ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತುಂಟ ಕವಿಯ ಕಂಠ

ತುಂಟ ಕವಿಯ ಕಂಠ
-ನಳಿನಾ ಡಿ.

'ಪ್ರೇಮಕವಿ' ಬಿ.ಆರ್. ಲಕ್ಷ್ಮಣರಾವ್ ಅವರ ಮಾತುಗಳೂ ಅಷ್ಟೇ ಪ್ರೀತಿಮಯ. ಅಪ್ಪನಿಂದ ಬಂದ ಸಂಗೀತದ ಹುಚ್ಚಿನೊಂದಿಗೆ, ಇವರ ಸಾಹಿತ್ಯ- ಸಂಗೀತದ ಹುಚ್ಚೂ ಬೆರೆತು ಕವಿಯಾದವರು. ಇವರ ಕವಿತೆಗಳಲ್ಲಿ ವ್ಯಕ್ತವಾಗುವ ತುಂಟತನದಲ್ಲೂ ಗಟ್ಟಿತನ, ಗಹನತೆ, ಬದುಕು, ವಿಚಾರಗಳ ಕಲೆಗಾರಿಕೆ ಇದೆ. 'ದೋಣಿ'ಯಲ್ಲಿನ ಅವರ ಮಾತುಕತೆಯ ವಿಹಾರ ಇಲ್ಲಿದೆ...

ನವ್ಯ ಸಾಹಿತ್ಯದ ಗಂಭೀರ ಕಾವ್ಯರಚನೆಯಲ್ಲಿ ಗುರುತಿಸಿಕೊಂಡ ನೀವು ಭಾವಗೀತೆಗಳಿಗೆ ಮಾರುಹೋಗಿದ್ದು ಹೇಗೆ?

ಚಿಕ್ಕಂದಿನಿಂದಲೂ ನನಗೆ ಸಂಗೀತದ ಬಗ್ಗೆ ತುಂಬಾ ಆಸಕ್ತಿ. ನನ್ನ ತಂದೆ ಒಳ್ಳೆ ಗಾಯಕರು. ಜತೆಗೆ ಪಿಟೀಲು ವಾದಕರಾಗಿದ್ದರು. ಸ್ವತಃ ನಾನೂ ಒಳ್ಳೆಯ ಗಾಯಕನಾಗಿದ್ದೆ. ಹೀಗೆ ಸಂಗೀತದ ವಾತಾವರಣದಲ್ಲಿ ಬೆಳೆದಿದ್ದರಿಂದ ನನಗೆ ಭಾವಗೀತೆಗೆಳ ಬಗ್ಗೆಯೂ ಒಲವು ಮೂಡಿತು.

ನೀವು ಗಾಯಕಕರು ಅಂದಿರಲ್ಲಾ, ಕಾರ್ಯಕ್ರಮಗಳಲ್ಲಿ ಹಾಡಿದ್ದುಂಟಾ? ಸಂಗೀತ ಅಭ್ಯಾಸ ಮಾಡಿದ್ದುಂಟಾ?

