ಎಚ್ ಎಸ್ ಸತ್ಯನಾರಾಯಣ
ಎಚ್ ಎಸ್ ಸತ್ಯನಾರಾಯಣ
ಡಾ. ಎಚ್. ಎಸ್. ಸತ್ಯನಾರಾಯಣ ಅವರು ಕಾಲೇಜು ಶಿಕ್ಷಕರಾಗಿ, ಕವಿಯಾಗಿ, ಅಂಕಣಕಾರರಾಗಿ, ವಿಮರ್ಶಕರಾಗಿ, ಸಂಸ್ಕತಿ ಚಿಂತಕರಾಗಿ, ನಾಡಿನೆಲ್ಲೆಡೆ ಸಾಹಿತ್ಯ ಉಪನ್ಯಾಸ ನೀಡುವವರಾಗಿ, ಎಲ್ಲ ವರ್ಗದ ಜನರಿಗೂ ಪ್ರೀತಿ ಪಾತ್ರ ಸಹೃದಯರಾಗಿ ಹೆಸರಾದವರು.
ಸತ್ಯನಾರಾಯಣ ಅವರು 1969ರ ಆಗಸ್ಟ್ 1ರಂದು ಜನಿಸಿದರು. ಚಿಕ್ಕಮಗಳೂರು ಜಿಲ್ಲೆಯ ಹೊಕ್ಕಳಿಕೆ ಇವರು ಜನಿಸಿದ ಊರು. ಬಿ.ಎ. ಪದವಿಯನ್ನು ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿ ಪ್ರೊ. ತೀ.ನಂ.ಶ್ರೀ. ಚಿನ್ನದ ಪದಕ ಮತ್ತು ಹಲವು ನಗದು ಪುರಸ್ಕಾರಗಳೊಂದಿಗೆ ಗಳಿಸಿದರು. ಕನ್ನಡ ಎಂ.ಎ. ಪದವಿಯನ್ನು ತೃತೀಯ ರ್‍ಯಾಂಕ್ ಸಾಧನೆಯಲ್ಲಿ ಗಳಿಸಿದರು. "ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಥನ ಸಾಹಿತ್ಯದ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಗಳಿಸಿದರು.
ಸತ್ಯನಾರಾಯಣ ಅವರು ಚಿಕ್ಕಮಗಳೂರಿನ ಬಸವನಹಳ್ಳಿಯ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
ಡಾ. ಎಚ್. ಎಸ್. ಸತ್ಯನಾರಾಯಣ ಅವರು ನಾಡಿನಾದ್ಯಂತ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಕುರಿತು ಉಪನ್ಯಾಸಗಳನ್ನು ನೀಡಿ ಹೆಸರಾಗಿದ್ದಾರೆ. ಪತ್ರಿಕಾಲೋಕದಲ್ಲಿ ಇವರ ಅಂಕಣ ಬರಹಗಳು, ವಿಮರ್ಶೆ ಹಾಗೂ ಸಾಂಸ್ಕೃತಿಕ ಚಿಂತನೆಗಳೂ ಹೆಸರಾಗಿವೆ. ಇವರ ಪ್ರಕಟಿತ ಕೃತಿಗಳಲ್ಲಿ ಅಪೂರ್ವ ಒಡನಾಟ (ಕವಿಸಮಯದ ಬರಹಗಳು), ಕುವೆಂಪು: ಅಲಕ್ಷಿತರೆದೆಯ ದೀಪ (ವಿಮರ್ಶೆ), ಅಕ್ಷರ ಲೋಕದ ಆನೆ – ತೇಜಸ್ವಿ (ವಿಮರ್ಶೆ), ನುಡಿಚಿತ್ರ (ಅಂಕಣ ಬರಹಗಳು), ಕಣ್ಣೋಟ (ವಿಮರ್ಶೆ),ಗಿರೀಶ್ ಕಾರ್ನಾಡ್: ಬದುಕು – ಬರಹ (ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ), ನಗೆಮೊಗದ ಅಜ್ಜ-ಮಾಸ್ತಿ (ಜೀವನ ಚರಿತ್ರೆ), ಪನ್ನೇರಳೆ (ಲಲಿತ ಪ್ರಬಂಧಗಳು), ಬಿದಿರ ತಡಿಕೆ (ಲಲಿತ ಪ್ರಬಂಧಗಳು), ಅಧ್ಯಾಪಕನಾಗಿ ಕಾಲುಶತಮಾನ (ನೆನಪುಗಳ ಸಂಗ್ರಹ), ಮರ ಬರೆದ ರಂಗೋಲಿ (ಹಾಯ್ಕುಗಳು), ಮಾಂದಳಿರ ತೊಟ್ಟಿಲು (ಅನುದಿನ ಕಾವ್ಯ ೧), ದಡವ ಮುಟ್ಟಿಸು (ಕವಿತೆಗಳು), ತೇಜಸ್ವಿ ಪ್ರಸಂಗಗಳು ಮುಂತಾದವು ಸೇರಿವೆ.
