ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಲ್.ಪಿ.ಕುಲಕರ್ಣಿ

ಎಲ್.ಪಿ.ಕುಲಕರ್ಣಿ


ಶಿಕ್ಷಣ ಕ್ಷೇತ್ರದಲ್ಲಿರುವ ಎಲ್.ಪಿ. ಕುಲಕರ್ಣಿ ಅವರು ವಿಶೇಷವಾಗಿ ವಿಜ್ಞಾನ ಮತ್ತು ಗಣಿತ  ಬರಹಗಾರರಾಗಿದ್ದು, ಬಹುಮುಖಿ ಸಾಂಸ್ಕೃತಿಕ ಕಲಾಭಿರುಚಿಗಳನ್ನೂ ಮೈಗೂಡಿಸಿಕೊಂಡಿದ್ದಾರೆ.

ಜುಲೈ 4,  ಎಲ್.ಪಿ.ಕುಲಕರ್ಣಿ ಅವರ ಜನ್ಮದಿನ.  ಬಾಗಲಕೋಟೆ ಜಿಲ್ಲೆಯ ಹುನಗುಂದದ ಕೃಷಿ ಕುಟುಂಬದಲ್ಲಿ ಜನಿಸಿದ ಇವರು ನೆಲೆಸಿದ್ದು ಬಾದಾಮಿಯಲ್ಲಿ.  ತಂದೆ ಪ್ರಲ್ಹಾದ ಕುಲಕರ್ಣಿ ಅವರದು ಬೇಸಾಯವೃತ್ತಿ. ತಾಯಿ ಶೋಭಾ ಕುಲಕರ್ಣಿ ಗೃಹಿಣಿ.  
ಎಮ್.ಎಸ್.ಸಿ, ಬಿ.ಇಡಿ, ಪಿ ಜಿ ಸಿ ಜೆ ಎಮ್ ಸಿ (ಪತ್ರಿಕೋದ್ಯಮ) ಪದವೀಧರರಾದ ಇವರು ಸರಕಾರಿ ಶಾಲೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಓದು, ಬರವಣಿಗೆ, ಶಾಸ್ತ್ರೀಯ ತಬಲಾವಾದನ,ಚಿತ್ರಕಲೆ ಇವರ ನೆಚ್ಚಿನ ಹವ್ಯಾಸಗಳು. ಅಲ್ಲದೆ ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಚಲಿತ ವಿಜ್ಞಾನ-ತಂತ್ರಜ್ಞಾನಕ್ಕೆ, ಗಣಿತಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದಾರೆ.

ವಿಶ್ವವಾಣಿ ಪತ್ರಿಕೆಯಲ್ಲಿ 'ಟೆಕ್ ಸೈನ್ಸ್ 'ದಿನಕ್ಕೊಂದು ಪ್ರಶ್ನೆ', 'ಸವಿಸವಿ ನೆನಪು, ಸಾವಿರ ನೆನಪು', 'ತಿಳಿಯೋಣ'. ಸಂಯುಕ್ತ ಕರ್ನಾಟಕ ಪತ್ರಿಕೆಯ ಕಿಂದರಿ ಜೋಗಿ ಪುರವಣಿಯಲ್ಲಿ 'ಯಕ್ಷ ಪ್ರಶ್ನೆ', ಜಾಣರ ಗುರು ವಿದ್ಯಾರ್ಥಿ ಸಂಚಿಕೆಯಲ್ಲಿ 'ರಸಪ್ರಶ್ನೆ', 'ಜ್ಞಾನ ಲೋಕ'. ದಿ ಡೈಲಿ ನ್ಯೂಸ್ ಪತ್ರಿಕೆಯಲ್ಲಿ 'ಇ-ಸೈನ್ಸ್ ಕಾರ್ನರ್', ಪ್ರತಿನಿಧಿ ಪತ್ರಿಕೆಯಲ್ಲಿ 'ವಿಜ್ಞಾನ ಪ್ರಪಂಚ', 'ಸಂಡೆ ಸೈಂಟಿಸ್ಟ್', ಜನಮಿತ್ರ ಪತ್ರಿಕೆಯಲ್ಲಿ 'ವಿಜ್ಞಾನ ದೀವಿಗೆ' ಮುಂತಾದವು ಎಲ್.ಪಿ.ಕುಲಕರ್ಣಿ ಅವರ ಅಂಕಣ ಬರಹಗಳು.

