ವಿಜಯಾ ಮೆಹ್ತಾ
ಭಾರತೀಯ ಹವ್ಯಾಸಿ ರಂಗಭೂಮಿಗೆ ಕಾಯಕಲ್ಪ ನೀಡಿದವರಲ್ಲಿ ಒಬ್ಬರಾದ ಹಿರಿಯ ರಂಗಕರ್ಮಿ ಹಾಗೂ ಸೃಜನಶೀಲ ಚಲನಚಿತ್ರ ನಿರ್ದೇಶಕಿ ಮತ್ತು ಕಲಾವಿದೆ ವಿಜಯಾ ಮೆಹ್ತಾ ನಿಧನರಾಗಿದ್ದಾರೆ.
ವಿಜಯಾ ಅವರು 1934ರ ನವೆಂಬರ್ 4ರಂದು ಬರೋಡಾದಲ್ಲಿ ಜನಿಸಿದರು. ಮುಂಬೈನಲ್ಲಿ ಪದವಿ ಪಡೆದ ಅವರು ರಂಗಭೂಮಿ ವ್ಯಾಸಂಗವನ್ನು ಇಬ್ರಾಹಿಂ ಅಲ್ಕಾಸಿ ಮತ್ತು ಅದಿ ಮರ್ಜ್ಬನ್ ಅವರುಗಳೊಂದಿಗೆ ದೆಹಲಿಯಲ್ಲಿ ನಡೆಸಿದರು.
1960ರ ದಶಕದಲ್ಲಿ ನಾಟಕಕಾರ ವಿಜಯ್ ತೆಂಡೂಲ್ಕರ್, ನಟ ಶ್ರೀರಾಮ್ ಲಾಗೂ ಮತ್ತು ಅರವಿಂದ್ ದೇಶಪಾಂಡೆ ಮುಂತಾದವರೊಂದಿಗೆ ಮರಾಠಿಯಲ್ಲಿ 'ರಂಗಾಯಣ್' ಎಂಬ ಪರಿಕಲ್ಪನೆಯೊಂದಿಗೆ ಮೆಹ್ತಾ ಅವರು ರಂಗಭೂಮಿ ಮತ್ತು ಚಲನಚಿತ್ರಲೋಕದಲ್ಲಿ ಹೊಸ ಪೀಳಿಗೆಯ ಅಭಿನಯ ಕಲಾವಿದರು ಮತ್ತು ನಿರ್ದೇಶಕರನ್ನು ಬೆಳೆಸುವಲ್ಲಿ ಮಹತ್ವದ ಕೆಲಸ ಮಾಡಿದರು,
ಸಿ. ಟಿ. ಖಾನೋಲ್ಕರ್ ಅವರ ‘ಏಕ್ ಶೂನ್ಯ ಬಾಜೀರಾವ್’ ಕೃತಿಯನ್ನು ಅವರು ರಂಗಕ್ಕೆ ತಂದ ರೀತಿ ಇಂದಿಗೂ ಭಾರತೀಯ ರಂಗಭೂಮಿಯ ಮೈಲುಗಲ್ಲಾಗಿದೆ. ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಖ್ಟ್ ಅವರ ಪ್ರಸಿದ್ಧ ಕೃತಿಯನ್ನು ‘ಅಜಬ್ ನ್ಯಾಯ ವರ್ತುಳಾಚಾ’ ಹೆಸರಿನಲ್ಲಿ ಮರಾಠಿ ಪ್ರೇಕ್ಷಕರಿಗೆ ಉಣಬಡಿಸಿದ ಹೆಗ್ಗಳಿಕೆ ಅವರದ್ದು. ಇದಲ್ಲದೆ ‘ಬ್ಯಾರಿಸ್ಟರ್’, ‘ಶಾಕುಂತಲ’, ‘ಹಮಿದಾಬಾಯಿಚಿ ಕೋಠಿ’ ಮತ್ತು ‘ಮದರ್’ ನಾಟಕಗಳ ಮೂಲಕ ತಮ್ಮ ಕಲಾತ್ಮಕ ಆಳವನ್ನು ಜಗತ್ತಿಗೆ ಪರಿಚಯಿಸಿದರು. ಇಂಡೋ-ಜರ್ಮನ್ ರಂಗಭೂಮಿ ಯೋಜನೆಗಳ ಮೂಲಕ ಭಾರತೀಯ ಕಲೆಯನ್ನು ಜಾಗತಿಕ ವೇದಿಕೆಗೆ ಕೊಂಡೊಯ್ದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.
ಕೇವಲ ರಂಗಭೂಮಿಗೆ ಸೀಮಿತವಾಗದ .ವಿಜಯಾ ಮೆಹ್ತಾ, ಭಾರತೀಯ ಪ್ಯಾರಲೆಲ್ (ಸಮಾನಾಂತರ) ಸಿನಿಮಾ ರಂಗದಲ್ಲೂ ಅದ್ಭುತ ಯಶಸ್ಸು ಕಂಡರು. ‘ಕಲಿಯುಗ್’ ಮತ್ತು ‘ಪಾರ್ಟಿ’ ಚಿತ್ರಗಳಲ್ಲಿನ ಅವರ ನಟನೆ ಪ್ರೇಕ್ಷಕರ ಮನಸ್ಸಿನಲ್ಲಿ ಇಂದಿಗೂ ಹಸಿರಾಗಿದೆ. ಚಿತ್ರ ನಿರ್ದೇಶಕಿಯಾಗಿಯೂ ಯಶಸ್ವಿಯಾದ ಅವರು ನಿರ್ದೇಶಿಸಿದ ‘ರಾವ್ ಸಾಹೇಬ್’ ಮತ್ತು ‘ಪೆಸ್ಟೋಂಜೀ’ ಸಿನಿಮಾಗಳು ಇಂದಿಗೂ ವಿಮರ್ಶಕರ ಅಚ್ಚುಮೆಚ್ಚಿನ ಚಿತ್ರಗಳಾಗಿವೆ.
ವಿಜಯಾ ಮೆಹ್ತಾ ಅವರಿಗೆ 1975ರಲ್ಲೇ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸಂದಿತ್ತು. 1985ರಲ್ಲಿ ‘ಪಾರ್ಟಿ' ಚಿತ್ರದ ಅಭಿನಯಕ್ಕೆ ಏಷ್ಯಾ ಪೆಸಿಫಿಕ್ ಚಲನಚಿತ್ರೋತ್ಸವದ ಪ್ರಶಸ್ತಿ ಸಂದಿತ್ತು. 1986ರಲ್ಲಿ 'ರಾವ್ ಸಾಹೇಬ್' ಚಿತ್ರದಲ್ಲಿನ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಶ್ರೇಷ್ಠ ಪೋಷಕ ನಟಿ ಗೌರವ ಸಂದಿತ್ತು. 1987ರಲ್ಲಿ ಪದ್ಮಶ್ರೀ ಪ್ರಶಸ್ತಿ ಅಲ್ಲದೆ ಇನ್ನಿತರ ಗೌರವಗಳು ಸಂದಿದ್ದವು.
ವಿಜಯಾ ಮೆಹ್ತಾ ಅವರು 2026ರ ಜೂನ್ 30ರಂದು ನಿಧನರಾದರು.
Respects to departed soul Great Theatre and Film Personality Vijaya Mehta 🌷🙏🌷

ಕಾಮೆಂಟ್‌ಗಳು