ಹುಸೇನ್ ಸಾಬಿ - ಹುಸೇನಮ್ಮ
ಹುಸೇನ್ ಸಾಬಿ - ಹುಸೇನಮ್ಮ
-ಬೆಳಗೆರೆ ಕೃಷ್ಣಶಾಸ್ತ್ರಿ
ಸುಮಾರು 1940-45ನೆಯ ಇಸವಿ ಇರಬಹುದು. ನಾನು ಹೆಗ್ಗೆರೆಯಲ್ಲಿ ತಾತ್ಕಾಲಿಕ ಅಧ್ಯಾಪಕನಾಗಿ ಆಗಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಹುಸೇನಪ್ಪ ಎಂಬುವರೊಬ್ಬರು ನನ್ನ ಜೊತೆ ಅಧ್ಯಾಪಕರಾಗಿದ್ದರು. ಅವರು ಕಾಯಂ ಅಧ್ಯಾಪಕರು, ನಾನು ತಾತ್ಕಾಲಿಕ ಅಧ್ಯಾಪಕ. ತುಂಬಾ ಬಡತನದಲ್ಲಿಯೇ ಬದುಕು ಕಳೆದ ಮನುಷ್ಯ ಹುಸೇನ್ ಸಾಬಿ. ಆತನಿಗೆ ಮದುವೆಯಾಗಿತ್ತು. ಆಕೆಯ ಹೆಸರು ಹುಸೇನಮ್ಮ. ತುಂಬಾ ಸಾತ್ವಿಕ ಸ್ವಭಾವದ ಹೆಣ್ಣು ಮಗಳಾಕೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳು.
ತೆಳ್ಳಗೆ ಸಾಧಾರಣ ಮೈಕಟ್ಟಿನ ಕಂದು ಬಣ್ಣದ ಹುಸೇನ್ ಸಾಬಿ ತುಂಬಾ ಶ್ರದ್ಧೆಯಿಂದ ಪಾಠ ಮಾಡುತ್ತಿದ್ದರು. ಒಂದು ಸಂಜೆ ಊರಿನ ಓಣಿಯಲ್ಲಿ ಸಿಕ್ಕರು. ‘ಏನ್ ಸಾಹೇಬರೆ, ಈ ಕಡೆಗೆ ಎಂದು ಕೇಳಿದೆ. ‘ಏನಿಲ್ಲ ಚಿಕ್ಕಣ್ಣ ಎನ್ನುವ ಹುಡುಗನಿಗೆ ಮಧ್ಯಾಹ್ನ ಕ್ಲಾಸಿನಲ್ಲಿ ಲೆಕ್ಕ ಅರ್ಥವಾಗಲಿಲ್ಲ. ಅವನೊಬ್ಬನಿಗೇ ಹೇಳಿದರೆ ಕ್ಲಾಸಿನಲ್ಲಿ ಟೈಂ ವೇಸ್ಟಾಗುತ್ತೆ ಅಂತ ಅವನ ಮನೆಗೇ ಹೋಗಿ ಹೇಳಿಕೊಟ್ಟು ಬಂದೆ’ ಅಂದರು. ಇದು ಹುಸೇನ್ ಸಾಬಿ ಅವರಿಗೆ ಅಧ್ಯಾಪಕ ವೃತ್ತಿಯ ಬಗೆಗಿದ್ದ ಶ್ರದ್ಧೆ.
