ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಬಿನ್ ಉತ್ತಪ್ಪ

ನಮ್ಮ ಕೊಡಗಿನ ರಾಬಿನ್ ಉತ್ತಪ್ಪ

ರಾಬಿನ್ ಉತ್ತಪ್ಪ

ಇತ್ತೀಚಿನ ವರ್ಷಗಳಲ್ಲಿ ವಿಶ್ವ ಕ್ರಿಕೆಟ್ ಲೋಕಕ್ಕೆ  ‘ರಾಬಿನ್ ವೇಣು ಉತ್ತಪ್ಪ’ ಕರ್ನಾಟಕದಿಂದ ದೊರೆತ ಗಣನೀಯ ಪ್ರತಿಭೆ.  1985ರ ವರ್ಷದ ನವೆಂಬರ್ 11ರಂದು ಕೊಡಗಿನಲ್ಲಿ  ಹುಟ್ಟಿದ ಈ ಉತ್ಸಾಹದ ಚಿಲುಮೆಯ ಆಟಗಾರನಿಗೆ ಶುಭ ಹೇಳೋಣ.

ತನ್ನ 17ನೆಯ ವರ್ಷದ ಪ್ರಾಯದಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದ ಈ ಹುಡುಗ, 2006ರ ವರ್ಷದಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತನಗೆ ದೊರೆತ ಮೊದಲ ಅವಕಾಶದಲ್ಲೇ 86ರನ್ನುಗಳನ್ನು ಪೇರಿಸಿ ಅಪಾರ ಭರವಸೆ ಮೂಡಿಸಿದವರು.  ಇದುವರೆಗೆ ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಯಾವುದೇ ಆಟಗಾರ ತನ್ನ  ಪ್ರಾರಭಿಕ ಪಂದ್ಯದಲ್ಲಿ  ಗಳಿಸಿರುವ ಓಟಗಳ  ಅಗ್ರಮಾನ್ಯ ಸಾಧನೆ ಇದಾಗಿದೆ. ಎಂತಹ ಬಿರುಗಾಳಿಯಂತಹ ಬಿರುಸಿನ ಬೌಲಿಂಗ್ ಆದರೂ ಕ್ರೀಸ್ ನಿಂದ ಹೊರಬಂದು ಅದನ್ನು ಅಟ್ಟುವ ಆತನ ಎದೆಗಾರಿಕೆಯನ್ನು ಮೆಚ್ಚಿದ ಕ್ರಿಕೆಟ್ ಪಂಡಿತರು ಆತನನ್ನು ‘The Walking Assassin’ ಎಂದು ಬಣ್ಣಿಸಿದ್ದಾರೆ. ಬ್ಯಾಟಿಂಗ್ ಪರಿಣತಿಯ ಜೊತೆಗೆ ಅವಶ್ಯವಿದ್ದಲ್ಲಿ ವಿಕೆಟ್ ಕೀಪಿಂಗ್ ಮತ್ತು ಬೌಲಿಂಗ್ ಕೂಡ ಮಾಡಬಲ್ಲ.  ಆತನ ಸಿಕ್ಸರುಗಳ ಮೋಡಿಗೆ ಒಳಗಾದ ಒಬ್ಬ ಕ್ರಿಕೆಟ್ ಪಂಡಿತರು ಆತನನ್ನು ರಾಬಿನ್ ‘Six’ಪ್ಪ ಎಂದು ಕೂಡ ಬಣ್ಣಿಸಿದ್ದರು.

