ರಾಧೆಯ ರಾಜಕುಮಾರ
ರಾಧೆಯ ರಾಜಕುಮಾರ
ರಾಧೆ, ಕೃಷ್ಣನ ಪ್ರಯಾಣದ ಬಗ್ಗೆ ಕೇಳಿದ್ದಳು. ಬಹಳ ಯೋಚನೆಯಲ್ಲಿ ಮುಳುಗಿದ್ದಳು. ಆಗ ಕೊಳಲಿನ ಧ್ವನಿ ಕೇಳಿಬಂತು. ಅವಳ ಕೃಷ್ಣ ಅವಳನ್ನು ಕರೆಯುತ್ತಿದ್ದನು. ನಂತರ ಯುವಕರು, ಮುದುಕರು ತಮ್ಮ ದೇಹಗಳನ್ನು ಹೊತ್ತು ಬಂದರು. ಕೊಳಲಿನ ನಾದ ತನ್ನ ಮಾಧುರ್ಯದಿಂದ ಎಲ್ಲರನ್ನೂ ಸೆಳೆಯುತ್ತಲೇ ಇತ್ತು. ಗಂಡಸರಿಗೆ ಆ ಮಂಜುಳನಾದ ಇಷ್ಟವಿರಲಿಲ್ಲವಾಗಿ ದಿಗ್ಭ್ರಾಂತರಾಗಿ ತಮ್ಮ ಹೆಂಗಸರನ್ನು ಹಿಂಬಾಲಿಸಿದರು. ಕೃಷ್ಣ ತನ್ನ ದಿನನಿತ್ಯದ ಭಂಗಿಯಲ್ಲಿ ಒಂದು ಕಾಲಿನ ಮೇಲೆ ಮತ್ತೊಂದನಿಟ್ಟು, ದಡದ ಮೇಲೆ ನಿಂತಿದ್ದುದನ್ನು ಕಂಡು, ಅವರೂ ಆ ಸಂಗೀತಕ್ಕೆ ಸರಿಯಾದ ತಾಳ ಹಾಕಿಕೊಂಡು 'ಥೈ, ಥೈ' ಎನ್ನಲಾರಂಭಿಸಿದರು.
ಕಾಲುಗಳು ಗೆಜ್ಜೆ ಶಬ್ದಗಳಿಂದ ಝಣಕಾರ ಮಾಡಿದವು. ಮದ್ದಲೆಗಳು ಜೋರಾಗಿ ಸ್ಪಂದಿಸಿದವು. ಕೈಗೆ ಕೈಗೆ ಸೇರಿ ಚಪ್ಪಾಳೆಗಳನ್ನು ಬಡಿದವು. ಯುವಕರು ಮತ್ತು ಹುಡುಗಿಯರು ಒಂದು ದೊಡ್ಡ ವೃತ್ತದಂತೆ ನಿಂತರು. ಅದರೊಳಗೊಂದು ಚಿಕ್ಕ ವೃತ್ತವೂ ಸಿದ್ಧಗೊಂಡಿತು. ಕೃಷ್ಣನ ಸುತ್ತಲೂ ಸುತ್ತಲೆಂದು ರಾಧೆ ಗುಂಪನ್ನು ಬಿಟ್ಟು, ಕೃಷ್ಣನ ಪಕ್ಕದಲ್ಲಿ ಬಂದು ನಿಂತಳು. ಅವಳ ಸ್ತನಗಳು ಹೆಮ್ಮೆ ಆನಂದಗಳಿಂದ ಏರಿಳಿಯುತ್ತಿದ್ದಾಗ, ಅವಳ ತುಟಿಗಳು, ಸಮ್ಮೋಹಕ ನಗೆ ಬೀರುತ್ತಿದ್ದರೆ, ಅವಳ ಕಣ್ಣುಗಳು ಕೃಷ್ಣನ ಮುಖವನ್ನೇ ಭಾವಾವೇಶದಿಂದ ದೃಷ್ಟಿಸುತ್ತಿದ್ದವು.
