ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾಗಮಣಿ ಶ್ರೀನಾಥ್.


ಮೈಸೂರು ಜಿ. ಎನ್. ನಾಗಮಣಿ ಶ್ರೀನಾಥ್.

ವಿದುಷಿ ಡಾ. ಮೈಸೂರು ಜಿ. ಎನ್. ನಾಗಮಣಿ ಶ್ರೀನಾಥ್. ಅವರು ಹೆಸರಾಂತ ಸಂಗೀತಗಾರ್ತಿ, ಗುರು, ಸಂಘಟನಾ ಚತುರೆ, ಸಂಗೀತ ಸಂಯೋಜಕಿ ಮತ್ತು ಬರಹಗಾರ್ತಿ.  ಇವರು ತಮ್ಮ ರೋಮಾಂಚಕ ಸುಮಧುರ ಧ್ವನಿ, ಗಾಯನ ಕೌಶಲ್ಯ, ಶ್ರುತಿಗೆ ವಿವೇಚನಾಶೀಲ ಒಲವು, ಸಾಂಪ್ರದಾಯಿಕತೆಯೊಂದಿಗೆ ಬೆರೆತ ಮನೋಧರ್ಮ, ಚತುರ ಸೂಕ್ಷ್ಮ ನಿರೂಪಣೆ, ಎದ್ದುಕಾಣುವ "ತಾಳ" ಮತ್ತು ನೀತಿಬೋಧಕ ಜ್ಞಾನ ಮುಂತಾದವುಗಳಂದ  ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಗೌರವಾನ್ವಿತರಾಗಿದ್ದಾರೆ. 

ಏಪ್ರಿಲ್ 7, ನಾಗಮಣಿ ಶ್ರೀನಾಥ್ ಅವರ ಜನ್ಮದಿನ.  ಇವರು ಜನಿಸಿದ್ದು ಜೋಡಿ ಗುಬ್ಬಿ ಎಂಬ ಹಳ್ಳಿಯಲ್ಲಿ.  ಇವರು 5 ವರ್ಷ ವಯಸ್ಸಿನಲ್ಲೇ ತಮ್ಮ ತರಬೇತಿಯನ್ನು ಪ್ರಾರಂಭಿಸಿದರು.  9ನೇ  ವಯಸ್ಸಿನಲ್ಲಿ ಇವರ ಮೊದಲ ಸಂಗೀತ ಕಚೇರಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಹೀಗೆ ಆರಂಭಗೊಂಡ ಇವರ ಸಾಧನೆ ನಿರಂತರ ಮೇರುಮುಖಿಯಾಗಿ ಮುಂದುವರೆದಿದೆ.

ನಾಗಮಣಿ ಶ್ರೀನಾಥ್ ಅವರು "ಸಂಗೀತಗಾರರ ಸಂಗೀತಗಾರ" ಎಂದು ಪ್ರಖ್ಯಾತರಾದ ವಿದ್ವಾನ್ ರಾಮನಾಡ್ ಕೃಷ್ಣನ್ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಸಂಗೀತ ಸಾಧನೆ ಮಾಡಿದವರು. ಮೈಸೂರು ವಿಶ್ವವಿದ್ಯಾಲಯದಿಂದ ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಚಿನ್ನದ ಪದಕದೊಂದಿಗೆ ಎಂ.ಎ. (ಸಂಗೀತ), ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಚಿನ್ನದ ಪದಕದೊಂದಿಗೆ ಕರ್ನಾಟಕ ಸರ್ಕಾರದ ವಿದ್ವತ್ ಪದವಿ ಗಳಿಕೆ, ಪ್ರಥಮ ರ್‍ಯಾಂಕ್ ಸಾಧನೆಯಲ್ಲಿ ಚಿನ್ನದ ಪದಕದೊಂದಿಗೆ ತಮಿಳುನಾಡು ಸರ್ಕಾರದ ಸಂಗೀತ ಸ್ನಾತಕೋತ್ತರ ಡಿಪ್ಲೋಮಾ ಗಳಿಕೆ ಇವರ ಶೈಕ್ಷಣಿಕ ಸಾಧನೆಗಳಾಗಿವೆ. ಇವರಿಗೆ ತುಮಕೂರು ವಿಶ್ವವಿದ್ಯಾಲಯದಿಂದ  ಡಾಕ್ಟರೇಟ್ ಗೌರವ ಸಂದಿದೆ. 

