ತೊರೆಯ ಹಂಬಲ
ತೊರೆಯ ಹಂಬಲ
ಕಾಣದ ಕಡಲಿಗೆ ಹಂಬಲಿಸಿದೆ ಮನ
ಕಾಣಬಲ್ಲೆನೇ ಒಂದು ದಿನ ?
ಕಡಲನು ಕೂಡಬಲ್ಲೆನೇ ಒಂದು ದಿನ ?
ಕಾಣದ ಕಡಲಿನ ಮೊರೆತದ ಜೋಗುಳ
ಒಳಗಿವಿಗೆಂದೂ ಕೇಳುತಿದೆ
ನನ್ನ ಕಲ್ಪನೆಯು ತನ್ನ ಕಡಲನೇ
ಚಿತ್ರಿಸಿ ಚಿಂತಿಸಿ ಸುಯ್ಯುತಿದೆ
ಎಲ್ಲಿರುವುದೊ ಅದು
ಎಂತಿರುವುದೊ ಅದು
ನೋಡಬಲ್ಲೆನೇ ಒಂದು ದಿನ
ಕಡಲನು ಕೂಡಬಲ್ಲೆನೇ ಒಂದು ದಿನ !
ಸಾವಿರ ಹೊಳೆಗಳು ತುಂಬಿ ಹರಿದರೂ
ಒಂದೇ ಸಮನಾಗಿಹುದಂತೆ !
ಸುನೀಲ ವಿಸ್ತರ ತರಂಗ ಶೋಭಿತ
ಗಂಭೀರಾಂಬುಧಿ ತಾನಂತೆ !
ಮುನ್ನೀರಂತೆ
ಅಪಾರವಂತೆ
ಕಡಲನು ಕಾಣಬಲ್ಲೆನೇ ಒಂದು ದಿನ
ಅದರೊಳು ಕರಗಲಾರೆನೇ ಒಂದು ದಿನ.
ಜಟಿಲ ಕಾನನದ ಕುಟಿಲ ಪಥಗಳಲಿ
ಹರಿವ ತೊರೆಯು ನಾನು !
ಎಂದಿಗಾದರೂ ಕಾಣದ ಕಡಲಿಗೆ
ಸೇರಬಲ್ಲೆನೇನು ?
ಆ ಪುಣ್ಯವೆಂದಿಗೊ
ಕಾಲವೆಂದಿಗೊ
ಕಡಲೊಲವಿನ ಆ ರತ್ನ ಗರ್ಭದಲಿ
ಸೇರಬಹುದೆ ನಾನು
ಕಡಲ ನೀಲಿಯೊಳು
ಕರಗಬಹುದೆ ನಾನು ?
ಸಾಹಿತ್ಯ: ಜಿ. ಎಸ್. ಶಿವರುದ್ರಪ್ಪ
Tag: Kaanada kadalige, Kanada kadalige
ಕಾಮೆಂಟ್‌ಗಳು