ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ ಎಲ್ ಸುಬ್ರಹ್ಮಣ್ಯ ಅಡಿಗ

 ಟಿ. ಎಲ್. ಸುಬ್ರಹ್ಮಣ್ಯ ಅಡಿಗ ನಿಧನ

Respects to departed soul writer T. L. Subramanya Adiga 🌷🙏🌷

ಬಹುಮುಖಿ ಹಿರಿಯ ಸಾಹಿತ್ಯ ಸಾಧಕರಾದ ಟಿ. ಎಲ್. ಸುಬ್ರಹ್ಮಣ್ಯ ಅಡಿಗರು ಇಂದು ನಿಧನರಾಗಿದ್ದಾರೆ, 

ಸುಬ್ರಹ್ಮಣ್ಯ ಅಡಿಗರು ಸಹ್ಯಾದ್ರಿ ಪರ್ವತ ಶ್ರೇಣಿಯಡಿ ಗಿರಿ ಪರ್ವತ ಕಾನನಗಳ ನಡುವೆ ಸುಂದರ ಮಲೆನಾಡಿನ ಶ್ರೀಮಂತ ಪರಿಸರದಲ್ಲಿ 1938ರ ಜುಲೈ 31ರಂದು  ಜನಿಸಿದರು.  ತಂದೆ ಲಕ್ಷ್ಮೀನಾರಾಯಣ. ತಾಯಿ ರತ್ನಾವತಿಯಮ್ಮ. ಪ್ರಾಥಮಿಕ ಶಿಕ್ಷಣವನ್ನು ಅರಳಸುರಳಿಯಲ್ಲಿ, ಪ್ರೌಢ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಹಾಗೂ ಕಲಾ ಪದವಿ(ಬಿ.ಎ.)ಯನ್ನು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನಲ್ಲಿ ಪಡೆದರು.

ಸುಬ್ರಹ್ಮಣ್ಯ ಅಡಿಗರು ನೊಣಬೂರು ಅಂಬುತೀರ್ಥ ಪ್ರೌಢ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. 1970ರಲ್ಲಿ ಅಧ್ಯಾಪಕ ವೃತ್ತಿಗೆ ರಾಜೀನಾಮೆ ನೀಡಿ ಕೃಷಿಕರಾಗಿ ಕಾಯಕ ಆರಂಭಿಸಿದರು. ಅರಳಸುರಳಿ ಸೇವಾ ಸಹಕಾರದ ಅಧ್ಯಕ್ಷರಾಗಿ, ಜಿಲ್ಲಾ ಬರಹಗಾರ ಮಂಡಳಿಯ ನಿರ್ದೇಶಕರಾಗಿ, ಯುವಕ ರೈತ ಸಂಘದ ಅಧ್ಯಕ್ಷ ರಾಗಿ ಇವರ ಸೇವೆ ಸಂದಿತ್ತು.

ಸುಬ್ರಹ್ಮಣ್ಯ ಅಡಿಗರ ಮೊದಲ ಪ್ರಕಟಿತ ಕೃತಿ 1950ರಲ್ಲಿ ದ.ರಾ. ಬೇಂದ್ರೆಯವರ ಮುನ್ನುಡಿಯಲ್ಲಿ ‘ಪರಾಗ’ ಎಂಬ ಕವನ ಸಂಕಲನ. ನಂತರ ‘ಮಧುರ ಜೇನು’ ಗೋಪಾಲಕೃಷ್ಣ ಅಡಿಗರ ಮುನ್ನುಡಿಯೊಂದಿಗೆ 1960ರಲ್ಲಿ ಬಿಡುಗಡೆಯಾಯಿತು. ಆನಂತರ ‘ಹೃದಯಾಕ್ಷಿ’, ‘ಕಪ್ಪು ನೀರು’, ‘ಹೂವಿನ ತೇರು’, ‘ಮರುದನಿ’, ‘ಗುಟ್ಟಿನ ಹಾಡು’, ‘ಸುಖರಾತ್ರಿ’, ‘ಪ್ರೇಮ ಪೂರ್ಣಿಮೆ’, ‘ಪ್ರೇಮ ಲಹರಿ’, ‘ನಲ್ಲೆ ನಲ್ಗನಸೇ’, ‘ಅರ್ಧಾಂಗಿ’, ‘ಪ್ರೇಮ ಸಂಕೇತ’, ‘ಚಿನ್ನದ ರಥ’, ‘ಆಹ್ವಾನ’, ‘ದೇವಗಂಗೆ’, ‘ಆರದ ಪ್ರೀತಿ’ ಮುಂತಾದ ಕವನ ಸಂಕಲನಗಳು; 'ಶ್ರೀ ಗುರು ಶಕ್ತಿ’, ‘ಶ್ರೀ ಗುರು ದರ್ಶನ’, ‘ಶ್ರೀ ಗುರು ಆರಾಧನಾ’ (ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ಭಕ್ತಿಗೀತಾ ಸಂಕಲನಗಳು), ‘ಭಕ್ತಿ ಬೃಂದಾವನ’ (ಶ್ರೀ ಗಣಪತಿ, ಶ್ರೀಕೃಷ್ಣನ ಕುರಿತು ಗೀತೆಗಳು);‘ಕಾಣೆಯಾದ ಹುಡುಗಿಯರು’, ‘ಚಿನ್ನದಂಥ ಹುಡುಗಿ’ ನಾಟಕ ಕೃತಿಗಳು ಪ್ರಕಟಣೆಗೊಂಡವು.
ಇವರ ಕಥಾಸಂಕಲನ / ಕಾದಂಬರಿಗಳಲ್ಲಿ ‘ಭಾಗ್ಯದ ಮನೆ’, ‘ದೈವಲೀಲೆ’, ‘ಗೆರೆ ದಾಟಿದ ಜಿಂಕೆ’, ‘ತವರಿನ ತೇರು’, ‘ಕಾಡು ಮಲ್ಲಿಗೆ’, ‘ಹಾರುವ ಕುದುರೆ’, ‘ಕಥಾ ನಾಯಕಿ’, ‘ಬಾಡಿಗೆ ಮನೆ ಹುಡುಗಿಯರು’, ‘ವಿಚ್ಛೇದಿತೆಯರು’, ‘ಹೆಸರಿಲ್ಲದ ಹೂ’, ‘ದೇವರ ಕೊಡುಗೆ’, ‘ಪ್ರೇಮ ಉಪನ್ಯಾಸಕಿ’, ‘ಲೇಡಿ ಡಾಕ್ಟರ್’, ‘ಮರು ಮದುವೆ’ ಸೇರಿವೆ.  ಹೀಗೆ ಇವರ  37 ಕವಿತಾ ಸಂಕಲನ, 2 ನಾಟಕ, 22 ಕಾದಂಬರಿ, 5 ಕಥಾಸಂಕಲನಗಳು ಪ್ರಕಟಗೊಂಡಿವೆ. ಇವರ ಬಹುಮುಖಿ ಬರಹಗಳು ನಾಡಿನ ಎಲ್ಲ ಪ್ರಸಿದ್ಧ ಪತ್ರಿಕೆಗಳಲ್ಲಿ ನಿರಂತರವಾಗಿ ಮೂಡಿಬಂದಿದ್ದವು.

