ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸ್ವಾಮಿ ವಿವೇಕಾನಂದ

ಸ್ವಾಮಿ ವಿವೇಕಾನಂದ

ಗುರುವಿನಾಶೀರ್ವಾದ ನಿನಗೆ ಬೆಂಬಲವಿರಲು
ಸಪ್ತ ಸಾಗರಗಳನ್ನು ನುಗ್ಗಿ ಬಂದೆ.
ನಿನ್ನ ಎದೆಯೊಲವಿಂದ
ನಿನ್ನಾತ್ಮ ಪ್ರಭೆಯಿಂದ
ಬುದ್ಧಿ ತೀಕ್ಷ್ಣತೆಯಿಂದ
ಪರದೇಶ ನಿನಗಾಯ್ತು ನಿನ್ನ ದೇಶ,
ಹರಡಿತೆಲ್ಲೆಡೆ ನಿನ್ನ ದಿವ್ಯಸಂದೇಶ;
ಒಂದೇ, ಒಂದೇ, ಮನುಕುಲವೆಲ್ಲಾ ಒಂದೇ.

ಪರತಂತ್ರಳಾಗಿ ಭಾರತದೇವಿ ಬೆಂದಿರಲು,
ಓ ಭಾರತಕುವರ! ಮುನ್ನುಗ್ಗಿದೆ.
ನಾಳೆ ಸ್ವಾತಂತ್ರ್ಯವೆನುತ ಹಿಗ್ಗಿದೆ.
ಬೆಳಗಿತ್ತು ನಿನ್ನ ತಪ.
ಪಳಗಿತ್ತು ನಿನ್ನ ಜಪ
ಅಳಿದಿತ್ತು ಕುಂಟನೆಪ:
ಇದು ಭಾರತದ ಭರತವಾಕ್ಯವೆಂದೆ;
ದಾಸ್ಯದೇಶಕ್ಕೂ ಪ್ರಜ್ಞೆ ಸಾಧ್ಯವೆಂದೆ.
ಭಾರತದ ಹಿರಿಮೆ ದಶದಿಶೆ ನುಗ್ಗಿದೆ.

ವಿವಿಧ ದೇಶಗಳಲ್ಲಿ ನಿನ್ನ ಮಠ ಬೆಳೆದು
ನೀ ಬಿಟ್ಟಿರುವ  ಬೀಜ ಮರವಾಗಿದೆ.
ದಿನದಿನಕ್ಕೆ ಬೆಳೆದು ಎತ್ತರವಾಗಿದೆ.
ಭಾರತದ ಪುಣ್ಯಬಲ,
ನಿನ್ನ ಸಂಕಲ್ಪ ಬಲ:
ಆಸೇತು ಹಿಮಾಚಲಸ್ವಾತಂತ್ರ್ಯವನು ತಂದನಾ ಮಹಾತ್ಮ.
ಸಾಗರೋತ್ತರದ ಸ್ವಾತಂತ್ರ್ಯ, ಓ ಪೂತಾತ್ಮ!
ನೀ ನಾಡಿಗಿತ್ತ ದೇಣಿಗೆಯಾದೆ.

ಸಾಹಿತ್ಯ: ವಿನಾಯಕ  (ವಿ ಕೃ  ಗೋಕಾಕ್)



Tag: Swami Vivekananda by V. K. Gokak

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