ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

‘ಮಂಕುತಿಮ್ಮನ ಕಗ್ಗ’ದಲ್ಲಿ ಪ್ರಾರ್ಥನೆ

ಮಂಕುತಿಮ್ಮನ ಕಗ್ಗದಲ್ಲಿ ಪ್ರಾರ್ಥನೆ


ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ
ದೇವ ಸರ್ವೇಶ ಪರಬೊಮ್ಮನೆಂದು ಜನಂ
ಆವುದನು ಕಾಣದೊಡಮಳ್ತಿಯಿಂ ನಂಬಿಹುದೋ
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ 

ಶ್ರೀ ವಿಷ್ಣುಭಗವಾನ್ ವಿಶ್ವಕ್ಕೆ ಬುನಾದಿಯಾಗಿಹನು.  ತನ್ನದೆ ಆದ ಮಾಯಾಶಕ್ತಿಯಿಂದ ತಲ್ಲೀನನಾಗಿಹನು.  ಜನರು ಭಕ್ತಿ ಪ್ರೀತಿಗಳಿಂದ ದೇವರು, ಸರ್ವಕ್ಕೂ  ಸರ್ವರಿಗೂ ಒಡೆಯ, ಪರಬ್ರಹ್ಮ ಎಂದು ನಂಬಿಹರು.  ಕಣ್ಣಿಗೆ ಕಾಣದಿದ್ದರೂ ಅಕ್ಕರೆಯಿಂದ ನಂಬಿರುವ ಆ ವಿಚಿತ್ರಕ್ಕೆ ನಮಿಸು.

ಜೀವ ಜಡರೂಪ ಪ್ರಪಂಚವನದಾವುದೋ
ಆವರಿಸಿಕೊಂಡುಮೊಳನೆರೆದುಮಿಹುದಂತೆ
ಭಾವಕೊಳಪಡದಂತೆ ಅಳತೆಗಳವಡದಂತೆ
ಆ ವಿಶೇಷಕೆ ಮಣಿಯೊ ಮಂಕುತಿಮ್ಮ

ಈ ಪ್ರಪಂಚವನು ಚೇತನ, ಅಚೇತನ ಆವರಿಸಿಕೊಂಡಿದೆ.  ಆದರೂ ಪ್ರಪಂಚದ ಅಂತರಂಗವನ್ನೆಲ್ಲಾ ಒಂದು ವಿಶೇಷಶಕ್ತಿ ತುಂಬಿಕೊಂಡಿದೆ.  ಅದು ಭಾವನೆಗೆ ಒಳಪಡದಂತೆ, ಅಳತೆಗೂ ಸಿಗದಂತೆ ಇಹುದು.  ಆ ಮಹಾದ್ಭುತಶಕ್ತಿಗೆ ತಲೆಬಾಗು.

ಇರಬಹುದು;  ಚಿತ್ರಕಾಲ ಬೊಮ್ಮ ಚಿಂತಿಸಿ ದುಡಿದು
ನಿರವಿಸಿಹ ವಿಶ್ವಚಿತ್ರವ ಮರ್ತ್ಯನರನು
ಅರಿತೆನಾನೆನ್ನುವಂತಾಗೆ ಕೃತಿಕೌಶಲದ
ಹಿರಿಮೆಗದು ಕುಂದಲ್ತೆ? – ಮಂಕುತಿಮ್ಮ

ಈ ವಿಶ್ವವನು ಪರಬ್ರಹ್ಮನು ಅನಂತಕಾಲ ಚಿಂತಿಸಿ ನಿರ್ಮಾಣ ಮಾಡಿದ ಮಹಾದ್ಭುತವೇ ಆಗಿದೆ.  ಈ ಭೂಮಿಯಲ್ಲಿಹ ಮಾನವನು ಈ ವಿಶ್ವಚಿತ್ರದ ಅದ್ಭುತ ಕೌಶಲವನ್ನು ನಾನು ಅರಿತುಬಿಟ್ಟೆನು ಎನ್ನುವಂತಾದರೆ ಬ್ರಹ್ಮಶಕ್ತಿಗೆ ದೊಡ್ಡ ಕುಂದಲ್ಲವೆ?

