ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯುಕ್ತೇಶ್ವರ ಗಿರಿ


 ಶ್ರೀ ಯುಕ್ತೇಶ್ವರ ಗಿರಿ


ಶ್ರೀ ಯುಕ್ತೇಶ್ವರ ಗಿರಿ ಅವರು ಮಹಾನ್ ತಪಸ್ವಿಗಳಾಗಿ, 'ಆಟೊಬಯಾಗ್ರಫಿ ಆಫ್ ಯೋಗಿ' ಕೃತಿಯಿಂದ ವಿಶ್ವಪ್ರಸಿದ್ಧರಾದ ಪರಮಹಂಸ ಯೋಗಾನಂದರ ಗುರುಗಳಾಗಿ ಖ್ಯಾತರಾಗಿದ್ದಾರೆ. ಪರಮಹಂಸ ಯೋಗಾನಂದರು ಇವರನ್ನು 'ಜ್ಞಾನಾವತಾರಿ'  ಎಂದು ಭಕ್ತಿಯಿಂದ ಸ್ಮರಿಸಿದ್ದಾರೆ.

 ಶ್ರೀ ಯುಕ್ತೇಶ್ವರ ಗಿರಿ ಅವರ ಪೂರ್ವಾಶ್ರಮದ ಹೆಸರು ಪ್ರಿಯಾನಾಥ ಕರಾರ್. ಇವರು 1855ರ ಮೇ 10ರಂದು ಸಿರಾಂಪುರ್ ಎಂಬಲ್ಲಿ ಜನಿಸಿದರು.  ತಂದೆ ಕ್ಷೇತ್ರನಾಥ ಕರಾರ್.  ತಾಯಿ  ಕದಂಬಿನಿ. 

ಬಹಳ ಸಣ್ಣ ವಯಸ್ಸಿನಲ್ಲೇ ತಮ್ಮ ತಂದೆಯನ್ನು ಕಳೆದುಕೊಂಡ ಪ್ರಿಯಾನಾಥ ಕರಾರ್ ತಮ್ಮ ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಯಿತು. ಸಿರಾಂಪುರದ ಕ್ರೈಸ್ತ ಮಿಶನರಿ ಕಾಲೇಜಿನಲ್ಲಿ ಕಲಿಯುವಾಗ ಬೈಬಲ್ ಕುರಿತಾಗಿ ಆಸಕ್ತಿಯನ್ನು ತಳೆದರು. ಎರಡು ವರ್ಷ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಸಹಾ ಓದಲಿಕ್ಕೆ ಹೋಗಿದ್ದರು.  ಇವರು ಕಾಲೇಜು ಶಿಕ್ಷಣವನ್ನು ಮುಗಿಸಿದ ಬಳಿಕ ಮದುವೆಯಾಗಿ ಒಂದು ಮಗಳನ್ನು ಪಡೆದಿದ್ದರು.

1884ರಲ್ಲಿ ಪ್ರಿಯಾನಾಥರು ವಾರಣಾಸಿಯ ಲಾಹಿರಿ ಮಹಾಶಯರನ್ನು ಭೇಟಿಯಾದರು. ತದನಂತರ ಅವರಿಂದ ಕ್ರಿಯಾಯೋಗ ದೀಕ್ಷೆಯನ್ನು ಪಡೆದು ಶ್ರೀಯುಕ್ತೇಶ್ವರ ಗಿರಿ ಎಂಬ ಹೆಸರಿನಿಂದ  ಅವರ ಶಿಷ್ಯರಾದರು. 1894ರ ಅಲಹಾಬಾದಿನ ಕುಂಭಮೇಳದಲ್ಲಿ ತಮ್ಮ ಪರಮಗುರುಗಳಾದ ಮಹಾವತಾರಿ ಬಾಬಾಜಿಯವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಅವರು ಪ್ರಿಯಾನಾಥರಿಗೆ ಯೋಗ ಮತ್ತು ಬೈಬಲ್ ನಡುವೆ ಇರುವ ವೈಜ್ಞಾನಿಕ ಸಂಬಂಧಗಳ ಕುರಿತಾಗಿ ಕೃತಿ ರಚಿಸಲು ಪ್ರೇರಣೆ ನೀಡಿದರು. ಅದೇ ವರ್ಷ ಅವರು ಈ ಕೃತಿಯನ್ನು ಮುಗಿಸಿದರು, ಅದನ್ನು 'ದಿ ಹೋಲಿ ಸೈನ್ಸ್' ಎಂದು ಹೆಸರಿಸಿದರು.

