ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನಾ. ಡಿಸೋಜ ಅವರಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ

ನಾ. ಡಿಸೋಜ

ಜನವರಿಯಲ್ಲಿ ಕೊಡಗಿನಲ್ಲಿ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕಥೆ, ಕಾದಂಬರಿಕಾರ ಡಾ.ನಾ.ಡಿಸೋಜ ಅವರು  ಆಯ್ಕೆಯಾಗಿದ್ದಾರೆ.

ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ, ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ.

ನಾ. ಡಿಸೋಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಜನಿಸಿದರು.
ತಂದೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿದ್ದ ಎಫ್.ಪಿ. ಡಿಸೋಜ, ತಾಯಿ ರೂಪೀನಾ ಡಿಸೋಜ. ತಂದೆ ಶಾಲಾ ಮಕ್ಕಳಿಗೆ ಕಲಿಸಲು ಬರೆದುಕೊಂಡಿದ್ದ ಪುಸ್ತಕಗಳಲ್ಲಿನ ಪದ್ಯಗಳನ್ನು ಕಲಿಯುವುದರ ಮೂಲಕ ಡಿಸೋಜ ಅವರ ಸಾಹಿತ್ಯಾಸಕ್ತಿ ಮೊಳಕೆಯೊಡೆಯತೊಡಗಿತ್ತು. ಜೊತೆಗೆ ತಾಯಿ ಹೇಳುತ್ತಿದ್ದ ಜನಪದ ಗೀತೆಗಳು, ಕಥೆಗಳು ಡಿಸೋಜರ ಮನಸ್ಸಿನ ಮೇಲೆ ಮೋಡಿ ಮಾಡತೊಡಗಿದ್ದವು. ಹೈಸ್ಕೂಲಿನಲ್ಲಿದ್ದಾಗಲೇ ಇವರ ಸಾಹಿತ್ಯಾಸಕ್ತಿಯನ್ನು ಗಮನಿಸಿ, ಬೆಳೆಸಿದವರು ಗೊರೂರು ನರಸಿಂಹಾಚಾರ್ಯರರು.

ಶಿವಮೊಗ್ಗದಲ್ಲಿ ಇಂಟರ್‌ಮೀಡಿಯೇಟ್ ಕಾಲೇಜು (ಈಗಿನ ಸಹ್ಯಾದ್ರಿ ಕಾಲೇಜು) ಸೇರಿದರಾದರೂ ಇವರು ಪ್ರತಿಭೆ ತೋರಿಸಿದ್ದು ಕನ್ನಡ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆಯುವುದರಲ್ಲಿ. ಮೈಸೂರಿಗೆ ಹೋಗಿ ಕಾಲಕಳೆದದ್ದೆಲ್ಲಾ ಸಾರ್ವಜನಿಕ ಪುಸ್ತಕ ಭಂಡಾರಗಳಲ್ಲಿ. ಮಾಸ್ತಿ, ಕುವೆಂಪು, ಅ.ನ.ಕೃ., ಕಾರಂತರು, ಗೋಕಾಕ್, ಗೊರೂರು ಇವರುಗಳಲ್ಲದೆ ಪರ್ಲ್‌ಬಕ್, ಸಾಮರ್ ಸೆಟ್ ಮಾಮ್, ಡಿಕನ್ಸ್ ಮುಂತಾದವರ ಕೃತಿಗಳನ್ನು ವ್ಯಾಪಕವಾಗಿ ಅಧ್ಯಯನ ಮಾಡಿದರು.

ಡಿಸೋಜ ಅವರು ಬೆರಳಚ್ಚು ಮತ್ತು ಶೀಘ್ರಲಿಪಿ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದು ಅವರ ವೃತ್ತಿ ಬದುಕಿಗೊಂದು ಆಸರೆಯಾಯಿತು.  ನಾ. ಡಿಸೋಜ ಅವರು ಉದ್ಯೋಗಕ್ಕೆ ಸೇರಿದ್ದು ಲೋಕೋಪಯೋಗಿ ಇಲಾಖೆಯಲ್ಲಿ ಟೈಪಿಸ್ಟ್ ಮತ್ತು ದ್ವಿತೀಯ ದರ್ಜೆ ಗುಮಾಸ್ತರಾಗಿ. ನಂತರ ಪ್ರಥಮ ದರ್ಜೆ ಗುಮಾಸ್ತರಾಗಿ ಶರಾವತಿ ಯೋಜನೆ ಕಾರ್ಗಲ್, ಮಾಸ್ತಕಟ್ಟೆ, ತೀರ್ಥಹಳ್ಳಿ ಮುಂತಾದೆಡೆಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿಹೊಂದಿದರು.

