ಪೂರ್ಣ ಪ್ರಸಾದ್
ಡಾ. ಪೂರ್ಣ ಪ್ರಸಾದ್ ಅವರು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ನವೀನ ವೈಜ್ಞಾನಿಕ - ತಾಂತ್ರಿಕ ಆವಿಷ್ಕಾರಗಳ ಅಳವಡಿಕೆಗಳ ಮೂಲಕ ಮೌಲ್ಯಯುತ ಮಾನವೀಯ ಸೇವೆಯ ಜೊತೆಗೆ ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪೋಷಣೆಗಳ ಕ್ಷೇತ್ರದಲ್ಲೂ ಮಹತ್ವದ ಕೊಡುಗೆ ನೀಡಿ ಖ್ಯಾತರಾಗಿದ್ದಾರೆ.
ಡಾ. ಪೂರ್ಣ ಪ್ರಸಾದ್ ಅವರು ಕಲೆ, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ಸಂಗಮದ ದೃಷ್ಟಿಕೋನವುಳ್ಳ ವಿಶಿಷ್ಟ ವ್ಯಕ್ತಿ. ಇವರು ಶಾಶ್ವತ ವೇದ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗಿನ ಸಮನ್ವಯದ ದೃಷ್ಟಾರರು.
ಡಿಸೆಂಬರ್ 2, ಪೂರ್ಣ ಪ್ರಸಾದ್ ಅವರ ಜನ್ಮದಿನ. ಸಂಸ್ಕೃತಿಯ ಬೇರುಗಳು ಮತ್ತು ಕಲೆಯ ಪರಂಪರೆಗೆ ಹೆಸರಾದ ಸಂಪ್ರದಾಯಬದ್ಧ ವೇದ ಕುಟುಂಬದಲ್ಲಿ ಜನಿಸಿದ ಡಾ. ಪ್ರಸಾದ್ ಅವರು ತಮ್ಮ ತಾತ, ಪ್ರಸಿದ್ಧ ಪಂಡಿತ ಗೋಪಿನಾಥ ಸಾಂಸ್ಕೃತಿಕ ಮತ್ತು ಕಲಾತ್ಮಕ ಪರಂಪರೆಯ ಬೆಳಕನ್ನು ಮುಂದುವರಿಸುತ್ತಿದ್ದಾರೆ.
ಗಾನ, ಕಥಾನಕ ಮತ್ತು ನಾಟಕಗಳಲ್ಲಿ ಪರಿಣತಿ ಹೊಂದಿದ್ದ ಗೋಪೀನಾಥ ದಾಸರ ಸ್ಫೂರ್ತಿಯಿಂದಲೇ ಡಾ. ಪೂರ್ಣ ಪ್ರಸಾದ್ ಅವರು ಪಂಪಾ ಅಮೇರಿಕಾ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಆ ಮೂಲಕ ಭಾರತೀಯ ಸಂಗೀತ ಮತ್ತು ನೃತ್ಯ ಪರಂಪರೆಯನ್ನು ವಿದೇಶಗಳಲ್ಲಿ ಜೀವಂತವಾಗಿ ಉಳಿಸಲು ಶ್ರಮಿಸಿದರು. ಪೂರ್ಣ ಪ್ರಸಾದ್ ಅವರು ಸಂಗೀತದಲ್ಲಿ ಶ್ರೀ ವೈಯಾಪುರಿ ದೇವರ್, ಡಾ. ಎಂ. ಬಾಲಮುರಳಿಕೃಷ್ಣ, ಹಾಗೂ ಪಂಡಿತ್ ರವಿಶಂಕರ್ ಮುಂತಾದ ಮಹಾನ್ ಸಾಧಕರ ಬಳಿ ಸಂವಹನ ಮತ್ತು ಮಾರ್ಗದರ್ಶನ ಪಡೆದವರು. ಚಿತ್ರರಂಗದಲ್ಲಿ ಅವರು ಶ್ರೀ ಜಿ.ವಿ. ಅಯ್ಯರ್ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಮಧ್ವಾಚಾರ್ಯ ಚಿತ್ರದಲ್ಲಿ ನಟನೆಯ ಪಾಠ ಪಡೆದರು. ವೇದಪರಂಪರೆಯ ಬದ್ಧತೆಯ ಭಾಗವಾಗಿ, ಅವರು ಡಾ. ಬನ್ನಂಜೆ ಗೋವಿಂದಾಚಾರ್ಯರಿಂದ ಭಗವದ್ಗೀತೆ ಹಾಗೂ ಉಪನಿಷತ್ತುಗಳು ಕುರಿತ ಆಳವಾದ ಅಧ್ಯಯನ ಮಾಡಿದರು.