ನಂತರ ಕೃಷ್ಣ, ತನ್ನ ಕೊಳಲನ್ನು ಸೊಂಟಕ್ಕೆ ಸಿಕ್ಕಿಸಿ ನಿಂತು, ರಾಧೆಯೊಂದಿಗೆ ರಾಸಕ್ರೀಡೆಗೆ ಸಿದ್ಧನಾದನು. ಎಲ್ಲರೂ ಹಾಡುತ್ತಾ, ಕುಣಿದರು. ಗುಂಪು, ಸಂಭ್ರಮದಿಂದ ಥೈ, ಥೈ, ಥೈ ಎಂದು ಕೂಗುತ್ತಾ, ಆ ನೃತ್ಯದ ಹೆಜ್ಜೆಗಳಿಗೆ ಹೊಂದುವಂತೆ ಪ್ರಾಸಬದ್ಧವಾಗಿ ಚಪ್ಪಾಳೆ ಹೊಡೆಯುತ್ತಿತ್ತು.
ನರ್ತನ ಮಾಡುತ್ತಿದ್ದವರು ವೇಗವಾಗಿ ವೃತ್ತಗಳಲ್ಲಿ ಸುತ್ತಿದರು. ತಮ್ಮ ಸ್ಥಳಗಳನ್ನು ವೇಗವಾಗಿ ಬದಲಾಯಿಸಿಕೊಳ್ಳುತ್ತಾ, ಅವರೆಲ್ಲರೂ ತಮ್ಮ ಸೊಂಟದ ಪಟ್ಟಿಗಳಿಂದ ಚಿಕ್ಕ ಚಿಕ್ಕ ಕೋಲುಗಳನ್ನು ತೆಗೆದು ಒಂದೊಂದನ್ನು ಒಂದೊಂದು ಕೈಯಲ್ಲಿ ಹಿಡಿಯುತ್ತಾ, ತಾಳಕ್ಕೆ ಸರಿಯಾಗಿ, ಮೊದಲು ತಮ್ಮೆರಡು ಕಡ್ಡಿಗಳನ್ನು ಒಂದಕ್ಕೊಂದು ಬಡಿದರು. ನಂತರ ಒಂದರಿಂದ ಒಂದನ್ನು ತಮ್ಮ ಪಕ್ಕದವರ ಕೋಲಿಗೆ ಹೊಡೆದು, ಒಂದನ್ನು ತಮ್ಮದಕ್ಕೇ ಬಡಿದು, ವೇಗವಾಗಿ ಕುಣಿಯಲಾರಂಭಿಸಿದರು. ಹೀಗೇ ಕೋಲಾಟವನ್ನು ಮುಂದುವರಿಸುತ್ತಾ "ಥೈ ಥೈ"; ಥೈ, ಥೈ, ಥೈ, ಥೈ ಎಂದು ಕೂಗಿದರು.
ಆಕಾಶ ಮತ್ತು ಭೂಮಿ ಎರಡೂ ಸುತ್ತಿದವು. ಚಂದ್ರ ಅಕಾಶದಲ್ಲಿ ಸ್ಥಿರವಾಗಿ ಮುಗುಳ್ನಗುತ್ತಾ, ಎಲ್ಲವನ್ನೂ ನೋಡುತ್ತಿದ್ದನು. ಯಮುನಾ ನದಿ ತನ್ನದೇ ಆದ ರಾಗದಲ್ಲಿ ಹಾಡುತ್ತಿತ್ತು. ದೇವತೆಗಳೆಲ್ಲಾ ಆನಂದದಿಂದ ಕೆಳಗೆ ದೃಷ್ಟಿ ಹರಿಸುತ್ತಾ, ಹೂವಿನ ರೇಕಿನಂತಿದ್ದ ಚಂದ್ರನ ಕಿರಣಗಳನ್ನು ವೃಷ್ಟಿಯಂತೆ ಉದುರಿಸಿದರು.