ನಾನು ಶಾಲೆ- ಕಾಲೇಜುಗಳಲ್ಲಿ ಚಿತ್ರಗೀತೆ ಹಾಡಿ ಬಹುಮಾನ ಗಳಿಸಿದ್ದೆ. ಮುಂದೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ತಕ್ಕಮಟ್ಟಿಗೆ ಅಭ್ಯಾಸ ಮಾಡಿದ್ದೇನೆ. ಆಕಾಶವಾಣಿಗೂ ಹಾಡುಗಾರನಾಗಿದ್ದೆ.
ನೀವು ಕವಿಯಾಗಿ ಸುಗಮ ಸಂಗೀತಕ್ಕೂ ಬರುವ ಮುಖ್ಯ ಕಾರಣಕರ್ತರು ಯಾರು?
ಮೊದಲಿಗೆ ಮೈಸೂರು ಅನಂತಸ್ವಾಮಿಯವರು ಆದರೂ ಎಚ್ಚೆಸ್ವಿ ಮತ್ತು ನನ್ನನ್ನು ಸುಗಮ ಸಂಗೀತ ಕ್ಷೇತ್ರಕ್ಕೆ ಕವಿಗಳಾಗಿ ಪರಿಚಯಿಸಿದವರು ಸಿ. ಅಶ್ವಥ್. ಅವರ ಸಂಗೀತ ಸಂಯೋಜನೆಯಲ್ಲಿ ಎಚ್ಚೆಸ್ವಿ ಮತ್ತು ನನ್ನ ಗೀತೆಗಳು ಮೊಟ್ಟ ಮೊದಲ ಬಾರಿಗೆ 'ಕೆಂಗುಲಾಬಿ' ಎಂಬ ದನಿಸುರಳಿಯ ಮೂಲಕ ಹೊರಬಂದು ಅಪಾರ ಜನಪ್ರಿಯತೆ ಗಳಿಸಿದವು. ಅಲ್ಲಿಂದಾಚೆಗೆ ಎಚ್ಚೆಸ್ವಿ, ಅಶ್ವಥ್ ಮತ್ತು ನಾನು ಒಂದು ಯಶಸ್ವಿ ಕಾಂಬಿನೇಶನ್ ಆಗಿ ಅನೇಕ ಜನಪ್ರಿಯ ಗೀತೆಗಳ ಉಗಮಕ್ಕೆ ಕಾರಣರಾದೆವು.

ನಿಮ್ಮ ನವ್ಯ ಕವಿತೆಗಳ ಹಾಗೆಯೇ ನಿಮ್ಮ ಭಾವಗೀತೆಗಳೂ ತಮ್ಮದೇ ಹೊಸತನ ಸಾಧಿಸಿವೆ. ('ನಿಂಬೆಗಿಡ', 'ಜಾಲಿಬಾರ್‌',
'ಸುಬ್ಬಾ ಭಟ್ಟರ ಮಗಳೇ' ಮುಂತಾದವು) ಇದು ಹೇಗೆ ಸಾಧ್ಯವಾಯಿತು?

ಇದಕ್ಕೆ ಮುಖ್ಯ ಕಾರಣ ನಾನು ಭಾವಗೀತೆಗಳನ್ನು ರಚಿಸುವಾಗಲೂ ನನ್ನ ನವ್ಯ ಸಂವೇದನೆಗೆ ನಿಷ್ಠನಾಗಿಯೇ ಉಳಿದದ್ದು. ಹಾಗಾಗಿಯೇ, ನನ್ನ ಪ್ರೇಮಗೀತೆಗಳೂ ಹೊಸ ಸಂವೇದನೆಯೊಂದಿಗೆ ಯುವಜನತೆಗೆ ತುಂಬಾ ಪ್ರಿಯವಾಗಿದೆ.

ಚಲನಚಿತ್ರಗಳ ಸಿದ್ಧರಾಗಕ್ಕೆ ನೀವು ಗೀತೆ ರಚಿಸಿದ್ದುಂಟೆ?

ನಾನು ಚಲನಚಿತ್ರಗಳಿಗಾಗಿಯೇ ಗೀತೆಗಳನ್ನು ಬರೆದಿಲ್ಲ. ಭಾವಗೀತೆಗಳಾಗಿ ಮೊದಲೇ ಜನಪ್ರಿಯವಾಗಿದ್ದ ಗೀತೆಗಳನ್ನು ಚಲನಚಿತ್ರಗಳಿಗೆ ಅಳವಡಿಸಿಕೊಂಡರಷ್ಟೇ. ಸಿದ್ಧರಾಗಕ್ಕೆ ಸಾಹಿತ್ಯ ಹೊಂದಿಸುವ ಚಲನಚಿತ್ರಗಳ ರೀತಿಗೆ ನಾನು ಎಂದೂ ಒಪ್ಪಲಿಲ್ಲ. ಇಷ್ಟಾಗಿ ನನ್ನ ಕೆಲವು ಗೀತೆಗಳು ಚಲನಚಿತ್ರ ಗೀತೆಗಳಾಗಿ ತುಂಬಾ ಜನಪ್ರಿಯವಾಗಿವೆ. ಉದಾ: 'ಬಾರೆ ರಾಜಕುಮಾರಿ...', 'ಬಾ ಮಳೆಯೇ ಬಾ...'.

