ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಹಲ್ಯೆ


ಪುತಿನ ಅವರ ಅಹಲ್ಯೆ  ಗೀತನಾಟಕ
ನಿರೂಪಣೆ:  ಸುಬ್ಬುಲಕ್ಷ್ಮಿ Lrphks Kolar

ಪರಿಚಯ

ರಾಮಾಯಣದಲ್ಲಿ ಬರುವ ಒಂದು ಪಾತ್ರ ಅಹಲ್ಯೆಯದು. ಇಂದ್ರನ ಮೋಹಕ್ಕೆ ಬಲಿಯಾಗಿ, ಒಂದು ಕ್ಷಣ ಸೋತ ತಪ್ಪಿಗೆ ಪತಿಯಿಂದ ದೂರವಾಗಿ ಎಷ್ಟೋ ವರ್ಷಗಳ ಬಾಳನ್ನು ಕಲ್ಲಿನಂತೆ ಏಕಾಂಗಿಯಾಗಿ ಸವೆಸಿ ಕೊನೆಯಲ್ಲಿ ಶ್ರೀರಾಮನ ಕೃಪೆಯಿಂದ ಮರುಹುಟ್ಟು ಪಡೆದವಳು ಇವಳು.

ಅಹಲ್ಯೆಯ ಪಾತ್ರ ಬಹಳವಾಗಿ ಮನಸ್ಸನ್ನು ಕಾಡುತ್ತದೆ. ಡಿವಿಜಿಯವರ ಶ್ರೀರಾಮ ಪರೀಕ್ಷಣಂ ನಲ್ಲಿ ಅಹಲ್ಯೆಯ ಪ್ರಶ್ನೆ, ವಾಲ್ಮೀಕಿ ರಾಮಾಯಣದ ಅಹಲ್ಯೆ, ಕುವೆಂಪುರವರ ರಾಮಾಯಣ ದರ್ಶನಂ ನಲ್ಲಿನ ಅಹಲ್ಯೆ,ಹೀಗೆ...ಇವುಗಳ ಜೊತೆಗೆ ಪುತಿನ ರವರ ಗೀತನಾಟಕ ಅಹಲ್ಯೆ ಒಂದು ಸುಂದರ ರೂಪವಾಗಿ ನಿಲ್ಲುತ್ತದೆ.

 ಇಂದ್ರನ, ಮನ್ಮಥನ, ಗೌತಮನ, ಅಹಲ್ಯೆಯ, ಕೌಶಿಕನ, ಅಪ್ಸರೆಯರ ಪಾತ್ರಗಳು ಜೀವ ತಳೆದಂತೆ ಭಾಸವಾಗುತ್ತವೆ. ಮಕ್ಕಳ ಎಳೆನುಡಿಗಳು ಮನದಲ್ಲಿ ಉಳಿಯುತ್ತವೆ. ಪ್ರಕೃತಿಯ ಸೌಂದರ್ಯ, ವರ್ಷಧಾರೆಯ ಭೀಕರತೆ, ಮನ್ಮಥನ ಚಮತ್ಕಾರ, ಯಾಗಶಾಲೆಯ ಪವಿತ್ರತೆ, ತಪಸ್ಸಿನ ಮಗ್ನತೆಗಳ ಜೊತೆಗೆ ಕಥೆ ಸಾಗುತ್ತದೆ. 

ಈ ಗೀತನಾಟಕದ ಸೊಗಸನ್ನು ಎಲ್ಲ ಸಹೃದಯರೊಂದಿಗೆ ಹಂಚಿಕೊಳ್ಳುತ್ತ, ಸರಳವಾಗಿ ಗದ್ಯರೂಪದಲ್ಲಿ ವಿವರಿಸುತ್ತ ಸವಿಯಬೇಕೆಂಬುದು ತಿರು ಶ್ರೀಧರರ ಮನದಾಸೆ. ಅದು ನನ್ನದೂ ಕೂಡಾ. ಹೀಗಾಗಿ ಇದರ ಓದು,ಬರಹ ಅವರ ಪ್ರೇರಣೆಯಿಂದ ಮೊದಲಾಗಿ ಈಗ ತಮ್ಮ ಮುಂದೆ ಬರುತ್ತಿದೆ. ದೋಷಗಳನ್ನು ಮನ್ನಿಸಿ ಪ್ರೋತ್ಸಾಹಿಸಿರೆಂದು ತಮ್ಮಲ್ಲಿ ಮನವಿ. ಕವಿ ಪು. ತಿ. ನ ರವರಿಗೆ ನಮಿಸುತ್ತ ಅವರ ಗೀತನಾಟಕ ಅಹಲ್ಯೆ ನಿಮಗಾಗಿ. ನಮಸ್ಕಾರ.




