ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶೆಲ್ಲಿ


 ಶೆಲ್ಲಿ

ಪರ್ಸಿ ಬಿಷೆ ಶೆಲ್ಲಿ ಪ್ರಮುಖ ಇಂಗ್ಲಿಷ್ ಕವಿ. 

ಶೆಲ್ಲಿ 1792ರ ಆಗಸ್ಟ್ 4ರಂದು ಸಸೆಕ್ಸ್'ನಲ್ಲಿ ಜನಿಸಿದರು. ಆರ್ಥಿಕವಾಗಿ ಶ್ರೀಮಂತವೂ ರಾಜಕೀಯವಾಗಿ ಪ್ರತಿಷ್ಠಿತವೂ ಆದ ಕೌಟುಂಬಿಕ ಹಿನ್ನೆಲೆ ಇವರದಾಗಿತ್ತು. ಇವರು ವ್ಯಾಸಂಗ ಮಾಡುತ್ತಿದ್ದ ಏಟನ್ ಹಾಗೂ ಆಕ್ಸ್ಫರ್ಡ್ ವಿಶ್ವ ವಿದ್ಯಾಲಯಗಳು ಇವರು ಪ್ರಕಟಿಸಿದ 'ದ ನೆಸಿಸಿಟಿ ಆಫ್ ಏತೀಸಮ್' ಎಂಬ ಕರಪತ್ರದ ಕಾರಣದಿಂದ ಇವರನ್ನು ಹೊರದಬ್ಬಿದವು.

ಕ್ವೀನ್‍ಮಾಬ್ ಕ್ರಾಂತಿಕಾರಿ ಕವಿತೆ (1812-13) ರಾಜಕೀಯ ಪ್ರಭುತ್ವ ಹಾಗೂ ಸಾಂಪ್ರದಾಯಿಕ ಕ್ರೈಸ್ತ ಧರ್ಮದ ಟೀಕೆಯಾಗಿದೆ. ಪ್ರಮಿಥ್ಯೂಸ್ ಅನ್‍ಬೌಂಡ್ (1818-19), ದ ವಿಚ್ ಆಫ್ ಅಟ್ಲಾಸ್ (1820), ಎಪಿಸೈ ಸಿಡಿಯಾನ್ (1821) ಹಾಗೂ ಹೆಲ್ಲಾಸ್ (1821) ಮುಂತಾದವು ಶೆಲ್ಲಿ ಅವರ ಪ್ರಸಿದ್ಧ ಗೀತನಾಟಕಗಳು. ಇವರು ಇಟಲಿಯಲ್ಲಿ ನೆಲೆಗೊಂಡಿದ್ದ ಕಾಲದಲ್ಲಿ ಇವು ರಚನೆಗೊಂಡವು. 

ಆಪ್ತ ಸ್ನೇಹಿತ ಹಾಗೂ ಕವಿಯಾದ ಜಾನ್‍ ಕೀಟ್ಸ್ ಮರಣ ಶೆಲ್ಲಿ ಅವರ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿತು. ಇದು ಇವರ ಎಲಿಜಿ ಅಡೊನಯ್ಸ್ (1821) ಕೃತಿಯಿಂದ ತಿಳಿದುಬರುತ್ತದೆ. ಇವರ ಬಹುತೇಕ ಕವನಗಳು ಆತ್ಮಚರಿತ್ರೆಗಳಂತಿವೆ. 

ಶೆಲ್ಲಿ ವೈಯಕ್ತಿಕವಾಗಿ ಅಧ್ಯಾತ್ಮಪರ ನಿಲುವುಗಳನ್ನು ಹೊಂದಿದ್ದರೂ ಸಾಂಪ್ರದಾಯಿಕ ಕ್ರೈಸ್ತ ದೃಷ್ಟಿಕೋನಗಳನ್ನು ಟೀಕಿಸುತ್ತಾರೆ. ಓಡ್ ಟು ದ ವೆಸ್ಟ್ ವಿಂಡ್ (1819), ಮಾಂಟ್‍ಬ್ಲಾಂಕ್ (1816) ಕೃತಿಗಳು ಅಧ್ಯಾತ್ಮದ ಸಹಚಾರಿಯಾಗಿ ಕಲ್ಪಕತೆ ಹೇಗೆ ಕೆಲಸ ಮಾಡಬೇಕೆಂಬುದನ್ನು ವಿವರಿಸುತ್ತವೆ.