ನಾ. ದಿಸೋಜರು ಮೊದಲಿಗೆ 'ಪ್ರಪಂಚ' ಪತ್ರಿಕೆಗೆ ಕಥೆಗಳನ್ನು ಬರೆಯತೊಡಗಿದರು. ನಂತರ ಎಲ್ಲ ಪ್ರಮುಖ ಪತ್ರಿಕೆಗಳಲ್ಲೂ ಇವರ ಕಥೆಗಳು ಪ್ರಕಟವಾಗತೊಡಗಿದವು.

ಡಿಸೋಜರ  ಮೊದಲ ಕಾದಂಬರಿ ಬಂಜೆ ಬೆಂಕಿಪ್ರಕಟವಾದದ್ದು 1964ರಲ್ಲಿ. ನಂತರ ಮಂಜಿನ ಕಾನು, ಈ ನೆಲ ಈಜಲ, ಕೆಂಪು ತ್ರಿಕೋನ, ನೆಲೆ, ಮಾನವ ಹೀಗೆ ಇವರು ಬರೆದಿರುವ ಕಾದಂಬರಿಗಳು ಸುಮಾರು 40.  ಪರಿಸರ ನಾಶ, ಕ್ರೈಸ್ತ ಜನಾಂಗದ ಹಿನ್ನೆಲೆ, ಭ್ರಷ್ಟಾಚಾರದ ವಸ್ತು, ಹಿಂದುಳಿದ ಬುಡಕಟ್ಟು ಜನಾಂಗದ ಚಿತ್ರಣ ಹೀಗೆ ಹಲವು ಹತ್ತು ವಿಷಯಗಳನ್ನೊಳಗೊಂಡ ಅವರ ಕಾದಂಬರಿಗಳು ಓದುಗರ ಮನಸೂರೆಗೊಂಡಿವೆ.

ನಾಡಿಗೆ ಬೆಳಕನ್ನು ನೀಡಲು ಪ್ರಾರಂಭಿಸಿದ ವಿದ್ಯುಚ್ಛಕ್ತಿ ಯೋಜನೆಯ ಅಡಿಯಲ್ಲಿ ಬಹಳಷ್ಟು ಜನರ ಬದುಕುಗಳು ಕತ್ತಲೆಯಲ್ಲಿ ಕರಗಿ ಹೋಗುವ ವಸ್ತುವನ್ನಾಗಿ ಉಳ್ಳ ಮುಳುಗಡೆಕಾದಂಬರಿಯು ಸುಧಾ ಉಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರೆ, ಸುರೇಶ್ ಹೆಬ್ಲೀಕರ್‌ರವರ ನಿರ್ದೇಶನದಲ್ಲಿ ಕಾಡಿನ ಬೆಂಕಿ’,  ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ದ್ವೀಪ’, ಸಿರಿಗಂಧ ಶ್ರೀನಿವಾಸಮೂರ್ತಿಯವರ ನಿರ್ದೇಶನದಲ್ಲಿ ಬಳುವಳಿ’, ಕೋಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ಬೆಟ್ಟದಪುರದ ದಿಟ್ಟ ಮಕ್ಕಳುಮತ್ತು ಮನುರವರ ನಿರ್ದೇಶನದಲ್ಲಿ ಆಂತರ್ಯಕಾದಂಬರಿಗಳು ಚಲನಚಿತ್ರಗಳಾಗಿಯೂ ಜನಪ್ರಿಯತೆಯನ್ನು ಪಡೆದಿವೆ.  ಇವುಗಳಲ್ಲಿ ‘ಕಾಡಿನ ಬೆಂಕಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನೂ , `ದ್ವೀಪ'  ಚಿತ್ರ ‘ಸ್ವರ್ಣ ಕಮಲ' ಪ್ರಶಸ್ತಿಯನ್ನೂ ಗಳಿಸಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಹಿರಿಮೆ ಗಳಿಸಿವೆ.