ಪೂರ್ವಾಂಕ
ನಾಂದಿ

ಹುಲುಬಯಕೆ ಬಾ ಎನಲು, ಓ ಎಂದು ಬಾರದಿರು 
ವಾತಾಪಿಯಂದದೊಳು ಬಾಳನೊಡೆದು. ಮೊಗ್ಗಿನೊಳು ಕಂಪಂತೆ ಚೇತದೊಳು ಬಳೆಯುತ್ತ
 ಸಮಯವರಿತರಳಿ ಬಾ, ಒಲವೆ ನಲಿದು-
ಇಂತಮ್ಮ ಬಿನ್ನಹವ ಮಾರ ಮನ್ನಿಸಲಿ, ಆಮೋದಕಾಗುವೊಲು ಬಾಳನಾಗಿಸಲಿ !

ದೃಶ್ಯ ೧

(ನಂದನವನ, ಸುರರೂ ಸುರಸುಂದರಿಯರೂ ಜತೆಜತೆಯಾಗಿ ಹಾಡಿಕೊಂಡು ರಂಗಕ್ಕೆ ಪ್ರವೇಶಿಸುವರು ಇದನ್ನು ತಿರೆಯವರ ಒಂದು ಮೋಹಕವಾದ ಕನಸಿನಂತೆ ತೋರಿಸಬೇಕು : ವ್ಯಕ್ತಾವ್ಯಕ್ತ ವ್ಯಕ್ತಿಗಳ ತಂಡ ; ಎಲರ ಮೇಲೆ ನಡೆದಂತೆ ನಡೆ; ಇರುಳಿನಲ್ಲಿ ತಾರೆಗಳಂತೆ ಹೊಳಹು ಇತ್ಯಾದಿ ಇತ್ಯಾದಿ. ರಂಗನಿರ್ಮಾಣ ಚಾತುರ್ಯವಿದ್ದಂತೆ. ಈ ಉಪಕರಣಗಳು ಇಲ್ಲದ ಎಡೆಯಲ್ಲಿ ಇದನ್ನು ತೆರೆಯ ಮರೆಯಲ್ಲಿ ಹಾಡಿ, ನೆಳಲ ಕುಣಿತಗಳಿಂದ ಅಭಿನಯಿಸಿ ತೋರಿಸಬಹುದು. )

ನಿರ್ಜರರಾವೆಮಗೇತರ ಭೀತಿ?
ಸತತ ಬಿನದಮೇ ನಮ್ಮಯ ರೀತಿ.
ಸುಮನಸರಾವೆಮಗೇತರ ಕಟ್ಟು?
ಸಂತಸಕೆಂದೇ ಆಯಿತು ಹುಟ್ಟು.
ಸೊದೆ ಕುಡಿವವರಾವೆಮಗೇನರಕೆ ? ಆಯಿತು ಬವಣಿಕೆಯೇ ಹಂಬಲಿಕೆ. ಬಯಕೆಗಳೆಮ್ಮನು ಬಾಧಿಪುದೆಂತು ಸುರತರುವಡಿಯೊಳೆ ನಾವಿರಲಿಂತು ? ನಂದನವನವಿದು ಸುಸ್ಥಿರಚೈತ್ರಂ ಶಿಶಿರಾಮಿತ್ರಂ ವರ್ಣವಿಚಿತ್ರಂ. 
ಇಲ್ಲಿನ ಬೆರಗಿನ ಕಮ್ಮಲರಿಂದ ನಡೆಗೆಟ್ಟಿಹುದೋ ನಿಲ್ಲದ ಚೆಂದ.
ಇಲ್ಲಲ್ಲೆನ್ನುತ ನಾವಿದನರಸಿ
ಕಿನ್ನರ ಗೀತದ ಗತಿಯನುಸರಿಸಿ
ಪರಿದಾಡುವೆವಹಹಾ ಜತೆಜತೆಗೆ
ಪೂಪೂವಿಗೆ ಗಿಡಗಿಡ ಲತೆಲತೆಗೆ.
ಇದುವೇ ನಮ್ಮಯ ಬಾಳಿನ ರೀತಿ! 
ನಿರ್ಜರರಾವೆಮಗೇತರ ಭೀತಿ?

