ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಹೂಗಿಡವಾಗುವ ಹುಡುಗಿ

ಹೂಗಿಡವಾಗುವ ಹುಡುಗಿ

ಮುದುಕಿಯೊಬ್ಬಳು ತನ್ನಿಬ್ಬರು ಹೆಣ್ಣುಮಕ್ಕಳನ್ನು ಸಾಕಲು ಸ್ಥಿತಿವಂತರ ಮನೆಗಳಲ್ಲಿ ಆಳುಕೆಲಸ ಮಾಡುತ್ತಿದ್ದಳು.  ಮಕ್ಕಳು ಮೈನೆರೆದರು.  ತಂಗಿ ಅಕ್ಕನಿಗೆ ಹೇಳಿದಳು.  ‘ಅಮ್ಮ ಒಬ್ಬಳೇ ದಿನವೆಲ್ಲಾ ದುಡಿದು ಕಷ್ಟಪಡುವುದು ನನಗೆ ಇಷ್ಟವಿಲ್ಲ.  ನಾವೂ ಒಂದಿಷ್ಟು ಹಣ ಸಂಪಾದಿಸಿ ಅಮ್ಮನ ಬಾಳನ್ನು ಹಗುರಗೊಳಿಸೋಣ.  ಮಂತ್ರಶಕ್ತಿಯಿಂದ ನಾನು ಹೂಗಿಡ ಆಗಬಲ್ಲೆ.  ನೀನು ಹೂಗಳನ್ನು ಕಿತ್ತುಕೋ.  ನಾನು ಮತ್ತೆ ನಿಜಸ್ವರೂಪ ತಳೆಯುತ್ತೇನೆ.  ಆಗ ಇಬ್ಬರೂ ಹೋಗಿ ಹೂವು ಮಾರೋಣ.

ಅವರ ಗುಡಿಸಿಲಿನ ಮುಂದೆ ಒಂದು ಎತ್ತರದ ಮರವಿತ್ತು.  ಅದರ ಬಳಿ ನೆಲವನ್ನು ಚೊಕ್ಕಟ ಮಾಡಿ ತಂಗಿ ದೇವರನ್ನು ಧ್ಯಾನಿಸುತ್ತ ಕುಳಿತಳು.  ಅಕ್ಕ ತುಂಬಿದ್ದ ಒಂದು ಹೂಜಿಯಿಂದ ಅವಳ ಮೇಲೆ ನೀರೆರೆದಳು.  ಕೂಡಲೇ ತಂಗಿ ಹೂಗಿಡವಾಗಿ ಬಾನೆತ್ತರಕ್ಕೆ ಬೆಳೆದಳು.  ಅಕ್ಕ ಹೂ ಬಿಡಿಸಿಕೊಂಡಳು.  ಹಾಗೆ ಬಿಡಿಸಿಕೊಳ್ಳುವಾಗ ತಂಗಿ ಎಚ್ಚರಿಸಿದ್ದಂತೆ ಒಂದು ರೆಂಬೆಯನ್ನೂ ಮುರಿಯಲಿಲ್ಲ.  ಒಂದು ಎಲೆಯನ್ನೂ ಹರಿಯಲಿಲ್ಲ.  ಹೊರೆ ಹೊರೆ ಹೂವು ಶೇಖರವಾದ ಮೇಲೆ ಇನ್ನೊಂದು ತುಂಬಿದ ಹೂಜಿಯಿಂದ ಅಕ್ಕ ಹೂ ಗಿಡಿದ ಮೇಲೆ ನೀರು ಹಾಯಿಸಿದಳು.  ಹೂಗಿಡ ಮಾಯವಾಗಿ ತಂಗಿ ಮೈದೋರಿದಳು.

