ಸರ್ ಕೆ. ಪಿ. ಪುಟ್ಟಣ್ಣ ಚೆಟ್ಟಿ
ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ
ಸರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ತಮ್ಮ ಜೀವನವನ್ನು ಸಮಾಜದ ಸೇವೆಗಾಗಿಯೇ ಮುಡಿಪಾಗಿಟ್ಟ ಮಹನೀಯರು.
ಪುಟ್ಟಣ್ಣ ಚೆಟ್ಟಿ 1856ರ ಏಪ್ರಿಲ್ 29ರಂದು ಬೆಂಗಳೂರು ಬಳಿಯ ಕೃಷ್ಣರಾಜಪುರದಲ್ಲಿ ಯಲ್ಲಪ್ಪ ಚೆಟ್ಟಿ ಮತ್ತು ಯಲ್ಲಮ್ಮ ದಂಪತಿಗಳ ಸುಪುತ್ರರಾಗಿ ಜನಿಸಿದರು.
ಬೆಂಗಳೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲ್ ಮತ್ತು ಸೆಂಟ್ರಲ್ ಕಾಲೇಜಿನಲ್ಲಿ ಪುಟ್ಟಣ್ಣ ಚೆಟ್ಟಿಯವರ ವಿದ್ಯಾಭ್ಯಾಸ ನಡೆಯಿತು. 1875ರಲ್ಲಿ ತಮ್ಮ 19ನೇ ವಯಸ್ಸಿನಲ್ಲಿಯೇ ಮೈಸೂರು ಸರ್ಕಾರದ ಸಿವಿಲ್ ಸರ್ವೀಸಸ್ ಸೇರಿದ ಪುಟ್ಟಣ್ಣ ಚೆಟ್ಟಿ, ತಮ್ಮ ಕರ್ತವ್ಯ ನಿಷ್ಠೆ, ಆಡಳಿತ ಸಾಮರ್ಥ್ಯ, ಸರಳ ಸ್ವಭಾವದಿಂದಾಗಿ ಹಂತ ಹಂತವಾಗಿ ಅಂದಿನ ಮೈಸೂರು ರಾಜ್ಯದ ರೈಲ್ವೆ ಟ್ರಾಫಿಕ್ ಮ್ಯಾನೇಜರ್, ಸಹಾಯಕ ಕಮಿಷನರ್, ಡೆಪ್ಯುಟಿ ಕಮಿಷನರ್, ಜಿಲ್ಲಾಧಿಕಾರಿ ಇವೇ ಮುಂತಾದ ಉನ್ನತ ಹುದ್ದೆಗಳನ್ನು ಹಂತ ಹಂತವಾಗಿ ಅಲಂಕರಿಸಿ ಶಿವಮೊಗ್ಗ, ಕೋಲಾರ, ಬೆಂಗಳೂರುಗಳಲ್ಲಿ ಸೇವೆ ಸಲ್ಲಿಸಿದರು.
1912ರಲ್ಲಿ ನಿವೃತ್ತರಾದ ಪುಟ್ಟಣ್ಣ ಚೆಟ್ಟಿ ಅವರು, ನಂತರ ಸಂಪೂರ್ಣವಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಆ ದಿನಗಳಲ್ಲಿ ಪ್ರಾರಂಭವಾದ ಬಹುತೇಕ ಸರ್ಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಸ್ಥಾಪನೆ ಮತ್ತು ಮಾರ್ಗದರ್ಶನದಲ್ಲಿ ಪುಟ್ಟಣ್ಣ ಚೆಟ್ಟಿಯವರ ಪ್ರಮುಖ ಪಾತ್ರವಿದೆ. ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷತೆ, ಮೈಸೂರ್ ಬ್ಯಾಂಕಿನ ಅಧ್ಯಕ್ಷತೆ, ಬೆಂಗಳೂರು ಪೌರಸಭಾದ ಅಧ್ಯಕ್ಷತೆ ಮುಂತಾದ ಜವಾಬ್ಧಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸಿದ್ದರು. ಇದಲ್ಲದೆ ರೈಲ್ವೆ ಮಂಡಳಿ, ಬೆಂಗಳೂರು ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್, ಬೆಂಗಳೂರ್ ಪ್ರೆಸ್, ಮೈಸೂರು ಕೃಷ್ಣರಾಜೇಂದ್ರ ಮಿಲ್ಸ್, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ-ಸಂಸ್ಥೆಗಳ ಬೆಳವಣಿಗೆಯಲ್ಲಿ ಸಹಾ ಅವರು ಅಪಾರವಾಗಿ ಶ್ರಮಿಸಿದರು. ಮೈಸೂರು ಲಿಂಗಾಯತ ಅಭಿವೃದ್ಧಿ ಸಂಸ್ಥೆ, ಅಖಿಲ ಭಾರತ ವೀರಶೈವ ಮಹಾಸಭೆಗಳಲ್ಲಿ ಅವರು ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದರು. ಗುಬ್ಬಿ ತೋಟದಪ್ಪನವರ ಧರ್ಮನಿಧಿ, ಆರ್ಕಾಟ್ ನಾರಾಯಣಸ್ವಾಮಿ ಮೊದಲಿಯಾರ್ ಧರ್ಮನಿಧಿ ಮುಂತಾದ ಅನೇಕ ಧರ್ಮಸಂಸ್ಥೆಗಳಿಗೆ ಅವರು ನ್ಯಾಯಪಾಲಕರಾಗಿದ್ದರು.