ರಾಮನಾಡ್ ಕೃಷ್ಣನ್ ಅವರಿಂದ ಗುರುಕುಲ ಪದ್ಧತಿಯಲ್ಲಿ ಸಂಗೀತ ಸಾಧನೆಯ ಜೊತೆಗೆ, ವಿದ್ವಾನ್ ಅರಕೆರೆ ನಾರಾಯಣ ರಾವ್, ವಿದ್ವಾನ್ ರಾಮರತ್ನಂ, ವಿದ್ವಾನ್ ಟಿ.ಎಂ. ತ್ಯಾಗರಾಜನ್, ವಿದ್ವಾನ್ ಡಿ.ಕೆ. ಜಯರಾಮನ್, ವಿದ್ವಾನ್ ಕೆ.ವಿ. ನಾರಾಯಣಸ್ವಾಮಿ, ವಿದ್ವಾನ್ ಟಿ.ಎನ್. ಕೃಷ್ಣನ್, ವಿದುಷಿ ಬೃಂದಾ, ವಿದುಷಿ ಮುಕ್ತಾ, ವಿದುಷಿ ಗೌರಿ ಕುಪ್ಪುಸ್ವಾಮಿ ಮತ್ತು ವಿದ್ವಾನ್ ಆರ್. ವೆಂಕಟೇಶ್ವರನ್ ಮುಂತಾದ ಮೇರುಕಲಾವಿದರಲ್ಲಿಯೂ ವೈವಿಧ್ಯಪೂರ್ಣ ಮಾರ್ಗದರ್ಶನವನ್ನು ಗಳಿಸಿ ತಮ್ಮ ಸಂಗೀತಕ್ಕೆ ಮೆರುಗು ತಂದುಕೊಂಡಿದ್ದಾರೆ.

ನಾಗಮಣಿ ಶ್ರೀನಾಥ್ ಅವರಿಗೆ  ಮೂರು ಬಾರಿ ಮದ್ರಾಸ್ ಸಂಗೀತ ಅಕಾಡೆಮಿಯಿಂದ ಅತ್ಯುತ್ತಮ ಸಂಗೀತಗಾರ್ತಿ ಗೌರವ, ಹೈದರಾಬಾದ್ ತೆಲುಗು ಅಕಾಡೆಮಿಯಿಂದ 

ಅತ್ಯುತ್ತಮ ಸಂಗೀತಗಾರ್ತಿ ಗೌರವ, ಸಂಗೀತದಲ್ಲಿ ಉನ್ನತ ಕಲಿಕೆಗಾಗಿ ಕೇಂದ್ರ ಸರ್ಕಾರದ ವಿದ್ಯಾರ್ಥಿವೇತನ, ಭಾರತದ ಉಪರಾಷ್ಟ್ರಪತಿಗಳಿಂದ ಗಣಕಲಾ ಪರಿಷತ್ ವತಿಯಿಂದ ಗಣಕಲಾಶ್ರೀ, ಉಡುಪಿ ಪೇಜಾವರ ಮಠಾಧೀಶರಿಂದ ಸಂಗೀತ ಸರಸ್ವತಿ, 

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ,  ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

ನಾಗಮಣಿ ಶ್ರೀನಾಥ್ ಅವರ ಕಚೇರಿಗಳು ರೇಡಿಯೋ ಸಂಗೀತ ಸಮ್ಮೇಳನಗಳು,  ರಾಷ್ಟ್ರೀಯ ಕಾರ್ಯಕ್ರಮಗಳು, ದೆಹಲಿ ದೂರದರ್ಶನದ 'ರಾಷ್ಟ್ರೀಯ ಏಕೀಕರಣಕ್ಕಾಗಿನ ಏಕತೆಯ ಸ್ಪಿರಿಟ್' ಕನ್ಸರ್ಟ್‌ಗಳು, 5 ಬಾರಿ.ಸಾರ್ಕ್ ಸಾಂಸ್ಕೃತಿಕ ಉತ್ಸವ, ದಕ್ಷಿಣ ಮಧ್ಯ ವಲಯ ರಾಷ್ಟ್ರೀಯ ಉತ್ಸವ, ಮೈಸೂರು ಅರಮನೆಯ ದಸರಾ ಉತ್ಸವ, ಭಾರತದಾದ್ಯಂತ ಅನೇಕ ಪ್ರತಿಷ್ಠಿತ ಸಭೆಗಳು, ವಿಶ್ವವಿದ್ಯಾಲಯಗಳು, ಸಮ್ಮೇಳನಗಳು, ರಾಷ್ಟ್ರೀಯ ಉತ್ಸವಗಳು ಸೇರಿದಂತೆ ದೇಶದಾದ್ಯಂತ ಮತ್ತು ವಿಶ್ವದ ಅನೇಕ ದೇಶಗಳಲ್ಲಿ ಸಂಗೀತ ರಸಿಕರ ಮನತಣಿಸಿವೆ. 