ಈ ಹುಸೇನ್ ಸಾಬಿಗೆ ಕ್ಷಯ ಬಂತು. ಕೆಮ್ಮು ಬಂದಾಗಲಂತೂ ಬಾಯಿಗೆ ಬಟ್ಟೆ ಇಟ್ಟುಕೊಂಡು ಕುಳಿತೇಬಿಡುತ್ತಿದ್ದರು. ಮೊದಲೇ ಬಡತನ. ಆ ದಿನಗಳಲ್ಲಿ ಹುಸೇನ್ ಸಾಬಿ ಅವರಿಗೆ ಹದಿನಾಲ್ಕು-ಹದಿನೈದು ರೂಪಾಯಿ ಸಂಬಳ (ನನಗೆ ಇಪ್ಪತ್ತು ರೂಪಾಯಿ – ನಾನು ಇಂಗ್ಲಿಷ್ ಅಧ್ಯಾಪಕ ಮತ್ತು ಎಸ್ ಎಸ್ ಎಲ್ ಸಿ ಮಾಡಿಕೊಂಡಿದ್ದೆ ಎಂಬ ಕಾರಣಕ್ಕೆ). ಆಗ ನ್ಯೂಟೈಪ್ ಮಿಡಲ್ ಸ್ಕೂಲುಗಳಿದ್ದವು. ಒಂದರಿಂದ ಎಂಟನೆಯ ತರಗತಿವರೆವಿಗೆ. ನಾನು ಐದರಿಂದ ಎಂಟನೆಯ ತರಗತಿಯವರೆವಿಗೆ ಇಂಗ್ಲಿಷ್ ಪಾಠ ಮಾಡುತ್ತಿದ್ದೆ. ಆ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಸಿದ್ಧಯ್ಯನವರಿಗೆ ಇಪ್ಪತ್ತೆರಡು ವರ್ಷ ಸೇವಾವಧಿಯಾಗಿದ್ದರೂ ಹದಿನೆಂಟೂವರೆ ರೂಪಾಯಿ ಎಂಟಾಣೆ ಸಂಬಳ. ವರ್ಷಕ್ಕೆ ಎಂಟಾಣೆ ಬಡತಿ. ಆದರೂ ಹಣದ ಕೊರತೆ ಎಂದೆನಿಸುತ್ತಿರಲಿಲ್ಲ. ಆ ಕಾಲಕ್ಕೆ ನಾವು ಬಹಳ ನೆಮ್ಮದಿಯಾಗಿದ್ದೆವು.
ಹುಸೇನ್ ಸಾಬಿ ಅವರಿಗೆ ಕ್ಷಯ ಎಂದು ಗೊತ್ತಾಗಿದ್ದೆ ನಮಗೆಲ್ಲ ಆತಂಕವಾಯ್ತು. ಸರಿ ಹೇಗಾದರೂ ಮಾಡಿ ಅವರನ್ನು ಮೈಸೂರಿಗೆ ಕಳುಹಿಸಿಕೊಡೋಣ ಎಂದು ನಮ್ಮ ನಮ್ಮಲ್ಲಿ ಮಾತಾಡಿಕೊಂಡೆವು. ಅದಕ್ಕೆ ಹಣ ಬೇಕಲ್ಲ! ನಾವೇ ಒಂದಷ್ಟು ಹಣ ಸೇರಿಸಿಕೊಡುವುದೆಂದು ಊರಿನಲ್ಲೆಲ್ಲ ಚಂದಾ ಎತ್ತಿದೆವು. ಎರಡು ರೂಪಾಯಿಯಿಂದ ಶುರುವಾಗಿ ಇಪ್ಪತ್ತು ರುಪಾಯಿಯವರೆಗೂ ಹಣ ಕೊಟ್ಟರು. ಸುಮಾರು ನೂರು-ನೂರೈವತ್ತು ರೂಪಾಯಿ ಒಟ್ಟಾಗಿರಬಹುದು. ಆ ದಿನವಷ್ಟೇ ನನಗೆ ಸಂಬಳ ಬಂದಿತ್ತು. ನನ್ನ ಜೇಬಿನಲ್ಲಿದ್ದ ಇಪ್ಪತ್ತು ರೂಪಯಿಗಳನ್ನು ಅವರಿಗೆ ಕೊಟ್ಟೆ. ಎಲ್ಲ ಸೇರಿ ಮೈಸೂರಿಗೆ ಕಳಿಸಿಕೊಟ್ಟೆವು.
ಹುಸೇನ್ ಸಾಬಿ ಮೈಸೂರಿಗೆ ಹೋದ ಸುಮಾರು ಹದಿನೈದು ದಿನಗಳ ನಂತರ ಆಸ್ಪತ್ರೆಯಲ್ಲಿಯೇ ತೀರಿಕೊಂಡರು. ಆ ಶವವನ್ನು ಕಾರೋ, ವ್ಯಾನೋ ಮಾಡಿಕೊಂಡು ತರಬೇಕಲ್ಲ – ಅದಕ್ಕೆ ಹಣವಿಲ್ಲದೆ ಆ ಆಸ್ಪತ್ರೆಯವರೇ ಶವಸಂಸ್ಕಾರ ಮಾಡುವ ಪರಿಸ್ಥಿತಿ ಬಂತು. ನಮಗೆಲ್ಲ ಬೇಸರವಾಯ್ತು. ಇದಾದ ತರುವಾಯ ನಾನು ಬೇರೆ ಬೇರೆ ಕಡೆಗೆ ವರ್ಗವಾಗಿ ಹೋದೆ.