ಇಬ್ಬರೂ ಸೇರಿ ಹೂಗಳನ್ನು ಮಾಲೆ ಕಟ್ಟಿದರು.  ಬಳಿಕ ಅವುಗಳನ್ನು ತಂಗಿ ಹೇಳಿದಂತೆ ಅರಮನೆಗೆ ಒಯ್ದು ಮಾರಿದಳು.  ಆ ಹೂಗಳ ಅನುತ್ತದ ಪರಿಮಳಕ್ಕೆ ರಾಜಕುಮಾರ ಮನಸೋತು ಅಕ್ಕನನ್ನು ಹಿಂಬಾಲಿಸಿ ಅವರ ಗುಡಿಸಿಲನ್ನು ಗುರುತು ಹಚ್ಚಿ ಮಾರನೆ ಬೆಳಿಗ್ಗೆ ಅಲ್ಲಿದ್ದ ಮರದಲ್ಲಿ ಅವಿತುಕೊಂಡು ಹುಡುಗಿ ಹೂಗಿಡವಾಗುವ ಅದ್ಭುತವನ್ನು ಕಂಡ.  ಅವನ ಅಭಿಲಾಷೆಯನ್ನರಿತ ರಾಜ ಮುದುಕಿಯನ್ನು ಕರೆಸಿ ಅವಳ ಕಿರಿಯ ಮಗಳನ್ನು ಮಗನಿಗೆ ತಂದುಕೊಂಡ.  ಮದುವೆಯಾದ ಎರಡು ರಾತ್ರಿಗಳೂ ತನ್ನನ್ನು ಮುಟ್ಟದಿದ್ದ ರಾಜಕುಮಾರನನ್ನು ಹುಡುಗಿ ಪ್ರಶ್ನಿಸಿದಾಗ ಅವನು ಅವಳು ತನ್ನೆದುರಿಗೆ ಹೂಗಿಡವಾಗಿ ತಮ್ಮ ಶಯ್ಯೆಗೆ ಹೂಗಳನ್ನು ಒದಗಿಸಿಕೊಳ್ಳಬೇಕೆಂಬ ತನ್ನ ಆಸೆಯನ್ನು ಅವಳ ಮುಂದಿಟ್ಟ.  ಮೂರನೆಯ ರಾತ್ರಿ ಅವಳು ಅವನ ಈ ಆಸೆಯನ್ನು ಈಡೇರಿಸದಿರಲು ಸಾಧ್ಯವಾಗಲಿಲ್ಲ.

ಹೀಗೆ ಹಲವು ರಾತ್ರಿಗಳು ನಡೆದು ಬಾಡಿದ ಹೂಗಳ ರಾಶಿ ಬೆಳೆಯಿತು.  ಇದರ ರಹಸ್ಯವನ್ನು ತಿಳಿದುಕೊಂಡ ರಾಜಕುಮಾರನ ತಂಗಿ ಅವಳನ್ನು ತನ್ನ ಗೆಳತಿಯರೊಂದಿಗೆ ವಿಹಾರಕ್ಕೆಂದು ಕರೆದೊಯ್ದು ಅವಳನ್ನು ತನ್ನ ಮಂತ್ರವಿದ್ಯೆಯನ್ನು ಪ್ರದರ್ಶಿಸುವಂತೆ ಒತ್ತಾಯಿಸಿದಳು.  ಒತ್ತಡಕ್ಕೆ ಸಿಕ್ಕಿ ಅವಳು ತಾನು ಹೂಗಿಡವಾಗುವ ಕ್ರಮವನ್ನು ವಿವರಿಸಿ ಅದಕ್ಕೆ ಅನುಸಾರವಾಗಿ ಹೂಗಿಡವಾದಳು.  ರಾಜಕುಮಾರಿಯೂ ಅವಳ ಗೆಳತಿಯರೂ ಹುಡುಗಿ ಕೊಟ್ಟಿದ್ದ ಮುನ್ನೆಚ್ಚರಿಕೆಯನ್ನು ಲಕ್ಷ್ಯದಲ್ಲಿಟ್ಟುಕೊಳ್ಳದೆ ಹೂ ಕಿತ್ತುಕೊಳ್ಳುವಾಗ ರೆಂಬೆ ಚಿವುಟಿದರು, ಮುರಿದರು.  ಎಲೆ ಹರಿದರು.  ಮತ್ತೆ ಅವರು ನೀರೆರೆದಾಗ ಹುಡುಗಿ ಅಂಗವಿಕಲೆಯಾಗಿ ನೆಲದ ಮೇಲೆ ಬಿದ್ದಿರುವಂತಾಯಿತು.  ರಾಜಕುಮಾರಿಯೂ, ಗೆಳತಿಯರೂ ಅವಳ ಕಡೆಯೂ ನೋಡದೆ ಹೊರಟು ಹೋದರು.

