ಚಂದ್ರಶೇಖರ ಆಲೂರು
ಚಂದ್ರಶೇಖರ ಆಲೂರು
ಚಂದ್ರಶೇಖರ ಆಲೂರು ಬರಹಗಾರರಾಗಿ ಖ್ಯಾತರು.
ಡಿಸೆಂಬರ್ 29, ಚಂದ್ರಶೇಖರ ಅವರ ಜನ್ಮದಿನ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಆಲೂರು ಇವರ ಊರು. ತಂದೆ ಎ.ಎಚ್.ಲಿಂಗಯ್ಯ. ತಾಯಿ ಶ್ರೀಮತಿ ಅಂಕಮ್ಮ. ಇವರಿಗೆ ಏಳು ಸಹೋದರಿಯರು. ತಂದೆ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಆಗಿದ್ದ ಕಾರಣ ರಾಜ್ಯದ ವಿವಿಧ ಕಡೆ ಇವರ ವಿದ್ಯಾಭ್ಯಾಸ ಜರುಗಿತು. 1980 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ. ಪದವಿ ಗಳಿಸಿದರು.
ಚಂದ್ರಶೇಖರ ಆಲೂರು 1982 ರಿಂದ 2017 ರವರೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಉದ್ಯೋಗ ನಡೆಸಿದರು.
1981 ರಿಂದ 1990 ರವರೆಗೆ 'ಲಂಕೇಶ್ ಪತ್ರಿಕೆ'ಯಲ್ಲಿ; 1994 ರಿಂದ 1996ರ ವರೆಗೆ 'ಈ ವಾರ ಕರ್ನಾಟಕ'ದಲ್ಲಿ ಚಂದ್ರಶೇಖರ ಆಲೂರು ಅವರ ವರದಿ, ಸಿನಿಮಾ ಅಂಕಣ, ಪ್ರಬಂಧ, ಕಥೆ, ವಿಮರ್ಶೆ ಇತ್ಯಾದಿ ಪ್ರಕಟಗೊಂಡವು. 2000 ಜುಲೈನಿಂದ 'ಹಾಯ್ ಬೆಂಗಳೂರ್!' ಪತ್ರಿಕೆಯಲ್ಲಿ ಪ್ರತಿವಾರ “ಒಲಿದಂತೆ ಹಾಡುವೆ' ಅಂಕಣ ಮೂಡಿಬಂತು. 2000ದಲ್ಲಿ ಅಮೆರಿಕಾ ಮತ್ತು 2002ರಲ್ಲಿ ಈಜಿಪ್ಟ್ ದೇಶಗಳ ಪ್ರವಾಸ ಮಾಡಿಬಂದರು. 2001 ರಿಂದ 2004 ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. 2006ರಲ್ಲಿ ಈಟಿವಿಗಾಗಿ ನಲವತ್ತೈದು ವಾರ ನಮಸ್ಕಾರ ಕಾರ್ಯಕ್ರಮ ನಡೆಸಿದರು.
ಚಂದ್ರಶೇಖರ ಆಲೂರು ಅವರ 'ನಾನು ಒಲಿದಂತೆ ಹಾಡುವೆ' ಮತ್ತು 'ಸಖಿಗೀತ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಶ್ರೇಷ್ಠ ಪ್ರಬಂಧ ಸಂಕಲನ ಪುರಸ್ಕಾರ ಸಂದಿತು. 'ಒಂದು ಸುಂದರ ಮನಸ್ಸು ಮತ್ತು ಇತರ ಬರಹಗಳು' ಕೃತಿಗೆ ಶಿವಮೊಗ್ಗೆಯ ಕರ್ನಾಟಕ ಸಂಘದ ಹಾ.ಮಾ.ನಾ ಅಂಕಣ ಬರಹ ಪ್ರಶಸ್ತಿ ಸಂದಿತು. 'ಗೀತಸಂಗೀತ', 'ಅಲೂರು ಪ್ರಬಂಧಗಳು’, 'ಔಟರ್ ಸಿಗ್ನಲ', 'ಆ ಕ್ಷಣದ ಸತ್ಯ', 'ಅಮೆರಿಕಾದಲ್ಲಿ ಆಲೂರು', 'ಲಖನೌ ಡೈರಿ', 'ವೆರೊನಿಕಾ' (ಪಾಲೆ ಕೊಹೆಲೊನ ಮೂರು ಕಾದಂಬರಿಗಳ ಭಾವ ಸಂಗ್ರಹ) ಇವರ ಇನ್ನಿತರ ಪ್ರಕಟಿತ ಕೃತಿಗಳಲ್ಲಿ ಸೇರಿವೆ.
ಚಂದ್ರಶೇಖರ ಆಲೂರು ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.
Happy birthday Chandru Alur 🌷🌷🌷

ಕಾಮೆಂಟ್‌ಗಳು