*ಸುರಸುಂದರಿಯರ ತಂಡ*
ಆಗಸವೇ ನಮ್ಮಾಡುಂಬೊಲವು ಬಗೆದಂತಾಡಲು ನಮಗಿದು ತೆರವು ಯಾಮಿನಿ ಬಚ್ಚಿಡುವುಡುಗಳ ಹುಡುಕಿ ಉಪೆಯೊಡನಲಸುವ ಬೆಳ್ಳಿಯ ತುಡುಕಿ ಜಗ ಬೆಳಗಲು ದೆಸೆ ಹೊಳಲಿಡೆ ನಕ್ಕು ಮುಗಿಲ ಬೆನ್ನೇರಿ ಮೋದದಿ ಮಿಕ್ಕು ನಡುಬಾನೊಳು ನಡೆಬವಣೆಗೆ ಸಿಲುಕಿ ನಿದ್ರಿಪ ರವಿಯುರಿದೇಳಲು ಕೆಣಕಿ ಸಂಜೆಯೊಡನೆ ಸುರಪುರಿ ಹೆದ್ದಾರಿ 
ನಿಗಿ ಎನ್ನಲು ಸಿಂಗಾರವ ತೋರಿ ಬಾನೋಲಗದೊಳು ವಿಭವದಿ ನೆರೆದು ಗೀತ ನಾಟ್ಯ ಸಲ್ಲಾಪದಿ ಮೆರೆದು 
ಇರುಳ ಬನದಿಸಂಕೇತವ ಮಾಡಿ 
ನಲ್ಲರ ಜತೆಯೊಳು ಬಗೆದಂತಾಡಿ ಬಿನದಿಪೆವಹಹಾ ದಿನದಿನವಿಂತು ! ಇದನೂ ಮಾರಿದ ಮೋದವದೆಂತು ? ನಿರ್ಜರರಾವೆಮಗೇತರ ಭೀತಿ 
ಸತತ ಬಿನದಮೇ ನಮ್ಮಯ ನೀತಿ !

ಸುರರ ತಂಡ
ಜಯ ಜಯ ವಾಸವ! ಜಯದೇವೇಂದ್ರ !
ಜಯ ವಿಭವಪ್ರಿಯ ! ಜಯ ಅಮರೇಂದ್ರ !
ಇಂತುಗ್ಗಡಿಪುದೆ ನಮ್ಮಯ ಹಿರಿಮೆ,
ವಾಸವನಾಳಲು ನಮಗೇಂ ಕಡಮೆ !
ಆತನಿಂದಲಾ ನಮಗೀ ನಲ್ಮೆ,
ಹೆರರಿಗರಿದೆನಿಪ ದಿವದೀ ಮೇಲ್ಮೈ;
ಸೊದೆಗು ಮಿಕ್ಕ ಹವಿಯುಣಿಸಿನ ಭೋಗಂ 
ತುಷ್ಟ ತಿರೆ ನಮ್ಮ ಭಾವಿಪ ಯೋಗಂ.
ಒಡೆಯಗಾಕೆಯೊಳು ಕನಿಕರವೆನಿತು ! ಆಕೆಗಮರರೊಳು ಭಾವನೆಯೆನಿತು ! ಮಾಗಿ ಕಾಡುತಿರೆ ಮಧುವಂ ಕಳುಪಿ 
ಬಿಸಿಲು ಬಾಡಿಸಲು ಮುಗಿಲಂ ನೆರಪಿ
 ಅವಳ ಪೊರೆವುದೇ ನಮ್ಮುದ್ಯೋಗಂ ಅವಳ ಸೊಗಯಿಪುದೆ ನಮ್ಮ ನುರಾಗಂ. ಹಿಮಸೀಮಂತಿನಿ ಕಾನನಕುಂತಳೆ ಸಾಗರದುಕೂಲೆ ಶಾದ್ವಲಾಂಚಲೆ ನದಿನದಮುಕ್ತಾಹಾರ ಮನೋಹರೆ -
ಈ ತಿರೆ ನಮಗಿರೆ, ಶಕ್ರನಾಳುತಿರೆ, ನಿರ್ಭಯರಾವೆಮಗೇತರ ಭೀತಿ ?
ಸತತ ಬಿನದಮೇ ನಮ್ಮಯ ರೀತಿ !