---
ಇದಾಗಿ ಸುಮಾರು ದಶಕಗಳೇ ಕಳೆದಿದ್ದವು. ಸಂಜೆಯ ಹೊತ್ತು. ನಾನು ನಮ್ಮ ಗುಡಿಸಿಲಿನ ಹಿಂಭಾಗದಲ್ಲಿ ನನ್ನ ಬಟ್ಟೆ ಒಗೆದುಕೊಳ್ಳುತ್ತಿದ್ದೆ. ಹೆಣ್ಣು ಮಗಳೊಬ್ಬಳು ಬಂದು ‘ನಮಸ್ಕಾರ ಸ್ವಾಮಿ’ ಎಂದರು. ಸ್ವಲ್ಪ ಪಡಿಪಾಟಲಾದರೂ ಗುರುತು ಸಿಕ್ಕಿತು. ಆಕೆ ಹುಸೇನ್ ಸಾಬಿಯವರ ಹೆಂಡತಿ ಹುಸೇನಮ್ಮ. ತಲೆ ಕೂದಲೆಲ್ಲ ಬೆಳ್ಳಗಾಗಿತ್ತು. ಆದರೂ ‘ಹುಸೇನಮ್ಮ ಅಲ್ಲವಾ?’ ಎಂದೆ. ‘ಅಯ್ಯೋ ಹೆಸರೂ ನೆನಪಿಟ್ಟುಕೊಂಡಿದ್ದೀರಲ್ಲ ಸ್ವಾಮಿ’ ಎಂದಳಾಕೆ. ‘ಅದ್ಹೆಂಗೆ ಮರೆಯಕ್ಕಾಗುತ್ತಮ್ಮ?’ ಎಂದೆ. ತಕ್ಷಣಕ್ಕೆ ನನಗೆ ಬಂದ ಯೋಚನೆಯೆಂದರೆ – ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರಲ್ಲ ಅವರೀಗ ದೊಡ್ಡವರಾಗಿ ಮದುವೆ ಗೊತ್ತಾಗಿರಬಹುದು. ಆ ಖರ್ಚಿಗೊಂದಿಷ್ಟು ಸಹಾಯ ಕೇಳಲು ಬಂದಿರಬಹುದು ಎಂಬುದು. ಆದರೆ ಆ ಹೊತ್ತಿಗೆ ನನ್ನ ಕೈಲಿ ಹಣ ಇರಲಿಲ್ಲ. ನಮ್ಮ ಗದ್ದೆಯಲ್ಲಿ ಬೆಳೆದ ಒಂದಷ್ಟು ಭತ್ತ ಕೊಡಬಹುದು ಎಂದುಕೊಂಡೆ. ಆ ರಾತ್ರಿ ನಮ್ಮ ಗುಡಿಸಿಲಿನಲ್ಲಿಯೇ ಊಟ ಮಾಡಿ ಮಲಗಿದಳು.
ಮಾರನೆಯ ಬೆಳಿಗ್ಗೆ ‘ಸ್ವಾಮಿ ಹೊರಡುತ್ತೇನೆ’ ಎಂದಳು. ‘ಏನಮ್ಮಾ ನೀನು ಯಾಕೆ ಬಂದೆ ಅಂತ ಹೇಳಲೇ ಇಲ್ಲವಲ್ಲ?’ ಎಂದೆ. ಆಕೆ ಮಗಳ ಮದುವೆಯ ವಿಚಾರ ಪ್ರಸ್ತಾಪಿಸಬಹುದೆಂದು ನಿರೀಕ್ಷಿಸಿದೆ. ಆದರೆ ಆಶ್ಚರ್ಯವಾಯ್ತು. ತನ್ನ ಸೊಂಟದಿಂದ ಒಂದು ಕಪ್ಪು ಚೀಲ ತೆಗೆದಳು. ಅದರಲ್ಲಿದ್ದ ಇಪ್ಪತ್ತು ರುಪಾಯಿ ತೆಗೆದು ನನ್ನ ಮುಂದಿಟ್ಟು ನಮಸ್ಕಾರ ಮಾಡಿದಳು. ನನಗೆ ಆಶ್ಚರ್ಯವಾಯ್ತು ‘ಏನಮ್ಮಾ ಇದು?’ ಕೇಳಿದೆ.
