ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಆ ತೆರೆಯನ್ನು ಎತ್ತಬಾರದೆ...

ಆ ತೆರೆಯನ್ನು ಎತ್ತಬಾರದೆ...
-ಡಿ. ವಿ. ಗುಂಡಪ್ಪ

ನನ್ನ ಆತ್ಮಗುರುಗಳಾದ ನರಸಿಂಹಮೂರ್ತಿಗಳೂ ನಾನೂ ಒಂದು ಸಂಜೆ ಚಿಕ್ಕಪೇಟೆಯ ಪೂರ್ವಭಾಗದಲ್ಲಿರುವ ಅಹಮದ್ ಬಿಲ್ದಿಂಗ್ಸ್ ಬಳಿ ಬಂದೆವು.  ಆ ಜಾಗದಲ್ಲಿದ್ದ ಅಪ್ಪಣ್ಣನವರ ಹಿಂದೂ ರೆಸ್ಟೋರೆಂಟಿಗೆ ಹೋಗಿ ಕಾಫಿ ಸೇವನೆ ಮಾಡಿದೆವು.  ನಾವಿದ್ದ ಜಾಗದಿಂದ ಒಂದಿಪ್ಪತ್ತು ಗಜದೊಳಗಾಗಿ ಎದುರು ಶ್ರೇಣಿಯ ಒಂದು ಮನೆಯ ಮುಂದೆ ಚಪ್ಪರ, ತೋರಣ, ಜನಸಂದಣಿ ಕಾಣಿಸಿತು.  ಮೂರ್ತಿಗಳು ಅಲ್ಲಿಗೆ ಹೋಗಿ ಯಾರನ್ನೋ ವಿಚಾರಿಸಿದರು.

“ಏನು ಈ ಹೊತ್ತು ಇಲ್ಲಿ?”

“ಮದುವೆ ಸ್ವಾಮಿ”

“ಸಂಗೀತ ಉಂಟೋ?”

“ಉಂಟು ಸ್ವಾಮಿ”

“ಯಾರದು?”

“ತಾಯಪ್ಪನವರು ಹಾಡುತ್ತಾರೆ ಸ್ವಾಮಿ.”

“ನಾವು ಬರಬಹುದೋ?”

“ಅಗತ್ಯವಾಗಿ ದಯಮಾಡಿಸಿ ಸ್ವಾಮಿ, ಬಹಳ ಸಂತೋಷ.”

ಆ ಹೊತ್ತಿಗೆ ಸರಿಯಾಗಿ ನಮಗೆ ಗುರುತಾಗಿದ್ದವರೊಬ್ಬರು ಚಾಮರಾಜಪೇಟೆ ಕಡೆಯವರು ಅಲ್ಲಿಗೆ ಬಂದರು.  ಮೂರ್ತಿಗಳು ಅವರಿಗೆ ಹೇಳಿದರು:

“ನಮ್ಮ ಮನೆಗೂ ಇವರ ಮನೆಗೂ ತಿಳಿಸಿಬಿಡಿ – ಎದುರುಬದುರು ಮನೆಗಳು – ನಾವು ಬರುವುದು ಹೊತ್ತಾಗುತ್ತದೆಂದು.”

ನಮ್ಮ ಬೈಸಿಕಲ್ಲುಗಳನ್ನು ಅಪ್ಪಣ್ಣನವರ ಹೋಟೆಲಿನಲ್ಲಿ ಬಿಟ್ಟು ಕೊಂಚ ಹೊತ್ತು ಅಲ್ಲಿ ಇಲ್ಲಿ ಸುತ್ತಾಡಿ ಎಂಟು ಗಂಟೆಯವೇಳೆಗೆ ಮದುವೆ ಮನೆಗೆ ಹೋಗಿ ಕುಳಿತೆವು.  ಜನ ಇನ್ನೂ ಬರುತ್ತಲೇ ಇದ್ದರು.  “ಎಷ್ಟು ಹೊತ್ತಿಗೆ ಆರಂಭ?” ಎಂದು ಅಲ್ಲಿದ್ದ ಒಬ್ಬರನ್ನು ಕೇಳಿದೆವು.  ಅವರು ಹೇಳಿದರು:

“ಸ್ವಾಮಿ ನಾವು ವರ್ತಕರು.  ಅಂಗಡಿ ಬಾಗಿಲು ಹಾಕುವುದಕ್ಕೆ ಮುಂಚೆ ಎಲ್ಲಿ ಬರುವುದಕ್ಕಾಗುತ್ತದೆ?”

