ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬ್ರಮ್ಮ ನಿಂಗೆ ಜೋಡಿಸ್ತೀನಿ


ಬ್ರಮ್ಮ! ನಿಂಗೆ ಜೋಡೀಸ್ತೀನಿ
ಯೆಂಡ ಮುಟ್ಟಿದ್ ಕೈನ!
ಬೂಮೀ ಉದ್ಕು ಬೊಗ್ಗಿಸ್ತೀನಿ
ಯೆಂಡ ತುಂಬ್ಕೊಂಡ್ ಮೈನ!

ಬುರ್ ಬುರ್ ನೊರೆ ಬಸಿಯೋವಂತ
ಒಳ್ಳೆ ವುಳಿ ಯೆಂಡ
ಕೊಡ್ತೀನ್ ನನ್ದು ಪ್ರಾರ್ತ್ನೆ ಕೇಳು
ಸರಸೋತಮ್ಮನ್ ಗಂಡ!

ಸರಸೋತಮ್ಮ  ಮುನಿಸ್ಕೊಂಡೌಳೆ
ನೀನಾರ್ ಒಸ್ಸಿ ಯೋಳು;
ಕುಡುದ್ಬುಟ್ ಆಡ್ದ್ರೆ ತೊಲ್ತಾದಣ್ಣ
ನಾಲ್ಗೆ - ಬಾಳ ಗೋಳು!

ಅಕ್ಸ್ರಾನೆಲ್ಲಾ ಸರಸೋತಮ್ಮ
ಪಟ್ಟಾಗ್ ಇಡಕೊಂಬುಟ್ಟಿ
ಮುನಿಯ ಯೆಂಡ ಬುಡೊವಂಗೇನೆ
ಬುಡತಾಳ್-ಔಳ್ ಕೈ ಗಟ್ಟಿ!
ಮುನಿಯಂಗಾರ ಕಾಸ್ ಓಗ್ತೈತೆ
ಯೆಚ್ಗೆ ಯೆಂಡ ಬುಟ್ರೆ;
ಸರಸೋತಮ್ಮಂಗ್ ಏನೋಗ್ತೈತೆ
ಮಾತ್ ಸಲೀಸಾಗ್ ಕೊಟ್ರೆ?

ನಂಗೆ ನೀನು ಲಾಯ್ರಿಯಾಗಿ
ನನ್ ಕೇಸ್ ಗೆದ್ ಗಿದ್ ಕೊಟ್ರೆ
ಮಾಡ್ತೀನಣ್ಣ ನಿನ್ ವೊಟ್ಟೇನ
ವುಳೀ ಯೆಂಡಕ್ ಪೊಟ್ರೆ!

ಕಮಲದ್ ಊವಿನ್ ಕುರ್ಚಿ ಮ್ಯಾಗೆ
ಜೊಕಾಗ್ ಕುಂತ್ಕೊ ನೀನು!
ನಾಕೂ ಬಾಯ್ಗೂ ನಾಕು ಬುಂಡೆ
ಯೆಂಡ ತತ್ತೀನ್ ನಾನು!

ಸರಸೋತಮ್ಮಂಗ್ ಯೋಳಾಕಿಲ್ಲ-
ನೀನೇನ್ ಎದರ್ಕೊಬೇಡ;
ಕೇಳಿದ್ ವರಾನ್ ವೊಂದೀಸ್ಕೊಟ್ರೆ –
ತಕ್ಕೊ! ಯೆಂಡದ್ ಫೇಡ!


ಸಾಹಿತ್ಯ: ಜಿ. ಪಿ. ರಾಜರತ್ನಂ

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