ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬೆಳಕಿನ ಹಾಡು



ನಾನು ಬೆಳಕಿನ  ಕುರಿತು ಹಾಡಬಂದಿದ್ದೇನೆ,
ನೀವು ಕತ್ತಲೆಯತ್ತ ನನ್ನ ಸೆಳೆವಿರದೇಕೆ?
ಮೊತ್ತ ಮೊದಲಿತ್ತು ಕತ್ತಲೆಯೆ; ಆಮೇಲೆಂದೊ
ಬೆಳಕು ಹುಟ್ಟಿತು ಬೆಳ್ಳಿ ಗೆರೆಯಾಗಿ ಮೂಡಲಲಿ.

ಕಿಕ್ಕಿರಿದ ಚಪ್ಪರದ ತುಂಬಾ ನಡೆಯಿತು ಭಜನೆ,
ಬೀದಿ ದೀಪಗಳಿಂದ ಹುಣ್ಣಿಮೆಯ ರಾತ್ರಿಯಲಿ
ಬೆಳಕ ಸಲುವಾಗಿ; ಈ ಬೆಳಕೆನ್ನುವುದು ಕೂಡ
ಭ್ರಮೆಯೆಂದವರ ನಾನು ಹಿಂದೆ ಕಂಡಿದ್ದೇನೆ.

ಸಪ್ತರ್ಷಿ ಮಂಡಲ ಕೆಳಗೆ ನಿಂತಿದ್ದೇನೆ
ಚಂದ್ರರೋಹಿಣಿಯರಂತರವನ್ನು ಅಳೆಯುತ್ತ ;
ಚಂದ್ರನಲ್ಲಿಹ ಮಣ್ಣನಿವರು ತಂದಿದ್ದಾರೆ
ವರುಷಗಳ ಕಾಲ ಹೋರಾಡಿ ಪ್ರಕೃತಿಯ ಒಡನೆ.

ಹಸಿದವರ ಕಣ್ಬೆಳಕು ಏಕೋ ಮಂಕಾಗುತಿದೆ
ಮತ್ತೆ ತೆರೆ ಬೀಳಲಿದೆ ನಾಟಕ ಮುಗಿವ ಮೊದಲೆ ;
ಗುಡಿಸಿಲಲಿ ತಪ್ಪಲೆಯ ಅನ್ನ ಕೆದಕಿದ್ದಾಳೆ
ಎಂಬತ್ತು ವರುಷಗಳ ಮುದುಕಿ ಬೆಂಕಿಯ ಮುಂದೆ.

ಅವಳ ಕೆನ್ನೆಯ ಕಡೆಗೆ ಒಲೆಯ ಕಿಡಿ ಹಾರುತಿದೆ
ಹಳೆಯ ಕನ್ನಡಿಯಲ್ಲಿ ನೋಡಿಕೊಂಡಿದ್ದಾಳೆ-
ತನ್ನ ಗತವೈಭವದ ಸಂಪೂರ್ಣ ಚಿತ್ರವನು,
ಈ ಕೆನ್ನೆಗಿತ್ತ ಆ ಮುತ್ತು ಕನಸಾದುದನು.

ಒಂದೊಂದು ಹೂವು ಒಂದೊಂದು ದೀಪದ ಹಾಗೆ,
ಹಣತೆಗಳ ತೇಲಿ ಬಿಟ್ಟಿದ್ದೇನೆ ಹೊಳೆಯಲ್ಲಿ ;
ಬೆಂಕಿಯಿಲ್ಲದೆ ಅನ್ನವಿಲ್ಲ; ಬೆಳಕಿಲ್ಲದೆಯೆ
ಬೆಂಕಿಯೂ ಇಲ್ಲ. ಇದೆ ಬೆಳಕಿನ ಹಾಡು.

ಸಾಹಿತ್ಯ: ಕೆ. ಎಸ್. ನರಸಿಂಹಸ್ವಾಮಿ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!
Emotions
Copy and paste emojis inside comment box

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