ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪೂಜಿಸುವರೆಲ್ಲರೂ ಪೂಜ್ಯರೆನಗೆ


ಪೂಜಿಸುವರೆಲ್ಲರೂ ಪೂಜ್ಯರೆನಗೆ:
ಪೂಜ್ಯರನು ಪೂಜಿಸುವುದೂ ಪೂಜೆ ನಿನಗೆ!


ಧ್ಯಾನಿಸಲು ನಿನ್ನನದೆ ಪರಮಲೋಕೋಪಕಾರ;
ನಿನ್ನ ನೆನೆವುದೆ ನರಗೆ ಸರ್ವೋತ್ತಮ ಸದಾಚಾರ.
ಜೀವನೋದ್ದೇಶ ತಾನಾತ್ಮ ಸಾಕ್ಷಾತ್ಕಾರ:-
ಬದ್ಧಜೀವಿಗೆ ತನ್ನ ಸಾನ್ನಿಧ್ಯದಾನಕಿಂ
ಮಿಗಿಲಿಹುದೆ ಸಿದ್ಧಗೆ ಪರೋಪಕಾರ?


ಅನ್ನದಾನದ ಹಿರಿಮೆ ತಾನನ್ನಮಯಕೆ;
ಪ್ರಾಣದಾನದ ಹಿರಿಮೆ ತಾಂ ಪ್ರಾಣಮಯಕೆ
ಜ್ಞಾನದಾನದ ಹಿರಿಮೆ ತಾಂ ಮನೋಮಯಕೆ;
ಎಲ್ಲವನು ಮೀರುವಧ್ಯಾತ್ಮ ದಾನದ ಹಿರಿಮೆ
ವಿಜ್ಞಾನದಾನಂದಮಯಕೆ.
ಇನ್ನದಕೆ ಪಿರಿದಿಹುದೆ ಲೋಕಸಂಗ್ರಹ ಕಾರ್ಯ,
ಜರಾ ಮರಣ ಶೋಕ ಲಯಕೆ?


ಋಷಿಯ ಆಲೋಚನೆಯೆ ಋತಚಿತ್‌ ತಪಶ್ಯಕ್ತಿ;
ಮುಕ್ತನ ಮನೋರಥವೆ ಜಗತ್‌ ಕಲ್ಯಾಣ ಪಥ;
ಈಶ್ವರ ಧ್ಯಾನವದೆ ತಾನೀಶ್ವರೀ ಶಕ್ತಿ;
ಸರ್ವಾತ್ಮ ಸಾಧನೆಯೆ ಸರ್ವ ಸೇವಾವ್ರತ:
ಪರ್ವತ ಗುಹಾವಾಸಿ ತಾನೊರ್ವನಾದರೂ
ಸರ್ವ ಭೂತ ಹಿತೇ ರತ!

ಸಾಹಿತ್ಯ: ಕುವೆಂಪು

Tag: Pujisuvarella pujyarenage, Poojisuvarella poojyarenage

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