ತಾಯಪ್ಪ ಬಂದು ಕಛೇರಿ ಪ್ರಾರಂಭ ಮಾಡುವ ವೇಳೆಗೆ ಘಂಟೆ ಒಂಭತ್ತಾಗಿತ್ತು.  ನಾವು ಇನ್ನೊಂದು ಸಲ ಹೊರಗೆ ಹೋಗಿ ಹೊಟ್ಟೆ ಗಟ್ಟಿ ಮಾಡಿಕೊಂಡು ಬಂದೆವು.  ಆ ರಾತ್ರಿ ನಾವು ಕೇಳಿದ ಸಂಗೀತ ಎಂದೆಂದೂ ಮರೆಯಲಾಗದ್ದು.  ಸುಮಾರು 12 ಘಂಟೆಯ ವೇಳೆಗೆ ತಾಯಪ್ಪನವರು ಗೌಳಿಪಂತು ರಾಗದ ‘ತೆರ ತೀಯಗ ರಾದಾ’ ಕೀರ್ತನೆಯನ್ನು ಹಾಡಿದಾಗ ನಮಗೆ ಲೋಕ ಮರೆತುಹೋಯಿತು.  ನಾವು ರಾಗದಲ್ಲಿ ತಲ್ಲೀನರಾದೆವು.  ರಾಗಭಾವದಲ್ಲಿ ತನ್ಮಯರಾದೆವು.  ಅದು ನಿಜವಾದ ರಾಗಾನುಭಾವ.  ಅಂಥ ಅನುಭವ ಹತ್ತು  ನಿಮಿಷಗಳದ್ದಾದರೂ ಅದು ಯಾವಜ್ಜೀವವೂ ಬಾಳತಕ್ಕದ್ದು.  ನಾವು ಪ್ರಪಂಚದ ಅನುಭವಗಳನ್ನು ಕ್ಷಣಿಕಗಳೆಂದು, ಬೆಲೆಯಿಲ್ಲದವೆಂಬಂತೆ ಮಾತನಾಡುವುದುಂಟು.  ಆದರೆ ಆ ಹತ್ತು ನಿಮಿಷದ ಗೌಳಿಪಂತು ರಾಗದ ಆರ್ತನಾದವು ಅದನ್ನು ಕೇಳಿದವರ ಪಾಲಿಗೆ ನೂರು ವರುಷ ಬದುಕಿರುತ್ತದೆ.  ಆ ಕೃತಿಯಲ್ಲಿ ತ್ಯಾಗರಾಜರು ಬೇಡುತ್ತಾರೆ.  “ಸ್ವಾಮಿ, ಮಾನ ಮತ್ಸರ ಮೊದಲಾದ ತೆರೆ ಕವಿದು ಸತ್ಯ ಕಾಣದಂತಾಗುತ್ತದೆ ನನಗೆ.  ನೀನು ಆ ತೆರೆಯನ್ನು ಎತ್ತಬಾರದೆ?”  ಎಂದು ಮೊರೆಯಿಡುತ್ತಾರೆ.

ಇಂಥದು ದೊಡ್ಡ ಕಲೆಯ ಮಹತ್ವ.

ಕೃಪೆ: ಡಿ. ವಿ. ಜಿ. ಯವರ ಜ್ಞಾಪಕ ಚಿತ್ರಶಾಲೆ – ೭ ಹೃದಯಸಂಪನ್ನರು.

Tag: D. V. G., D. V. Gundappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