ಹಲವಾರು ಗೋಪಿಯರು, ಭಾವೋದ್ವೇಗದ ಉದ್ರೇಕದಿಂದ ಮೂರ್ಛೆಹೋದರು ಮತ್ತು ಇತರರು ಅತ್ಯಂತ ಸುಸ್ತಿನಿಂದ, ಆ ವೃತ್ತದಿಂದ ದೂರಕ್ಕೆ ಹೋಗಿ ನಿಂತರು. ಆಗ ರಸದ ಸೌಂದರ್ಯ ಅಳಿಯುತ್ತಿತ್ತು. ಎಲ್ಲರೂ ಮೇಲುಸಿರು ಬಿಡುತ್ತಾ ಮಲಗಿದರು, ನಗುತ್ತಲೇ.
ಅವರು ಕಣ್ಣುಗಳನ್ನು ತೆರೆಯುವುದಕ್ಕಿಂತ ಮೊದಲೇ, ಅವರಿಗೆ ಕೊಳಲಿನ ಧ್ವನಿ ಕೇಳಿಸಿತು. ಈಗ ಅದು ಅವರೆಲ್ಲರೂ ಮಲಗಿದ್ದ ಸ್ಥಳದಿಂದ ದೂರದಲ್ಲಿದ್ದ ಕಾಡಿನ ಹತ್ತಿರದಿಂದ ಕೇಳಿಸುತ್ತಿತ್ತು. ಜನರ ನಡುವಿನಿಂದ ಒಂದು ಕಪ್ಪು ನೆರಳು ಹಾರಿತು. ಅದು ಅಲ್ಲಿಂದ ಓಡುತ್ತಿರುವಂತೆನಿಸಿತು. ಎರಡು ಆಕಾರಗಳು ಕಾಡನ್ನು ಸೇರಿ ಮಾಯವಾದವು.
ಪ್ರತಿಯೊಬ್ಬರಿಗೂ ಅದರರ್ಥ ತಿಳಿಯಿತು. ಕೆಲವರಿಗಂತೂ ಹೊಟ್ಟೆ ಉರಿಯಿತು. ಆದರೆ ಯಾರೂ ಆ ಸ್ಥಳ ಬಿಟ್ಟು ಹೋಗಲಿಲ್ಲ. ಕಡೆಗೆ ಆ ಪ್ರೇಮಿಗಳನ್ನು ಗಮನಿಸಲೂ ಇಲ್ಲ, ಅವರ ಅದ್ಭುತ ಪ್ರೇಮ ಅವರನ್ನು ಮೌನವಾಗಿಯೇ ಗೌರವಾದರಗಳಿಂದ ಇಟ್ಟಿತ್ತು. "ರಾಧೆ, ನಿನಗೆ ಸುಸ್ತಾಗಿದೆ ಎಂದು ನನಗೆ ಗೊತ್ತು. ನೀನಿನ್ನು ನಡೆಯಲಾರೆ, ನಾನು ನಿನ್ನನ್ನು ಎತ್ತಿಕೊಂಡು ಹೋಗುತ್ತೇನೆ" ಎಂದನು ಕೃಷ್ಣ.
ಆಗ ಮನೋಜ್ಞವಾದ ನಿರೀಕ್ಷೆಯಿಂದ ರಾಧೆಯ ಕೆನ್ನೆಗಳು ಕೆಂಪಾದವು. ಆದರೂ ಅವಳು ಅದನ್ನು ಒಪ್ಪಿಕೊಳ್ಳದೆ, ನಾಜೂಕಾಗಿ, "ನಾನು ನಡೆಯಬಲ್ಲೆ" ಎಂದಳು. ಕೃಷ್ಣ, "ಇಲ್ಲ, ನಿನ್ನಿಂದ ನಡೆಯಲಾಗುವುದಿಲ್ಲ, ನಾನು ನಿನ್ನನ್ನು ಬಹಳ ದೂರ ಕರೆದೊಯ್ಯಬೇಕು ಎಂದಿದ್ದೇನೆ" ಎನ್ನುತ್ತಾ ಅವಳನ್ನು ತನ್ನ ತೋಳುಗಳಲ್ಲಿ ಹಿಡಿದೆತ್ತಿದನು.
