ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ


ಅಕ್ಕಿನೇನಿ ನಾಗೇಶ್ವರರಾವ್ ಇನ್ನಿಲ್ಲ

ಪದ್ಮವಿಭೂಷಣ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಮ್ಮಾನಿತ, ಕಳೆದ ಶತಮಾನದ  ಮಹಾನ್ ಚಲನಚಿತ್ರ ನಟರಲ್ಲಿ ಒಬ್ಬರಾದ ಅಕ್ಕಿನೇನಿ ನಾಗೇಶ್ವರರಾವ್ ಅವರು ಇಂದು (22.01.2014) ಬೆಳಗಿನ ಜಾವದಲ್ಲಿ ನಿಧನರಾಗಿದ್ದಾರೆ.  ಆಂಧ್ರಪ್ರದೇಶದ ರಾಮಾಪುರಂ ಎಂಬಲ್ಲಿ ಸೆಪ್ಟೆಂಬರ್ 20, 1924ರ ವರ್ಷದಲ್ಲಿ ಬಡ ರೈತ ಕುಟುಂಬವೊಂದರಲ್ಲಿ ಜನಿಸಿದ  ನಾಗೇಶ್ವರರಾವ್, ತಮ್ಮ ಕುಟುಂಬದ ಬಡತನದ ದೆಸೆಯಿಂದಾಗಿ  ಪ್ರೈಮರಿ ಶಾಲೆಯ ನಂತರದಲ್ಲಿ ಓದು ಮುಂದುವರೆಸಲಾಗಲಿಲ್ಲ.  ಅಂದಿನ ದಿನಗಳಲ್ಲಿ ನಾಟಕಗಳಲ್ಲಿ ಹೆಣ್ಣುಪಾತ್ರದಲ್ಲಿ ಅಭಿನಯಿಸಿ ಖ್ಯಾತಿ ಪಡೆದ ನಾಗೇಶ್ವರಾವ್ ಅವರು 1941ರ ವರ್ಷದಲ್ಲಿ  ತಮ್ಮ ಹದಿನೇಳನೆಯ ವಯಸ್ಸಿನಲ್ಲಿ ‘ಧರ್ಮಪತ್ನಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದರು. 

ತಮ್ಮ ಚಲನಚಿತ್ರ ಜೀವನದ 75 ವರ್ಷಗಳ ಸುದೀರ್ಘ ಅವಧಿಯಲ್ಲಿ ಒಟ್ಟು 256 ಚಿತ್ರಗಳಲ್ಲಿ ನಟಿಸಿದ ಅಕ್ಕಿನೇನಿ ನಾಗೇಶ್ವರರಾವ್ ಅವರ ಪ್ರಸಿದ್ಧ ಚಿತ್ರಗಳಲ್ಲಿ ಮಾಯಾಬಜಾರ್, ಚೆಂಚು ಲಕ್ಷ್ಮಿ, ಶ್ರೀ ಕೃಷ್ಣ ಯುದ್ಧಂ, ಬಾಲರಾಜು, ರೋಜುಲು ಮಾರಾಯಿ, ಮಿಸ್ಸಮ್ಮ, ಚಕ್ರಪಾಣಿ, ಪ್ರೆಮಿಂಚಿ ಚೂಡು,  ಲೈಲಾ ಮಜ್ನು, ಅನಾರ್ಕಲಿ, ದೇವದಾಸು, ಬಟಸಾರಿ, ಪ್ರೇಂ ನಗರ್, ಪ್ರೇಮಾಭಿಷೇಕಂ, ಮೇಘ ಸಂದೇಶಂ, ನವರಾತ್ರಿ, ಸಂಸಾರಂ, ಬ್ರತುಕು ತೆರುವು, ಆರಾಧನಾ, ದೊಂಗ ರಾಮುಡು, ಡಾ. ಚಕ್ರವರ್ತಿ, ಅರ್ಧಾಂಗಿ, ಮಾಂಗಲ್ಯ ಬಲಂ, ಇಲ್ಲಾರಿಕಂ, ಶಾಂತಿನಿವಾಸಂ, ವೆಲುಗು ನೀಡಲು, ದಸರಾ ಬುಲ್ಲೋಡು, ಭಾರ್ಯಾ ಭರ್ತುಲು, ಧರ್ಮಧಾತ, ಸೀತಾರಾಮಯ್ಯಗಾರಿ ಮನವರಾಲು ಮುಂತಾದ ಅನೇಕ ಪ್ರಸಿದ್ಧ ಯಶಸ್ವೀ ಚಿತ್ರಗಳು ಸೇರಿವೆ.  ಕಾಳಿದಾಸ, ಜಯದೇವ, ಜಕ್ಕಣಾಚಾರಿ, ವಿಪ್ರನಾರಾಯಣ, ತುಕಾರಾಂ ಮುಂತಾದ ಭಾರತದ ವಿಭಿನ್ನ ಪ್ರಾದೇಶಿಕ  ಸಾಂಸ್ಕೃತಿಕ ಪಾತ್ರಗಳನ್ನು ಸಮರ್ಥವಾಗಿ ಬಿಂಬಿಸಿದ ಕೀರ್ತಿಗೂ ಸಹಾ ಅಕ್ಕಿನೇನಿ ಪಾತ್ರರಾಗಿದ್ದಾರೆ.


ಹಳೆಯ ತಲೆಮಾರಿನ ಬಹುತೇಕ ಪ್ರಸಿದ್ಧ ನಾಯಕ ಶ್ರೇಷ್ಠರುಗಳು ನಿರ್ಗಮಿಸಿದ್ದು, ಅಕ್ಕಿನೇನಿ ನಾಗೇಶ್ವರರಾಯರ ನಿಧನದಿಂದ  ಸಿನಿಮಾ ಸಾಂಸ್ಕ್ರತಿಕ ಲೋಕ ಮತ್ತಷ್ಟು ಬಡವಾಗಿದೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