ಭಾವಗೀತೆಗಳಿಂದಾಗಿ ಗಂಭೀರ ಕಾವ್ಯರಚನೆ ಮೇಲೇನಾದರೂ ಪರಿಣಾಮವಾಯಿತೇ?

ನನ್ನ ಪ್ರಕಾರ ಕವಿತೆಯಲ್ಲಿ ಎರಡು ಬಗೆ ಇದೆ. ಒಂದನೆಯದು ಓದುವ ಕವಿತೆ, ಇನ್ನೊಂದು ಹಾಡುವ ಕವಿತೆ.  ಓದುವ ಕವಿತೆಯಲ್ಲಿ ಭಾವದ ಜತೆಗೆ ವಿಚಾರವೂ ಅಡಕವಾಗಿರುತ್ತದೆ. ಹಾಡುವ ಕವಿತೆಯಲ್ಲಿ ಭಾವವೇ ಪ್ರಧಾನವಾಗಿರುತ್ತದೆ. ಹೀಗಾಗಿ ನನಗೆ ಗಂಭೀರವಾದ ವಿಚಾರಗಳನ್ನು ಅಭಿವ್ಯಕ್ತಿಸಬೇಕಾದಾಗ ಗಂಭೀರ ಕವಿತೆಗಳನ್ನು ಬರೆದಿದ್ದೇನೆ. ಭಾವುಕ ಕ್ಷಣಗಳನ್ನು ಹಿಡಿದಿಡುವಾಗ ಭಾವಗೀತೆಗಳನ್ನ ಸಾಕಷ್ಟು ಬರೆದಿದ್ದೇನೆ. ಇವು ವಿಭಿನ್ನ ಪ್ರಕಾರಗಳು, ಅವುಗಳನ್ನ ಹಾಗೆಯೇ ನೋಡಬೇಕಾಗುತ್ತದೆ. ನನ್ನ ಗಂಭೀರ ಕವಿತೆಗಳ ರಚನೆಗೆ ಭಾವಗೀತೆಗಳು ಎಂದೂ ಅಡ್ಡಿಯಾಗಿಲ್ಲ.

ನೀವು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದೀರಿ.  ಮಿಕ್ಕ ಪ್ರಕಾರಗಳಲ್ಲಿ ನಿಮಗೆ ತೃಪ್ತಿ ಸಿಕ್ಕಿದೆಯೇ?

ನಾನು ಕಥೆಗಳನ್ನು ಬರೆದಿದ್ದೇನೆ. ಅವುಗಳಲ್ಲಿ ಕೆಲವು ಚಲನಚಿತ್ರಗಳೂ ಆಗಿವೆ. ಅವೆಂದರೆ, 'ಒಂದು ಪ್ರೇಮ ಕಥೆ', 'ಕಬ್ಬೆಕ್ಕು' (ಈಗ 'ಬೆಳ್ಳಿಕಿರಣ' ಎಂಬ ಹೆಸರಿನಲ್ಲಿ ಅಂತರಾಷ್ಟ್ರೀಯ ಪ್ರಶಸ್ತ್ರಿಗೆ ಕಳಿಸಲಾಗಿದೆ). 'ಹೀಗೊಂದು ಪ್ರೇಮ ಕಥೆ' ಎಂಬ ಏಕೈಕ ಕಾದಂಬರಿ 'ಚಂದನ'ದಲ್ಲಿ ಧಾರವಾಹಿಯಾಗಿ ಪ್ರಸಾರವಾಯಿತು. 'ನನಗ್ಯಾಕೋ ಡೌಟು' ಎಂಬ ನಾಟಕ 'ಬೆನಕ' ತಂಡದಿಂದ ರಂಗಶಂಕರದಲ್ಲಿ ಪ್ರದರ್ಶಿತವಾಗಿ ತುಂಬಾ ಜನಪ್ರಿಯತೆ ಗಳಿಸಿದೆ. ಅಲ್ಲದೆ ಅನುವಾದ, ವಿಮರ್ಶೆ ಕೂಡ ಬರೆದಿದ್ದೇನೆ. ಅಂಕಣ ಬರಹಗಳ ಸಂಗ್ರಹ 'ಮಣಿಮಾಲೆ' ಇತ್ತೀಚೆಗಷ್ಟೇ ಹೊರಬಂದಿದೆ. ಹೀಗೆ ನನ್ನ ಗದ್ಯ ಬರಹಗಳು ಸಹ ಸಾಕಷ್ಟು ಮನ್ನಣೆ ಗಳಿಸಿದ್ದು ನನಗೆ ತೃಪ್ತಿ ತಂದಿದೆ. ಆದರೆ ಇಂದಿಗೂ ನನಗೆ ನನ್ನದೇ ಸಾಹಿತ್ಯ ಮಾಧ್ಯಮ ಎಂದರೆ ಕಾವ್ಯವೇ. ಹೀಗಾಗಿಯೇ ಕನ್ನಡ ಸಾರಸ್ವತ ಲೋಕ ನನ್ನನ್ನು ಕವಿ ಎಂದೇ ಗುರುತಿಸಿದೆ.