ಕೃಷ್ಣ ದೃಢವಾಗಿ ಹೆಜ್ಜೆಗಳನ್ನು ಹಾಕುತ್ತಾ ನಡೆಯುತ್ತಿದ್ದಾಗ, ಮರದಲ್ಲಿನ ಎಲೆಗಳು ಅಲ್ಲಾಡುತ್ತಾ ಬೇರೆ ಬೇರೆ ರೀತಿಗಳ ನೆರಳನ್ನು ಬೀರುತ್ತಿದ್ದವು. ಆ ಬೆಳಕಿನ ಮಿನುಗಾಟದಲ್ಲಿ ರಾಧೆ, ತನ್ನ ಕಣ್ಣುಗಳನ್ನೇ ದೃಷ್ಟಿಸುತ್ತಿದ್ದ ಅವನ ಪ್ರಭೆಯ ಕಣ್ಣುಗಳನ್ನೇ ಅವಲೋಕಿಸುತ್ತಿದ್ದಳು. ಅವಳಿಗೆ ರೋಮಾಂಚನವಾಗುತ್ತಿದ್ದಂತೆಯೇ ಅವಳನ್ನು ಹಿಡಿದಿದ್ದ ಕೈಗಳೂ ರೋಮಾಂಚನಗೊಳ್ಳುತ್ತಿದ್ದವು.
"ರಾಧೆ.........." ಎಂದ ಕೃಷ್ಣ.
"ಕೃಷ್ಣಾ......." ಎಂದಳು ರಾಧೆ.
"ಇಂದಿನದು ರಾತ್ರಿಗಳ ರಾತ್ರಿ" ಎಂದ ಕೃಷ್ಣ.
"ಹೌದು, ಅದೊಂದು ಅದ್ಭುತ ರಾಸವೇ ಆಗಿತ್ತು", ಎಂದಳು ರಾಧೆ.
"ನೀನೂ ಬೆರಗುಗೊಳಿಸುವವಳೇ ರಾಧೆ. ಏನೇ ಆದರೂ ಅತ್ಯಂತ ಆಶ್ಚರ್ಯಕರ". ಅವನು ತಲೆ ಬಗ್ಗಿಸಿ, ತನ್ನ ತುಟಿಗಳನ್ನು ಅವಳ ತುಟಿಗಳ ಮೇಲೆ ಮುಚ್ಚಿದನು. ತನ್ನ ಕಣ್ಣುಗಳನ್ನು ಭಾವೋನ್ಮಾದದಿಂದ ಮುಚ್ಚಿಕೊಂಡು, ಅವಳು ಒಂದು ರೀತಿಯ ಸಮರ್ಪಣಾಭಾವದಿಂದ ಅವನನ್ನು ತಬ್ಬಿಕೊಂಡಳು.
ಮೌನವಾಗಿ ಅವನನ್ನು ತಬ್ಬಿಕೊಂಡೇ ಇದ್ದಳು. ಅವಳಿಗೆ ತನ್ನ ಹೃದಯ ಅವನದರೊಂದಿಗೆ ಬಡಿಯುತ್ತಿರುವುದು ಕೇಳಿಸಿತು. ಅವನು ನಡೆಯುತ್ತಲೇ ಸಾಗಿದನು. ಅವನ ಸ್ಥಿರವಾಗಿದ್ದ ಹೆಜ್ಜೆಗಳು, ಮರಗಳ ಒಣಗಿದ ಎಲೆಗಳನ್ನು ಪುಡಿ ಪುಡಿ ಮಾಡುತ್ತಿದ್ದವು.
ರಾಧೆ, "ಕೃಷ್ಣ, ನೀನು ಎಂದೆಂದಿಗೂ ಹೀಗೇ ಇರುತ್ತೀ ತಾನೇ?" ಎಂದು ಪ್ರಶ್ನಿಸಿದಳು.
“ಹೀಗೇ... ಸದಾ.... ಎಂದೆಂದಿಗೂ, ಚಂದ್ರ ಸೂರ್ಯರು ಅಸ್ತಿತ್ಬದಲ್ಲಿ ಇರುವವರೆಗೂ" ಎಂದಿತ್ತು ಕೃಷ್ಣನ ಉತ್ತರ.