ಕವಿಯ ಅಂತಃಸತ್ವದ ಸಾಮರ್ಥ್ಯ ಹಾಗೂ ಕಾವ್ಯದಲ್ಲಿ ಕಲ್ಪಕತೆಯ ಪಾತ್ರ ಎಂಬ ಪ್ರಮುಖ ಕಾವ್ಯಮೀಮಾಂಸೆಯ ವಿಚಾರಗಳನ್ನು ಚರ್ಚಿಸುವ ಇವರ ಪ್ರಸಿದ್ಧ ಕೃತಿ ಎ ಡಿಫೆನ್ಸ್ ಆಫ್ ಪೊಯಿಟ್ರಿ 1821ರಲ್ಲಿ ಪ್ರಕಟವಾಯಿತು. 

ಶೆಲ್ಲಿ ಅವರ ಕೊನೆಗಾಲದ ಕವಿತೆಗಳು ಹೆಚ್ಚಾಗಿ ಶೋಕ, ಪ್ರೇಮ, ನಿರಾಶೆಗಳನ್ನು ಕುರಿತವಾಗಿವೆ. 'ದ ಟ್ರಯಂಪ್ ಆಫ್ ಲೈಫ್' ಎಂಬುದು ಷೆಲ್ಲಿ ಅವರ ಅಪೂರ್ಣ ಕಾವ್ಯ. 

ಶೆಲ್ಲಿ ಅವರಒಂದು ಕವಿತೆಯ ಸಾಲು ಇಂತಿದೆ:

Spirit of Beauty, thou dost consecrate
With thine own hues all thou dost shine upon
Of human thought or form – where art thou gone
Why dost thou pass away and leave our state
This dim vast vale of tears, vacant and desolate?

ಮಾನವನ ರೂಪಗುಣಗಳನ್ನೆಲ್ಲಾ ತನ್ನ ಬಣ್ಣದಿಂದ ಪವಿತ್ರಗೊಳಿಸುವ ಈ ಸೌಂದರ‍್ಯ ಇದ್ದಕ್ಕಿದ್ದ ಹಾಗೆ ಮರೆಯಾಗಿ ಕಣ್ಣೀರಿನ ಕಂದರದಂತಿರುವ ಈ ಲೋಕವನ್ನು ಹಾಳುಬೀಳಾಗಿಸುವುದೇತಕ್ಕೆ – ಎಂಬ ಪ್ರಶ್ನೆ ಕವಿಯಲ್ಲಿ ಮೂಡಿದೆ. ಇಷ್ಟೊಂದು ಚೆಲುವು – ನಲವೂ ತಟಕ್ಕನೆ ತನ್ನನ್ನು ಶೋಕಪೂರ್ಣವಾದ ಅಂಧಕಾರದಲ್ಲಿ ಅದ್ದಿದಾಗ, ಶೆಲ್ಲಿ ಕವಿ ಸೌಂದರ‍್ಯದ ಅಧಿದೇವಿಯನ್ನು ಮೇಲ್ಕಂಡಂತೆ ಪ್ರಶ್ನಿಸಿದ್ದಾರೆ.

ಶೆಲ್ಲಿ 1822 ಜುಲೈ 8ರಂದು ಇಟಲಿಯ ಲೆಗ್‍ಹಾರ್ನ್‍ನಲ್ಲಿ ನಿಧನರಾದರು.

On the birth anniversary of great poet Percy Bysshe Shelley

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