ನಮ್ಮಲ್ಲಿ ಒಬ್ಬ ಆಟಗಾರನನ್ನು ಆತ ಎಷ್ಟು ಟೆಸ್ಟ್ ಪಂದ್ಯದಲ್ಲಿ ಆಡಿದ, ಎಷ್ಟು ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಿದ, ಎಷ್ಟು ಜಾಹಿರಾತಿನಲ್ಲಿ ಎಷ್ಟು ಕೋಟಿ ಸಂಪಾದಿಸಿದ, ಎಷ್ಟು ಸೆಂಚುರಿ ಬಾರಿಸಿದ, ಎಷ್ಟು ಸಿಕ್ಸರ್ ಬಾರಿಸಿದ,  ಆತ ಕೂಡ ಸಚಿನ್ ತೆಂಡೂಲ್ಕರ್ ತರಹ ಆಗಬಲ್ಲನೆ ಇತ್ಯಾದಿ ಮಾನದಂಡಗಳಲ್ಲಿ ಅಳೆಯುವುದಿದೆ.   ಕಳೆದೆರಡು ವರ್ಷದ ಹಿಂದೆ ರಣಜೀ ಟ್ರೋಫಿ ಪೈನಲ್ ಪಂದ್ಯದಲ್ಲಿ ನಮ ಕರ್ನಾಟಕ ತಂಡ ಪ್ರಶಸ್ತಿಗೆ ಹತ್ತಿರವಾಗಿತ್ತು ಎಂದು ಆಶಿಸಿದ್ದವರು ಉತ್ತಪ್ಪ ರನ್ ಹೊಡೆಯಲಿಲ್ಲ ಎಂದು ಕುಪಿತರಾಗಿದ್ದರು.  ಇಂದಿನ ಆಟಗಾರರಿಂದ  ಹೆಚ್ಚಿನದನ್ನು ನಿರೀಕ್ಷಿಸುವ ಗೆಲುವಿನ ಕುದುರೆಯ ಪೂಜಿಸುವ ಸಮಾಜ ಮತ್ತು  ವ್ಯಾಪಾರೀ ವಲಯಗಳಲ್ಲಿ ಇಂತಹ ಹುಡುಗರ ಕಷ್ಟ ಕಾರ್ಪಣ್ಯಗಳು ಯಾರ ಗಮನಕ್ಕೂ ಬರುವುದೇ ಇಲ್ಲ.  ಕಳೆದ ಐಪಿಎಲ್ ನಂತರದಲ್ಲಿ ಈ ಹುಡುಗ ಶಸ್ತ್ರ ಚಿಕಿತ್ಸೆಗೆ ಕೂಡ ಒಳಗಾಗಿದ್ದ.

ಆದರೆ ಉತ್ತಪ್ಪನಂತಹ ಉತ್ಸಾಹಿ ಆಟಗಾರನನ್ನು ಅರ್ಥೈಸಬೇಕಾದರೆ ಈ ಎಲ್ಲ ಮಾನದಂಡಗಳಿಂದ ಸ್ವಲ್ಪ ಆಚೆಗೆ ಬರಬೇಕೇನೋ ಅನಿಸುತ್ತದೆ. ಎಲ್ಲರೂ ತೆಂಡುಲ್ಕರ್ ಆಗಲು ಸಾಧ್ಯವಿಲ್ಲ.  ಎಲ್ಲರಿಗೂ ದ್ರಾವಿಡ್ ಅವರಿಗೆ ಇರುವಂತಹ ಏಕಾಗ್ರತೆ ಸುಲಭ ಸಾಧ್ಯವಿಲ್ಲ.  ಇಂತಹ ಮಹಾನ್ ಕ್ರೀಡಾಪಟುಗಳೇ ತಮ್ಮ ಸಾಮರ್ಥ್ಯ ಮೀರಿ ಔಟ್ ಆಗುವುದು  ಕ್ರೀಡೆಯಲ್ಲಿ ಅನಿವಾರ್ಯ.  ಇಂದಿನ ದಿನದಲ್ಲಿ ಎಡಬಿಡದೇ ಕ್ರಿಕೆಟ್ ಆಡುವ ಈ ದೇಶದಲ್ಲಿ ಹಲವು ಹೊಸ ಆಟಗಾರರು ದಿನ ನಿತ್ಯ ಹುಟ್ಟುತ್ತಿದ್ದಾರೆ.  ಈ ಮಧ್ಯೆ ಹತ್ತು ಹಲವು ಕಾರಣಗಳಿಗೆ ನಮ್ಮ ಹುಡುಗರು ಉನ್ನತ ಸ್ಪರ್ಧೆಗಳಲ್ಲಿ ಎಡವುತ್ತಾರೆ.  ಆ ಎಡವುವಿಕೆಯಲ್ಲೇ ಹೊಸತನ್ನು ಕಲಿತು ಹೆಚ್ಚಿನದನ್ನು ಸಾಧಿಸಲು ಪ್ರೇರಣೆ ಕೂಡ ಪಡೆಯುತ್ತಾರೆ.

