ಗೀತಾ ಕುಂದಾಪುರ
ಗೀತಾ ಕುಂದಾಪುರ ಅವರು ಬಹುಮುಖಿ ಸದಭಿರುಚಿಗಳುಳ್ಳ, ಅಪಾರ ಕನ್ನಡ ಪ್ರೀತಿಯ, ಅನುಪಮ ಬರಹಗಾರ್ತಿ.
ಜೂನ್ 23, ಗೀತಾ ಅವರ ಜನ್ಮದಿನ. ಇವರ ಬಾಲ್ಯ ಹಾಗೂ ವಿದ್ಯಾಭ್ಯಾಸ ಕರಾವಳಿಯ ಕುಂದಾಪುರದಲ್ಲಿ ನಡೆಯಿತು. ಇವರು ಓದಿದ್ದು ಎಂ.ಕಾಮ್.
ಗೀತಾ ಅವರು ಕುಟುಂಬದೊಡನೆ ಸುಮಾರು 18 ವರ್ಷಗಳ ಕಾಲ ಗಲ್ಫ್ ದೇಶವಾದ ಕತಾರಿನಲ್ಲಿ ನೆಲೆಸಿದ್ದು, ಅಲ್ಲಿ ಪ್ಲಾನರ್ ಅಂಡ್ ಪ್ರಾಜೆಕ್ಟ್ ಕಂಟ್ರೋಲರ್ ಆಗಿ ಎಂಜಿನಿಯರಿಂಗ್ ಕನ್ಸಲ್ಟೆನ್ಸಿಯಲ್ಲಿ ವೃತ್ತಿ ನಿರ್ವಹಿಸಿದ್ದರು. ಮುಂದೆ ಇವರು ಬೆಂಗಳೂರಿನ ನಿವಾಸಿಯಾಗಿದ್ದಾರೆ.
ಗೀತಾ ಕುಂದಾಪುರ ಅವರ ಹವ್ಯಾಸಗಳಲ್ಲಿ ಪ್ರವಾಸ ಪ್ರಮುಖವಾದುದು. ಇವರು 35ಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾರೆ. ಇವರ ಪ್ರವಾಸಗಳ ಕುರಿತಾದ ಲೇಖನಗಳು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ನಮ್ಮ ದೇಶದ ಇತಿಹಾಸ, ಸಂಸ್ಕೃತಿ, ವಾಸ್ತುಶಿಲ್ಪಕ್ಕೆ ಕನ್ನಡಿಯಾಗುವ ಕೋಟೆಗಳು, ದೇವಾಲಯಗಳು, ಸ್ಮಾರಕಗಳ ಕುರಿತಾಗಿಯೂ ಇವರ ಆಸಕ್ತಿಗಳು ಅಪಾರ. ತೋಟಗಾರಿಕೆ ಇವರ ಮತ್ತೊಂದು ಆಪ್ತ ಹವ್ಯಾಸವಾಗಿದ್ದು, ತಮಗೆ ಸೇರಿದ
ಖಾಲಿ ನಿವೇಶನದಲ್ಲಿ 10ಕ್ಕೂ ಹೆಚ್ಚು ಬಗೆಯ ಹಣ್ಣಿನ ಗಿಡಗಳಲ್ಲದೆ, ಹೂವಿನ ಗಿಡ, ಸೊಪ್ಪು ತರಕಾರಿಗಳನ್ನು ಬೆಳೆಸುವುದಕ್ಕಾಗಿ ತಮ್ಮ ದಿನದ ಒಂದಷ್ಟು ಹೊತ್ತನ್ನು ಮೀಸಲಿರಿಸುತ್ತಾರೆ. ಬೆಂಗಳೂರು ಉಳ್ಳಾಲದ ರೋಟರಿ ಸದಸ್ಯೆಯಾಗಿರುವ ಇವರು ಇತ್ತೀಚಿನ ಪರಿಸರ ದಿನಾಚರಣೆಯಂದು ನುಗ್ಗೆ ಸಸಿಗಳನ್ನು ಸುತ್ತಮುತ್ತ ಇರುವ ಶಾಲೆಗಳಲ್ಲಿ ವಿತರಿಸಿದ್ದಾರೆ.
