ಸುರೇಶ್ ವಾಡ್ಕರ್
ಸುರೇಶ್ ವಾಡ್ಕರ್
ಸುರೇಶ್ ವಾಡ್ಕರ್ ಭಾವಸ್ಪರ್ಶಿ ಕಂಠದ ಗಾನಯೋಗಿ ಎಂದೆನಿಸುತ್ತಾರೆ. ಚಲನಚಿತ್ರ ಹಿನ್ನೆಲೆ ಗಾಯಕರಲ್ಲಿ ಸುರೇಶ್ ವಾಡ್ಕರ್ ಅವರದು ವಿಶಿಷ್ಟ ಸ್ಥಾನ. ಮಧುರತೆ, ಶಾಸ್ತ್ರೀಯ ಸಂಗೀತದ ಗಾಢತೆ ಮತ್ತು ಭಾವಪೂರ್ಣ ಅಭಿವ್ಯಕ್ತಿ ಇವುಗಳ ಸುಶ್ರಾವ್ಯ ಸಂಗಮ ಅವರ ಕಂಠದಲ್ಲಿದೆ. ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ದಶಕಗಳ ಕಾಲ ತಮ್ಮ ಗಾಯನದಿಂದ ಸಂಗೀತಪ್ರಿಯರ ಮನ ಗೆದ್ದಿರುವ ಅವರು ಭಜನೆ, ಭಕ್ತಿಗೀತೆ ಮತ್ತು ಸುಗಮ ಸಂಗೀತದಲ್ಲಿಯೂ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಸುರೇಶ್ ವಾಡ್ಕರ್ 1955ರ ಆಗಸ್ಟ್ 7ರಂದು ಕೊಲ್ಹಾಪುರದಲ್ಲಿ ಜನಿಸಿದರು. ಬಾಲ್ಯದಿಂದಲೇ ಸಂಗೀತದತ್ತ ಆಕರ್ಷಿತರಾದ ಅವರು ಹದಿಮೂರನೇ ವಯಸ್ಸಿನಿಂದ.ಸಂಗೀತಾಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿದರು. ಖ್ಯಾತ ಸಂಗೀತ ಗುರು ಜಿಯಾಲಾಲ್ ವಸಂತ್ ಅವರಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತರಬೇತಿ ಪಡೆದರು.. ‘ಪ್ರಭಾಕರ್’ ಸಂಗೀತ ಪರೀಕ್ಷೆಯನ್ನು ಪೂರ್ಣಗೊಳಿಸಿದ ನಂತರ ಮುಂಬೈನ ಆರ್ಯ ವಿದ್ಯಾ ಮಂದಿರದಲ್ಲಿ ಸಂಗೀತ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದರು.
1970ರ ದಶಕದಲ್ಲಿ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಸುರೇಶ್ ವಾಡ್ಕರ್ ಅವರಿಗೆ ಆರಂಭದಲ್ಲೇ ತಮ್ಮ ವಿಶಿಷ್ಟ ಕಂಠದಿಂದ ಗಮನ ಸೆಳೆಯುವ ಅವಕಾಶ ದೊರೆಯಿತು. ನಂತರ ‘ಪ್ರೇಮ್ ರೋಗ್’, ‘ರಾಮ್ ತೇರಿ ಗಂಗಾ ಮೈಲಿ’, ‘ಚಾಂದ್ನಿ’, ‘ದಿಲ್’ ಮುಂತಾದ ಚಿತ್ರಗಳಲ್ಲಿನ ಹಾಡುಗಳು ಅವರ ಗಾಯನ ಪ್ರತಿಭೆಯನ್ನು ದೇಶದಾದ್ಯಂತ ಪರಿಚಯಿಸಿದವು.
ಸುರೇಶ್ ವಾಡ್ಕರ್ ಅವರ ಕಂಠದಲ್ಲಿ ಒಂದು ರೀತಿಯ ಮೃದುತ್ವ, ಶುದ್ಧತೆ ಮತ್ತು ಆತ್ಮೀಯತೆ ಇದೆ. ಪ್ರೇಮಗೀತೆಗಳಲ್ಲಿನ ಕೋಮಲ ಭಾವದಿಂದ ಹಿಡಿದು ಭಕ್ತಿಗೀತೆಗಳಲ್ಲಿನ ಭಕ್ತಿ-ಭಾವದವರೆಗೆ, ವಿಭಿನ್ನ ಭಾವಗಳನ್ನು ಸಹಜವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯ ಅವರ ವಿಶೇಷತೆ. ಇದೇ ಕಾರಣದಿಂದ ಅವರು ಚಿತ್ರಗೀತೆಗಳ ಜೊತೆಗೆ ಭಜನೆ, ಮಂತ್ರ, ಆರತಿ ಮತ್ತು ಇತರ ಭಕ್ತಿಗೀತೆಗಳಲ್ಲಿಯೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ.
ಸುರೇಶ್ ವಾಡ್ಕರ್ ಅವರ ಪ್ರತಿಭೆಗೆ ಅನೇಕ ಪ್ರತಿಷ್ಠಿತ ಗೌರವಗಳು ಸಂದಿವೆ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (2018) ಹಾಗೂ ಭಾರತದ ಪ್ರತಿಷ್ಠಿತ ಪದ್ಮಶ್ರೀ (2020) ಪ್ರಶಸ್ತಿಗಳು ಅವರ ಸಂಗೀತಸಾಧನೆಗೆ ದೊರೆತ ಪ್ರಮುಖ ಗೌರವಗಳಾಗಿವೆ. 2010ರಲ್ಲಿ ಮರಾಠಿ ಚಿತ್ರ 'ಮೀ ಸಿಂಧುತಾಯ್ ಸಪ್ಜಲ್'ಗಾಗಿ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದರು.
ಸುರೇಶ್ ವಾಡ್ಕರ್ ಅವರು ಗಾಯನ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಮುಂದಿನ ಪೀಳಿಗೆಗೆ ಸಂಗೀತವನ್ನು ಕಲಿಸುವ ಕಾರ್ಯದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಮ್ಮ ಸಂಗೀತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಹಂಚಿಕೊಳ್ಳುವ ಉದ್ದೇಶದಿಂದ Suresh Wadkar’s Ajivasan Music Academy ಮೂಲಕ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ.
ಸುರೇಶ್ ವಾಡ್ಕರ್ ಅವರ ಗಾಯನವೆಂದರೆ ಕೇವಲ ಸ್ವರಗಳ ಸಮ್ಮಿಲನವಲ್ಲ; ಅದು ಭಾವನೆಗಳನ್ನು ನೇರವಾಗಿ ಹೃದಯಕ್ಕೆ ತಲುಪಿಸುವ ಸಂಗೀತಾನುಭವ. ಹಲವು ದಶಕಗಳ ನಂತರವೂ ಅವರ ಕಂಠದ ಮಧುರತೆ ಮತ್ತು ಭಾವಸ್ಪರ್ಶಿ ಗಾಯನ ಸಂಗೀತಪ್ರಿಯರ ಮನದಲ್ಲಿ ನಿರಂತರವಾಗಿ ಮುನ್ನಡೆದಿದೆ.
On the birthday of melodious singer Suresh Wadkar 🌷🙏🌷

ಕಾಮೆಂಟ್‌ಗಳು