ಹೇಮಾ ಪ್ರಭಾತ್
ಹೇಮಾ ಪ್ರಭಾತ್
ಪ್ರಭಾತ್ ಕಲಾವಿದರು ಕುಟುಂಬ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ನೀಡಿರುವ ಕೊಡುಗೆಗಳು ಅಪಾರವಾದದ್ದು. ಈ ಅಮೂಲ್ಯ ಕೊಡುಗೆಗಳ ನಡುವೆ ಕಂಗೊಳಿಸುವ ಕಂಗಳ ಮಧುರ ಮಂದಸ್ಮಿತ ಮೊನಾಲಿಸಾ ನಗೆಯ, ಅಭಿನಯ ಮತ್ತು ನೃತ್ಯ ಕಲಾವಿದೆ ಹೇಮಾ ಪ್ರಭಾತ್.
ಜೂನ್ 26, ಹೇಮಾ ಅವರ ಜನ್ಮದಿನ. ಅವರ ತಾತಾ ಟಿ.ವಿ. ಗೋಪೀನಾಥ ದಾಸರು ತಮ್ಮ ಸಹೋದರರೊಂದಿಗೆ ಪ್ರಭಾತ್ ಕಲಾವಿದರು ಸಂಸ್ಥಾಪಕರಾಗಿ ಮಹಾನ್ ಕಲಾವಿದರಾಗಿ, ವಿದ್ವಾಂಸರಾಗಿ ಮತ್ತು ಅಮೂಲ್ಯ ನೃತ್ಯರೂಪಕಗಳನ್ನು ನಿರ್ಮಿಸಿದವರಾಗಿ ಅಮರರಾಗಿದ್ದಾರೆ.
ನೃತ್ಯ ಮತ್ತು ಅಭಿನಯ ಕಲಾಕುಸುಮವಾಗಿ ಅರಳಿದ ಹೇಮಾ ಅವರು ಚಿತ್ರರಂಗ ಮತ್ತು ಕಿರುತೆರೆಯ ಉದ್ಯಮದ ಗಮನ ಸೆಳೆದು, ತಮ್ಮ ಪ್ರತಿಭೆಯಿಂದ ಜನಪ್ರಿಯರಾದರು. ಬಾಲನಟಿಯಾಗಿ 'ಸುವರ್ಣ ಸೇತುವೆ', 'ನಗ್ನ ಸತ್ಯ', 'ಮಹಾ ಪುರುಷ', 'ಜೀವನ ಚೈತ್ರ', 'ಗೋಲೀಬಾರ್' ಮುಂತಾದ ಚಿತ್ರಗಳಲ್ಲಿ ನಟಿಸಿದ ನಂತರ, ಓದಿನ ಕಡೆ ಗಮನ ಹರಿಸಿ, ಮುಂದೆ 'ದೊರೆ' ಚಿತ್ರದಲ್ಲಿ ನಾಯಕಿಯಾದರು.
ನಾಗತಿಹಳ್ಳಿ ಚಂದ್ರಶೇಖರ್ ಅವರ 'ಅಮೆರಿಕಾ! ಅಮೆರಿಕಾ!' ಚಿತ್ರದಲ್ಲಿನ ಹೇಮಾ ಅವರ ದಿವ್ಯ ನಗೆಯ ಅಭಿನಯವನ್ನು ಮರೆಯುವಂತೆಯೇ ಇಲ್ಲ. ವಿಜಯಕಂಕಣ, ಬಂಗಾರದ ಮನೆ, ಸಂಭ್ರಮ, ರವಿಮಾಮ ಅವರ ಅಭಿನಯದ ಇತರ ಚಿತ್ರಗಳಲ್ಲಿ ಸೇರಿವೆ. ಕೆಲವು ಕಿರುತೆರೆಯ ಧಾರಾವಾಹಿಗಳಿಗೂ ಇವರ ಅಭಿನಯ ಸಂದಿದೆ.
ನೃತ್ಯ ಕಲಾವಿದೆಯಾಗಿರುವ ಹೇಮಾ ಅವರು, ನೃತ್ಯಗುರುವಾಗಿಯೂ ತಮ್ಮ 'ಸುಕೃತೀಸ್' ನಾಟ್ಯಶಾಲೆಯ ಮೂಲಕ ಕಳೆದ 25 ವರ್ಷಗಳಲ್ಲಿ ಅಪಾರ ನೃತ್ಯ ಕಲಾವಿದರನ್ನು ತಯಾರು ಮಾಡಿದ್ದಾರೆ. ಪ್ರಭಾತ್ ಕಲಾವಿದರು ನೃತ್ಯರೂಪಕಗಳ ಸಂಯೋಜನೆಯಲ್ಲೂ ಇವರ ಸೇವೆ ಸಲ್ಲುತ್ತಿದೆ.
ದಿವ್ಯನಗೆಯ ಸಹೃದಯಿ ಹೇಮಾ ಪ್ರಭಾತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
Happy birthday Hema Prabhath 🌷🌷🌷

ಕಾಮೆಂಟ್‌ಗಳು