ಬಾ.ಹ. ಉಪೇಂದ್ರ
ಬಾ.ಹ. ಉಪೇಂದ್ರ ನಮನ 🌷🙏🌷
ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿದ್ದ ಬಾಣಾಸಂದ್ರ ಹನುಮಂತರಾಯ ಉಪೇಂದ್ರ ಅವರು 2026ರ ಮಾರ್ಚ್ 5, ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಎಚ್ಎಎಲ್ ನಲ್ಲಿ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹಂತದವರೆಗೆ ಜವಾಬ್ದಾರಿ ನಿರ್ವಹಿಸಿ ನಿವೃತ್ತರಾಗಿದ್ದ ಉಪೇಂದ್ರ ಅವರು ಅಪ್ರತಿಮ ಕನ್ನಡ ಕಾರ್ಯಕರ್ತರಾಗಿದ್ದರು.
ಉಪೇಂದ್ರ ಅವರು ಕನ್ನಡ ಚಳವಳಿಗೆ ಹೊಸ ಆಯಾಮ ನೀಡಿದ ಡಾ ಎಂ. ಚಿದಾನಂದಮೂರ್ತಿ ಅವರ ನೇತೃತ್ವದ ಸಾಹಿತಿಗಳ ಕಲಾವಿದರ ಬಳಗವು 1986ಲ್ಲಿ ನಡೆಸಿದ ‘ಕನ್ನಡ ದೂರದರ್ಶನ’ ಹೋರಾಟದ ಮೂಲಕ ಕನ್ನಡ ಹೋರಾಟಕ್ಕೆ ಪ್ರವೇಶಿಸಿದರು. ಅಂದಿನಿಂದ ಅವರು ನಿರಂತರವಾಗಿ ಕನ್ನಡಪರವಾದ ಎಲ್ಲ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕನ್ನಡ ಶಕ್ತಿ ಕೇಂದ್ರದ ಸಹ ಕಾರ್ಯದರ್ಶಿಯಾಗಿ ಹಾಗೂ ಕನ್ನಡ ಗೆಳೆಯರ ಬಳಗದ ಸಂಚಾಲಕರಾಗಿಯೂ ಕಾರ್ಯನಿರ್ವಹಿಸಿದ್ದರು.
ಬರವಣಿಗೆಯಲ್ಲೂ ಸಾಧನೆ ಮಾಡಿದ್ದ ಉಪೇಂದ್ರ ಅವರ ಕಥೆ, ಕವನ ಹಾಗೂ ವೈಚಾರಿಕ ಲೇಖನಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅನುವಾದದಲ್ಲಿ ಪರಣಿತರಾಗಿ, ರಾಜ್ಯ ಸರ್ಕಾರಕ್ಕೆ ಹಲವು ತಾಂತ್ರಿಕ ವಿಷಯಗಳನ್ನು ಅನುವಾದಿಸಿಕೊಟ್ಟಿದ್ದ ಅವರ ತಾಂತ್ರಿಕ ವಿಚಾರಗಳ ಬರಹ ಮತ್ತು ಅನುವಾದಗಳು, ಕನ್ನಡ ಸಾಹಿತ್ಯ ಲೋಕದ ಹಿರಿಯರ ಮೆಚ್ಚುಗೆ ಗಳಿಸಿದ್ದವು. ಅವರು ಹಲವು ತಾಂತ್ರಿಕ ಪುಸ್ತಕಗಳನ್ನು ಕನ್ನಡಕ್ಕೆ ತಂದಿದ್ದರು. ‘ಕನ್ನಡ ಕಿಸೆಗನ್ನಡಿ’ ಕೃತಿಯನ್ನು ಸಂಪಾದಿಸಿದ್ದರು.
ಅಗಲಿದ ಕ್ರಿಯಾಶೀಲ ಕನ್ನಡ ಚೇತನಕ್ಕೆ ನಮನ. 🌷🙏🌷
Respects to departed soul B. H. Upendra 🌷🙏🌷

ಕಾಮೆಂಟ್‌ಗಳು