"ನೀನು ನನ್ನನ್ನು ಮರೆಯುವುದಿಲ್ಲ ತಾನೇ?" ಎಂದು ಪ್ರಶ್ನಿಸಿದಳು ರಾಧೆ.
"ಹೇಗೆ ತಾನೇ ಸಾಧ್ಯ? ನೀನು ನನ್ನ ಆನಂದದ ದೇವತೆ" ಎಂದ ಕೃಷ್ಣ.
ಈಗಂತೂ ಅವರು ತಮ್ಮ ಸ್ನೇಹಿತರಿಂದ ಬಹಳ ದೂರದಲ್ಲಿದ್ದರು. ಚಂದ್ರನ ಬೆಳದಿಂಗಳು ಶೋಭಿಸುತ್ತಿತ್ತು. ನದಿಯು ಆ ಹೊಳೆಯುತ್ತಿದ್ದ ಬೆಳದಿಂಗಳಿನಲ್ಲಿ ಮಂದವಾಗಿ ಪ್ರಕಾಶಿಸುತ್ತಿತ್ತು.
ಒಂದು ಅರಳಿ ಮರದ ಕೆಳಗೆ, ಮೆದುವಾಗಿದ್ದ ನೆಲದ ಮೇಲೆ, ಅವಳನ್ನು ಇಳಿಸಿ ತಾನೂ ಅವಳ ಬಳಿ ಕುಳಿತನು. ಅವಳಿನ್ನೂ ಅವನ ಕುತ್ತಿಗೆಗೆ ಜೋತು ಬಿದ್ದಿದ್ದಳು. ಅವಳಿಗೆ ಅವನನ್ನು ಬಿಡುವುದೇ ಅಸಾಧ್ಯವಾಗಿತ್ತು. ಅವಳ ಹೃದಯ, ಮತ್ತು ಇಡೀ ದೇಹದಲ್ಲಿ ಬಲವಾದ ನೋವು ಅನುಭವಿಸುತ್ತಿದ್ದಳು. ಕೃಷ್ಣ, ತನ್ನ ಅದಮ್ಯ ಆಯಾಸದಿಂದಾಗಿ ಅವಳ ಮೇಲೇ ಮಲಗಿ, ತನ್ನ ತುಟಿಗಳಿಂದ ಅವಳ ತುಟಿಗಳನ್ನು ಮುಚ್ಚಿದನು. ಆ ತುಟಿಗಳಂತೂ ಆತ್ಮಗಳು ಒಂದಾಗುವವರೆಗೂ ಬೇರೆಯಾಗುತ್ತಲೇ ಇರಲಿಲ್ಲ.
ಒಂದು ದೊಡ್ಡ ಅಲೆ, ಅವರನ್ನು ವರ್ಣಿಸಲಸದಳವಾದ ಪರಮಾನಂದದ ಸ್ಥಿತಿಗೆ ಏರಿಸಿತು.
ಕೆಲವು ಕ್ಷಣ ನಂತರ, ರಾಧೆ ಕುಳಿತು, ತನ್ನ ತಲೆಗೂದಲನ್ನು ಸರಿಮಾಡಲು ಆರಂಭಿಸಿದಳು.
"ಕೃಷ್ಣ, ನಮ್ಮಿಬ್ಬರ ಮದುವೆ ಆಗುವುದು ಯಾವಾಗ? ನಿನ್ನಿಂದ ದೂರವಿರುವುದು ನನ್ನಿಂದ ಸಾಧ್ಯವಿಲ್ಪ".
ಕೃಷ್ಣ ಮುಗುಳ್ನಕ್ಕನು. "ನಾವು ಸದಾ ಜೊತೆಯಲ್ಲಿಯೇ ಇರೋಣ. ಅಂದಹಾಗೆ, ನಾವು ಗಂಧರ್ವರ ರೀತಿಯಲ್ಲಿ ಇಂದು ಮದುವೆಯಾಗಿದ್ದೇವೆ. ಒಬ್ಬರಿಗೊಬ್ಬರು ಶರೀರ, ಒಬ್ಬರಿಗೊಬ್ಬರು ಉಸಿರು".
