ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು


ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು,
ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು -
ಬಳೆಯ ತೊಡಿಸುವುದಿಲ್ಲ ನಿಮಗೆ.

ಮುಡಿದ ಮಲ್ಲಿಗೆ ಅರಳು ಬಾಡಿಲ್ಲ, ರಾಯರೇ,
ತೌರಿನಲಿ ತಾಯಿ ನಗುತಿಹರು.
ಕುಡಿದ ನೀರಲುಗಿಲ್ಲ, ಕೊರಗದಿರಿ, ರಾಯರೇ -
ಅಮ್ಮನಿಗೆ ಬಳೆಯ ತೊಡಿಸಿದರು.

ಅಂದು ಮಂಗಳವಾರ ನವಿಲೂರ ಕೇರಿಯಲಿ
ಓಲಗದ ಸದ್ದು ತುಂಬಿತ್ತು;
ಬಳೆಯ ತೊಡಿಸಿದರಂದು ಅಮ್ಮನಿಗೆ ತೌರಿನಲಿ
ಅಂಗಳದ ತುಂಬ ಜನವಿತ್ತು .

ಸಿರಿಗೌರಿಯಂತೆ ಬಂದರು ತಾಯಿ ಹಸೆಮಣೆಗೆ,
ಸೆರಗಿನಲಿ ಕಣ್ಣೀರನೊರಸಿ;
ಸುಖದೊಳಗೆ ನಿಮ್ಮ ನೆನೆದರು ತಾಯಿ ಗುಣವಂತೆ,
ದೀಪದಲಿ ಬಿಡುಗಣ್ಣ ನಿಲಿಸಿ.

ಬೇಕಾದ ಹಣ್ಣಿಹುದು, ಹೂವಿಹುದು ತೌರಿನಲಿ
ಹೊಸ ಸೀರೆ, ರತ್ನದಾಭರಣ
ತಾಯಿ ಕೊರಗುವರಲ್ಲಿ ನೀವಿಲ್ಲದೂರಿನಲಿ
ನಿಮಗಿಲ್ಲ ಒಂದು ಹನಿ ಕರುಣ.

ದಿನವಾದ ಬಸುರಿ ಉಸ್ಸೆಂದು ನಿಟ್ಟುಸಿರೆಳೆದು
ಕುದಿಯಬಾರದು, ನನ್ನ ದೊರೆಯೆ;
ಹಿಂಡಬಾರದು ದುಂಡುಮಲ್ಲಿಗೆಯ ದಂಡೆಯನು;
ಒಣಗಬಾರದು ಒಡಲ ಚಿಲುಮೆ.

ಮುಳಿಸು ಮಾವನ ಮೇಲೆ; ಮಗಳೇನ ಮಾಡಿದಳು?
ನಿಮಗೇತಕೀ ಕಲ್ಲುಮನಸು?
ಹೋಗಿ ಬನ್ನಿರಿ, ಒಮ್ಮೆ,  ಕೈಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು.


ಸಾಹಿತ್ಯ:  ಕೆ.ಎಸ್. ನರಸಿಂಹಸ್ವಾಮಿ

ಚಿತ್ರಗಾರರು: ಗೋಪಾಲ ಖೆತಾಂಚಿ 
(Artist: Gopal Khetanchi)


ಸಂಗೀತ: ಸಿ.ಎಸ್. ಅಶ್ವಥ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