ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮ್ಮ ನಿಮ್ಮ ಮನೆಗಳಲ್ಲಿ


ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ 
ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ 

ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳಗಮ್ಮ
ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ 

ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ
ಅರಳೆಲೆ ಕನಕ ಕುಂಡಲ ಕಾಲಲಂದುಗೆ ಉರಗ ಶಯನ ಬಂದ ಕಂಡಿರೇನೆ 

ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿ ಶಂಖ ಚಕ್ರಗಳ ಧರಿಸಿಹನಮ್ಮ
ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷನು ಬಂದ ಕಾಣಿರೇನೆ

ಮಾವನ ಮಡುಹಿದ ಶಕಟನ ಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮ
ಆವ ತಾಯಿಗೆ ಈರೇಳು ಜಗ ತೋರಿದ ಕಾವನಯ್ಯ ಬಂದ ಕಾಣಿರೇನೆ 

ಕಾಲಲಿ ಕಿರು ಗೆಜ್ಜೆ ನೀಲದ ಬಾವುಲಿ ನೀಲ ವರ್ಣನು ನಾಟ್ಯವಾಡುತಲಿ
ಮೇಲಾಗಿ ಬಾಯಲ್ಲಿ ಜಗವನ್ನು ತೋರಿದ ಮೂಲೋಕದೊಡೆಯನ ಕಂಡಿರೇನೆ 

ಹದಿನಾರು ಸಾವಿರ ಗೋಪಿಯರ ಕೂಡಿ ಚತುರಂಗ ಪಗಡೆಯನಾಡುವನಮ್ಮ
ಮದನ ಮೋಹನ ರೂಪ ಎದೆಯಲ್ಲಿ ಕೌಸ್ತುಭ ಮಧುಸೂದನ ಬಂದ ಕಾಣಿರೇನೆ 

ತೆತ್ತೀಸ ಕೋಟಿ ದೇವರ್ಗಳ ಒಡಗೂಡಿ ಹತ್ತಾವತಾರವನೆತ್ತಿದನಮ್ಮ
ಸತ್ಯಭಾಮಾ ಪ್ರಿಯ ಪುರಂದರ ವಿಟ್ಠಲ ನಿತ್ಯೋತ್ಸವ ಬಂದ ಕಾಣಿರೇನೆ

ಸಾಹಿತ್ಯ: ಪುರಂದರದಾಸರು



Tag: Amma nimma manegalalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