ನಿಮ್ಮ ಕಾವ್ಯ ಸ್ಫೂರ್ತಿ ಯಾವುದು? ಆ ಸ್ಫೂರ್ತಿ ನಿರಂತರತೆಯನ್ನು ಹೇಗೆ ಕಾಯ್ದುಕೊಳ್ಳುತ್ತೀರಿ?

ಪ್ರತಿ ಕವಿಗೂ ಒಂದು ಕವಿತೆಯನ್ನು ಪೂರ್ಣಗೊಳಿಸಿದ ನಂತರ ಖಾಲಿ ಎಂಬ ಭಾವನೆ ಮೂಡುತ್ತೆ. ಮತ್ತೆ ವಸ್ತು ಹೊಳೆಯತ್ತೆ. ಒಳಗೆ ಫಲವತ್ತಾಗಿ ಹಸಿರಾಗುತ್ತೆ. ಸಧ್ಯೋ ಜಾತ ಎನ್ನುವಂತಿಲ್ಲ. ಸಮಯ ಹಿಡಿಯಬಹುದು. ಆದರೆ, ಕಾವ್ಯಸ್ಫೂರ್ತಿ ಎಂಬುದು ಎಲ್ಲಿಯೂ ಇಲ್ಲ.  Inspiration-10  ಜತೆಗೆ perspiration- 90 ಸಹ ಬೇಕು. ಯಾರೋ ಒಬ್ಬರು ಸರ್, ದೀಪಾವಳಿಗೆ ಒಂದು ಪದ್ಯ ಬರೆದು ಕೊಡಿ ಎನ್ನುತ್ತಾರೆ. ಅಲ್ಲೊಂದು ಕಾರಣ ಬರುತ್ತೆ. ಆ ಕಾರಣವೇ ಕವಿತೆಯ ಆರಂಭಕ್ಕೆ ಕಾರಣವಾಗಿರುತ್ತೆ. 'ಗುಂಡಪ್ಪ ವಿಶ್ವನಾಥ' ಎಂಬ ನನ್ನ ಕವಿತೆಯನ್ನು ಎಲ್ಲರೂ ಇಷ್ಟಪಡುತ್ತಾರೆ. ಅದೇನೂ ದೊಡ್ಡ ಕವಿತೆಯಲ್ಲ. ಆದರೆ ಅದನ್ನು ತಿದ್ದಿ ತೀಡಲು ಕನಿಷ್ಠ ಒಂದು ತಿಂಗಳು ಹಿಡಿಯಿತು.

ಕವಿ- ಕಾವ್ಯ ಸಂಬಂಧ ಹೇಗಿರಬೇಕು?

'ಇವಳು ನದಿಯಲ್ಲ' ಎಂಬ ಕವಿತೆಯಲ್ಲಿ ನಾನು ಇದನ್ನು ಸಾಕಷ್ಟು ಸವಿಸ್ತಾರವಾಗಿ ಹೇಳಿದ್ದೇನೆ. ನನ್ನ ಹೆಂಡತಿ ಮತ್ತು ಕಾವ್ಯಕ್ಕೆ ಅನ್ವಯಿಸುವ ಮಾತು ಅದು. ನನ್ನ ದಾಂಪತ್ಯದ ಕಲ್ಪನೆಯಂಥದ್ದು. ಸದಾ ನನ್ನೊಂದಿಗೆ ಕಷ್ಟಸುಖಗಳಲ್ಲಿ ಭಾಗಿಯಾಗಿ ನನ್ನ ಬಿಟ್ಟು ಹೋಗದಂಥ, ಜೀವಜಲವಾಗಿರುವ ಮಕ್ಕಳು ಮರಿ, ಹೂಬನ ಎಲ್ಲಕ್ಕೂ ಯಾವಾಗಲು ಬೇಕಾದ ನೀರ ಸೆಲೆ. ಬತ್ತಬಾರದು. ನನ್ನೊಂದಿಗೆ ಇರುವಂಥದ್ದು.
 