ಸುಬ್ರಹ್ಮಣ್ಯ ಅಡಿಗರು  ಅನೇಕ ಕವಿಗೋಷ್ಠಿಗಳಿಗೆ ಅಧ್ಯಕ್ಷತೆ ವಹಿಸಿದ್ದರು. ನೂರಾರು ಭಾಷಣ ಮಾಡಿದ್ದರು. ಭದ್ರಾವತಿ ಬಾನುಲಿಯಲ್ಲಿ ಹಲವು ಬಾರಿ ಕವಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಭದ್ರಾವತಿ ಆಕಾಶವಾಣಿ ಸುಮಮಾಲೆ ಗೀತ ಗಾಯನ ಕಾರ್ಯಕ್ರಮದಲ್ಲಿ ಇವರ ಕೃತಿ ಒಂದು ತಿಂಗಳ ಕಾಲ ಪ್ರಸಾರವಾಗಿತ್ತು. ಡಿ.ಡಿ.9 ದೂರದರ್ಶನ ವಾಹಿನಿಯಲ್ಲಿ ಮಲೆನಾಡಿನ ದೀಪಾವಳಿ ಸಾಕ್ಷ್ಯಚಿತ್ರದಲ್ಲಿ ಭಾಗವಹಿಸಿದ್ದರು.

ಸುಬ್ರಹ್ಮಣ್ಯ ಅಡಿಗರಿಗೆ 1959ರಲ್ಲಿ ಭದ್ರಾವತಿಯಲ್ಲಿ ಗೆಳೆಯರ ಬಳಗದವರಿಂದ ಸನ್ಮಾನ, 1997ರಲ್ಲಿ ‘ಸುವರ್ಣ ಸ್ವಾತಂತ್ರ್ಯೋತ್ಸವ’ ಸನ್ಮಾನ, ಮಡಿಕೇರಿ ಶಕ್ತಿ ಪ್ರತಿಕಾ ಬಳಗ, ಕೋಣಂದೂರಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನ ಕನ್ನಡಿಗರ ಕೂಟ, ರಿಪ್ಪನ್ ಪೇಟೆಯ ಕಲಾ ಕೌಸ್ತುಭ ಸಂಘ, ತೀರ್ಥಹಳ್ಳಿಯ ಬ್ರಾಹ್ಮಣ ಸಂಘ, ಅರಳಸುರಳಿಯ ವಿದ್ಯಾ ಗಣಪತಿ ಸೇವಾ ಸಂಘ, ಅರಳಸುರಳಿ ರಾಮ ಸೇವಾ ಸಂಘ, ಅರಳಸುರಳಿಯ ಕಾರ್ಪೋರೇಷನ್ ಬ್ಯಾಂಕ್, ಸಾಲಿಗ್ರಾಮದ ರೋಟರ್ ಆಕ್ಸ್, ಕಾರಣಗಿರಿ ರಾಷ್ಟ್ರೋತ್ಥಾನ ಬಳಗ ಮುಂತಾದವರ ಸನ್ಮಾನ, ಕಾರಣಗಿರಿಯ ರಾಷ್ಟ್ರೋತ್ಥಾನ ಬಳಗದವರ ‘ಸಾಹಿತ್ಯ ರತ್ನ’, ‘ಸಾಹಿತ್ಯ ಪಂಕಜ’ ಎಂಬ ಬಿರುದುಗಳು ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿದ್ದವು. ಇವರಿಗೆ ತೀರ್ಥಹಳ್ಳಿ ತಾಲ್ಲೂಕಿನ 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಗೌರವ ಸಂದಿತ್ತು.

ಸುಬ್ರಹ್ಮಣ್ಯ ಅಡಿಗರು 2026ರ ಆಗಸ್ಟ್ 7ರಂದು ಈ ಲೋಕವನ್ನಗಲಿದರು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!