ತರಣಿ ಕಿರಣದ ನಂಟು ಗಗನ ಸಲಿಲದ ನಂಟು
ಧರಣಿ ಚಲನೆಯ ನಂಟು ಮರುತನೊಳ್ನಂಟು
ಪರಿಪರಿಯ ನಂಟುಗಳಿನೊಂದು ಗಂಟೀ ವಿಶ್ವ
ಕಿರಿದು ಪಿರಿದೊಂದುಂಟು ಮಂಕುತಿಮ್ಮ

ಸೂರ್ಯನಿಗೂ ಕಿರಣಕ್ಕೂ ಒಂದು ನಂಟು ಇರುವಂತೆ ಆಕಾಶಕ್ಕೂ ನೀರಿಗೂ ಉಂಟು.  ಹಾಗೆಯೇ ಭೂಮಿಗೂ ಚಲನೆಗೂ ನಂಟು ಉಂಟು.  ಗಾಳಿಗೂ ಉಂಟು.  ಈ ವಿಶ್ವವು ನಾನಾ ನಂಟುಗಳ ಗಂಟು ಆಗಿರುವುದು.  

ಬೆಳೆ ಹೊಳಪು ವಿಕಸನ ವಿಕಾರ ಸಂಭ್ರಮಗಳಲಿ
ಬೆಳಕು ವೇಗಗಳೆನಿಪ ಕಾಲ ದಿಕ್ಕುಗಳ
ಚಲನೆಯಲಿ ವಿಶ್ವಸಂಮೋಹನಗಳೆಲ್ಲವಾ
ವಿಲಸಿತವು ಬೊಮ್ಮನದು ಮಂಕುತಿಮ್ಮ

ಬೆಳವಣಿಗೆ ಪ್ರಕಾಶ, ಪ್ರಗತಿ, ವಿಕಾರ, ಸಡಗರ ಮುಂತಾದವುಗಳಲ್ಲಿ, ಬೆಳಕು ಮತ್ತು ಬೆಳಕಿನ ವೇಗಗಳು ಕಾಲ ಮತ್ತು ದಿಕ್ಕುಗಳಂತೆ ಸಂಚರಿಸುತ್ತಾ ಜಗತ್ತಿಗೆ ಒಂದು ಸಂಮೋಹನ ಶಕ್ತಿಯಾಗಿದೆ.  ಇದು ಬ್ರಹ್ಮನ ವಿಲಾಸವೇ ಆಗಿದೆ.

ಆಗುಂಬೆಯಸ್ತಮಾನ ದ್ರೋಣಪರ್ವತದುದಯ
ತ್ಯಾಗರಾಜನ ಗಾನ ವಾಲ್ಮೀಕಿ ಕವನ
ಆಗಿಸವೆ ತಾವಿವೆಮ್ಮಂತರಂಗದಿ ಸತ್ಯ
ಯೋಗಪುಲಕಾಂಕುರವ? – ಮಂಕುತಿಮ್ಮ

ನಮ್ಮ ಅಂತರಂಗವು ಯೋಗಸಂಬಂಧದಿಂದ ಆಗುಂಬೆಯ ಸೂರ್ಯಾಸ್ತಮಯ ದೃಶ್ಯವನ್ನೂ, ದ್ರೋಣ ಪರ್ವತ (ಬಾಬಾ ಬುಡನ್ ಗಿರಿ ಪರ್ವತ)ದ ಉದಯದ ಸೊಬಗನ್ನೂ, ತ್ಯಾಗರಾಜರ ಗಾನಾಮೃತವನ್ನೂ, ವಾಲ್ಮೀಕಿಯ ಕಾವ್ಯಾಮೃತವನ್ನೂ ಅಂಕುರಗೊಳಿಸಿ ಅನುಭವ ಸತ್ಯ ನೀಡುವುದು.

ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು
ಬೇಸರದ ಪಾತಕಸ್ಮೃತಿಯ ಚುಚ್ಚದಿರ್: ಎನ್ನು-
ತೀಶನನು ಬೇಡುತಿರೊ ಮಂಕುತಿಮ್ಮ

ಓ ದೇವನೇ, ನನ್ನ ಆಶೆಗಳನ್ನು ಕೆಣಕಬೇಡ.  ಆಶಾಪಾಶಗಳ ಬಿಗಿಯಬೇಡ.  ಕಠಿಣವಾದ ಪರೀಕ್ಷೆಗಳಿಗೆ ನನ್ನನ್ನು ಒಡ್ಡಬೇಡ.  ಕೆಟ್ಟ ನೆನಪುನೀಡಿ ಕಾಡಬೇಡ ಎಂದು ಸದಾ ದೇವರಲ್ಲಿ ಮೊರೆಯಿಡು.

ಸಾಹಿತ್ಯ: ಡಿ. ವಿ. ಜಿ.



Tag: Mankutimmana Kagga Prarthane

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