ಗೀತಾ ಕುಂದಾಪುರ ಅವರು ಕಳೆದ 8 - 10 ವರ್ಷಗಳಿಂದ ಬರವಣಿಗೆಯಲ್ಲಿ ಸಕ್ರಿಯರಾಗಿದ್ದು, 120ಕ್ಕೂ ಹೆಚ್ಚು ಕಥೆಗಳು, 250ಕ್ಕೂ ಹೆಚ್ಚು ಲೇಖನಗಳು, ಲಹರಿ, ಪ್ರಬಂಧಗಳು, ಪ್ರವಾಸ ಕಥನಗಳನ್ನು ಬರೆದಿದ್ದು ಇವೆಲ್ಲವೂ ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ಕಥೆಗಳು ತೆಲುಗಿಗೂ ಭಾಷಾಂತರಗೊಂಡು ಪ್ರಕಟವಾಗಿವೆ. ಆಕಾಶವಾಣಿ ಮಂಗಳೂರು, ಬೆಂಗಳೂರು, ಮೈಸೂರಿನಿಂದ ಇವರ ಸಂದರ್ಶನ ಹಾಗೂ ಕಥೆಗಳು ಪ್ರಸಾರವಾಗಿವೆ.
ಇದುವರೆವಿಗೂ ಗೀತಾ ಕುಂದಾಪುರ ಅವರ 9 ಕೃತಿಗಳು ಪ್ರಕಟವಾಗಿವೆ. ಅಪ್ರಮೇಯ, ಚಿತ್ತದಲ್ಲಿ ಮೂಡಿದ ಚಿತ್ತಾರ, ಒಂಟಿ ಪಯಣಿಗರು, ಪಾಂಚಾಲಿಯಾಗಲಾರೆ, ಬ್ಲಡ್ ಮನಿ ಇವರ ಕಥಾ ಸಂಕಲನಗಳು. ದ್ವೀಪಗಳತ್ತ ಯಾನ, ಕಡಲ್ಗಳ್ಳರ ಸರಹದ್ದಿನಲ್ಲಿ- ರಷ್ಯಾ ಮತ್ತು ಸ್ಕ್ಯಾಂಡಿನೇವಿಯ ಪ್ರವಾಸಕಥನ, ಕಲ್ಲುಗಳೂ ಕತೆ ಹೇಳುವ ಕಾಂಬೋಡಿಯಾ ಮತ್ತು ವಿಸ್ಮಯದ ವಿಯೆಟ್ನಾಂ ಇವರ ಪ್ರವಾಸ ಕಥನಗಳು. 'ಪಾರ್ಲರ್ ಹುಡುಗಿಯೂ, ಮರಳುಗಾಡಿನ ಮಹಲು' ಇವರ ಕಾದಂಬರಿ.
ಗೀತಾ ಕುಂದಾಪುರ ಅವರಿಗೆ ಪ್ರಜಾವಾಣಿಯ ಸಂಕ್ರಾಂತಿ ಪ್ರಬಂಧ ಸ್ಪರ್ಧೆ, ತ್ರಿವೇಣಿ ಮನೋವೈಜ್ಞಾನಿಕ ಕಥಾಸ್ಪರ್ಧೆ, ಸಮಾಜಮುಖಿ ಕಥಾಸ್ಪರ್ಧೆ, ಮುಂಬಯಿಯ ಮೋಗವೀರ ಕಥಾಸ್ಪರ್ಧೆ, ಗುರುಕುಲ ಪ್ರತಿಷ್ಠಾನದ ಕಥಾಸ್ಪರ್ಧೆ, ಬೃಂದಾವನ ಕನ್ನಡಕೂಟ ನ್ಯೂಜೆರ್ಸಿಯವರ ಕಥಾಸ್ಪರ್ಧೆ, ವ್ಯಾಸರಾಯ ಬಲ್ಲಾಳರ ಸ್ಮರಣಾರ್ಥ ಕಥಾಸ್ಪರ್ಧೆಯಲ್ಲಿ ಬಹುಮಾನಗಳು ಸಂದಿವೆ. ಕಡಲ್ಗಳ್ಳರ ಸರಹದ್ದಿನಲ್ಲಿ ಪ್ರವಾಸ ಕಥನಕ್ಕೆ ʻಲೇಖಿಕಾ ಸಾಹಿತ್ಯ ವೇದಿಕೆʼಯಿಂದ ಪುಸ್ತಕ ಬಹುಮಾನ ಮತ್ತು 'ಪಾಂಚಾಲಿಯಾಗಲಾರೆ’ ಕಥಾಸಂಕಲನಕ್ಕೆ ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘದ ದತ್ತಿನಿಧಿ ಪ್ರಶಸ್ತಿ ಸಂದಿದೆ. 'ಪಾರ್ಲರ್ ಹುಡುಗಿಯೂ, ಮರಳುಗಾಡಿನ ಮಹಲು’ ಕಾದಂಬರಿಗೆ ʻಅವ್ವ ದತ್ತಿನಿದಿʼ ಪ್ರಶಸ್ತಿ ಸಂದಿದೆ.
ಸಹೃದಯಿ, ಸಾಧಕಿ ಗೀತಾ ಕುಂದಾಪುರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Geetha Kundapura 🌷🙏🌷

ಕಾಮೆಂಟ್‌ಗಳು