ಸ್ಟ್ಯಾಂಫರ್ಡ್‌ನಿಂದ ನಾರ್ತ್‌ವೆಲ್ ತನಕ - ಆರೋಗ್ಯ ತಂತ್ರಜ್ಞಾನದಲ್ಲಿ ಕ್ರಾಂತಿಕಾರಿ ನಾಯಕತ್ವ ಸಾಧಿಸಿದ ಡಾ. ಪೂರ್ಣ ಪ್ರಸಾದ್ ಅವರು ತಮ್ಮ ವೃತ್ತಿಜೀವನವಾದ ಆರೋಗ್ಯ ಕ್ಷೇತ್ರದಲ್ಲಿ ನವೀನತೆ ಮತ್ತು ದೂರ ದೃಷ್ಟಿಯುಳ್ಳ ಮಹಾನ್ ಸಾಹಸಿ. ಅವರು ಅಮೇರಿಕಾದ ಪ್ರಸಿದ್ಧ ಸ್ಟ್ಯಾಂಫರ್ಡ್ ವೈದ್ಯಕೀಯ ಕೇಂದ್ರದಲ್ಲಿ ತಾಂತ್ರಿಕ ವಿಭಾಗದ ನಿರ್ದೇಶಕರಾಗಿ, ನಂತರ ನ್ಯೂಯಾರ್ಕಿನ ಅತಿ ದೊಡ್ಡ ಆರೋಗ್ಯ ಸಂಸ್ಥೆಯಾದ ನಾರ್ತ್‌ವೆಲ್ ಆರೋಗ್ಯ ವ್ಯವಸ್ಥೆಯಲ್ಲಿ ತಾಂತ್ರಿಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. ಅವರ ಮಾರ್ಗದರ್ಶನದಲ್ಲಿ ಆಸ್ಪತ್ರೆಗಳಲ್ಲಿ ಡಿಜಿಟಲ್ ಪರಿವರ್ತನೆ ಯಶಸ್ವಿಯಾಗಿ ಜಾರಿಯಾಯಿತು. ಆ ಮೂಲಕ ವೈದ್ಯಕೀಯ ದಾಖಲೆ ವ್ಯವಸ್ಥೆಗಳ ಏಕೀಕರಣ, ರೋಗಿಗಳಿಗೆ ಸೇವೆ ನೀಡುವ ಯಂತ್ರಮಾನವಗಳ ಅಭಿವೃದ್ಧಿ, ಕೃತಕ ಬುದ್ದಿಮತ್ತೆ ಆಧಾರಿತ ನರ್ಸಿಂಗ್ ವ್ಯವಸ್ಥೆ, ತುರ್ತು ವೈದ್ಯಕೀಯ ಸರಬರಾಜು ಮಾಡಲು ಡ್ರೋನ್ ಉಪಯೋಗ, ಹಾಗೂ ದೂರವೈದ್ಯಕೀಯ ಸೇವೆಗಳನ್ನು ಕಾನೂನಾತ್ಮಕವಾಗಿ ಅನುಮೋದನೆಗೊಳಿಸಲು ನೀಡಿದ ನೀತಿ ಸಲಹೆಗಳು ಅವರ ಪಥಪ್ರದರ್ಶಕ ಕಾರ್ಯಗಳಲ್ಲಿ ಸೇರಿವೆ.