ಮುಳುಗಡೆ’, ‘ಕೊಳಗ’, ‘ಒಳಿತನ್ನು ಮಾಡಲು ಬಂದವರು’, ‘ಬಣ್ಣ’, ‘ಪಾದರಿಯಾಗುವ ಹುಡುಗ’, ‘ಇಬ್ಬರು ಮಾಜಿಗಳುಮುಂತಾದ ಕಾದಂಬರಿಗಳು ಕುವೆಂಪು ವಿಶ್ವವಿದ್ಯಾಲಯದ ಬಿ.ಎಸ್ಸಿ., ಬಿ.ಕಾಂ., ತರಗತಿಗಳಿಗೆ, ಬೆಂಗಳೂರು ವಿಶ್ವವಿದ್ಯಾಲಯದನ ಬಿ.ಎ. ತರಗತಿಗಳಿಗೆ, ಮಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ತರಗತಿಗಳಿಗೆ ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಮುಂತಾದೆಡೆಗಳಲ್ಲಿ ಪಠ್ಯಪುಸ್ತಕಗಳಾಗಿಯೂ ಆಯ್ಕೆಯಾಗಿದೆ.

ದೂರದರ್ಶನ  ಮಾಧ್ಯಮದಲ್ಲಿ ಮಕ್ಕಳ ಧಾರವಾಹಿ, ಕಥೆಗಳು, ಹಲವಾರು ಕಾದಂಬರಿಗಳು ನಾಟಕಕ್ಕೆ ರೂಪಾಂತರವಾಗಿ ಪ್ರದರ್ಶಿತವಾಗಿವೆ. ಇವರು ಪತ್ರಿಕೆಗಳಿಗೆ ಬರೆದ ಸಣ್ಣ ಕಥೆಗಳ 9 ಸಂಕಲನಗಳಲ್ಲಿ ಸಂಕಲಿತಗೊಂಡಿದ್ದು, ಸಮಗ್ರ ಕಥೆಗಳ 2 ಸಂಪುಟಗಳಲ್ಲಿ ಪ್ರಕಟವಾಗಿವೆ.

ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿರುವ  ನಾ.ಡಿಸೋಜ  ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ 12 ಕೃತಿಗಳನ್ನು ಪ್ರಕಟಿಸಿದ್ದಾರೆ.

ಡಿಸೋಜ ಅವರ ಹಲವಾರು ಸಣ್ಣ ಕಥೆಗಳು ಕೊಂಕಣಿ, ಮಲಯಾಳಂ, ತೆಲುಗು, ಸಂಸ್ಕೃತ, ಹಿಂದಿ, ಇಂಗ್ಲಿಷ್ ಭಾಷೆಗೂ ಅನುವಾದಗೊಂಡಿವೆ.  ತುಂಜಾಲು ಕಾದಂಬರಿಯು ತೆಲುಗು ಭಾಷೆಗೆ,  ಪ್ರೀತಿಯೊಂದೇ ಸಾಲದೆ, ಜಲಪಾತದ ಸುತ್ತ, ಇಗರ್ಜಿ ಸುತ್ತಲಿನ ಹತ್ತು ಮನೆಗಳು, ಕಾಡಿನ ಬೆಂಕಿ, ತಿರುವು ಮುಂತಾದ ಕಾದಂಬರಿಗಳು ಕೊಂಕಣಿಗೆ, ಇಗರ್ಜಿ ಕಾದಂಬರಿ ಮತ್ತು ಬಾಲಗಂಧರ್ವ, ಏಸುಕ್ರಿಸ್ತ ಕೃತಿಗಳು ಇಂಗ್ಲಿಷ್‌ಗೂ, ನೇತ್ರಾಣಿ ಗುಡ್ಡಕ್ಕೆ ಯಾತ್ರೆ ಕೃತಿಯು ಹಿಂದಿ ಭಾಷೆಗೂ ಅನುವಾದಗೊಂಡಿದೆ.

