ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಡೆ

ಜಡೆ

ಲಲನೆಯರ ಬೆನ್ನಿನೆಡೆ ಹಾವಿನೊಲು ಜೋಲು ಜಡೆ
ಕಾಳಿಂದೆಯಂತಿಳಿದು ಕೊರಳೆಡೆಗೆ ಕವಲೊಡೆದು
ಅತ್ತಿತ್ತ ಹರಿದ ಜಡೆ!
ಚೇಳ್ಕೊಂಡಿಯಂಥ ಜಡೆ, ಮೋಟು ಜಡೆ
ಎಣ್ಣೆಕಾಣದೆ ಹೆಣೆದು ಹಿಣಿಲಾಗಿ ಹೆಣೆದ ಜಡೆ
ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟು ಜಡೆ
ಅಕ್ಕತಂಗಿಯ ಮುಡಿಯ ಹಿಡಿದು ನಾನೆಳೆದಂಥ 
ಮಲ್ಲಿಗೆಯ ಕಂಪು ಜಡೆ
ಕೇದಗೆಯ ಹೆಣೆದ ಜಡೆ
ಮಾತೃಮಮತಾ ವೃಕ್ಷ ಬಿಟ್ಟ ಬಿಳಲಿನಂತೆ ಅರಳಿರುವ ತಾಯ ಜಡೆ!
'ಗುರುಕುಲಜೀವಾಕರ್ಷಣ ಪರಿಣತ' ಆ ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓಹೋ ಈ ಜಡೆಗೆಲ್ಲಿ ಕಡೆ!
ಸಂಜೆಯಲಿ ಹಗಲು ಕೆದಕುವ ಕತ್ತಲೆಯ ಕಾಳ ಜಡೆ
ಬೆಳಗಿನಲಿ ಇರುಳುಬಿಚ್ಚುವ ಬೆಳ್ಳನೆಯ ಬೆಳಕು ಜಡೆ
ಒಮ್ಮೊಮ್ಮೆ ಮುಗಿಲಲ್ಲಿ ತೇಲುತ್ತಾ ಬರುವಂಥ ಬೆಳ್ಳಕ್ಕಿಗಳ ಜಡೆ,
ಕ್ರೌಂಚಗಳ ಜಡೆ
ಮರಮರದಿ ಬಳುಕುತಿಹ ಹೂಬಿಟ್ಟ ಬಳ್ಳಿ ಜಡೆ!
ಕಾಡುಬಯಲಿನ ಹಸುರು ಹಸಿರಿನಲಿ
ಹರಿಹರಿದು ಮುನ್ನಡೆವ ಹೊಳೆಯ ಜಡೆ!
ಶ್ರೇಣಿಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ!
ಗಿರಿಶಿವನ ಶಿರದಿಂದ ಹಬ್ಬಿ ಹಸರಿಸಿ ನಿಂತ ಕಾನನದ ಹಸಿರು ಜಡೆ
ಮುಂಗಾರು ಮೋಡಗಳು ದಿಕ್ಕುದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ
ಚಂದ್ರಚೂಡನ 
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ, ಕಾವ್ಯಗಳ ಶಿಲ್ಪಗಳ ಕಲೆಯ ಜಡೆ
ಎಲ್ಲವೂ ರಮ್ಯವೆಲ್ಲ!
ಜಡೆಯಚೆ ತಿರುಗಿಸಿದ ತಾಯ ಮುಖ ಮಾತ್ರ
ಇಂದಿಗೂ ಕಾಣದಲ್ಲ.

ಸಾಹಿತ್ಯ:  ಜಿ. ಎಸ್. ಶಿವರುದ್ರಪ್ಪ

ಫೋಟೋ ಕೃಪೆ: ಸಿ. ಕೆ ರಾಜೇಶ್,  https://picasaweb.google.com/lh/photo/4Du9I6JvfLnF7DQd1RdBKg

Tag: Jade

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