ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜೇನುರಾಣಿ

ಜೇನುರಾಣಿ

ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಮೂರು ಜನ ಗಂಡುಮಕ್ಕಳಿದ್ದರು. ಹುಡುಗರು ಪ್ರಾಪ್ತವಯಸ್ಕರಾದಾಗ ಪ್ರಪಂಚ ಪರ್ಯಟನೆಗೆಂದು ಹೊರಟರು. ದಾರಿಯಲ್ಲಿ ನಡೆಯುತ್ತಿರುವಾಗ ಅವರಿಗೆ ದೊಡ್ಡದೊಂದು ಇರುವೆಯ ಗೂಡು ಸಿಕ್ಕಿತು. ದೊಡ್ಡವರಿಬ್ಬರೂ ಅದನ್ನು ತುಳಿಯಲು ಹೋದಾಗ ಕಿರಿಯವನು ಪಾಪ, ಅವಕ್ಕೇಕೆ ತೊಂದರೆ ಕೊಡುತ್ತೀರಾ? ಬೇಡ ಬನ್ನಿಎಂದ. ಅವರು ಇನ್ನೂ ಸ್ವಲ್ಪ ಮುಂದೆ ಹೋದಾಗ ಕೊಳವೊಂದು ಸಿಕ್ಕಿತು. ಅದರಲ್ಲಿ ಬಾತುಕೋಳಿಯೊಂದು ಈಜುತ್ತಿತ್ತು. ಅದನ್ನು ಹಿಡಿಯಲೆಂದು ದೊಡ್ಡವರು ಹೋದಾಗ ಕಿರಿಯವನು ಅದಕ್ಕೇಕೆ ಕಷ್ಟ ಕೊಡುತ್ತೀರಾ? ಬೇಡ, ಬನ್ನಿ, ಮುಂದೆ ಹೋಗೋಣಎಂದ. ಇನ್ನೂ ತುಸು ದೂರ ನಡೆದಾಗ ಮರವೊಂದರಿಂದ ಜೇನು ಗೂಡೊಂದು ತೂಗಾಡುತ್ತಿತ್ತು. ಅದಕ್ಕೆ ಬೆಂಕಿ ಹಾಕಿ ಜೇನು ನೊಣಗಳನ್ನು ಓಡಿಸಿ ಜೇನುತುಪ್ಪ ತಿನ್ನ ಬೇಕ್ಕೆಂದು ದೊಡ್ಡವರು ಬಯಸಿದರು. ಬೇಡ ಪ್ರಾಣಿಹಿಂಸೆ ಮಾಡಬಾರದುಎಂದ ಕಿರಿಯವನು.

ಹತ್ತಾರು ದಿನಗಳ ಬಳಿಕ ಅವರ ಮೂವರೂ ರಾಜನೊಬ್ಬನ ಅರಮನೆಗೆ ಹೋದರು. ರಾಜನ ಅರಮನೆಯ ಸುತ್ತಲೂ ಅಮೃತ ಶಿಲೆಯ ಪ್ರತಿಮೆಗಳಿದ್ದವು. ಅದೇನೆಂದು ಕೇಳಿದಾಗ, ರಾಜ ಹೇಳಿದ ಸಾಹಸಕಾರ್ಯಗಳನ್ನು ಮಾಡಲಾಗದವರು ಅಮೃತ ಶಿಲೆಯ ಪ್ರತಿಮೆಗಳಾಗುತ್ತಾರೆಂದು ತಿಳಿಯಿತು. ರಾಜಕುಮಾರರು ಧೈರ್ಯದಿಂದ ರಾಜನ ಬಳಿಗೆ ಹೋಗಿ, “ನೀವು ಹೇಳಿದ್ದನ್ನು ನಾವು ಮಾಡುತ್ತೇವೆಎಂದರು.

ರಾಜ ಮೊದಲು ಕೆಲಸ ಹೇಳಿದ: ಕಾಡಿನಲ್ಲಿ ಪಾಚಿಯ ಕೆಳಗೆ ರಾಜಕುಮಾರಿಯ ಸರದ ಸಾವಿರ ಮುತ್ತುಗಳು ಬಿದ್ದಿವೆ. ಅವನ್ನು ಸಂಜೆಯಾಗುವುದರೊಳಗೆ ಆರಿಸಿ ತರಬೇಕು. ಇಲ್ಲದಿದ್ದರೆ ಅಮೃತ ಶಿಲೆಯ ಪ್ರತಿಮೆಗಳಾಗುತ್ತೀರಿ.