ಹುಡುಗಿ ಅರ್ಧಶರೀರೆಯಾಗಿ ಮಳೆಯ ಪ್ರವಾಹದಲ್ಲಿ ತೇಲುತ್ತ ತೆವಳುತ್ತ ಒಂದು ಮೋರಿಯಲ್ಲಿ ಸಿಕ್ಕಿಹಾಕಿಕೊಂಡಳು.  ಒಬ್ಬ ದಯಾಳು ಹತ್ತಿಗಾಡಿ ಹೊಡೆಯುವವ ಅವಳನ್ನು ಹೊತ್ತು ತಂದು ರಾಜಕುಮಾರಿಯ ಅಕ್ಕನೇ ರಾಣಿಯಾಗಿದ್ದ ರಾಜಧಾನಿಯೊಂದರಲ್ಲಿ  ಅರಮನೆಯ ದಾಸಿಯರು ನೀರು ತರಲು ಓಡಾಡುವೆಡೆ ಅವಳನ್ನು ಬಿಟ್ಟು ಹೋದ.  ಅವರು ಅವಳ ಮುಖವನ್ನು ನೋಡಿ ಗುರುತಿಸಿ ಅವಳು ರಾಣಿಯ ನಾದಿನಿ ಇರಬೇಕೆಂದು ಊಹಿಸಿ ರಾಣಿಗೆ ತಿಳಿಸಿದಾಗ ರಾಣಿ ಅವಳನ್ನು ಅರಮನೆಗೆ ಕರೆಸಿಕೊಂಡು ಶುಶ್ರೂಷೆ ಮಾಡಿದಳು.

ಇತ್ತ ರಾಜಕುಮಾರ ತನ್ನ ಪ್ರಿಯೆಯನ್ನು ಕಳೆದುಕೊಂಡ ವ್ಯಥೆಯಲ್ಲಿ ಅರಮನೆಯನ್ನು ತೊರೆದು ಸನ್ಯಾಸಿಯಾಗಿ ಸಂಚರಿಸುತ್ತಿದ್ದು ಕಡೆಗೆ ಅಕ್ಕನ ರಾಜ್ಯಕ್ಕೇ ಬಂದ.  ಅವನನ್ನು ಗುರುತಿಸಿದ ದಾಸಿಯರಿಂದ ವಿಷಯ ತಿಳಿದು ಅಕ್ಕ ಅವನನ್ನೂ ಅರಮನೆಗೆ ಕರೆಸಿಕೊಂಡು ಅವನಿಗೆ ತಕ್ಕ ಆರೈಕೆ ಮಾಡಿದಳು.  ಅವನು ಸದಾ ಮೌನಿಯಾಗಿರುವುದನ್ನು ನೋಡಿ ರಾಣಿ ಏಳು ರಾತ್ರಿ ಏಳು ಹೆಣ್ಣುಗಳನ್ನು ಅವನ ಬಳಿ ಕಳುಹಿಸಿದಳು.  ಅವನ ಚಿತ್ತಗ್ಲಾನಿ ಯಾವ ರೀತಿಯಲ್ಲಿಯೂ ಕಡಿಮೆಯಾಗಲಿಲ್ಲ.