(ಹೀಗೆ ಹಾಡುತ್ತಾ ರಂಗದ ಹಿಂಭಾಗದಲ್ಲಿ ಮರೆಯಾಗುತ್ತಾರೆ. ತೆರೆ ಬೀಳುತ್ತದೆ. ಬಿದ್ದ ಮೇಲೂ ಸಂಗೀತ ಮಾತ್ರ ಕ್ಷೀಣವಾಗಿ ಕೇಳಿಬರುತ್ತಲೇ ಇರುತ್ತದೆ.)
೦೦೦೦೦೦೦೦೦೦೦೦೦೦೦೦೦೦೦೦೦
ಸಂಕ್ಷಿಪ್ತ ರೂಪ

ಎಲ್ಲ ನಾಟಕಗಳಂತೆ ಇಲ್ಲಿಯೂ ನಾಂದಿ ಪದ್ಯದ ಸಾಲುಗಳಿವೆ. ಮೊಗ್ಗಿನಲ್ಲಿ ಕಂಪು ಬರುವಂತೆ, ಚೈತನ್ಯದಲ್ಲಿ ಒಲವು ಅರಳಿ ಬರಲಿ ಎಂದು. ಬಾಳನ್ನು ಬೆಳಕಾಗಿಸಲಿ. ಹುಲುಬಯಕೆಗಳು ಒಡೆದು ಬಾರದಿರಲಿ ಎಂಬ ಕಳಕಳಿಯೊಂದಿಗೆ ನಾಂದಿ ತೆರೆದುಕೊಳ್ಳುತ್ತದೆ.

ದೃಶ್ಯ ಒಂದರಲ್ಲಿ ನಂದನವನದ  ಸುರರು, ಸುರಸುಂದರಿಯರು ಹಾಡುತ್ತಾ, ಕುಣಿಯುತ್ತಾ ಬರುವರು. ನಿರ್ಜರರಾದ ಅವರಿಗೆ ಯಾರ ಭೀತಿಯೂ ಇಲ್ಲ. ಸದಾ ವಿನೋದವಾಗಿರುವುದೇ ಅವರ ರೀತಿ. ಅವರ ಇಡೀ ಜಿವನವಿರುವುದೇ ಸಂತಸಕ್ಕಾಗಿ. 
ಸುಂದರಿಯರ ತಂಡ ಹಾಡುತ್ತದೆ. ಆಕಾಶವೇ ಅವರ ಆಟದ ಬಯಲು. ಮುಗಿಲಿನ ಚಿತ್ತಾರಗಳೇ ಅವರ ಆಟದ ವಸ್ತುಗಳು. ರಾತ್ರಿಯ ನಕ್ಷತ್ರಗಳು, ಬೆಳದಿಂಗಳ ಬೆಳಕು, ಸುಳಿವ ಗಾಳಿ, ಅರಳುವ ಹೂವುಗಳು, ನಲ್ಲರೊಂದಿಗಿನ ಕೂಟ, ಪ್ರೇಮದಾಟಗಳು ಇವೆಲ್ಲ ಸುಖ ಅವರಿಗಿರಲು ಅವರಿಗೆ ಯಾರದ್ದೂ ಭಯ ಇಲ್ಲ.ಸತತವಾಗಿ ಸರಸದಿಂದಿರುವುದೇ ಅವರ ಗುರಿಯಾಗಿದೆಯೆನ್ನುವರು.

ಸುರರ ತಂಡವೂ ಹೀಗೇ ಹಾಡುವುದು.ಅವರು ತಮ್ಮ ದೊರೆಯಾದ ದೇವೇಂದ್ರನನ್ನು ಸ್ತುತಿಸಿ ಹಾಡುವರು. ಅವನಿಂದಲೇ ತಮಗೆ ಈ ಎಲ್ಲ ಸುಖ ಸೌಭಾಗ್ಯಗಳು ದೊರೆತಿವೆ ಎನ್ನುವರು. ಭೂಮಿಯು ಅವನಿಗಾಗಿಯೇ ಸೌಂದರ್ಯವನ್ನು ಸೃಸ್ಟಿಸುತ್ತದೆ. ಅವನಿಗಾಗಿಯೇ ಎಲ್ಲರ ಅನುರಾಗವೂ ಇದೆ. ಮನೋಹರವಾದ ಈ ಭೂಮಿ ನಮ್ಮದಾಗಿದೆ. ಇದರ ಒಡೆಯ ಇಂದ್ರನಿದ್ದಾನೆ. ಹೀಗಿರಲು ನಮಗೆ ಯಾರದ್ದೂ ಭಯವಿಲ್ಲ. ಎಲ್ಲೆಡೆಯೂ ಮನಬಂದಂತೆ ನಲಿಯುವೆವು ನಾವು ಎನ್ನುತ್ತಾರೆ. 
ಹೀಗೇ ಹಾಡುತ್ತ ಮರೆಯಾಗುತ್ತಾರೆ. ಸಂಗೀತ ಮಾತ್ರ ಮೆಲುವಾಗಿ ಕೇಳಿಬರುತ್ತಲೇ ಇರುತ್ತದೆ.

( ಮುಂದುವರೆಯುತ್ತದೆ )


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