ನಮ್ಮಲ್ಲಿ ಟೆಸ್ಟ್ ತಂಡದ ಬ್ಯಾಟುಗಾರರಲ್ಲಿ ಅಲ್ಲೊಂದು ಇಲ್ಲೊಂದು ಸ್ಥಾನ ನಿರ್ಮಾಣ ಆಗುವುದು ಹತ್ತು ಹದಿನೈದು ವರ್ಷಕ್ಕೊಮ್ಮೆ. ಸಚಿನ್, ದ್ರಾವಿಡ್, ಲಕ್ಷ್ಮಣ್, ಸೆಹವಾಗ್ ದಶಕಕ್ಕೂ ಹೆಚ್ಚು ವರ್ಷದಿಂದ ಅಲ್ಲಿದ್ದಾರೆ.  ಗಂಗೂಲಿ ನಿವೃತ್ತಿ ಹೊಂದಿದ್ದರಿಂದ ಮತ್ತು ನಮ್ಮ ಪ್ರತಿಭಾವಂತ ಆಟಗಾರ ಯುವರಾಜ್ ಸಿಂಗ್ ಕ್ರಿಕೆಟ್ ಆಟದಿಂದ ಹೊರ ಪ್ರವೃತ್ತಿಗಳಿಗೆ ತಮ್ಮ ಚಿತ್ತಾಸಕ್ತಿ ಬೆಳೆಸಿರುವುದರಿಂದ ಒಂದು ಸ್ಥಾನ ರೈನಾ ಅಂತವನಿಗೆ ದಕ್ಕಿದೆ. ಇನ್ನೊಂದು ಸ್ಥಾನವನ್ನು ಗೌತಮ್ ಗಂಭೀರ ಸಾಕಷ್ಟು ಕಷ್ಟಪಟ್ಟು ಗಳಿಸಿ ಉಳಿಸಿಕೊಂಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ತನ್ನ ಸ್ಥಾನವನ್ನು ಗಂಭೀರವಾಗಿ ಬಿಟ್ಟು ಕೊಡುವಂತೆ ಅನಿಸಿಕೆ ಮೂಡಿಸುತ್ತಿದ್ದರೂ ಅದಕ್ಕೆ ವಿಜಯ್ ಅಂತಹ ಪ್ರತಿಭಾನ್ವಿತ  ಆಟಗಾರ ಕಾಯುತ್ತಿದ್ದಾನೆ. ಪೂಜಾರ ಅಂತಹ ಹುಡುಗ ಹಲವು ವರ್ಷಗಳಿಂದ ಸಚಿನ್, ದ್ರಾವಿಡ್ ಅವರುಗಳ  ನಿವೃತ್ತಿ ಕಾಯುತ್ತಿದ್ದಾನೆ.  ಹೀಗೆ ಉತ್ತಪ್ಪನಿಗೆ ಟೆಸ್ಟ್ ತಂಡದಲ್ಲಿ ಆಡುವ ಭಾಗ್ಯ ಮುಂಬರುವ ಹಲವು ವರ್ಷಗಳ ವರೆಗೆ ಸಾಧ್ಯವೆಂಬಂತೆ ತೋರುತ್ತಿಲ್ಲ.

ಒಂದು ದಿನದ ಪಂದ್ಯದಲ್ಲಿ ಸದ್ಯಕ್ಕೆ ಉತ್ತಪ್ಪ ಇನ್ನಿತರ ಯುವ ಆಟಗಾರರೊಂದಿಗೆ ಪೈಪೋಟಿಯಲ್ಲಿದ್ದಾನೆ. ಹೀಗಾಗಿ ಅಲ್ಲಿ ಕೂಡ ಜಾಗ ಪಡೆಯಲು ಆತ ಸಾಕಷ್ಟು ಶ್ರಮಿಸಬೇಕಿದೆ.  ಅದನ್ನು ಉತ್ತಪ್ಪ ಮಾಡುತ್ತಾನೆಂದು ಆಶಿಸೋಣ.

