ಗರುಡನಗಿರಿ ನಾಗರಾಜ್
ಗರುಡನಗಿರಿ ನಾಗರಾಜ್ ಪತ್ರಕರ್ತರಾಗಿ ದೊಡ್ಡ ಹೆಸರಾಗಿದ್ದವರು.
ನಾಗರಾಜ್ ಅವರು 1932 ವರ್ಷದಲ್ಲಿ
ಹಾಸನ ಜಿಲ್ಲೆಯ ಗರುಡನಗಿರಿ ಹಳ್ಳಿಯಲ್ಲಿ ಜನಿಸಿದರು. ಓದಿನ ನಂತರ ಸಮಾಜ ಸೇವೆ ಹಾಗು ಪತ್ರಿಕೋದ್ಯಮದಲ್ಲಿ ತೊಡಗಿಕೊಂಡರು.
ಜನವಾಣಿ ಪತ್ರಿಕೆಯಿಂದ ತಮ್ಮ ವೃತ್ತಿ ಜೀವನ ಆರಂಭಿಸಿದ ಗರುಡನಗಿರಿ ನಾಗರಾಜ್ ಅವರು ಪ್ರಜಾಮತ ಪತ್ರಿಕೆಗೆ ಒಂದಷ್ಟು ಅವಧಿಗೆ ವರದಿಗಾರರಾಗಿದ್ದರು. ನಂತರ ಮೂರು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಪ್ರಭ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು.
ಸಣ್ಣ ಅವಧಿಗೆ ಕರ್ಮವೀರ ವಾರಪತ್ರಿಕೆ ಹಾಗೂ ಕಸ್ತೂರಿ ಮಾಸ ಪತ್ರಿಕೆಗಳಿಗೆ ಸಂಪಾದಕರಾಗಿದ್ದರು. ಕರ್ಮವೀರದಲ್ಲಿ ಪ್ರಕಟವಾಗುತ್ತಿದ್ದ ಅವರ 'ಪಾತಾಳಗರುಡಿ' ಅಂಕಣ ಬಹಳ ಜನಪ್ರಿಯವಾಗಿತ್ತು. ಅದೇ ಹೆಸರಿನಲ್ಲಿ ಈ ಅಂಕಣಗಳು ಪುಸ್ತಕ ರೂಪದಲ್ಲಿಯೂ ಹೊರಬಂದಿವೆ. ಅವರ 'ಕಂಡಿದ್ದು ಕೇಳಿದ್ದು' ಕೃತಿ ಪತ್ರಿಕೋದ್ಯಮಕ್ಕೆ ಕಾಲಿಡುವ ವಿದ್ಯಾರ್ಥಿಗಳಿಗೆ ಒಂದು ಕೈಪಿಡಿಯಾಗಿದೆ.
ಗರುಡನಗಿರಿ ನಾಗರಾಜ್ ಅವರು ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ ಪುಸ್ತಕ ಪ್ರಕಟಣೆ ಹಾಗೂ ಗ್ರಾಮೀಣ ಪತ್ರಿಕೋದ್ಯಮ ತರಬೇತಿಗೆ ಒತ್ತು ನೀಡಿದ್ದರು .
ಗರುಡನಗಿರಿ ನಾಗರಾಜ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಮಾಧ್ಯಮ ಅಕಾಡೆಮಿಯ ಟಿಎಸ್ಆರ್ ಪ್ರಶಸ್ತಿಗಳೂ ಸೇರಿ ಅನೇಕ ಗೌರವಗಳು ಸಂದಿದ್ದವು.
ಗರುಡನಗಿರಿ ನಾಗರಾಜ್ 2017ರ ಮೇ 14ರಂದು ತಮ್ಮ 85ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು.

ಕಾಮೆಂಟ್‌ಗಳು