1913ರಿಂದ 1922ರ ಅವಧಿಯಲ್ಲಿ ಬೆಂಗಳೂರು ನಗರಸಭೆಯ ಪ್ರಥಮ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಪುಟ್ಟಣ್ಣ ಚೆಟ್ಟಿಯವರು ನಗರಸಭೆಯ ಹಣಕಾಸಿನ ಸ್ಥಿತಿಯನ್ನು ಉತ್ತಮಗೊಳಿಸಿದರಲ್ಲದೆ, ಹೊಸ ಮಾರುಕಟ್ಟೆಗಳು, ಕೈಗಾರಿಕಾ ಪ್ರದೇಶಗಳು, ಬಡಜನತೆಗಾಗಿ ವಸತಿ ಸೌಕರ್ಯ, ಒಳಚರಂಡಿ ವ್ಯವಸ್ಥೆ ಮುಂತಾದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾರ್ಯಗತ ಮಾಡಿದರು. 1918-19ರಲ್ಲಿ ಸಾಂಕ್ರಾಮಿಕ ರೋಗ ಹಾಗೂ ತೀವ್ರ ಆಹಾರ ಕೊರತೆ ಉಂಟಾದಾಗ ಇವರು ಕಾರ್ಯನಿರ್ವಹಿಸಿದ ರೀತಿ ಅನುಕರಣೀಯವಾದದ್ದು ಎಂಬ ಶ್ಲಾಘನೆ ಎಲ್ಲೆಲ್ಲೂ ಮಾರ್ದನಿಸಿತು.
ಅಂದಿನ ದಿನಗಳಲ್ಲಿ ಸಾವಿರಗಳ ಬೆಲೆ ತುಂಬಾ ದೊಡ್ಡದು. ಕೊಡುಗೈ ದಾನಿಯಾದ ಪುಟ್ಟಣ್ಣ ಚೆಟ್ಟಿ ಅವರು ಪುರಭವನ ನಿರ್ಮಾಣಕ್ಕಾಗಿ 75,000 ರೂ, ವಿಕ್ಟೋರಿಯಾ ಆಸ್ಪತ್ರೆ ಹೊರರೋಗಿ ವಿಭಾಗ ನಿರ್ಮಾಣಕ್ಕೆ 25,000 ರೂ, ಮೈಸೂರು ವಿಶ್ವವಿದ್ಯಾಲಯಕ್ಕೆ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ 20,000 ರೂ, ದೂರದ ಹಳ್ಳಿಗಳಿಂದ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗಾಗಿ ಬಸವನಗುಡಿಯಲ್ಲಿ ವೀರಶೈವ ಉಚಿತ ವಿದ್ಯಾರ್ಥಿನಿಲಯ ಕಟ್ಟಿದ್ದಲ್ಲದೆ ಅದಕ್ಕೆ 85,000 ರೂ. ಗಳನ್ನು ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಹಾಯ ವರ್ಗದ ಸದಸ್ಯರಾಗಿದ್ದ ಪುಟ್ಟಣ್ಣ ಚೆಟ್ಟಿಯವರು ಪರಿಷತ್ತಿಗೆ ಅಪಾರ ಧನಸಹಾಯ ಮಾಡಿ ಅದರ ಅಭಿವೃದ್ಧಿಗೆ ಕಾರಣರಾದರು.
