‘ಜಸ್ಟ್ ಬುಕ್ಸ್’ - ಹೊಸ ಕಾಲದ ಗ್ರಂಥಾಲಯ
-ರಮೇಶ ಕೆ
ಮಲ್ಲೇಶ್ವರದಲ್ಲಿ ಪುಸ್ತಕ ಪಡೆದು ಜೆ.ಪಿ. ನಗರದಲ್ಲಿ ಹಿಂತಿರುಗಿಸುವ, ಗ್ರಂಥಾಲಯಕ್ಕೆ ಹೋಗಿ ಗ್ರಂಥಪಾಲಕರ ಸಹಾಯವಿಲ್ಲದೇ ಓದುಗರೇ ಪುಸ್ತಕ ಪಡೆಯುವ ಹಾಗೂ ಹಿಂತಿರುಗಿಸುವ, ತಡವಾದರೆ ದಂಡ ವಿಧಿಸದ, ಬೇಕೆಂದರೆ ಮನೆಬಾಗಿಲಿಗೆ ಪುಸ್ತಕ ತಲುಪಿಸುವ ವ್ಯವಸ್ಥೆ `ಜಸ್ಟ್ ಬುಕ್ಸ್ ಸಿಎಲ್‌ಸಿ' (ಕಮ್ಯುನಿಟಿ ಲೈಬ್ರರಿ ಚೈನ್) ಗ್ರಂಥಾಲಯಗಳಲ್ಲಿದೆ.
ಸರ್ಕಾರದ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಕೆಲವು ಪುಸ್ತಕಗಳು ದೊರೆಯದಿದ್ದಾಗ ಓದುಗರನ್ನು ಸೆಳೆಯುವುದು ಖಾಸಗಿ ಮಾಲೀಕತ್ವದ ಇಂಥ ಗ್ರಂಥಾಲಯಗಳು. ವೈಟ್‌ಫೀಲ್ಡ್‌ನಲ್ಲಿ 2008ರಲ್ಲಿ ಆರಂಭವಾದ ಜಸ್ಟ್ ಬುಕ್ಸ್ ಸಿಎಲ್‌ಸಿ ಗ್ರಂಥಾಲಯ ಬೆಂಗಳೂರು ಒಂದರಲ್ಲೇ 35 ಮಳಿಗೆಗಳನ್ನು ಹೊಂದಿದೆ. ಮೈಸೂರು, ಮಂಗಳೂರುಗಳಲ್ಲೂ ಇದರ ಶಾಖೆಗಳಿವೆ. ಅಲ್ಲದೆ ಚೆನ್ನೈ, ಕೊಯಂಬತ್ತೂರು, ಎರ್ನಾಕುಲಂ, ಹೈದರಾಬಾದ್, ಕೋಲ್ಕತ್ತ, ಪುಣೆ, ಮುಂಬೈಗಳಲ್ಲೂ ಗ್ರಂಥಾಲಯಗಳಿವೆ. ನಗರದ ಶಾಖೆಯೊಂದರಲ್ಲಿ ಪುಸ್ತಕ ಪಡೆದವರು ಮುಂಬೈನಲ್ಲೂ ಹಿಂತಿರುಗಿಸಿ, ಮತ್ತೊಂದು ಪುಸ್ತಕ ಪಡೆಯುವ ವ್ಯವಸ್ಥೆ ಇಲ್ಲಿದೆ. ಸದ್ಯದಲ್ಲಿ ಇದು ದೇಶದಲ್ಲಿ ಒಟ್ಟು 62 ಗ್ರಂಥಾಲಯಗಳನ್ನು ಹೊಂದಿದೆ. ಓದುಗರಿಂದ ದೊರೆತ ಪ್ರತಿಕ್ರಿಯೆಯೇ ಇಷ್ಟು ಪ್ರಮಾಣದಲ್ಲಿ ಈ ಖಾಸಗಿ ಗ್ರಂಥಾಲಯ ಬೆಳೆಯಲು ಕಾರಣವಾಗಿದೆ.
ಎಟಿಎಂ ಯಂತ್ರದ ಮಾದರಿಯ `ಸೆಲ್ಫ್ ಸರ್ವೀಸ್ ಕಿಯೋಸ್ಕ್' ವ್ಯವಸ್ಥೆಯ ಮೂಲಕ ಓದುಗರು ನೇರವಾಗಿ ಗ್ರಂಥಾಲಯಕ್ಕೆ ಬಂದು ತಮಗೆ ಬೇಕಾದ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ತೆಗೆದುಕೊಂಡು ಹೋಗಬಹುದು. ಗ್ರಂಥಾಲಯದ ಸಿಬ್ಬಂದಿ ಇದ್ದರೂ ಅವರ ಸಹಾಯವಿಲ್ಲದೇ ಪುಸ್ತಕ ಹಿಂತಿರುಗಿಸಬಹುದು.