ದೊಡ್ಡವನು ಕಾಡಿಗೆ ಹೋದ. ಅವನು ನೂರು ಮುತ್ತು ಆರಿಸುವ ಹೊತ್ತಿಗೆ ಕತ್ತಲಾದುದರಿಂದ ಅವನು ಪ್ರತಿಮೆಯಾದ. ಎರಡನೆಯವನು ಇನ್ನೊರು ಮುತ್ತು ಆರಿಸಿ ಪ್ರತಿಮೆಯಾದ. ಕಡೆಯವನು ದುಃಖದಿಂದ ಕುಳಿತಿದ್ದಾಗ, ಅವನು ರಕ್ಷಿಸಿದ್ದ ಇರುವೆರಾಜ ಬಂದು ಕೇಳಿತು: ರಾಜಕುಮಾರ ನನ್ನಿಂದ ಏನಾಗಬೇಕು ಹೇಳು?” ರಾಜಕುಮಾರ ತನ್ನ ಕಷ್ಟವನ್ನು ತೋಡಿಕೊಂಡ. ಇರುವೆ ತನ್ನ ಜೊತೆಗಾರರನ್ನು ಕರೆದುಕೊಂಡು ಬಂದು ಸಂಜೆಯೊಳಗೆ ಸಾವಿರ ಮುತ್ತುಗಳನ್ನು ಆರಿಸಿ ರಾಶಿ ಹಾಕಿಸಿತು.

ಎರಡನೆಯ ಕೆಲಸ: ರಾಜಕುಮಾರಿಯ ಕೊಠಡಿಯ ಬೀಗದಕೈ ಕೊಳದಲ್ಲಿ ಬಿದ್ದು ಹೋಗಿದೆ. ಅದನ್ನು ತೆಗೆದುಕೊಂಡು ಬರಬೇಕುಎಂದ ರಾಜ. ರಾಜಕುಮಾರ ರಕ್ಷಿಸಿದ್ದ ಬಾತುಕೋಳಿ ನೀರಿನಲ್ಲಿ ಮುಳುಗಿ ಬೀಗದಕೈಯನ್ನು ತಂದುಕೊಟ್ಟಿತು.

ರಾಜನೆಂದ: ಇನ್ನು ಮೂರನೆಯ ಕೆಲಸ: ಒಂದೇ ರೀತಿ ಇರುವ ಮೂವರು ರಾಜಕುಮಾರಿಯರಲ್ಲಿ ಒಬ್ಬಳು ಸಕ್ಕರೆ ಪಾನಕ ಕುಡಿದಿದ್ದಾಳೆ, ಇನ್ನೊಬ್ಬಳು ಪಾಯಸ ಸೇವಿಸಿದ್ದಾಳೆ, ಮೂರನೆಯವಳು ಜೇನುತುಪ್ಪ ಸವಿದಿದ್ದಾಳೆ. ಈ ಮೂವರಲ್ಲಿ ಜೇನು ತುಪ್ಪ ಸವಿದವಳು ಯಾರು? ಎಂದು ಹೇಳಬೇಕು.

ರಾಜಕುಮಾರ ಯೋಚಿಸಿದ ಹೊಳೆಯಲಿಲ್ಲ. ಕಡೆಗೆ ಜೇನು ರಾಣಿ ಮೂವರು ರಾಜಕುಮಾರಿಯರ ತುಟಿಗಳನ್ನು ಮೂಸಿ, ಜೇನು ತುಪ್ಪ ಸವಿದಿದ್ದ ರಾಜಕುಮಾರಿಯ ತುಟಿಗಳ ಮೆಲೆ ಕುಳಿತಿತು. ರಾಜಕುಮಾರ ತಕ್ಷಣ ಅವಳನ್ನು ತೋರಿಸಿ ಹೇಳಿದ: ಅವಳೇ ಜೇನುತುಪ್ಪ ಸವಿದಿರೋ ಹುಡುಗಿ.

ಆಗ ಕಿರಿಯ ರಾಜಕುಮಾರಿ ಬಂದು ಕಿರಿಯ ರಾಜಕುಮಾರನಿಗೆ ಮಾಲೆ ಹಾಕಿದಳು. ತಕ್ಷಣ ಅಮೃತಶಿಲೆಯ ಪ್ರತಿಮೆಗಳಾಗಿದ್ದವರೆಲ್ಲಾ ಜೀವ ತಳೆದರು. ಇನ್ನುಳಿದ ದೊಡ್ಡ ರಾಜಕುಮಾರಿಯರನ್ನು ಕಿರಿಯವನ ಅಣ್ಣದಿಂರು ವಿವಾಹವಾಗಿ ಎಲ್ಲರೂ ಸುಖವಾಗಿದ್ದರು.

ನಿರೂಪಣೆ:  ಡಾ. ಅನುಪಮಾ ನಿರಂಜನ, 'ದಿನಕ್ಕೊಂದು ಕಥೆ'


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