲ್ಮೊರಾದಲ್ಲಿ ತಂಗಿದರು. ಈ ಶುದ್ಧಹವೆಯ ಶಾಂತ ವಾತಾವರಣದಲ್ಲಿ ಅವರ ಆರೋಗ್ಯ ಸುಧಾರಿಸಿತು. ಆಗ ಅವರು ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಮತ್ತು ಶ್ರೀ ವಿವೇಕಾನಂದರ ಬೋಧನೆಗಳಿಗೆ ಮಾರುಹೋದರು. ಆ ಮಹಾಪುರುಷರ ಬೋಧನೆಗಳನ್ನು ಆಳವಾಗಿ ಅಧ್ಯಯನ ಮಾಡಿದರು.

ಇವರು ತಂಗಿದ್ದುದು ತಮ್ಮ ಜಮೀನ್ದಾರ ಮಿತ್ರನೊಬ್ಬನಲ್ಲಿ, ಒಂದು ದಿನ ಆ ಜಮೀನ್ದಾರನ ಗುಮಾಸ್ತನೊಬ್ಬನು ಒಬ್ಬ ರೈತನನ್ನು ಥಳಿಸುತ್ತಿದ್ದುದನ್ನು ಕಂಡು ಅತೀವ ವ್ಯಥೆಗೊಳಗಾದರು. ಸಮಾಚಾರವೇನೆಂದು ವಿಚಾರಿಸಿದಾಗ ಆ ರೈತನು ಜಮೀನ್ದಾರನಿಗೆ ಸಲ್ಲಬೇಕಾಗಿದ್ದ ಫಸಲಿನ ಪಾಲನ್ನು ನೀಡಿಲ್ಲವೆಂಬುದು ತಿಳಿಯಿತು. ಬಹಳ ದುಃಖದಿಂದ ದತ್ತರು ಉಪವಾಸ ಕುಳಿತರು. ಕಾರಣ ಕೇಳಿದ ಜಮೀನ್ದಾರ ಮಿತ್ರನಿಗೆ ವಿಚಾರವನ್ನು ಹೇಳಿದರು. ಮುಂದೆ ಹಾಗಾಗದಂತೆ ನೋಡಿಕೊಳ್ಳುವೆನೆಂದು ಆತ ಮಾತುಕೊಟ್ಟ ನಂತರವೇ ದತ್ತರು ಊಟಮಾಡಿದ್ದು.