ಎಲ್.ಪಿ.ಕುಲಕರ್ಣಿ ಅವರ ಪ್ರಕಟಿತ ಕೃತಿಗಳಲ್ಲಿ ಯುರೇಕಾ, ಕ್ಯೂರಿಯಸ್, ವಿಜ್ಞಾನ ವೈಶಿಷ್ಟ್ಯ, ವಿಶಿಷ್ಟ ವಿಜ್ಞಾನಿಗಳ ವಿಭಿನ್ನ ಸಾಧನೆಗಳು, ಅಮೂಲ್ಯ ರತ್ನಗಳು, ಲೂಸಿ ಮರ ಏರುತ್ತಿದ್ದಳೆ?, ಯಕ್ಷ ಪ್ರಶ್ನೆ ಭಾಗ-1 ಮತ್ತು ಭಾಗ-2, ವಿಜ್ಞಾನ ಕೌತುಕಗಳ ಮಹಾಯಾನ, ವಿಜ್ಞಾನ ವಿಶಾರದರು ಸೇರಿವೆ.

ಎಲ್.ಪಿ.ಕುಲಕರ್ಣಿ ಅವರು 2019-20 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ನಡೆಸಿದ ಎಚ್.ನರಸಿಂಹಯ್ಯನವರ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಇವರ ಮೊದಲ ಕೃತಿ 'ಯುರೇಕಾ- ವಿಜ್ಞಾನ‌ಲೋಕದ ಬೆಳಕಿಂಡಿ' ಯಿಂದ ಆಯ್ದ ಲೇಖನವೊಂದು ಬೆಂಗಳೂರು ವಿಶ್ವವಿದ್ಯಾಲಯದ ಬಿಬಿಎ ಏವಿಯೇಷನ್ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಹೊಸಪೇಟೆಯ ಸಂಗೀತ ಭಾರತಿ‌ ಪ್ರತಿಷ್ಠಾನದಿಂದ ಸಾಹಿತ್ಯ ಸಾಧಕ ಪ್ರಶಸ್ತಿ. 'ಕ್ಯೂರಿಯಸ್' ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು, ಬಾಗಲಕೋಟೆ ಯವರು ನೀಡಿದ 2022 ನೇ ಸಾಲಿನ ದತ್ತಿ ಪ್ರಶಸ್ತಿ, 'ಲೂಸಿ ಮರ ಏರುತ್ತಿದ್ದಳೇ?' ಕೃತಿಗೆ 2024 ನೇ ಸಾಲಿನ 'ಅರಕೇರಿ ದತ್ತಿ ಪ್ರಶಸ್ತಿ', ವಿಜ್ಞಾನ‌ಕೌತುಕಗಳ ಮಹಾಯಾನ ಕೃತಿಗೆ ಬೆಂಗಳೂರಿನ ಅವ್ವ ಪುಸ್ತಕಾಲಯದ 2025 ನೇ ಸಾಲಿನ ಅತ್ಯುತ್ತಮ ವಿಜ್ಞಾನ ಸಾಹಿತ್ಯ ಕೃತಿ ಪ್ರಶಸ್ತಿ, 2025 ನೇ ಸಾಲಿನ ಅವ್ವ ಪ್ರಕಾಶನ ಏರ್ಪಡಿಸಿದ ರಾಜ್ಯಮಟ್ಟದ ಮಕ್ಕಳ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ.

ಎಲ್.ಪಿ.ಕುಲಕರ್ಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday L.P. Kulkarni 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!