ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ತೂಗು ಮಂಚದಲ್ಲಿ


ತೂಗು ಮಂಚದಲ್ಲಿ ಕೂತು
ಮೇಘಶಾಮ ರಾಧೆಗಾತು
ಆಡುತಿಹನು ಏನೋ ಮಾತು
ರಾಧೆ ನಾಚುತಿದ್ದಳು

ಸೆರಗ ಬೆರಳಿನಲ್ಲಿ ಸುತ್ತಿ
ಜಡೆಯ ತುದಿಯ ಕೆನ್ನೆಗೊತ್ತಿ
ಜುಮ್ಮುಗುಡುವ ಮುಖವನೆತ್ತಿ
ಕಣ್ಣ ಮುಚ್ಚುತ್ತಿದ್ದಳು

ಮುಖವ ಎದೆಯ ನಡುವೆ ಒತ್ತಿ
ತೋಳಿನಿಂದ ಕೊರಳ ಸುತ್ತಿ
ತುಟಿಯು ತೀಡಿ ಬೆಂಕಿ ಹೊತ್ತಿ
ಕಮ್ಮನುಸಿರ ಬಿಟ್ಟಳು

ಸೆರಗು ಜಾರುತಿರಲು ಕೆಳಗೆ
ಬಾನು ಭೂಮಿ ಮೇಲು ಕೆಳಗೆ
ಅದುರುತಿರುವ ಅಧರಗಳಿಗೆ
ಬೆಳ್ಳಿ ಹಾಲ ಬಟ್ಟಲು

ಚಾಚುತಿರಲು ಅರಳಿದರಳು
ಯಮುನೆಯೆಡೆಗೆ ಚಂದ್ರ ಬರಲು
ಮೇಲೆ ತಾರೆಗಣ್ಣ ಹೊರಳು
ಹಾಯಿ ದೋಣಿ ತೇಲಿತು

ತನಗೆ ತಾನೇ ತೂಗುಮಂಚ
ತಾಗುತ್ತಿತ್ತು ದೂರದಂಚ
ತೆಗೆಯೊ ಗರುಡ ನಿನ್ನ ಚೊಂಚ
ಹಾಲು ಗಡಿಗೆ ಹೇಳಿತು

ಸಾಹಿತ್ಯ: ಎಚ್. ಎಸ್. ವೆಂಕಟೇಶಮೂರ್ತಿ
ಸಂಗೀತ: ಸಿ. ಅಶ್ವಥ್
ಗಾಯನ: ರತ್ನಮಾಲಾ ಪ್ರಕಾಶ್

ಚಿತ್ರಕೃಪೆ: http://www.martforart.com

Tag: Toogu manchadalli kootu, Thoogu manchadalli khootu


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