ನರಸಿಂಹಸ್ವಾಮಿಗಳ ನಂತರ ಕನ್ನಡದ 'ಪ್ರೇಮಕವಿ' ಎಂದು ನಿಮ್ಮನ್ನು ಗುರುತಿಸುತ್ತಾರೆ. ನಿಮ್ಮಿಬ್ಬರ ನಡುವೆ ನೀವೇ
ಕಂಡುಕೊಂಡಿರುವ ಭಿನ್ನತೆ ಏನು?

ಇದು ನರಸಿಂಹಸ್ವಾಮಿಗಳ ಮೊದಲ ಕವಿತಾ ಸಂಕಲನ 'ಮೈಸೂರು ಮಲ್ಲಿಗೆ' ಜನಪ್ರಿಯತೆ ತಂದುಕೊಟ್ಟಂತೆ, ನನಗೆ ನನ್ನ ಮೊದಲ ಕವಿತಾ ಸಂಕಲನ 'ಗೋಪಿ ಮತ್ತು ಗಾಂಡಲೀನ' ಜನಪ್ರಿಯತೆ ತಂದುಕೊಟ್ಟಿತು.  ನರಸಿಂಹಸ್ವಾಮಿಗಳವರದು ಗ್ರಾಮೀಣ ಸೊಗಡಿನ ದಾಂಪತ್ಯಗೀತೆಗಳು. ನನ್ನದು ನಗರ ಜೀವನದ, ಯುವ ಜನಾಂಗದ ಮಧ್ಯಮವರ್ಗದ ಪ್ರೇಮಗೀತೆಗಳು. ಹೀಗಾಗಿ ನರಸಿಂಹಸ್ವಾಮಿಯವರಲ್ಲಿ ಕಂಡುಬರುವ ಮಡಿವಂತಿಕೆ ನನ್ನ ಕವಿತೆಗಳಲ್ಲಿ ಇಲ್ಲ. ಇಲ್ಲಿ ಹೆಚ್ಚಿನ ಮುಕ್ತತೆ, ಸ್ವಚ್ಛಂದತೆ ಇದೆ.

ನಿಮ್ಮ ಹವ್ಯಾಸಗಳೇನು?

ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕೇಳುವುದು ಮತ್ತು ಕ್ರಿಕೆಟ್ ನೋಡುವುದು ನನಗೆ ತುಂಬಾ ಇಷ್ಟ. ಇದು ಐಪಿಎಲ್ ನೋಡುವ ಸಮಯ.

ಈಗ ಯಾವ ತಯಾರಿಯಲ್ಲಿದ್ದೀರಿ? ಮತ್ತೊಂದಿಷ್ಟು ಪ್ರೇಮಗೀತೆಗಳ ಸುಧೆ ಹರಿಸುವ ಯೋಜನೆ ಇದೆಯೇ?

ಬಿಡಿ ಕವಿತೆಗಳನ್ನು ರಚಿಸುತ್ತಿದ್ದೇನೆ. ಹೊಸ ಕವನಸಂಕಲನ ತರುವ ಹಂಬಲವಿದೆ. ಆದರೆ, ಈಗ ಪ್ರೇಮ ಕವಿತೆಗಳನ್ನು ಬರೆಯುತ್ತೇನೆ ಎನ್ನುವಂತಿಲ್ಲ. ಯಾವುದು ಬರುತ್ತದೋ ಅದನ್ನು ಬರೆಯುತ್ತೇನೆ.

ಕೃಪೆ: ಕನ್ನಡಪ್ರಭ

Tag: Tunta Kavia Kanta, B. R. Lakshmana Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