‘ನಮ್ಮೆಜಮಾನ್ರು ಆಸ್ಪತ್ರೆಗೋಗೋವಾಗ ಇಪ್ಪತ್ತು ರುಪಾಯಿ ಕೊಟ್ಟಿದ್ರಲ್ಲ. ಅದನ್ನು ಕೊಟ್ಟು ಹೋಗೋಣಾಂತ ಬಂದೆ ಸ್ವಾಮಿ’
ನನಗೆ ಇದು ಮರೆತೇ ಹೋಗಿತ್ತು. ಕೆಲವು ದಶಕಗಳ ಹಿಂದಿನ ಘಟನೆ. ಯಾರಿಗೆ ನೆನಪಿರುತ್ತೆ ಹೇಳಿ. ‘ಅಲ್ಲಮ್ಮಾ ಅವತ್ತು ನಾನು ಸಾಲ ಅಂತ ಕೊಟ್ಟಿಲ್ಲ....’ ಎಂದು ಹೇಳಲು ಹೋದೆ ಅಷ್ಟರಲ್ಲಿ –
‘ಇಲ್ಲ ಸ್ವಾಮಿ, ಅವ್ರು ಡೈರಿಯೊಳಗೆ ಬರ್ದಿದಾರೆ’ ಎಂದಳಾಕೆ.
‘ಏನ್ ಬರ್ದಿದಾರಮ್ಮ’
‘ಡೈರಿಯೊಳಗೆ ಬರ್ದಿದಾರೆಂದರೆ ಸುಮ್ ಸುಮ್ನೆ ಬರಿತಾರೇನ್ ಸ್ವಾಮಿ. ಅದ್ರಾಗೆ ಬರದ್ರೆ ಅದ್ನ ತೀರಿಸ್ಬೇಕೂಂತ ಅಲ್ವೆ. ಈಗ ಅವ್ರಿಲ್ಲ ಅಂದ್ಮೇಲೆ ನಾನಲ್ವೆ ಸ್ವಾಮಿ ತೀರಿಸ್ಬೇಕು.’
ಒಂದು ಕ್ಷಣ ನಿಬ್ಬೆರಗಾಗಿ ನಿಂತುಬಿಟ್ಟೆ.
‘ಮೊನ್ನೆ ನಮ್ಮ ಗುಡಿಸಲನ್ನೆಲ್ಲ ಕ್ಲೀನ್ ಮಾಡ್ತಿದ್ವಿ. ಜಂತೆಯ ಗರಿಗಳಿಂದ ಡೈರಿ ಕೆಳಗೆ ಬಿತ್ತು. ನೋಡಿದ್ರೆ ಅವತ್ತು ಆಸ್ಪತ್ರೆಗೋಗೋದಕ್ಕೆ ಹಣ ಕೊಟ್ಟವರದು, ಎಷ್ಟೆಷ್ಟು ಹಣ ಎಲ್ಲವನ್ನೂ ಬರ್ದಿದ್ರು. ಎರಡು ರುಪಾಯಿಂದ ಕೊಟ್ಟಿದಾರೆ ಅವತ್ತು. ಅದೆಲ್ಲವನ್ನೂ ತೀರಿಸ್ಕೊಂಡು ಬಂದೆ. ನಿಮ್ಮದು ಇಪ್ಪತ್ತು ರುಪಾಯಿ. ಅದೇ ಹೆಚ್ಚೆಂದು, ಕೊನೇಲಿ ಕೊಡೋಣಾಂತ ಅಂದುಕೊಂಡಿದ್ದೆ. ಇವತ್ತು ಅನುಕೂಲ ಆಯ್ತು. ಕೊಟ್ಟು ಹೋಗೋಣಾಂತ ಬಂದೆ’.
