ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕದಡಿದ ಕೊಳವು ತಿಳಿಯಾಗಿರಲು


 ಕದಡಿದ‍ ಕೊಳವು ತಿಳಿಯಾಗಿರಲು


ಒಮ್ಮೆ ಕದಡಿದ ಕೊಳವು
ಮತ್ತೆ ತಿಳಿಯಾಗಿರಲು
ತಳದಿ ಮಲಗಿಹ ಕಲ್ಲು
ನಿನ್ನ ನೆನಪು....

ಹೀಗೆ ಸಾಗುವ ಭಾಗೇಶ್ರೀ ಅವರ ಕವಿತೆಯ ಸಾಲನ್ನು ರೂಪಕವಾಗಿ ಶೀರ್ಷಿಕೆಯಾಗಿಸಿಕೊಂಡಿರುವ ಎನ್.  ಸಂಧ್ಯಾರಾಣಿ Sandhya Rani ಅವರು ಮೂಡಿಸಿರುವ,  ಬಿಡಿ ಬರಹಗಳು ಮತ್ತು ಪ್ರಬಂಧಗಳ ಸಂಕಲನ "ಕದಡಿದ‍ ಕೊಳವು ತಿಳಿಯಾಗಿರಲು...” .

ನಮ್ಮ ಸಮಕಾಲೀನ ಬದುಕಿನ ವಿಶ್ವದೆಲ್ಲೆಡೆಯ ಎಲ್ಲ ಕ್ಷೇತ್ರದ ಘಟನೆಗಳನ್ನು ಯಾವುದೇ ಪಕ್ಷಪಾತವಿಲ್ಲದೆ ಸಾಕ್ಷೀಪ್ರಜ್ಞೆಯಾಗಿ ದಾಖಲಿಸಿದಂತಿರುವ ಸಂಧ್ಯಾರಾಣಿ ಅವರ ಬರಹ, ಬದುಕಿನ ಅನಿಶ್ಚಿತತೆ, ಐಷಾರಾಮ, ಕಾವ್ಯ, ಕಲೆ, ಕ್ರೀಡೆ, ನಾಡು, ಭಾಷೆ, ಅಹಮಿಕೆ, ಹುಚ್ಚು ಪರಿಕಲ್ಪನೆ, ಹಿಂಸೆ, ಅಭದ್ರತೆ, ಮೌಢ್ಯ, ಅಸಹಿಷ್ಣುತೆ ಇವುಗಳ ಕುರಿತಾದ ಚೌಕಗಳ ಪರಿಧಿಯಲ್ಲಿ  ನಮ್ಮನ್ನು ಕುಂಟಾಬಿಲ್ಲೆಯಾಟದಲ್ಲಿ ಕೊಂಡೊಯ್ಯುತಿದೆಯೇನೊ ಅನಿಸುವಂತೆ ಮಾಡುತ್ತಲೇ, ಇದನ್ನೆಲ್ಲ ಏನೂ ಸಂಬಂಧವಿಲ್ಲವೆನ್ನುವಂತೆ ಕಂಡೂ ಕಾಣದಂತೆ ಉಪೇಕ್ಷಿಸುತ್ತಿರುವ ನಮ್ಮ ಬದುಕೆಂಬ ಕೊಳದ ಆಳದಲ್ಲಿ ಅಡಗಿರುವ ಕಲ್ಲಿನಂತಹದ್ದೇನನ್ನೊ ಪ್ರಶ್ನಿಸುತ್ತಿರುವಂತೆಯೂ ಭಾಸವಾಗುತ್ತದೆ. ಇಲ್ಲಿ ಬಾಲ್ಯದ ಕುತೂಹಲ, ಕಾವ್ಯ ಮತ್ತು ಸಂಗೀತಗಳ ರಸಾನುಭವ, ಬದಲಾವಣೆಯ ಅನಿವಾರ್ಯತೆ, ಬದಲಾಗದ ಮನೋಧರ್ಮಗಳು, ಭದ್ರ ಬುನಾದಿಯಿಲ್ಲದೆ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕ್ರೌರ್ಯ ಹೀಗೆ ಎಲ್ಲವನ್ನೂ ದಿಟ್ಟಿಸುವ ಒಳತೋಟಿಯಿದೆ. 

"ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ ರಾಡಿಗೊಳಿಸುವೆ ಏಕೆ ಮಧುರ ನೆನಪೆ?" ಎಂಬುದು ನಿಸಾರ್ ಅಹಮದ್ ಅವರ ಕವಿತೆಯ ಸಾಲು.  ಆದರೆ ಸಂಧ್ಯಾರಾಣಿ ಅವರು, ನೆನಪುಗಳ ಹಿಂದೆ ಹೋಗಿ ತಮ್ಮ ಮನದ ಕೊಳದಲ್ಲಿ ಕದಡಿ,  ಅದು ತಿಳಿಯಾಗುವವರೆಗೆ ಕಾದು,   ಕೊನೆಗೆ ಅದು ಅಳಿಯದ ಹಾಗೇ ಏನೊ ಒಂದಾಗಿ (ಕಲ್ಲಾಗಿ ಅಥವಾ ಕಲ್ಲಿನೊಳಗಿನ ಏನೊ ಒಂದಾಗಿ) ಉಳಿಯುವುದನ್ನು ಗುರುತಿಸುವುದು ಇಲ್ಲಿನ ವಿಶೇಷ.

