ಪಾಂಚಜನ್ಯ
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ, ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
ಬೆಚ್ಚ ಬಿಡು, ನೆಚ್ಚ ನೆಡು
ಕೆಚ್ಚದೆಯ ಗುಡಿಯಲ್ಲಿ;
ಸೆರೆಯ ಹರಿ, ಅರಿಯನಿರಿ,
ಹುಟ್ಟಳಿಸು ಹುಡಿಯಲ್ಲಿ!
ನಾನಳಿವೆ, ನೀನಳಿವೆ,
ನಮ್ಮೆಲುಬುಗಳ ಮೇಲೆ
ಮೂಡುವುದು, ಮೂಡುವುದು
ನವಭಾರತದ ಲೀಲೆ!
ನೊಂದ ದನಿ, ಕಣ್ಣಪನಿ,
ಬರಿದೆ ಎಂದೊರೆಯದಿರು!
ತೆತ್ತ ಹಣ, ಸತ್ತ ಹೆಣ
ಹೋಯ್ತೆಂದು ಮೊರೆಯದಿರು!
ಪೊಡವಿಯೊಳಡಗಿರುವ
ತಳಹದಿಯ ತೆಗಳುವರೆ?
ಮೆರೆಯುತಿರುವರಮನೆಯ
ಸಿರಿಯೊಂದ ಹೊಗಳುವರೆ?
ಎಲ್ಲ ಇದೆ, ಎಲ್ಲ ಇದೆ
ನಿತ್ಯತೆಯ ಗಬ್ಬದಲಿ;
ಮುಂದೆಯದು ತೋರುವುದು
ಬಿಡುಗಡೆಯ ಹಬ್ಬದಲಿ!
ನೆಚ್ಚುಗೆಡಬೇಡ ನಡೆ,
ಕೆಚ್ಚದೆಯ ಕಲಿಯೆ!
ಬೆಚ್ಚಿದರೆ, ಬೆದರಿದರೆ,
ಕಾಳಿಗದು ಬಲಿಯೆ?
ಭರತಖಂಡದ ಹಿತವೆ
ನನ್ನ ಹಿತ ಎಂದು,
ಭರತಮಾತೆಯ ಮತವೆ
ನನ್ನ ಮತ ಎಂದು.
ಭಾರತಾಂಬೆಯ ಸುತರೆ
ಸೋದರರು ಎಂದು
ಭಾರತಾಂಬೆಯ ಮುಕ್ತಿ
ಮುಕ್ತಿ ನನಗದೆಂದು,
ನುಗ್ಗು ಮುಂದಕೆ, ಧೀರ,
ಕಾಳೆಗದ ಕೊಲೆಗೆ!
ನುಗ್ಗು ಮರಣಕೆ, ವೀರ,
ಸಗ್ಗದಾ ನೆಲೆಗೆ!
ನೋಡದೋ ನೋಡಲ್ಲಿ:
ದರ್ಪರಥದಡಿಯಲ್ಲಿ
ಹೊರಳುತಿರುವಳು ತಾಯಿ
ನೆತ್ತರಿನ ಪುಡಿಯಲ್ಲಿ!
ಬಾಳನೊರೆಯಿಂದ ಹಿರಿ!
ನುಗ್ಗು, ನಡೆ, ಕಟ್ಟ ಹರಿ!
ತಡೆಯ ಬಂದವರ ಇರಿ!
ಒಲಿಯುವಳು ಜಯದ ಸಿರಿ!
ಜನ್ಮವೊಂದಳಿದರೇಂ?
ನೂರಿಹವು ಬಲಿಗೆ!
ಕಾಳೆಗದೊಳಳಿಯಲೇಂ? |
ಸಾವೆ ಸಿರಿ ಕಲಿಗೆ!
ನಿಂತೇನು ನೋಡುತಿಹೆ?
ಹದುಗುವರೆ ಇಲ್ಲಿ?
ಮಸಣವಾಗಲಿ ಎದೆಯು
ರಣರಂಗದಲ್ಲಿ!
ನೆತ್ತರನು ನೋಡುವೆಯ?
ಸತ್ತವರ ನೋಡುವೆಯ?
ಕಂಕಾಲಗಳ ಗೂಡೆ?
ಮರಳುಗಳ ನೆಲೆಬೀಡೆ?
ಕಾಳಿಯಳಕುವಳೇನು
ರಕ್ಕಸರ ಬಲಿಗೆ?
ಸಮರ ರಂಗದ ನಡುವೆ
ಬೆದರಿಕೆಯೆ ಕಲಿಗೆ?
ಹಾ ನೋವು! ಹಾ ನೋವು!
ಎಂದೆಲ್ಲ ಕೂಗುವರೆ?
ಹಾ ನೀರು! ಹಾ ನೀರು!
ಎಂದಸುವ ನೀಗುವರೆ?
ಕೂಗಿಗೆದೆಗರಗದಿರು!
ಬೇನೆಯಿರೆ ಮರುಗದಿರು!
ಕಂಬನಿಯ ಕರೆಯದಿರು,
ಗುರಿಯ ಮರೆಯದಿರು,
ಕಲಿಯೆ, ಹಿಂಜರಿಯದಿರು,
ತಾಯ ತೊರೆಯದಿರು!
ಎಲುಬುಗಳ ತೊಲೆಗಳಲಿ
ಮಾಂಸದಾ ಮಣ್ಣಿನಲಿ
ನೆತ್ತರಿನ ನೀರಿನಲಿ
ಬೇನೆ ಬಿಸುಸುಯ್ಲಿನಲಿ
ಬಿಡುಗಡೆಯ ಸಿರಿಗುಡಿಯ
ಮಸಣದಲಿ ಕಟ್ಟು!
ಪಾವನದ ತಾಯಡಿಯ
ಬಲ್ಮೆಯಲಿ ಮುಟ್ಟು!
ಅತ್ಮವಚ್ಯುತವೆಂದು
ಜನ್ಮಗಳು ಬಹವೆಂದು
ಮೃತ್ಯ ನಶ್ವರವೆಂದು
ಭಾರತಿಗೆ ಜಯ ಎಂದು
ನಡೆ ಮುಂದೆ, ನಡೆ ಮುಂದೆ,
ನುಗ್ಗಿ ನಡೆ ಮುಂದೆ!
ಜಗ್ಗದೆಯೆ ಕುಗ್ಗದೆಯೆ,
ಹಿಗ್ಗಿ ನಡೆ ಮುಂದೆ!
ಸಾಹಿತ್ಯ: ಕುವೆಂಪು
(ಭಾರತದ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಜತೀಂದ್ರನಾಥರು ಬ್ರಿಟಿಷರ ಸೆರೆಯಲ್ಲಿ ಮರಣವನ್ನಪ್ಪಿದ್ದಾಗ ಕುವೆಂಪು ಅವರು ಯುವಜನರನ್ನು ಹೋರಾಟಕ್ಕೆ ಪ್ರೇರೇಪಿಸಲು ಈ ಕವಿತೆಯನ್ನು ರಚಿಸಿದರೆಂದು ಹೇಳಲಾಗಿದೆ)
Tag: Paanchajanya, Nade munde nade munde nuggi nade munde
Tag: Paanchajanya, Nade munde nade munde nuggi nade munde
ಕಾಮೆಂಟ್‌ಗಳು