ಶ್ರೀ ಯುಕ್ತೇಶ್ವರ ಗಿರಿ 1936ರ ಮಾರ್ಚ್ 9ರಂದು ನಿಧನರಾದರು.  ಶ್ರೀ ಯುಕ್ತೇಶ್ವರರ ಮಹಾಸಮಾಧಿಯ ಸಂದರ್ಭದಲ್ಲಿ ಕೊಲ್ಕತಾದ ಪ್ರಮುಖ ದಿನಪತ್ರಿಕೆಯಾದ "ಅಮೃತ್ ಬಜಾರ್ ಪತ್ರಿಕಾ" ಅವರಿಗೆ ಶ್ರದ್ದಾಂಜಲಿ ಸಲ್ಲಿಸುತ್ತಾ "ಭಗವದ್ಗೀತೆಯ ಸುಪ್ರಸಿದ್ದ ವ್ಯಾಖ್ಯಾನಕಾರರಲ್ಲಿ ಒಬ್ಬರಾದ ಸ್ವಾಮೀಜಿಯವರು ವಾರಣಾಸಿಯ ಯೋಗಿರಾಜ ಶ್ರೀ ಶ್ಯಾಮ ಚರಣ ಲಾಹಿರಿ ಮಹಾಶಯರ ಶಿಷ್ಯರು. ಅವರು ಭಾರತದಲ್ಲಿ ಹಲವು ಯೋಗ ಸತ್ಸಂಗ ಕೇಂದ್ರಗಳ ಸ್ಥಾಪಕರಾಗಿದ್ದರು. ತಮ್ಮ ಪ್ರಮುಖ ಶಿಷ್ಯರಾದ ಪರಮಹಂಸ ಯೋಗಾನಂದರು ಪಶ್ಚಿಮಕ್ಕೆ ಒಯ್ದ ಯೋಗಿಕ ಕಾರ್ಯಚಟುವಟಿಕೆಗಳಿಗೆ ಹಿನ್ನೆಲೆಯಲ್ಲಿ ಮಹಾಪ್ರೇರಕ ಶಕ್ತಿಯಾಗಿದ್ದರು. ಶ್ರೀ ಯುಕ್ತೇಶ್ವರರ ಭವಿಷ್ಯ ನಿರ್ಮಾಣಶಕ್ತಿ ಹಾಗೂ ಗಾಢವಾದ ಸಿದ್ಧಿಯೇ ಸ್ವಾಮಿ ಯೋಗಾನಂದರನ್ನು ಪ್ರೇರಿಸಿ ಸಮುದ್ರಗಳನ್ನು ದಾಟಿ ಹೋಗಿ ಅಮೇರಿಕಾದಲ್ಲಿ ಭಾರತದ ಸಂತರ ಸಂದೇಶವನ್ನು ಪ್ರಚುರಪಡಿಸುವಂತೆ ಮಾಡಿತು" ಎಂದು ಬರೆದಿತ್ತು.

ಭಗವದ್ಗೀತೆ ಮತ್ತಿತರ ಧರ್ಮಗ್ರಂಥಗಳ ಮೇಲೆ ಶ್ರೀ ಯುಕ್ತೇಶ್ವರ ಗಿರಿ ಅವರು ಬರೆದಿರುವ ವ್ಯಾಖ್ಯಾನವನ್ನು ನೋಡಿದರೆ ಪೌರಾತ್ಯ ಹಾಗೂ ಪಾಶ್ಚ್ಯಾತ್ಯ ದರ್ಶನದ ಮೇಲೆ ಶ್ರೀ ಯುಕ್ತೇಶ್ವರರು ಎಂಥ ಗಾಢವಾದ ಅಧಿಕಾರವನ್ನು ಪಡೆದಿದ್ದರೆಂದು ಪ್ರಮಾಣಿತವಾಗುತ್ತದೆ. ಅಲ್ಲದೆ ಪೂರ್ವ ಪಶ್ಚಿಮಗಳನ್ನು ಬೆಸೆಯಲು ಬಯಸುವವರಿಗೆ ಇದು ಕಣ್ಣು ತೆರೆಸಿದಂತಾದೀತು. ಎಲ್ಲಾ ಧಾರ್ಮಿಕ ಪಂಥಗಳನ್ನು ಒಟ್ಟುಗೂಡಿಸಬೇಕೆಂದು ಬಯಸುತ್ತಿದ್ದುದರಿಂದ ಶ್ರೀ ಯುಕ್ತೇಶ್ವರರು ಧರ್ಮದಲ್ಲಿ ವೈಜ್ಞಾನಿಕ ಧೋರಣೆಯನ್ನು ಬೋಧಿಸಲು ಅನುಕೂಲವಾಗುವಂತೆ ಎಲ್ಲಾ ಪಂಥಗಳ ಮುಖ್ಯಸ್ಥರ ಸಹಕಾರವನ್ನು ಪಡೆದು 'ಸಾಧು ಸಭಾ 'ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು.

ಶ್ರೀ ಯುಕ್ತೇಶ್ವರರು 1936ರ ಮಾರ್ಚ್ 9ರಂದು ಈ ಲೋಕವನ್ನಗಲಿದರು. 

On the birth anniversary of Great Monk and Guru Sri Yukteswar Giri 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