ಅಪ್ಪು ಉಳಿಸಿಹೋದ ನೆನಪು, ಸತ್ಯಜಿತ್ ರೇ ಚಿತ್ರಗಳಲ್ಲಿನ ಸ್ತ್ರೀ ಪಾತ್ರಗಳಲ್ಲಿನ ಘನತೆ, ಲತಾ ಹಾಡು, ಅಜ್ಜನ ಬೀರುವಿನಲ್ಲಿ ಕಂಡ ಮೈಸೂರು ಮಲ್ಲಿಗೆ, ಲಂಕೇಶ್ - ಪೂಚಂತೆ - ಭೈರಪ್ಪ - ಖಷ್ವಂತ್ ಸಿಂಗ್ ಮುಂತಾದವರು ಕಂಡದ್ದು - ಕಾಣಿಸಿದ್ದು - ಕಾಣದ್ದು,  ಗುಲ್ಜಾರ್ ಕಾವ್ಯದ ಅಂತಃವಾಹಿನಿ, ಪ್ರೀತಿಯ ಕ್ರಿಕೆಟ್ ಗೆಲುವಿನಲ್ಲಿ ತಂದ ಜೀರ್ಣಿಸಿಕೊಳ್ಳಲಾಗದ ಕಹಿ - ನೋವು, ಒಬ್ಬನ ಅಧಿಕಾರ ದಾಹ ಹೇಗೆ ದೇಶದ ಸ್ವರೂಪವನ್ನು ಬದಲಿಸಿ ಸ್ಬಾತಂತ್ರ್ಯಹರಣ ಮಾಡುತ್ತದೆ ಎಂಬ ಉದಾಹರಣೆಯಾದ ಟರ್ಕಿಯ ವಾಸ್ತವ, ಕೆಳಗಿನಿಂದ ಬಂದು ಅಸಾಮನ್ಯ ಎತ್ತರಕ್ಕೇರಿ ಪಾತಾಳಕ್ಕಿಳಿದ ಎನ್.‍ಟಿ. ರಾಮಾರಾವ್,  ಮಹಿಳೆಯರ ಮೇಲೆ ವಿಶ್ವದೆಲ್ಲೆಡೆಯಲ್ಲಿ ಎಡಬಿಡದೆ ಸಾಗುತ್ತಿರುವ ಹಲವು ರೀತಿಯ ಪ್ರತ್ಯಕ್ಷ ಹಾಗೂ ಪರೋಕ್ಷ ಹಿಂಸೆ (ಪುರುಷರ ಶೋಷಣೆಯ ಕುರಿತೂ ಸಹಾನುಭೂತಿ ಇದೆ), ತಮ್ಮ ತಪ್ಪುಗಳನ್ನರಿಯದೆ ಸುಲಭವಾಗಿ ಮತ್ತೊಬ್ಬರ ಮೇಲೆ ಕಲ್ಲೆಸೆಯುವ ಸಮಾಜ... ಹೀಗೆ ಇಲ್ಲಿ ಅನೇಕ ನೋಟಗಳಿವೆ.

ಸಂಧ್ಯಾರಾಣಿ ಅವರ ಸಾಹಿತ್ಯ ಪ್ರೇಮ, ಸಾಮಾಜಿಕ ಕಳಕಳಿ, ಪತ್ರಕರ್ತೆಯಾದ ಅನುಭವದ ಅವರಲ್ಲಿನ ಅನ್ವೇಷಕ ಪ್ರವೃತ್ತಿ, ಎಲ್ಲಕ್ಕಿಂತ ಮುಖ್ಯವಾಗಿ ಅವರಲ್ಲಿ ಘಟಿಸಿರುವ ಏಕಾಂತ ಮತ್ತು ಲೋಕಾಂತಗಳಲ್ಲಿನ ಸಮನ್ವಯ ಸೂಕ್ಷ್ಮತೆ, ಈ ಎಲ್ಲ ಪ್ರತಿಫಲನಗಳ ರೂಪದಲ್ಲಿ ಈ ಕೃತಿ ಮೈದಳೆದಿದ್ದು, ಹಲವಾರು ಸಂವೇದನೆಗಳನ್ನು ಒಂದೇ ಪುಸ್ತಕದ ಓದಿನಲ್ಲಿ ನಮಗೆ ಲಭ್ಯವಾಗುವಂತೆ ಮಾಡಿದೆ.

ಛಾಯಾಚಿತ್ರ ಕೃಪೆ: Gn Mohan

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