ನಾಗಮಣಿ ಶ್ರೀನಾಥ್ ಅವರು ಹಲವಾರು ಆಡಿಯೋ ಕ್ಯಾಸೆಟ್‌ಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ಹರಿದಾಸ ಸಂಯೋಜನೆಯ ಪ್ರಚಾರಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರ ಧ್ವನಿಮುದ್ರಣಗಳಲ್ಲಿ ಹರಿದಾಸ ಕೀರ್ತನೆಗಳು, ಶ್ಲೋಕಗಳು, ವಚನಗಳು, ಸಂಗೀತ ರೂಪಕಗಳು, ಶಾಸ್ತ್ರೀಯ ಕರ್ನಾಟಕ ಸಂಗೀತ ಮತ್ತು ಜುಗಲ್ ಬಂದಿಗಳ ಕುರಿತು 20 ಕ್ಕೂ ಹೆಚ್ಚು ಡಿಸ್ಕ್‌ಗಳು ಸೇರಿವೆ.

ಬರಹಗಾರ್ತಿಯಾಗಿ ನಾಗಮಣಿ ಶ್ರೀನಾಥ್ ಅವರು ಶ್ಯಾಮಾಶಾಸ್ತ್ರಿ, ವೀಣಾ ಕುಪ್ಪೈಯರ್,  ತಿರುವಾಟಿಯೂರ್ ತ್ಯಾಗ ಅಯ್ಯರ್ ಮುಂತಾದವರ ಕುರಿತಾದ ಪುಸ್ತಕಗಳು;  ಸಂಗೀತ ವಿಷಯಗಳ ಕುರಿತು ಆಳವಾದ ಲೇಖನಗಳು ಮತ್ತು ಗ್ರಂಥಗಳು ಹಾಗೂ 'ಅಂತರಾಳದ ಆಲಾಪನೆ' ಎಂಬ ಆತ್ಮಕಥನ ಪ್ರಕಟಿಸಿದ್ದಾರೆ. 

ನಾಗಮಣಿ ಶ್ರೀನಾಥ್ ಅವರು ಅಪರೂಪದ ರಾಗಗಳಲ್ಲಿ ವರ್ಣಗಳು, ತಿಲ್ಲಾನಗಳು ಮತ್ತು ಕೃತಿಗಳ ಸಂಯೋಜಕರಾಗಿದ್ದು, ಸಂಸ್ಕೃತ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಂಯೋಜನೆಗಳನ್ನು ರಚಿಸಿದ್ದಾರೆ.

ಅನೇಕ ಸಂಗೀತಗಾರರು ಇವರ ಸಂಯೋಜನೆಗಳನ್ನು ತಮ್ಮ ಗಾಯನದಲ್ಲಿ ಪ್ರದರ್ಶಿಸಿದ್ದಾರೆ.  ನಾಗಮಣಿ ಶ್ರೀನಾಥ್ ಅವರು ಅನೇಕ ನೃತ್ಯ ಕಲಾವಿದರಿಗೆ ತಿಲ್ಲಾನಕ್ಕಾಗಿ ನೃತ್ಯ ಸಂಯೋಜನೆಗಳನ್ನು ಮಾಡಿದ್ದಾರೆ. ಅನೇಕ ಸಂಗೀತ ರೂಪಕಗಳು ಮತ್ತು ನೃತ್ಯ ನಾಟಕಗಳನ್ನು ನಿರ್ದೇಶಿಸಿದ್ದಾರೆ.ಬೆಂಗಳೂರಉ ದೂರದರ್ಶನದ ಜನಪ್ರಿಯ ಧಾರಾವಾಹಿ "ಮೈಸೂರು ವಾಗ್ಗೇಯಕಾರರು" ಅನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ

ನಾಗಮಣಿ ಶ್ರೀನಾಥ್ ಅವರು ವಿಶಾಲ ಶಿಷ್ಯರ ಗುಂಪನ್ನು ಹೊಂದಿರುವ ಸಮರ್ಪಿತ ಗುರುವಾಗಿದ್ದು ಇವರ ಹೆಸರಾಂತ ಶಿಕ್ಷಕರು ತಮ್ಮ ಗುರುಕೀರ್ತಿಯನ್ನು ಎಲ್ಲೆಡೆ ಬೆಳಗಿದ್ದಾರೆ. 

ನಾಗಮಣಿ ಶ್ರೀನಾಥ್ ಅವರು ಕರ್ನಾಟಕ ಸರ್ಕಾರ, ದಸರಾ ಸಾಂಸ್ಕೃತಿಕ ಸಮಿತಿ,  ಕರ್ನಾಟಕ ಸಂಗೀತ ನಾಟ್ಯ ಅಕಾಡೆಮಿ, ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿ ಹಾಗೂ ಅನೇಕ ಪ್ರತಿಷ್ಠಿತ ಸಮಿತಿಗಳು ಮತ್ತು ಸಂಗೀತ ಸಭೆಗಳ ಸದಸ್ಯರಾಗಿ ಅಮೂಲ್ಯ ಸೇವೆ ನೀಡುತ್ತ ಬಂದಿದ್ದಾರೆ.

ಸಾಧಕರಾದ ವಿದುಷಿ ನಾಗಮಣಿ ಶ್ರೀನಾಥ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday to our Great Musician Vidushi Dr. Gn Nagamani Srinath 🌷🙏🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