ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕರುಣಿಸೋ ರಂಗ



ಕರುಣಿಸೋ ರಂಗ ಕರುಣಿಸೋ ಕೃಷ್ಣ
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ
ಕರುಣಿಸೋ ರಂಗ ಕರುಣಿಸೋ, ಕೃಷ್ಣ ಕರುಣಿಸೋ
ರಂಗ ಕರುಣಿಸೋ....

ರುಕುಮಾಂಗದನಂತೆ ವ್ರತವ ನಾನರಿಯೆ
ಶುಕಮುನಿಯಂತೆ ಸ್ತುತಿಸಲು ಅರಿಯೆ
ಬಕವೈರಿಯಂತೆ ಧ್ಯಾನವ ಮಾಡಲರಿಯೇ
ದೇವಕಿಯಂತೆ ಮುದ್ದಿಸಲರಿಯೆನೋ ಕೃಷ್ಣ
ಕರುಣಿಸೋ ರಂಗ, ಕರುಣಿಸೋ

ಗರುಡನಂದದಿ ಹೊತ್ತು ತಿರುಗಲು ಅರಿಯೆ
ಕರೆಯಲು ಅರಿಯೆ ಕರಿ ರಾಜನಂತೆ
ವರ ಕಪಿಯಂತೆ ದಾಸ್ಯವ ಮಾಡಲರಿಯೇ
ಸಿರಿಯಂತೆ ನೆರೆದು ಮೋಹಿಸಲರಿಯೆನೊ ಕೃಷ್ಣ,
ಕರುಣಿಸೋ ರಂಗ, ಕರುಣಿಸೋ

ಬಲಿಯಂತೆ ದಾನವ ಮಾಡಲು ಅರಿಯೆ
ಭಕ್ತಿ ಛಲವನರಿಯೆ ಪ್ರಹ್ಲಾದನಂತೆ
ಒಲಿಸಲು  ಅರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರ ದೇವ, ಸಲಹೋ ದೇವರ ದೇವ
ಪುರಂದರ ವಿಠ್ಠಲ,  ಶ್ರೀ ಪುರಂದರ ವಿಠ್ಠಲ
ಕರುಣಿಸೋ ರಂಗ, ಕರುಣಿಸೋ
ಕೃಷ್ಣಾ ಕರುಣಿಸೋ... ರಂಗಾ ಕರುಣಿಸೋ

ಸಾಹಿತ್ಯ: ಪುರಂದರದಾಸರು



Tag: Karuniso ranga Karuniso

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