ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಂ,ಪಿ, ಪರಮೇಶ್ವರನ್

 


ಎಂ. ಪಿ. ಪರಮೇಶ್ವರನ್

ವಿಜ್ಞಾನವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ದ ಡಾ. ಎಂ. ಪಿ. ಪರಮೇಶ್ವರನ್ ನಿಧನ


ಭಾರತದ ಖ್ಯಾತ ಪರಮಾಣು ವಿಜ್ಞಾನಿ, ವಿಜ್ಞಾನ ಪ್ರಚಾರಕ, ಲೇಖಕ ಹಾಗೂ ಚಿಂತಕ ಡಾ. ಎಂ. ಪಿ. ಪರಮೇಶ್ವರನ್ ಅವರು 2026ರ ಆಗಸ್ಟ್ 11ರಂದು ಕೇರಳದ ಕೊಟ್ಟಪ್ಪುರಂನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.


ಪರಮೇಶ್ವರನ್ ಅವರು 1935ರ ಜನವರಿ 18ರಂದು ಕೇರಳದ ತ್ರಿಶೂರ್ ಜಿಲ್ಲೆಯ ಕಿರಲೂರಿನಲ್ಲಿ ಜನಿಸಿದರು.  1956ರಲ್ಲಿ ತಿರುವನಂತಪುರದ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ನಂತರ ಮಾಸ್ಕೋ ಪವರ್ ಎಂಜಿನಿಯರಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಪರಮಾಣು ಎಂಜಿನಿಯರಿಂಗ್‌ನಲ್ಲಿ ಪಿಎಚ್.ಡಿ. ಪಡೆದರು. ಭಾರತಕ್ಕೆ ಮರಳಿದ ಬಳಿಕ ಭಾಭಾ ಅಣು ಸಂಶೋಧನಾ ಕೇಂದ್ರ(BRC)ದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದರು.


ವಿಜ್ಞಾನವನ್ನು ಪ್ರಯೋಗಾಲಯಗಳ ಗೋಡೆಗಳೊಳಗೆ ಸೀಮಿತಗೊಳಿಸಬಾರದು; ಅದು ಸಾಮಾನ್ಯ ಜನರ ಬದುಕಿನ ಭಾಗವಾಗಬೇಕು ಎಂಬುದು ಪರಮೇಶ್ವರನ್ ಅವರ ದೃಢ ನಂಬಿಕೆಯಾಗಿತ್ತು. ಹೀಗಾಗಿ 1975ರಲ್ಲಿ BARCನ ಉದ್ಯೋಗವನ್ನು ತೊರೆದು ತಮ್ಮ ಬದುಕನ್ನು ವಿಜ್ಞಾನ ಜನಪ್ರಿಯೀಕರಣ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಗೆ ಸಮರ್ಪಿಸಿಕೊಂಡರು. ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ (KSSP) ಅನ್ನು ಜನವಿಜ್ಞಾನ ಚಳವಳಿಯಾಗಿ ಬೆಳೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. 


ಪರಮೇಶ್ವರನ್ ಅವರು ಮಲಯಾಳಂನಲ್ಲಿ ಸುಮಾರು 29 ಜನಪ್ರಿಯ ವಿಜ್ಞಾನ ಕೃತಿಗಳನ್ನು ಹಾಗೂ ಇಂಗ್ಲಿಷ್‌ನಲ್ಲಿ ಎರಡು ಕೃತಿಗಳನ್ನು ರಚಿಸಿದ್ದರು. ಪರಮಾಣು ವಿಜ್ಞಾನ, ವಿಕಿರಣಶೀಲತೆ, ಖಗೋಳಶಾಸ್ತ್ರ, ಗಣಿತ, ಪರಿಸರ, ಸಮಾಜ ಮತ್ತು ಅಭಿವೃದ್ಧಿ ಮುಂತಾದ ವೈವಿಧ್ಯಮಯ ವಿಷಯಗಳನ್ನು ಸರಳವಾಗಿ ಜನರಿಗೆ ತಲುಪಿಸಿದರು. ಅವರ 300ಕ್ಕೂ ಹೆಚ್ಚು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. 


ವಿಜ್ಞಾನ ಪ್ರಚಾರದ ಜೊತೆಗೆ ಸಾಮಾಜಿಕ ಮತ್ತು ಆರ್ಥಿಕ ಚಿಂತನೆಯಲ್ಲಿಯೂ ಅವರು ತಮ್ಮದೇ ಆದ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದರು. ವಿಶೇಷವಾಗಿ ಅವರು ಮುಂದಿಟ್ಟ ‘Fourth World’ (ನಾಲ್ಕನೇ ಜಗತ್ತು) ಪರಿಕಲ್ಪನೆ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. 


ಪರಮೇಶ್ವರನ್ ಅವರ ಸೇವೆಯನ್ನು ಗುರುತಿಸಿ ಕೇರಳ ಸರ್ಕಾರವು 2022ರಲ್ಲಿ ಸ್ಥಾಪಿಸಿದ ಮೊದಲ ‘ಕೇರಳ ಶ್ರೀ’ ಪ್ರಶಸ್ತಿಯನ್ನು ಅವರಿಗೆ ಸಲ್ಲಿಸಲಾಗಿತ್ತು.


ವಿಜ್ಞಾನಿ ಎಂಬ ಹೆಗ್ಗಳಿಕೆಯನ್ನು ಮೀರಿ, “ವಿಜ್ಞಾನ ಜನರಿಗಾಗಿ” ಎಂಬ ಧ್ಯೇಯದೊಂದಿಗೆ ಬದುಕಿದ ಅಪರೂಪದ ವ್ಯಕ್ತಿತ್ವ ಪರಮೇಶ್ವರನ್ ಅವರದು. ವಿಜ್ಞಾನವನ್ನು ಜನಸಾಮಾನ್ಯರ ಭಾಷೆಯಲ್ಲಿ ವಿವರಿಸಿ, ಪ್ರಶ್ನಿಸುವ ಮನೋಭಾವವನ್ನು ಬೆಳೆಸಿ, ವೈಜ್ಞಾನಿಕ ಚಿಂತನೆಯನ್ನು ಸಮಾಜದೊಳಗೆ ಬಿತ್ತಿದ ಅವರ ಕೊಡುಗೆ ದೀರ್ಘಕಾಲ ನೆನಪಿನಲ್ಲಿ ಉಳಿಯಲಿದೆ.


ಡಾ. ಎಂ. ಪಿ. ಪರಮೇಶ್ವರನ್ 2026ರ ಆಗಸ್ಟ್ 11ರಂದು ನಿಧನರಾದರು.  ಅಗಲಿದ ಚೇತನಕ್ಕೆ ಗೌರವಪೂರ್ವಕ ನಮನಗಳು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!