ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವಮಾನವ ಗೀತೆ

ವಿಶ್ವಮಾನವಗೀತೆ

ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟು ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆಂದೂ ಕಟ್ಟದಿರು;
ಕೊನೆಯನೆಂದೂ ಮುಟ್ಟದಿರು;
ಓ ಅನಂತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನಂತ ತಾನ್‌ ಅನಂತವಾಗಿ
ಆಗುತಿಹನೆ ನಿತ್ಯಯೋಗಿ;
ಅನಂತ ನೀ ಅನಂತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಸಾಹಿತ್ಯ: ಕುವೆಂಪು

ಕುವೆಂಪು ಅವರು ಸದಾ ಜಪಿಸುತ್ತಿದುದು “ವಿಶ್ವಮಾನವ ಮಂತ್ರ”.  “ಜಾತಿ, ದೇಶ, ಭಾಷೆ ಇವುಗಳ ಕಿರು ಪ್ರಪಂಚದಿಂದ ಮನುಷ್ಯ ಒಂದಲ್ಲ ಒಂದು ದಿನ ಹೊರಬಂದು ವಿಶಾಲವಾದ ವಿಶ್ವಮಾನವನಾಗುತ್ತಾನೆ” ಎಂಬ ವಿಶ್ವಾಸ ಅವರಲ್ಲಿ ಅಚಲವಾಗಿತ್ತು.  “ಯಾವ ವ್ಯಕ್ತಿಯೂ ಯಾವುದೇ ಜಾತಿಯ ಶಿಶುವಲ್ಲ; ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲೂ ಅವನದೇ ಆದ ಧರ್ಮ ಇದೆ.  ಈ ಜಗತ್ತಿನಲ್ಲಿ ಎಷ್ಟು ಜನ ವ್ಯಕ್ತಿಗಳಿದ್ದಾರೆಯೋ ಅಷ್ಟು ಧರ್ಮಗಳಿರಲಿ” ಎಂಬ ಸ್ವಾಮಿ ವಿವೇಕಾನಂದರ ವಾಣಿ ಮಾನವತೆಯ ಜೀವನ ಧರ್ಮವಾಗಲಿ ಎಂಬ ಹಾರೈಕೆ ಅವರದು.


Tag: O nanna chetana agu nee aniketana

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