ಪುಟ್ಟಣ್ಣ ಚೆಟ್ಟಿಯವರ ಸೇವೆಯನ್ನು ಬಹುವಾಗಿ ಮೆಚ್ಚಿದ ನಾಲ್ವಡಿ ಕೃಷ್ಣರಾಜ ಒಡೆಯರ್ 1911ರಲ್ಲಿ ಇವರಿಗೆ ‘ರಾಜ್ಯಸಭಾ ಭೂಷಣ’ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಭಾರತ ಸರ್ಕಾರ ‘ದಿವಾನ್ ಬಹದ್ದೂರ್’ ಪ್ರಶಸ್ತಿ ನೀಡಿ ಗೌರವಿಸಿತು. 1917ರಲ್ಲಿ ‘ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್’ ಮತ್ತು 1925ರ ವರ್ಷದಲ್ಲಿ ‘ಕೈಸರ್ ಹಿ ಹಿಂದ್’ ಪದಕ ಪಾರಿತೋಷಕ ಗೌರವವನ್ನು ಇವರಿಗೆ ಸಮರ್ಪಿಸಲಾಯಿತು. ಜೊತೆಗೆ ಬ್ರಿಟಿಷ್ ಸರ್ಕಾರ ಇವರಿಗೆ ‘ಸರ್’ ಬಿರುದನ್ನು ನೀಡಿತು. 1921ರಲ್ಲಿ ನಡೆದ ಚಿಕ್ಕಮಗಳೂರಿನ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಆರಿಸಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕ ಇವರನ್ನು ಗೌರವಿಸಿತು. 1936ರಲ್ಲಿ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವದ ಅಧ್ಯಕ್ಷತೆಯ ಗೌರವವೂ ಇವರಿಗೆ ಸಂದಿತು.
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುಟ್ಟಣ್ಣ ಚೆಟ್ಟಿಯವರು ನುಡಿದ ಈ ಕೆಲವು ಮಾತುಗಳು ಇಂದೂ ಸತ್ಯದಂತೆ ನಮ್ಮ ಕಣ್ಣೆದುರಿಗಿದೆ: “ನಮ್ಮ ಕನ್ನಡ ನುಡಿಗೆ ಈಗ ಒದಗಿರುವ ಅವಸ್ಥೆಯನ್ನು ನೋಡಿದರೆ ಕಣ್ಣೀರು ಬರುವುದು. ಆದರೆ ಕಣ್ಣೀರು ಸುರಿಸುವುದರಿಂದ ಕಾರ್ಯಸಿದ್ಧಿಯಾಗದು. ಕನ್ನಡಕ್ಕೆ ತನ್ನ ಸ್ವಗೃಹದಲ್ಲಿಯೇ ಯಾಜಮಾನ್ಯವು ತಪ್ಪಿರುವುದು. ನಮ್ಮ ಮನೆಯಲ್ಲಿ ನಾವು ಯಜಮಾನನಲ್ಲದಂತಾಗಿರುವುದು ಈ ದುರವಸ್ಥೆಗೆ ಮುಖ್ಯ ಕಾರಣವು ಆಂಗ್ಲಭಾಷೆಯ ಪ್ರಾಬಲ್ಯವೇ ಎಂಬುದನ್ನು ನಾನು ತಮ್ಮಲ್ಲಿ ಹೊಸದಾಗಿ ಅರಿಕೆ ಮಾಡಬೇಕಾದುದಿಲ್ಲ. ಆಂಗ್ಲ ಭಾಷೆಯು ಇಂಡಿಯಾ ದೇಶದ ಭಾಷೆಗಳ ಮೇಲೆಲ್ಲಾ ಒಂದು ವಿಧವಾದ ಮಂಕುಬೂದಿಯನ್ನು ಎರಚಿರುವುದೆಂದು ಹೇಳಿದರೆ ಅದು ಅತ್ಯುಕ್ತಿಯಾಗಲಾರದು. ದೇಶಭಾಷೆಯನ್ನು ವಿರೂಪಗೊಳಿಸಿ ಅದರ ಹುಟ್ಟನ್ನು ಕೆಡಿಸುವುದರಲ್ಲಿ ಇಂಗ್ಲಿಷು ಅಭ್ಯಾಸ ಮಾಡಿರುವ ನಮ್ಮ ಕನ್ನಡಿಗರನ್ನು ಬಿಟ್ಟರೆ ಯಾರೂ ಇಲ್ಲ. ಇಟ್ಟಿಗೆಗಳನ್ನು ಒಂದಕ್ಕೊಂದನ್ನಂಟಿಸಿ ಭದ್ರಪಡಿಸುವ ಗಾರೆಯಂತೆ ಭಾಷೆಯು ಜನರನ್ನು ಸೇರಿಸತಕ್ಕ ಒಂದು ಬಗೆಯ ಅಂಟು. ಜನರ ಐಕಮತ್ಯವನ್ನು ಹೆಚ್ಚಿಸುವ ಉಪಾಯಗಳಲ್ಲಿ ಭಾಷೆಯೂ ಒಂದೆಂಬುದನ್ನು ನಾವು ಮರೆಯಲಾಗದು”.
ಈ ಮಹನೀಯರು 1938ರ ಜುಲೈ 23ರಂದು ಈ ಲೋಕವನ್ನಗಲಿದರು.
On the birth anniversary of great administrator and contributor Sir K P Puttanna Chetty
ಕಾಮೆಂಟ್‌ಗಳು