‘ಅಲ್ಲಮ್ಮಾ ನಿನಗೆರಡು ಹೆಣ್ ಮಕ್ಳಿದ್ದರಲ್ಲ ಅವ್ರಿಗೆ ಮದುವೆ ಮಾಡೋದು ಬಿಟ್ಟು ಸಾಲ ತೀರ್ಸೋಕ್ಯಾಕೆ ಬಂದೆ?’ ಕೇಳಿದೆ. ಆಕೆ ‘ಎರಡೂ ಮದುವೆ ಮಾಡಿದೀನಿ ಸ್ವಾಮಿ’ ಎಂದಳು. ನನಗೆ ಪರಮಾಶ್ಚರ್ಯವಾಯ್ತು. ಒಂದು ಕ್ಷಣ ನನ್ನನ್ನೇ ನಾನು ನಂಬಲಾಗಲಿಲ್ಲ. ‘ಹೌದೇನಮ್ಮಾ ಹೆಂಗ್ ಮಾಡ್ದಮ್ಮ?’ ಕೇಳಿದೆ. ಅದಕ್ಕೆ ಆಕೆ ‘ಸ್ವಾಮಿ ನಮ್ಮ ಮನೆಯವರು ತೀರಿಕೊಂಡ ಮೇಲೆ ಟೈಲರಿಂಗ್ ಕಲಿತುಕೊಂಡೆ. ಹಳ್ಳಿಮನೇಲೆ ಕೂತು ಬಟ್ಟೆ ಹೊಲ್ದೆ. ದಿನದ ಖರ್ಚು ಕಳೆದು ಮಿಕ್ಕಿದ್ದಷ್ಟು ಎತ್ತಿಟ್ಟು ಮಕ್ಕಳ ಮದುವೆ ಮಾಡಿದೆ.... ಈಗ ಆ ಮಕ್ಕಳಿಗೆ ಮಕ್ಕಳಿದಾರೆ ಸ್ವಾಮಿ .... ನಾನೀಗ ಅಜ್ಜಿ’ ಎಂದಳು. ಮುಂದುವರೆದು ‘ಮದುವೆ ಮಾಡಿದ್ ಮೇಲೆ ಎಲ್ಲರ ಹಣವನ್ನು ತೀರ್ಸಿದೀನಿ. ಇನ್ನೇನು ನಮ್ಮೆಜಮಾನ್ರು ಧನ್ಯರಾದ್ರು ಸ್ವಾಮಿ’ ಎಂದಾಗ ಆಕೆಯಲ್ಲಿದ್ದ ಮಾನವೀಯತೆ, ಸಂಸ್ಕಾರ, ವ್ಯಾವಹಾರಿಕ ನಿರ್ಣಯ, ಸಜ್ಜನಿಕೆ, ನಿರ್ಣಯಿಕೆ ಹೇಗೆ ನೋಡಿದರೂ ಹುಸೇನಮ್ಮ ದೊಡ್ಡ ಹೆಣ್ಣುಮಗಳು. ಆಕೆಯ ಮನಸ್ಸು ಎಷ್ಟು ವಿಶಾಲವಾದದ್ದು ಎಂದು ಈ ಹೊತ್ತಿಗೆ ನೆನೆದರೂ ಕಣ್ಣು ತುಂಬಿ ಬರುತ್ತದೆ.
ಇತ್ತೀಚೆಗೆ ಹೆಗ್ಗೆರೆಯನ್ನು ಬಿಟ್ಟು ಹಿರಿಯೂರಿಗೆ ಬಂದು ಹುಸೇನಮ್ಮ ಮಗಳ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾಳೆ. ಹೀಗೆ ಅವಿದ್ಯಾವಂತೆಯಾದರೂ, ಹಳ್ಳಿಯವಳಾದರೂ ಎಷ್ಟು ಸುಸಂಸ್ಕೃತೆ.
ಕೃಪೆ: ಬೆಳಗೆರೆ ಕೃಷ್ಣಶಾಸ್ತ್ರಿಗಳ ‘ಮರೆಯಲಾದೀತೆ?...’ ಕೃತಿಯಿಂದ
(ಚಿತ್ರ ಕೇವಲ ಸಾಂಕೇತಿಕವಾಗಿದ್ದು ಅಂತರಜಾಲದಲ್ಲಿ ದೊರಕಿರುವುದಾಗಿದೆ.)

ಕಾಮೆಂಟ್‌ಗಳು