ಬೇಕಾದ ಪುಸ್ತಕಗಳನ್ನು ಹುಡುಕಬಹುದು. ಜಸ್ಟ್ ಬುಕ್ಸಿನ ಎಲ್ಲಾ ಗ್ರಂಥಾಲಯಗಳ ನಡುವೆ ನೆಟ್‌ವರ್ಕ್ ಇದೆ. ಅದರ ಸಹಾಯದಿಂದ ಓದುಗರು ಯಾವ ಪುಸ್ತಕ ಯಾವ ಶಾಖೆಗಳಲ್ಲಿದೆ ಎಂಬುದನ್ನು ನೋಡಬಹುದು. ಕೇಳಿದ ಪುಸ್ತಕ ಒಂದು ಶಾಖೆಯಲ್ಲಿಲ್ಲದಿದ್ದರೆ, ಯಾವುದೇ ಸ್ಥಳದ ಬೇರೆಯ ಶಾಖೆಯಿಂದ ಸಹಾ ಅದನ್ನು ತರಿಸಿಕೊಡುವ ವ್ಯವಸ್ಥೆ ಇದೆ.
ಆನ್‌ಲೈನ್‌ನಲ್ಲಿ ಮನವಿ ಮಾಡಿದರೆ ಮನೆ ಬಾಗಿಲಿಗೆ ಪುಸ್ತಕ ತಲುಪಿಸುವ ವ್ಯವಸ್ಥೆಯೂ ಇಲ್ಲಿದೆ. ಎರಡು, ಮೂರು, ನಾಲ್ಕು ಪುಸ್ತಕಗಳು... ಹೀಗೆ ಆರು ಪ್ಲಾನ್‌ಗಳ ಆಯ್ಕೆಗಳು ಈ ಗ್ರಂಥಾಲಯದಲ್ಲಿವೆ.
ಫಿಕ್ಷನ್, ನಾನ್‌ಫಿಕ್ಷನ್, ವ್ಯವಹಾರ ಮತ್ತು ನಿರ್ವಹಣೆ, ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ, ಮಕ್ಕಳ ಪುಸ್ತಕಗಳು, ನಿಯತಕಾಲಿಕೆ ಹಾಗೂ ಸ್ಥಳೀಯ ಭಾಷೆ ವಿಭಾಗಗಳು ಇಲ್ಲಿವೆ. ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ಜಸ್ಟ್ ಬುಕ್ಸ್ ಗ್ರಂಥಾಲಯ ತೆರೆದಿರುತ್ತದೆ. ಪ್ರತಿ ಸೋಮವಾರ ರಜೆ.
`ಸದಸ್ಯತ್ವ ಪಡೆದ ಓದುಗರಿಗೆ `ರೇಡಿಯೊ ಫ್ರೀಕ್ವೆಂಟ್ಲಿ ಐಡೆಂಟಿಫಿಕೇಶನ್ ಡಿವೈಸ್' (ಆರ್‌ಎಫ್‌ಐಡಿ) ಕಾರ್ಡ್ ನೀಡಲಾಗುತ್ತದೆ. ಆ ಕಾರ್ಡ್‌ನ ಸಹಾಯದಿಂದ ಅವರು ನಮ್ಮ ಯಾವುದೇ ಗ್ರಂಥಾಲಯದ ಶಾಖೆಗಳಲ್ಲಿ ಪುಸ್ತಕ ಪಡೆಯಬಹುದು, ಹಿಂತಿರುಗಿಸಬಹುದು. ಕುಟುಂಬದ ಯಾವೊಬ್ಬ ಸದಸ್ಯ ಬಂದೂ ಪುಸ್ತಕ ಪಡೆಯಬಹುದು. ಇಲ್ಲಿ ಎಂಟು ಲಕ್ಷ ಪುಸ್ತಕಗಳಿವೆ.
ಆಯಾ ಪ್ರದೇಶಗಳ ಓದುಗರ ಬೇಡಿಕೆ ಹಾಗೂ ಭಾಷಿಗರ ಸಂಖ್ಯೆಗೆ ಅನುಗುಣವಾಗಿ ಪುಸ್ತಕಗಳನ್ನು ಇಡಲಾಗುತ್ತದೆ. ಕನ್ನಡ ಪುಸ್ತಕಗಳಿಗೆ ಕನ್ನಡ ಪುಸ್ತಕಗಳಿಗೇ ಮೀಸಲಾದ 'ಮುನ್ನುಡಿ' ಗ್ರಂಥಾಲಯ ಬಸವನಗುಡಿಯಲ್ಲಿದೆ.