ಆರೋಗ್ಯವು ಸುಧಾರಿಸಿದ ನಂತರ ಅವರು ಸೆಂಟ್ರಲ್ ಬ್ಯಾಂಕಿನಲ್ಲಿ ಮ್ಯಾನೇಜರಾಗಿದ್ದ ತಮ್ಮ ಅಣ್ಣ ವಿಶ್ವೇಶ್ವರ ದತ್ತರೊಂದಿಗೆ ನೆಲೆಸಿದರು. ರಾಜೇಂದ್ರಪ್ರಸಾದರ ಮಗ ಮೃತ್ಯುಂಜಯ ಪ್ರಸಾದ್ ಅವರ ನೆರವಿನಿಂದ ಓರಿಯಂಟಲ್ ಇನಷ್ಯೂರೆನ್ಸ್ ಕಂಪನಿಯ ಏಜೆಂಟರಾದರು.  1942ರಲ್ಲಿ ಭಾರತೀಯರು “ಕ್ವಿಟ್‌ಇಂಡಿಯ” ಚಳವಳಿ ಹೂಡಿದರು. ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕೆಂದು ಅವರ ಘೋಷಣೆ, ಅವರ ಸಂಕಲ್ಪ. ಬಟುಕೇಶ್ವರ ದತ್ತರೂ ಹೋರಾಟಕ್ಕೆ ಸೇರಿದರು. ಮತ್ತೆ ಸೆರೆಮನೆ, ಗೃಹಬಂಧನಗಳಿಗೆ ಒಳಗಾಗಬೇಕಾಯಿತು. 1947 ಆಗಸ್ಟ್‌ನಲ್ಲಿ ಭಾರತ ಸ್ವತಂತ್ರವಾದಾಗ ಬಟುಕೇಶ್ವರ ದತ್ತರ ಚಲನವಲನದ ಮೇಲೆ ಇದ್ದ ಎಲ್ಲ ನಿರ್ಬಂಧಗಳೂ ರದ್ದಾದವು. ಆಗ ಅವರು ವಿವಾಹವಾಗಿ ಸಂಸಾರ ಜೀವನ ನಡೆಸಲು ನಿಶ್ಚಯಿಸಿದರು. ಅಸನ್‌ಸೋಲಿನಲ್ಲಿ ಕಲ್ಲಿದ್ದಲು ಗಣಿಗಳ ಕಂಟ್ರಾಕ್ಟರಾಗಿದ್ದ ಸತೀಶ ಚಂದ್ರ ಎಂಬುವರ ಮಗಳು ಅಂಜಲಿಯವರನ್ನು ನವೆಂಬರಿನಲ್ಲಿ ಮದುವೆಯಾದರು. ಆಕೆ ಪದವೀಧರೆ, ಪಾಟ್ನಾದ ಹೆಣ್ಣುಮಕ್ಕಳ ಶಾಲೆಯೊಂದರಲ್ಲಿ ಅಧ್ಯಾಪಕಿಯಾದರು. 1948ರಲ್ಲಿ ಅವರಿಗೆ ಭಾರತಿ ಎಂಬ ಮಗಳು ಹುಟ್ಟಿದಳು. ಪಂಜಾಬಿನ ಮಿತ್ರನೊಬ್ಬನ ನೆರವಿನಿಂದ ಒಂದು ಬೇಕರಿಯನ್ನೂ, ಒಂದು ಬಸ್‌ ಸರ್ವಿಸನ್ನೂ ಆರಂಭಿಸಿದರು. ಕ್ರಾಂತಿಕಾರಿಯಾಗಿದ್ದ ಅವರು ಶಾಂತವಾದ ಗೃಹಸ್ಥ ಜೀವನಕ್ಕೆ ಹೊಂದಿಕೊಂಡರು. ಪಕ್ಷ ರಾಜಕೀಯದ ಕೆಸರಿಗೆ ಅವರು ಸಿಲುಕದೆ ದೂರ ಉಳಿದರು. ಚುನಾವಣೆ, ವಿಧಾನಸಭೆಗಳ ಸದಸ್ಯತ್ವಗಳಿಂದ ದೂರ ನಿಂತರು.

ತೀವ್ರ ಸ್ಪರ್ಧೆಯಿಂದಾಗಿ ಅವರು ತಮ್ಮ ಬೇಕರಿಯನ್ನು ಮುಚ್ಚಬೇಕಾಗಿ ಬಂತು. ಬಸ್ಸು ವ್ಯವಹಾರವೂ ಅಷ್ಟಕ್ಕಷ್ಟೆ ಆಯಿತು. ದಯೆ, ದಾಕ್ಷಿಣ್ಯ, ನೇರವಾದ ನಡವಳಿಕೆಗಳಿಗೂ ವ್ಯವಹಾರಕ್ಕೂ ನಂಟು ಕಡಮೆ.  ಮೇಲಾಗಿ ಅಂಡಮಾನಿನಲ್ಲಿ ಅಂಟಿದ್ದ ಕ್ಷಯ ಅವರಿಗೆ ಪೂರ್ಣವಾಗಿ ಗುಣವಾಗಲಿಲ್ಲ. 1962ರಲ್ಲಿ ಒಂದು ದಿನ ಅವರು ತಮ್ಮ ಸೈಕಲಿನಿಂದ ಬಿದ್ದು ಹಾಸಿಗೆ ಹಿಡಿದರು. ಅನಂತರ ಮೂರು ವರ್ಷಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯಬೇಕಾಯಿತು. ಹಣವಿಲ್ಲದವರಿಗೆ, ಚಿಕಿತ್ಸೆ ಪಡೆಯಲು ದಾರಿ ಯಾವುದು? ಹಲವು ಸಹೃದಯಿ ಮಿತ್ರರ ಒತ್ತಾಯದಿಂದ ಕೇಂದ್ರ ಸರ್ಕಾರವು ಅವರನ್ನು ಸಫ್‌ದರ್ ಜಂಗ್ ಆಸ್ಪತ್ರೆಗೆ ಸೇರಿಸಲು ಆದೇಶ ನೀಡಿತು. ಅವರು ದೆಹಲಿಗೆ ಬಂದು ಆಸ್ಪತ್ರೆಗೆ ಸೇರಿದರು. ದೆಹಲಿಯ ಪುರಸಭೆ, ಬಿಹಾರದ ಸರ್ಕಾರಗಳೂ ನೆರವು ನೀಡಲು ಮುಂದೆ ಬಂದುವು.