ಡಾ. ಪೂರ್ಣ ಪ್ರಸಾದ್ ಅವರು ಸ್ಟರ್ಲಿಂಗ್ ಯೂನಿವರ್ಸಲ್ ಗ್ರೂಪ್ ಮತ್ತು ವೇದಿ ರೋಬೋಟಿಕ್ಸ್ ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇದಿ ಸಂಸ್ಥೆಯ ಉದ್ದೇಶ ವೈದ್ಯಕೀಯ ಕ್ಷೇತ್ರದಲ್ಲಿ ಸಹಾಯಕ ಯಂತ್ರಮಾನವ, ಕೃತಕ ಬುದ್ಧಿಮತ್ತೆ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಮೂಲಕ ರೋಗಿ ಮತ್ತು ವೈದ್ಯರ ನಡುವಿನ ಸಂವಹನವನ್ನು ಸುಲಭಗೊಳಿಸುವುದಾಗಿದೆ. ಅವರ ನೇತೃತ್ವದಲ್ಲಿ ನಿರ್ಮಿಸಲಾದ ಯಂತ್ರಮಾನವ ವೇದಿಕೆ, ವೈದ್ಯಕೀಯ ಸೇವೆಯನ್ನು ಹೆಚ್ಚು ಮಾನವೀಯ ಮತ್ತು ಪ್ರಾಜ್ಞ ದಿಕ್ಕಿನಲ್ಲಿ ಪರಿವರ್ತಿಸುತ್ತಿದೆ. "ಆಸ್ಪತ್ರೆಯಿಂದ ಆಕಾಶದವರೆಗೆ - ಮಾನವನಿಂದ ಯಂತ್ರದವರೆಗೆ” ಎಂಬ ಧ್ಯೇಯದೊಂದಿಗೆ ಅವರು ಮುಂದುವರಿದಿದ್ದಾರೆ. ಗುರು, ಪ್ರೇರಕ ಮತ್ತು ಮಾರ್ಗದರ್ಶಕ ತಂತ್ರಜ್ಞಾನ ಕ್ಷೇತ್ರದ ನಾಯಕತ್ವದ ಜೊತೆಗೆ, ಡಾ. ಪ್ರಸಾದ್ ಅವರು ಹೋಫ್ಸ್ಪಾ ವಿಶ್ವವಿದ್ಯಾಲಯ ಮತ್ತು ಮರ್ಸಿ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ಯಂತ್ರಮಾನವ ವಿಜ್ಞಾನ ಕುರಿತು ಬೋಧಿಸುತ್ತಾ ಮುಂದಿನ ಪೀಳಿಗೆಯ ತಜ್ಞರನ್ನು ರೂಪಿಸುತ್ತಿದ್ದಾರೆ. ಅವರು ಅನೇಕ ಪೇಟೆಂಟ್‌ಗಳನ್ನು ಹೊಂದಿದ್ದು, ತಮ್ಮ ಆರೋಗ್ಯ ತಂತ್ರಜ್ಞಾನ ಸ್ವೀಕಾರ ಮಾದರಿ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದ್ದಾರೆ. ಜ್ಞಾನ ಮತ್ತು ಧ್ಯಾನದ ಸಂಯೋಗ ತಂತ್ರಜ್ಞಾನ ಸಾಧನೆಗಳ ಮಧ್ಯೆಯಲ್ಲಿಯೂ ಡಾ. ಪ್ರಸಾದ್ ಅವರ ಜೀವನವು ಧ್ಯಾನ, ಮನನ ಮತ್ತು ವೇದಾಧಾರಿತ ಸೇವೆಯಿಂದ ಬೆಳಗುತ್ತಿದೆ. "ನಿಜವಾದ ನವೀನತೆ ಜ್ಞಾನ ಮತ್ತು ಕರುಣೆ ಸೇರಿ ಕಾರ್ಯನಿರ್ವಹಿಸಿದಾಗ ಮಾತ್ರ ಅದು ಮಾನವಕುಲದ ಶಾಶ್ವತ ಹಿತಕ್ಕೆ ದಾರಿ ಮಾಡುತ್ತದೆ" ಎಂಬುದು ಡಾ. ಪೂರ್ಣ ಪ್ರಸಾದ್ ಅವರ ದೃಢನಂಬಿಕೆ.
ಮಹಾನ್ ಸಾಧಕರಾದ ಡಾ. ಪೂರ್ಣ ಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
ಮಾಹಿತಿ ಕೃತಜ್ಞತೆ: Malathi Simha
On the biryhday of Great visionary in Science, Technology, Healthcare with traditinal background Dr.Purna Prasad 🌷🙏🌷

ಕಾಮೆಂಟ್‌ಗಳು