ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಭರತ ಭೂಮಿ


ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು:
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು.

ತುಹಿನ ಗಿರಿಯ ಸಿರಿಯ ಮುಡಿಯ
ಹಿರಿಯ ಕಡಲು ತೊಳೆಯುವಡಿಯ
ಪೈರು ಪಚ್ಚೆ ಪಸುರಿನುಡೆಯ
ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು:
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು.

ಸಿಂಧು, ಯಮುನೆ, ದೇವಗಂಗೆ,
ತಪತಿ, ಕೃಷ್ಣೆ, ಭದ್ರೆ, ತುಂಗೆ,
ಸಲಿಲ ತೀರ್ಥ ಪುಣ್ಯರಂಗೆ
ಭರತ ಭೂಮಿ ನನ್ನ ತಾಯಿ,
ನನ್ನ ಹೊರೆವ ತೊಟ್ಟಿಲು:
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು.

ಮತದ ಬಿರುಕುಗಳನು ತೊರೆವೆ;
ನುಡಿಗಳೊಡಕುಗಳನು ಮರೆವೆ;
ತೊತ್ತ ತೊಡಕುಗಳನು ಬಿರಿವೆ;
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು.
ಭರತ ಭೂಮಿ ನನ್ನ ತಾಯಿ,
ನನ್ನ ಪೊರೆವ ತೊಟ್ಟಿಲು:
ಸ್ವಾತಂತ್ರ್ಯದ ಸ್ವರ್ಗಕೇರಿ
ಪುಣ್ಯದೇಣಿ ಮೆಟ್ಟಲು!

ಸಾಹಿತ್ಯ: ಕುವೆಂಪು

Tag: Bharata Bhumi Nanna Thaayi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