ಇನ್ನು ಇಪ್ಪತ್ತು ಓವರುಗಳ ಆಟದಲ್ಲಿ ಆತ ಖಂಡಿತ ಮನೋಜ್ಞ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.   ‘ಐಪಿಎಲ್ ೩’ ರ ಸ್ಪರ್ಧೆಗಳಲ್ಲಿ ಸಹಾ ಕರ್ನಾಟಕದ ರಾಯಲ್ ಚಾಲೇಂಜರ್ಸ್ ತಂಡದ ಪರವಾಗಿ ಆತ ಉತ್ತಮ ಆಟ ಆಡಿದ.  ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಸಚಿನ್ ತೆಂಡುಲ್ಕರ್ ಅವರಿಗೆ  ಬಂದರೂ ಉತ್ತಪ್ಪ  ಆ ಪ್ರಶಸ್ತಿ ಪಡೆಯುವ ಸನಿಹದಲ್ಲೇ ಇದ್ದ.  ಬಹುಶಃ ಅದನ್ನು ಸರಿದೂಗಿಸಲೋ ಎಂಬಂತೆ ರಾಬಿನ್ ಉತ್ತಪ್ಪನಿಗೆ ಸ್ಪರ್ಧೆಯ ‘ಅತ್ಯಾಕರ್ಷಕ ಬ್ಯಾಟುಗಾರ’ ಪ್ರಶಸ್ತಿ ನೀಡಲಾಯಿತು.  ಭಾರತ ತಂಡವು ಮೊದಲ ಇಪ್ಪತ್ತು ಓವರುಗಳ ವಿಶ್ವ ಕಪ್ ಪ್ರಶಸ್ತಿ ಗಳಿಸಿದ ತಂಡದಲ್ಲಿ ರಾಬಿನ್ ಉತ್ತಪ್ಪನ ಕೊಡುಗೆ ಅತ್ಯಮೂಲ್ಯದ್ದಾಗಿತ್ತು ಎಂಬುದ ಸಹಾ ಗಮನಾರ್ಹ.  ಅದೂ ಅಲ್ಲದೆ ತನ್ನ ಕ್ಷಿಪ್ರಗತಿಯ ಬ್ಯಾಟಿಂಗ್ ಸಾಮರ್ಥ್ಯದಿಂದ ಯಾವುದೇ ಕ್ಷಣದಲ್ಲಿಯೂ ಪಂದ್ಯದ ಗತಿಯನ್ನು ಬದಲಿಸಬಲ್ಲ ಚಾಣಾಕ್ಷತನ ಈ ಹುಡುಗನಲ್ಲಿದೆ.  ಇದೆಲ್ಲಾ ಒಂದಾನೊಂದು ಕಾಲದಲ್ಲಿ.  ಈಗ ರಾಯಲ್ ಚಾಲೆಂಜರ್ಸ್ ತಂಡದಲ್ಲಿ ಕರ್ಣಾಟಕದವರು ಬಿಟ್ಟು ಬೇರೆ ಎಲ್ಲರೂ ಇದ್ದಾರೆ.   ಇತ್ತೀಚಿನ ಐಪಿಎಲ್ ಸ್ಪರ್ಧೆಗಳಲ್ಲಿ ಉತ್ತಪ್ಪ ಪುಣೆ ವಾರಿಯರ್ಸ್ ತಂಡದಲ್ಲಿದ್ದಾನೆ.

ಇತ್ತೀಚೆಗೆ ಆತನನ್ನು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ ಪುನಃ ಭಾರತ ತಂಡಕ್ಕೆ ಪರಿಗಣಿಸಲಾಗಿತ್ತು.  ನೆನ್ನೆ ತಾನೇ ದೆಹಲಿಯಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಸೆಂಚುರಿ ಬಾರಿಸಿದ್ದಾನೆ.  ಇವು ಉತ್ತಪ್ಪನ ಬಗ್ಗೆ ಅಲ್ಲಲ್ಲಿ ಮಿಂಚುತ್ತಿರುವ ಆಶಾ
ಕಿರಣಗಳು.

ಇಂತಹ ಸ್ಪರ್ಧೆಗಳಲ್ಲಿ ಉತ್ಸಾಶಾಲಿಗಳಾಗಿ ಪ್ರದರ್ಶನ ನೀಡುತ್ತಿರುವ ರಾಬಿನ್ ಉತ್ತಪ್ಪ ಅಂತಹ ಯುವಕರನ್ನು ಹುರಿದುಂಬಿಸೋಣ.   ಇನ್ನೂ ಹೆಚ್ಚಿನ ಸಾಧನೆಗೆ ಅವರನ್ನು ಪ್ರೋತ್ಸಾಹಿಸೋಣ.  ನಮ್ಮ ರಾಜ್ಯದ ಹೆಸರನ್ನು ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಶೋಭಾಯಮಾನವಾಗಿರಿಸಲು ಶ್ರಮಿಸಿರುವ ಈ ಹುಡುಗರನ್ನು ಅಭಿನಂದಿಸಿ ಹರಸೋಣ.

Tag: Robin Uthappa

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