ಎಂಟನೆಯ ರಾತ್ರಿ ಅಂಗವಿಕಲೆಯಾದ ಹುಡುಗಿಯನ್ನು ಅವನ ಬಳಿಗೆ ಕಳುಹಿಸಿದಳು.  ಇಬ್ಬರೂ ಒಬ್ಬರನ್ನೊಬ್ಬರು ಗುರುತಿಸಿ ಆನಂದಿಸಿದರು.  ಹುಡುಗಿ ತಾನು ತನ್ನ ಪೂರ್ವ ಸ್ವರೂಪವನ್ನು ಮತ್ತೆ ಪಡೆಯುವ ಕ್ರಮವನ್ನು ಅವನಿಗೆ ತಿಳಿಸಿದಳು.  ಅವನು ಅವಳ ಮೇಲೆ ನೀರೆರೆದು ಅವಳು ಹೂಗಿಡವಾದಾಗ ಹರಿದೆಲೆಗಳನ್ನು ಹೊಲೆದ.  ಮುರಿದ ರೆಂಬೆಗಳನ್ನು ಕೂಡಿಸಿ ನೆಟ್ಟಗೆ ಮಾಡಿದ.  ಅನಂತರ ಹೂಗಿಡದ ಮೇಲೆ ಅವನು ನೀರೆರೆದಾಗ ಹುಡುಗಿ ತನ್ನ ಮೊದಲಿನ ರೂಪಕ್ಕೆ ಮರಳಿದಳು.  ಮಾರನೆ ದಿನ ರಾಣಿ ಅವರನ್ನು ಹಸೆಯ ಮೇಲೆ ಕೂಡಿಸಿ ಆರತಕ್ಷತೆ ಮಾಡಿದಳು.  ಹಲವು ವಾರಗಳು ರಾಜಕುಮಾರನೂ ಅವನ ಪ್ರಿಯ ಪತ್ನಿಯೂ ಅವನ ಅಕ್ಕನ ಮನೆಯಲ್ಲಿ ಸುಖವಾಗಿ ಕಳೆದು ತಂದೆಯ ರಾಜಧಾನಿಗೆ ತೆರಳಿದರು.  ಅಲ್ಲಿ ಅವರಿಗೆ ಆನೆಯ ಮೇಲೆ ಮೆರವಣಿಗೆ ನಡೆದು ಮುಂದೆ ಆನಂದಮಯ ಭವಿಷ್ಯ ತೆರೆಯಿತು.

ಈ ಕಥೆ ಬೇರೆ ಬೇರೆ ಅರ್ಥಗಳನ್ನೂ ಧ್ವನಿಸುತ್ತದೆ.  ಮೈನೆರೆದ ಮೇಲೆಯೇ ಹುಡುಗಿ ಹೂಗಿಡವಾಗುವ ಅಂಶ ಮೈನೆರೆಯುವುದನ್ನು ಸಾಂಕೇತಿಕವಾಗಿ ಹೂಬಿಡುವುದನ್ನಾಗಿ ವರ್ಣಿಸುವ ಕ್ರಮವನ್ನು ಸೂಚಿಸುತ್ತದೆ.  ಪರಿಸರ ಪ್ರಜ್ಞೆ ಎಂಬ ಮಾತು ಕೇಳಿಬರುತ್ತಿರುವ  ಈ ದಿನಗಳಲ್ಲಿ ಹೂಗಿಡವನ್ನೂ ಸುಂದರ ಹೆಣ್ಣನ್ನೂ ಸಮೀಕರಿಸಿ ಗಿಡವನ್ನು ಭಗ್ನಗೊಳಿಸದಂತೆ ಎಚ್ಚರಿಕೆ ವಹಿಸಬೇಕೆನ್ನುವ ವಿಷಯ ಅರ್ಥಪೂರ್ಣವೆನಿಸುತ್ತದೆ.  ಅಂಗವಿಕಲೆಯನ್ನು ಪೂರ್ಣಾಂಗಿನಿಯನ್ನಾಗಿಸುವ ಪ್ರಕ್ರಿಯೆಯೂ ಈ ವಿಷಯದಲ್ಲಿ ಇಂದಿನ ಮಾನವೀಯ ದೃಷ್ಟಿಗೆ ಆದರಣೀಯವೆನಿಸುತ್ತದೆ.

(ಎ. ಕೆ. ರಾಮಾನುಜನ್ ಅವರ ‘ಭಾರತದಿಂದಾಯ್ದ ಜಾನಪದ ಕಥೆಗಳ’ ಸಂಗ್ರಹದಲ್ಲಿನ ‘ಹೂಗಿಡವಾಗುವ ಹುಡುಗಿ’ಕಥೆಯ ಒಂದು ಸಂಕ್ಷಿಪ್ತ ರೂಪ.  ಎ. ಕೆ. ರಾಮಾನುಜನ್ ನೆನಪಿನ ಸಂಪುಟದಲ್ಲಿ ಕೆ. ನರಸಿಂಹ ಮೂರ್ತಿ ಅವರ ನಿರೂಪಣೆ)

ಚಿತ್ರ: ಎಂ. ಎಫ್ ಹುಸ್ಸೇನ್ ಅವರದು

Tag: Hoogidavaaguva hudugi

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