ನಾ.ಡಿಸೋಜರವರ ಸಾಹಿತ್ಯ ಕುರಿತು ಮದರಾಸು ವಿಶ್ವವಿದ್ಯಾಲಯದ ಶ್ರೀ ಪ್ರಕಾಶ್ ಸೈಮನ್‌ರವರು ನಾ. ಡಿಸೋಜರವರ 25 ಕಥೆಗಳು ಒಂದು ಅಧ್ಯಯನಕುರಿತು ಎಂ.ಫಿಲ್. ಪದವಿ (1995), ಮಧುರೆ ಕಾಮರಾಜ ವಿಶ್ವವಿದ್ಯಾಲಯದ ಎಂ.ಎಂ. ಮಂಜುನಾಥರವರು ನಾ. ಡಿಸೋಜರವರ ಕಾದಂಬರಿಗಳಲ್ಲಿ ಮುಳುಗಡೆ ಸಮಸ್ಯೆ ಒಂದು ಅಧ್ಯಯನಮಹಾಪ್ರಬಂಧಕ್ಕೆ ಎಂ.ಫಿಲ್. ಪದವಿ (1998), ಕುವೆಂಪು ವಿಶ್ವವಿದ್ಯಾಯದ ಟಿ.ಎಸ್. ಶೈಲಾರವರು ನಾ. ಡಿಸೋಜರವರ ಕಾದಂಬರಿಗಳಲ್ಲಿ ಸಾಂಸ್ಕೃತಿಕ ಸ್ಥಿತ್ಯಂತರಗಳುಮಹಾ ಪ್ರಬಂಧಕ್ಕೆ ಎಂ.ಫಿಲ್ ಪದವಿ (2001) ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಗಂಗಾ ಮೂಲಿಮನಿಯವರು ನಾ. ಡಿಸೋಜ ಒಂದು ಸಾಂಸ್ಕೃತಿಕ ಅಧ್ಯಯನಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ (2001) ಪಡೆದಿದ್ದಾರೆ.

ನಾ. ಡಿಸೋಜ ಅವರು ಕರ್ನಾಟಕ ಸಾಹಿತ್ಯ ಅಕಾಡಮಿ, ಕೊಂಕಣಿ ಸಾಹಿತ್ಯ ಅಕಾಡಮಿ, ಪುಸ್ತಕ ಪ್ರಾಧಿಕಾರ, ಕುವೆಂಪು ವಿಶ್ವವಿದ್ಯಾಲಯದ ಸೆನೆಟ್, ಹಂಪಿ ಕನ್ನಡ ವಿಶ್ವವಿದ್ಯಾಲಯದ ಸೆನೆಟ್, ಶಿವಮೊಗ್ಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಆಡಳಿತ ಪರಿಷತ್, ಕುವೆಂಪು ರಂಗ ಮಂದಿರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ (1988, 1993, ), ಗುಲ್ವಾಡಿ ವೆಂಕಟಾವ್ ಪ್ರಶಸ್ತಿ (1988), ಸಂದೇಶ್ ಸಾಹಿತ್ಯ ಪ್ರಶಸ್ತಿ (1998), ನಿರಂಜನ ಸಾಹಿತ್ಯ ಪ್ರಶಸ್ತಿ (2003), ಆಳ್ವಾಸ್ ನುಡಿಸಿರಿ ಪ್ರಶಸ್ತಿ (2006), ವರ್ಧಮಾನ ಪ್ರಶಸ್ತಿ (2006), ಚಿತ್ರದುರ್ಗದ ಬೃಹನ್ಮಠದಿಂದ ಡಾ. ಶಿವಮೂರ್ತಿ ಮುರುಘ ಶರಣ ಪ್ರಶಸ್ತಿ (2011), ಕೇಂದ್ರಸಾಹಿತ್ಯ ಅಕಾಡಮಿಯ ಬಾಲ ಸಾಹಿತ್ಯ ಪುರಸ್ಕಾರ (2011), ಮಾಸ್ತಿ ಪ್ರಶಸ್ತಿ (2012), ಭಟ್ಕಳ ತಾಲ್ಲೂಕು ದ್ವಿತೀಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ (2006), ಮುಂಬಯಿಯ ಅಖಿಲ ಭಾರತ ಸಂಸ್ಕೃತಿ ಸಮ್ಮೇಳನದ ಅಧ್ಯಕ್ಷತೆ (2006), ಅಖಿಲ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1997), ಮತ್ತು ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ (2007) ಮುಂತಾದ ಗೌರವ, ಪ್ರಶಸ್ತಿಗಳಿಗೆ ಪ್ರಾತರಾಗಿರುವ ನಾ. ಡಿಸೋಜರವರಿಗೆ ಅಭಿಮಾನಿಗಳು ಅರ್ಪಿಸಿದ ಅಭಿನಂದನ ಗ್ರಂಥ ನಾ. ಡಿಸೋಜ’ (1993).  ಇದೀಗ ಅವರು ಎಂಭತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಯ್ಕೆಯಾಗಿದ್ದಾರೆ.


ನಮ್ಮ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಈ ಹಿರಿಯರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದ್ದು ಈ ಹಿರಿಯರಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸೋಣ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