ರಾಧೆ, "ಏನೇನೋ ಅರ್ಥವಿಲ್ಲದ ಮಾತುಗಳನ್ನಾಡಬೇಡ. ನಾವು ಗಂಧರ್ವರ ಸಂಪ್ರದಾಯದಂತೆ ಹೇಗೆ ಮದುವೆಯಾಗಲು ಸಾಧ್ಯ?” ಎಂದು ಪ್ರಶ್ನಿಸಿದಳು.
"ಕೆಲವು ಕ್ಷಣಗಳಿಗೆ ಮುಂಚೆ ನಾವು ಮದುವೆ ಆಗಲಿಲ್ಲವೇ?" ಎಂದ ಕೃಷ್ಣ.
"ಆದರೆ ನೀನೇನೂ ರಾಜರ ವಂಶದವನಲ್ಲವಲ್ಲಾ!". ಕೃಷ್ಣ ನಕ್ಕು ಅವಳ ರೆಪ್ಪೆಗಳಿಗೆ ಮುತ್ತಿಟ್ಟನು.
"ರಾಧೆ, ನಾನೂ ರಾಜ ವಂಶದವನಾಗಿದ್ದರೆ... ?” ಎಂದು ಅವಳನ್ನು ಅಣಕಿಸುವವನಂತೆ ಕೇಳಿದನು.
"ನೀನಂತೂ ಸದಾ ನನ್ನ ರಾಜಕುಮಾರನೇ ಹೌದು, ಕೃಷ್ಣಾ. ನೀನೇ ನನ್ನ ಗೋವಿಂದ. ಗೊಲ್ಲರ ರಾಜಕುಮಾರ. ಹಾಗಾಗಿ ನೀನು ಹೀಗೇ ಇರು ಎಂದೇ ನನ್ನ ಆಸೆ".
"ರಾಧೆ, ಕೇಳು. ನಾನು ಗೊಲ್ಲನಲ್ಲ. ನಾನು ರಾಜಕುಮಾರ - ನೀನು ರಾಜಕುಮಾರಿ" ಎಂದನು ಗಂಭೀರನಾಗಿ.
ಅವಳಿಗೆ ಆಶ್ವರ್ಯವಾಯಿತು. ಅವನು ಹೇಳಿದ್ದು ನಿಜವೇ ಎನ್ನುವಂತೆ ಅವನನ್ನೇ ದೃಷ್ಟಿಸಿದಳು.
"ಹಾಗೆ ನನ್ನನ್ನು ದುರುಗುಟ್ಟಿ ನೋಡಬೇಡ, ರಾಧೆ. ನಾನು ನಾಳೆ ಮಧುರೆಗೆ ಹೋಗುತ್ತಿರುವ ವಿಷಯ ನಿನಗೆ ತಿಳಿದಿದೆ. ಸುಮಾರು ದಿನಗಳವರೆಗೆ ನಾನು ಬರದೇ ಇರಬಹುದು" ಎಂದ ಕೃಷ್ಣ.
"ಇಲ್ಲ, ಇಲ್ಲ, ನೀನು ಬರಲೇಬೇಕು. ನನಗಾಗಿ ಬಾ".
"ರಾಧೆ, ನಾನು ನಿನ್ನನ್ನು ಇಲ್ಲಿಗೆ ಕರೆತಂದದ್ದು, ಕೆಲವರಿಗೆ ಮಾತ್ರ ತಿಳಿದಿರುವ ಒಂದು ಗುಟ್ಟನ್ನು ಹೇಳುವುದಕ್ಕೆಂದೇ ಹೌದು. ......"
(ಕೆ. ಎಂ. ಮುನ್ಷಿ ಅವರ ಕೃಷ್ಣಾವತಾರದಿಂದ ಒಂದು ಆಯ್ದ ಭಾಗ)

ಕಾಮೆಂಟ್‌ಗಳು