ಸುಂದರ್ ರಾಜನ್ ಕಾಳಜಿಯ ಫಲ
ತಮಿಳುನಾಡಿನ ಸುಂದರ್ ರಾಜನ್ ಅವರು ಜಸ್ಟ್‌ಬುಕ್ಸ್ ಗ್ರಂಥಾಲಯ ಸಂಸ್ಥಾಪಕರು. ಗ್ರಂಥಾಲಯ ಸ್ಥಾಪನೆಗೆ ಒಂದು ಕಾರಣವಿದೆ. ಎಂಜಿನಿಯರ್ ವೃತ್ತಿಯಲ್ಲಿದ್ದ ಸುಂದರ್ ಅವರು ಪುಸ್ತಕಪ್ರೇಮಿ. ಹಾಗಾಗಿ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದರು. ಆದರೆ ವೈಟ್‌ಫೀಲ್ಡ್‌ನ ತಮ್ಮ ಮನೆ ಸುತ್ತಮುತ್ತ ಗ್ರಂಥಾಲಯವಿಲ್ಲದ್ದರಿಂದ ಅವರೇ ಸ್ವತಃ 2008ರಲ್ಲಿ ಜಸ್ಟ್‌ಬುಕ್ಸ್ ಹೆಸರಿನ ಗ್ರಂಥಾಲಯ ಪ್ರಾರಂಭಿಸಿದರು.
ಆರಂಭವಾದ ಎರಡು ತಿಂಗಳಲ್ಲೇ ಓದುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿತು. ನಂತರ ಬೇರೆ ಬೇರೆ ಬಡಾವಣೆಗಳಲ್ಲೂ, ಇತರ ನಗರಗಳಲ್ಲೂ ಶಾಖೆಗಳು ಆರಂಭವಾಗತೊಡಗಿದವು.
ಬೆಂಗಳೂರಿನ ಜಸ್ಟ್‌ಬುಕ್ಸ್ ಶಾಖೆಗಳು: ವೈಟ್‌ಫೀಲ್ಡ್ (ಐದು ಕಡೆ), ಜೆ.ಪಿ.ನಗರ, ಬೆಳ್ಳಂದೂರು, ಇಂದಿರಾನಗರ, ಕಲ್ಯಾಣ ನಗರ, ಎಚ್.ಎಸ್.ಆರ್. ಬಡಾವಣೆ, ಫ್ರೇಜರ್‌ಟೌನ್, ಕೋರಮಂಗಲ (ಎರಡು ಕಡೆ), ಮಧುರಾ ಗಾರ್ಮೆಂಟ್ಸ್, ಜಯನಗರ, ಆರ್‌ಎಂವಿ 2ನೇ ಹಂತ, ಡಾಲರ್ಸ್ ಕಾಲೊನಿ, ಸರ್ಜಾಪುರ ರಸ್ತೆ, ಮಲ್ಲೇಶ್ವರ, ವಿಜಯ ಬ್ಯಾಂಕ್ ಲೇಔಟ್, ವಿಜಯನಗರ, ಎಇಸಿಎಸ್ ಲೇಔಟ್, ರಾಜರಾಜೇಶ್ವರಿ ನಗರ, ಶಂಕರ್‌ನಗರ, ಯಲಹಂಕ, ಬನಶಂಕರಿ, ವಿದ್ಯಾರಣ್ಯಪುರ, ಎಲೆಕ್ಟ್ರಾನಿಕ್ ಸಿಟಿ, ಬಸವೇಶ್ವರನಗರ, ಕಗ್ಗದಾಸಪುರ, ರಾಜಾಜಿನಗರ.
ಮೈಸೂರಿನ ಕುವೆಂಪು ನಗರ ಮತ್ತು ಕಾಳಿದಾಸ ರಸ್ತೆಯಲ್ಲಿ ಎರಡು ಶಾಖೆಗಳು ಮತ್ತು ಮಂಗಳೂರಿನಲ್ಲಿ ಒಂದು ಶಾಖೆ ಇದೆ.
ಜಸ್ಟ್ ಬುಕ್ಸಿನ ಅಂತರಜಾಲ ತಾಣ www.justbooksclc.com.
ಕೃಪೆ: ಪ್ರಜಾವಾಣಿ.
(ಕೆ. ರಮೇಶ್ ಅವರ ಲೇಖನಕ್ಕೆ ನನಗೆ ತಿಳಿದಿರುವ ಕೆಲವೊಂದು ಬದಲಾವಣೆಗಳನ್ನು ಆಳವಡಿಸಿದ್ದೇನೆ)
Tag: Just Books
e jastbook nida namma manege pusthaka tharisikondu odi hindirugisabahude?sahodara e bage mahithi nidi..
ಪ್ರತ್ಯುತ್ತರಅಳಿಸಿನಮಸ್ಕಾರ. ತಾವು ಈ ತಾಣಕ್ಕೆ ಭೇಟಿ ಕೊಟ್ಟರೆ ಎಲ್ಲ ವಿವರಗಳೂ ದೊರಕುತ್ತವೆ
ಪ್ರತ್ಯುತ್ತರಅಳಿಸಿhttp://justbooksclc.com/
ನಮಸ್ಕಾರ