ಡಾ. ಎಚ್. ಎಸ್. ಸತ್ಯನಾರಾಯಣ ಅವರ ಸಂಪಾದಿತ ಕೃತಿಗಳಲ್ಲಿ ಕನ್ನಡ ಸಾಹಿತ್ಯ ಸಂಗಾತಿ (ಇತರರೊಂದಿಗೆ, ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ), ಸಾಹಿತ್ಯ ವಿಮರ್ಶೆ- ೨೦೧೬ (ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ), ಡುಂಡಿ ಮಲ್ಲಿಗೆ (ಎಚ್. ಡುಂಡಿರಾಜ್ ಸಾಹಿತ್ಯ ಕುರಿತ ಪ್ರತಿಕ್ರಿಯೆ), ಗೆಳೆಯ ಲಕ್ಷ್ಮಣ (ಬಿ.ಆರ್. ಲಕ್ಷ್ಮಣರಾವ್ ಸಾಹಿತ್ಯ ಕುರಿತ ಪ್ರತಿಕ್ರಿಯೆ), ನಂಗ್ಲಿ-ಜಂಗ್ಲಿ (ವಿ. ಚಂದ್ರಶೇಖರ ನಂಗ್ಲಿಯವರ ಸಾಹಿತ್ಯ ಕುರಿತು), ಬತ್ತದ ಕಾವ್ಯದೊರತೆ (ಟಿ. ಯಲ್ಲಪ್ಪ ಅವರ ಕಾವ್ಯ ಕುರಿತು), ಬಾ.ರಾ. ಗೋಪಾಲ್ ಆಯ್ದ ಬರಹಗಳು ಮುಂತಾದವು ಸೇರಿವೆ.
ಡಾ. ಎಚ್. ಎಸ್. ಸತ್ಯನಾರಾಯಣ
ಅವರು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಕನ್ನಡ ಭಾಷಾ ವಿಷಯದ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಇಲಾಖೆಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಪಠ್ಯ ರಚನಾ ಸಮಿತಿಯ ಸದಸ್ಯರಾಗಿ - ಸಂಚಾಲಕರಾಗಿ - ಉನ್ನತ ಮಟ್ಟದ ಸಲಹಾಸಮಿತಿ ಸದಸ್ಯರಾಗಿ, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪರೀಕ್ಷಾ ಸಲಹಾ ಸಮಿತಿ ಸದಸ್ಯರಾಗಿ, ಗಮಕ ಪರಿಷತ್ತಿನ ಪರೀಕ್ಷಾ ವಿಭಾಗದ ಸದಸ್ಯರಾಗಿ, ಹಲವು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯರಚನಾ ಸಮಿತಿಯ ಗೌರವ ಸಲಹೆಗಾರರಾಗಿ ಹೀಗೆ ಬಹುಮುಖಿಯಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಇವರು ರಚಿಸಿದ ಸಂಗೊಳ್ಳಿರಾಯಣ್ಣ ವ್ಯಕ್ತಿ ಚಿತ್ರವು ಐದನೇ ತರಗತಿಗೆ ಕನ್ನಡ ಪಠ್ಯವಾಗಿದೆ. "ಯುವ ಜನಾಂಗ ಮತ್ತು ಧಾರ್ಮಿಕ ಸಾಮರಸ್ಯ” ಹಾಗೂ “ಕನ್ನಡಕ್ಕೆ ಅನ್ನ ಬ್ರಹ್ಮನ ಸ್ಥಾನ” ಎಂಬ ಲೇಖನಗಳು ಬೆಂಗಳೂರು ವಿ.ವಿ.ಯ ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಡಾ. ಎಚ್. ಎಸ್. ಸತ್ಯನಾರಾಯಣ
ಅವರಿಗೆ 'ಅಪೂರ್ವ ಒಡನಾಟ ಕೃತಿಗೆ' ಮೇಘಮೈತ್ರಿ ಪುಸ್ತಕ ಬಹುಮಾನ, ಹಾ.ಮಾ.ನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ; "ಕುವೆಂಪು: ಅಲಕ್ಷಿತರೆದೆಯ ದೀಪ" ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ;
"ಕಣ್ಣೋಟ" ವಿಮರ್ಶಾ ಕೃತಿಗೆ ಬೇಂದ್ರೆ ನುಡಿಸಿರಿ ಪ್ರಶಸ್ತಿ; ಕೇಂದ್ರ ಸಾಹಿತ್ಯ ಪರಿಷತ್ತಿನಿಂದ ಸಾಹಿತ್ಯ ಸೇವೆಗಾಗಿ ಪ್ರೊ.ಸಿ.ಎಚ್. ಮರಿದೇವರು ದತ್ತಿ ಪ್ರಶಸ್ತಿ; ೨೦೨೧ನೇ ಸಾಲಿನ ಸಾಹಿತ್ಯ ಸಾಧನೆಗಾಗಿ ಉದಯೋನ್ಮುಖ ವರ್ಧಮಾನ ಪ್ರಶಸ್ತಿ; ಕರ್ನಾಟಕ ಸರ್ಕಾರದಿಂದ ೨೦೧೭-೧೮ನೇ ಸಾಲಿನ ಅತ್ಯುತ್ತಮ ಉಪನ್ಯಾಸಕ ರಾಜ್ಯ ಪ್ರಶಸ್ತಿ; ಶೈಕ್ಷಣಿಕ ಸಾಧನೆಗಾಗಿ ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜಶಾಸ್ತ್ರಜ್ಞ ಡಾ. ಹಿರೇಮಲ್ಲೂರು ಈಶ್ವರನ್ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ.
ಸಾಹಿತ್ಯಲೋಕದ ಸಹೃದಯಿ ಆತ್ಮೀಯರಾದ ಡಾ. ಎಚ್. ಎಸ್. ಸತ್ಯನಾರಾಯಣ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Dr H S Sathyanarayana Sir 🌷🌷🌷

ಕಾಮೆಂಟ್‌ಗಳು