1965ರ ಜುಲೈ 20ರಂದು ಬಟುಕೇಶ್ವರ ದತ್ತರು ಕೊನೆಯುಸಿರೆಳೆದರು. ಅವರ ಪಂಜಾಬಿ ಮಿತ್ರರು ಪಾರ್ಥಿವ ಶರೀರವನ್ನು ಫಿರೋಜ್‌ಪುರಕ್ಕೆ ಒಯ್ದರು. ಅಲ್ಲಿ ಭಗತ್ ಸಿಂಗರ ತಾಯಿ ವಿದ್ಯಾವತಿ ದೇವಿಯವರ ಸಮ್ಮುಖದಲ್ಲಿ ಅವರ ಅಣ್ಣ ವಿಶ್ವೇಶ್ವರ ದತ್ತರು ಅಂತ್ಯಕ್ರಿಯೆಗಳನ್ನು ಮಾಡಿದರು. ದೆಹಲಿಯ ನಾಗರಿಕರು ಶೋಕ  ವ್ಯಕ್ತಪಡಿಸಲು ಮೆರವಣಿಗೆ ಮಾಡಿ ಕಾಂತ್ರಿಕಾರಿ ದತ್ತರಿಗೆ ರಾಷ್ಟ್ರೀಯ ಮರ್ಯಾದೆಯನ್ನು ಸಲ್ಲಿಸಿದರು.

ಪಂಜಾಬಿನ ಫಿರೋಜ್‌ಪುರದ ಬಳಿ ಭಾರತದ ಗಡಿಯಲ್ಲಿ ಸಟ್ಲೆಜ್‌ನದಿಯ ತೀರದಲ್ಲಿ ಭಗತ್ ಸಿಂಗ್‌, ರಾಜಗುರು, ಸುಖದೇವರ ಸಮಾಧಿಗಳಿವೆ. ಅವರೆಲ್ಲರ ಪರಮಮಿತ್ರ ಅನುಯಾಯಿಯಾಗಿದ್ದ ಬಟುಕೇಶ್ವರ ದತ್ತರ ಸಮಾಧಿಯೂ ಆ ಸಮಾಧಿಗಳ ಬಳಿ ಎದ್ದಿದೆ. ಜೀವನದಲ್ಲಿ, ಹೋರಾಟದಲ್ಲಿ ಭುಜಕ್ಕೆ ಭುಜ ಕೊಟ್ಟುನಿಂತ ಆ ನಾಲ್ವರು ವೀರ ಪುತ್ರರು ಸಾವಿನಿಂದಲೂ ಬೇರ್ಪಡದೆ ಭಾರತ ಭೂಮಿಯ ಗಡಿಯಲ್ಲಿ ನಿಂತು ನಾಡನ್ನು ರಕ್ಷಿಸುತ್ತಿದ್ದಾರೆ.

ಮಾಹಿತಿ ಆಧಾರ: ರಾಷ್ಟ್ರೋತ್ಥಾನ ಸಾಹಿತ್ಯ 

On death anniversary of great Indian revolutionary and freedom fighter Batukeshwar Dutt

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